Saturday, 25 August 2018

ಪಿ.ಕೆ ನವಲಗುಂದರವರ ಕವನ

ತಾತ್ಕಾಲಿಕ ಪ್ರೇಯಸಿ

ಹೈಸ್ಕೂಲ್ ಡೇ ನಿಂದ ಕಾಲೇಜಿಗೆ ಶಿಪ್ಟಾದ
ಕಲರ್ ಪುಲ್ ಡ್ರೆಸ್ಗಳೊಂದಿಗೆ
ಕನಸುಗಳನ್ನು ಮಾರಲಾಗುತ್ತದೆ ?
ಕೂದಲು ತೊಯ್ದು ತೊಟ್ಟಿಕ್ಕುವ ಇಬ್ಬನಿ
ವರ್ಣಿಸುವ ಬಿ ಎ ಕಾಲೇಜಿನ ಲೆಕ್ಚರರ್ನ
ಪಾಠ ,
ಪಾರ್ಕಿನಲ್ಲಿನ ಚುಕ್ಕಿ ಉಸಿರು,
ಸೀಗರೇಟ್ ಅಡ್ಡಾಗಳಲ್ಲಿ "ಆಪರೇಷನ್ ಲವ್"
ಹಾಗೂ ಕ್ರಾಂತಿ ಮಾತಗಳು

ಮಣ್ಣು ತೊಟ್ಟಿಲಲ್ಲಿ ಮಲಗಿದ್ದ ಮಗುವಿಗೆ
ಮೊಬೈಲ್ ಹಿಡಿದು ರೊಮ್ಯಾಂಟಿಕ್ ಕಾವ್ಯ
ಒತ್ತಿ ಒತ್ತಿ ಹೇಳುವಾಗ ಕಂದನ ಕೈಕಾಲು
ಬಡೆದಾಡುತ್ತವೆ
ಬೈಪಾಸ್ ರಸ್ತೆಯ ತಿರುವಿನ ಪಾನೀಪುರಿ
ಅಂಗಡಿ ಮೋಟ ಹುಡಗ ಇತ್ತೀಚೆಗಷ್ಟೆ
ಸುಮ್ಮನೆ ನಗುತ್ತಿದ್ದ
ಆ ಹುಡುಗಿ ತಾತ್ಕಾಲಿಕ ನಗು ಕಾರಣ !
ಹಸಿದ ಹೊಟ್ಟಿ ತಣ್ಣಗಾಗಿರಬಹದು !

ಮಧ್ಯರಾತ್ರಿ ಬೆಣಚು ಕಲ್ಲುಗಳ ಮೇಲೆ
ಹೆಸರು ಕೆತ್ತುವ ಖಯಾಲಿ
"ಹೇ" ಯಾರದು ಈ ರಾತ್ರಿ
ಹಳದಿ ಕಾಯಿಲೆ ಹೂವಿನ ಶವಕ್ಕೆ 
ಅತ್ತರ ಸಿಂಪರಿಸುವವರು
ಸ್ಮಶಾನದ ನಟ್ಟನಡುವಿನ
ಅಸ್ತಿತ್ವದ ಗೈರಾಗಬಹದು
ಕಂಬನಿ ತುಟಿಗಳ ಮಧ್ಯ ನಡಗುವ ರಾತ್ರಿಗಳ
ನೀರವತೆ "ಛೇ" ಈ ಒಣ ಹವೆಯಲ್ಲಿ
ತಾತ್ಕಾಲಿಕ ಪ್ರೇಯಸಿ ನೆನಪು

ಒಂದೇ ನೋಟ್ ಬುಕ್ನ್ ಎರಡು ಕಥೆ
ಬೆರಳ ತುದಿ ಚಿತ್ರಿಸುವ  ಹಳೆ ಹಾರ್ಟ್ ಸಿಂಬಾಲ್
ಅತ್ತು ಬೆತ್ತಲಾಗುವ ಎಷ್ಟೋ ಲಾಸ್ಟ್ ಬೆಂಚ್
ಲವ್ ಸ್ಟೋರಿಗಳು ಕೊನೆಗೊಮ್ಮೆ
"ಪ್ರೀತಿ ಬಾರ್"ನ್ ತಳ ತುಂಬಿಕೊಳುತ್ತವೆ

#ಪಿ ಕೆ...?

Wednesday, 15 August 2018

ತಾತ್ಕಾಲಿಕ ಪ್ರೇಯಸಿ -2( ರಮ್ಯ ಕಡೂರು/ ಸಾವನ್ ಪದ್ಯಗಳು)

ತಾತ್ಕಾಲಿಕ ಪ್ರೀಯಕರ

ನಡುರಾತ್ರಿಯ ಚಂದಿರನ
ಬೆಳಕಲಿ ಹೆಣೆದ ಕಲ್ಪಿತ
ನೆರಳಲ್ಲಿ ಆಲೋಚಿಸುತ್ತೇನೆ ಆಳದ ಏಕಾಂತದಲ್ಲಿ ನಮ್ಮಿಬ್ಬರ ಪ್ರತಿಬಿಂಬವೆಂದು

ಅದ್ಯಾವ ಪ್ರವಾಹ ನೀನು?
ಮನಕಲಕಿ ನಿಶಬ್ಧವಾಗಿ ಮರೆಯಾಗಿಬಿಟ್ಟೆ
ಇರುವುದಕ್ಕೆಲ್ಲಾ ಬೆನ್ನಿಕ್ಕಿ
ನಾಚಿ ತಿರುಗಬೇಡ ?
ಅಲ್ಲಾದರೂ ನಿನ್ನ ತಾತ್ಕಾಲಿಕ
ದರುಷನವಾಗಬಹುದು

ನನ್ನ ಅರೆನಗ್ನ ಬೆನ್ನಮೇಲೆ ಕವಿತೆ ಬರೆಯುವ
ನಿನ್ನ ಬಯಕೆ
ಎತ್ತ ಹೊರಟು ಹೋಯಿತು ಇನಿಯ?
ಇಗೋ ಇಲ್ಲಿದೆ ಆ ಪ್ರಶಾಂತತೆ
ಬಂದುಬಿಡು ಮರುಮಾತಾಡದೆ  !

ವಿನಾಕಾರಣ ಜೀವ ಹಸಿಯುತದೆ, ಬಳಲುತದೆ
ಕ್ಕೊಕ್ಕಿನ ಕಡಲ ಹಕ್ಕಿಯೊಂದಕ್ಕೆ ಸಿಲುಕಿದ ಮೀನಿನಂತೆ ಸುಮ್ಮನೆ ಈ ರಾತ್ರಿ ಹಿಂಬಾಲಿಸಿ ಬಿಡು ಎಲ್ಲಾ ರಿಯಾಯಿತಿಯು ನಿನ್ನದೆ !

ನೀನು ಈ ದೇಹದ ಚೇತನವಲ್ಲ
ಇಗಿಗ ತಾತ್ಕಾಲಿಕ ಪ್ರೀಯತಮನಷ್ಟೆ !

ಸಂದೇಶಗಳೆಲ್ಲ ಕುರುಹುಗಳಾಗಿವೆ ತಾತ್ಕಾಲಿಕ ಪ್ರೀತಿಗೆ ಆದರೂ ಸದಾ ನನ್ನೆದೆಯಲಿ
ಹೂ ನೀನು
ಬಾಡುವುದಿಲ್ಲ ಮತ್ತೆಂದಿಗೂ ಅರಳುವುದಿಲ್ಲ!
ಇದೊಂದು ಅನುಭಸುವಿಕೆಯಷ್ಟೇ
ಈ ಪದ್ಯದಂತೆ !

ರಮ್ಯ, ಕಡೂರು

2)

ತಾತ್ಕಾಲಿಕ ಪ್ರೇಯಸಿ

ನಿನ್ನ ಸ್ಪರ್ಶಿಸುವ ತವಕದಲಿ
ಬಿಸಿ ಏರಿಳಿತದ ಹೃದಯ
ಯಾವ ಸೂಚನೆಯು ಕೊಡದ ನಿನ್ನ
ಸ್ಪರ್ಷದಿ ಹಗುರಾಯಿತು !

ನನ್ನೀ ಬೇಸಿಗೆಯ ತುಟಿಗೆ
ನಿನ್ನ ಚಳಿಗಾಲದ ಚುಂಬನ
ಒಂದು ಬೆವರಾಯಿತು
ಇನ್ನೊಂದು ಕಣ್ಣೀರಾಯಿತು !

ಸೂರ್ಯ ದೇಹಕ್ಕೆ
ಚಂದಿರೆಯ ಗಾಳಿ ಸೋಕಿರಲು
ಸುರಿವ ನಕ್ಷತ್ರಗಳ ಮಳೆಗೆ
ಈ ಭೂಮಿಯೇ ಮಧುಮಂಚ !

ಅಮವಾಸೆಯ ನಡುರಾತ್ರಿ
ಬೆತ್ತಲಾದ ಕಿಡಿಗೇಡಿ ಮನಕ್ಕೆ
ನಿನ್ನುಸಿರ ಶಾಖ ತಾಕಿದಾಗ
ನಮ್ಮಿಬ್ಬರ ಮೊದಲ ರಾತ್ರಿಯು
ಸೋತು ಗೆದ್ದಿತು !
          
          ಸಾವನ್, ಕಲಬುರಗಿ.

Tuesday, 14 August 2018

ತಾತ್ಕಾಲಿಕ ಪ್ರೇಯಸಿ/ ಪ್ರೀಯಕರ !

ತಾತ್ಕಾಲಿಕ ಪ್ರೀಯಕರ

ಶ್ರಾವಣದ  ಕಡು ಪಾಪಿ ಮಳೆ
ವಿರಹ ಗೋಡೆಗೆ ಕಾಮನ ಬಾಣದ ಹೊಡೆತ
ತೀವ್ರ ಮೋಹದಲೆಗಳ ಸುನಾಮಿ ನಡಿಗೆ !
ಅವನೊಳಗೂ ಥಂಡಿ ಗಾಜಿಗೆ ಬಿಸಿ ತುಟಿಯ ಸ್ಪರ್ಶ !

ಅವನೋ ಗಂಧರ್ವ ಲೋಕದ ಮೋಡಿಗಾರ
ಘಳಿಗೆ ಸಿಕ್ಕು ಅಮಲೇರಿಸಿ ಮುದ್ದಿಸಿ ಮರೆಯಾಗುವ
ತಾತ್ಕಾಲಿಕ  ಮಾಯಗಾರ
ಆಯಾಸಗೊಂಡ ಪ್ರಯಾಣದ ತುಂಬೆಲ್ಲಾ
ಕಾಡುವ ಕಚಗುಳಿ ಬೆರಳುಗಳ ಯಾನ !

ಅವನ ಪ್ರಣಯದ ಕಥೆಯನ್ನೇ ಪದೇ ಪದೇ ಓದಿಕೊಳ್ಳುವ ನಾನು ಇದೀಗ ಇನ್ನಷ್ಟು
ಅಸಹಾಯಕ ಹಿಂಸೆಗೆ ಬಲಿಯಾದ ಒಂಟಿ ಹಂಸ ಪ್ರೇಮಿ !
ಇಲ್ಲಿ ಗೋಡೆಗಳು ಮೈಬಿಸಿಗೆ ಗೋಣು ಬಗ್ಗಿಸಿವೆ !

ಎದುರಿಗೊಬ್ಬ  ದುರುಗುಟ್ಟುವಾಗ
ಅವನಿರಬೇಕಿತ್ತು ಈ ಕ್ಷಣ !
ಛೇ ! ಮತ್ತೆ ದೀರ್ಘ ಉಸಿರು ಬಿಡುತ್ತಾ ಹೆಡ್
ಫೋನ್ಸ್ ಕಿವಿಗಿಟ್ಟರೆ "ಅಂಗ ಲಗಾ ದೇ ರೇ.." ರಿಂಗಣಿಸಿ ಮೈಯೆಲ್ಲಾ ಮತ್ತಷ್ಟು ಚಳಿಗೆ
ಬಿಸಿ ನಾಲಿಗೆಯ ಹಂಬಲ !

ಸಿಕ್ಕು ಬಿಡಲಿ ಅವನೊಮ್ಮೆ
ಒಂಟಿ ರಾತ್ರಿಗೆ ಜೊತೆಯಾಗಿ ತಣ್ಣನೆಯ ಬೆಳದಿಂಗಳಿರಲಿ
ಕೊಡು ಕೊಳ್ಳುವ ಕೆಂಡಗಳ ಲೆಕ್ಕವೊಂದು ತೀರಲಿ
ಇಂದಿಗೂ ಘಟಿಸದ ಹೆಣ್ತನವೊಂದು ಜರುಗಲಿ
ಮೊಗ್ಗೊಂದು ಹಾಗೆಯೇ ಸದ್ದಿಲ್ಲದೇ ಹೂವಾಗಲಿ...!

      ಸ್ನೇಹಲತಾ.

ತಾತ್ಕಾಲಿಕ ಪ್ರೇಯಸಿ

ಕಾಫಿ ಕಪ್ಪಿನ ಕೊನೆಯ ಹನಿಯಲ್ಲು ಕೆನೆಗಟ್ಟಿದ ಕಡಲಿದ್ದಿದ್ದರೆ
ನಿನ್ನ ಫೋಟೋಗೊಂದು ಮುತ್ತಿಟ್ಟಿದ್ದಕ್ಕೆ ಮೊಡವೆಯೇ ಏಳುತ್ತಿರಲಿಲ್ಲ!
ಹತ್ತು ಸಲ ಲೈಕ್ ಒತ್ತಿದ್ದರು ನೆಟ್ಟಗಾಗದ ಸೊಟ್ಟ ಮುಖದ ಫೋಟೋ,
ಫೋನ್ ಸ್ಕ್ರೀನಿಗೆ ಸಿಗುವಷ್ಟು ಸುಲಭವಾಗಿ ತುಟಿಗೆ ಸಿಕ್ಕಿದ್ದರೆ, ಚಳಿಗಾಲದಲ್ಲೂ ಬೆವರುವ ಕೆಲಸ ಸಿಗುತ್ತಿತ್ತೇನೋ ?!

ಬೆರಳ ಸೋಕುವುದೂ ಕೂಡ ಬೆದೆಯಂತೆ ಕಾಡುವಾಗ,
ಆಷಾಢದ ಗಾಳಿಯ ಕೆನ್ನೆಗೂ ಒಂದೆರಡು ಲಿಪ್ಸ್ಟಿಕ್ ನ ಗುರುತು ಸಿಗಬೇಕಿತ್ತು!
ದೂರದಲ್ಲಿ ಬೀಸುವ ಚಂಡಮಾರುತಕ್ಕೆ ಮೈ ಮೇಲಿನ ಉಲ್ಲನಿನ ಸ್ವೆಟರ್ ಆಗಿರುವ ನೀನು
ತಾತ್ಕಾಲಿಕ ಶಾಖ ಹೆಚ್ಚಿಸುವ ಶಾಖೆ.
ಚಳಿಗಷ್ಟೇ ಬೆಚ್ಚಗೆ!

ನೀ ಹೊಸ ಜೀನ್ಸ್ ತೊಟ್ಟ ದಿನ
ನನ್ನ ಅಂಗಿಯ ಗುಂಡಿ ಕಿತ್ತು ಹೋದ ಹಾಗೆ ಕನಸು ಬೀಳುತ್ತದೆ!
ಏನು ಮಾಡಲಿ ತೊಟ್ಟಿಕ್ಕುವ ನಲ್ಲಿಗೆ ಮಾತಾಡುವ ನಾಲಿಗೆ ಇಲ್ಲ.
ಇರುಳೆಲ್ಲ ರಸಶಾಸ್ತ್ರ ಓದಿದರೂ ಸಹ, ನಿನ್ನೆದುರು ಸಿಕ್ಕಾಗ ಅನಕ್ಷರಸ್ತನಂತೆಯೇ ವರ್ತಿಸುವೆ, ನಿನಗೆ ಗೊತ್ತಾಗುವ ಹಾಗೆ!

ನಿರಪರಾಧಿ ನೀಲಿ ತಾರೆಯಾಗಿರುವ ನನ್ನ ಯೌವ್ವನಕ್ಕೆ ,
ಬಟ್ಟೆ ತೊಟ್ಟವರ ಬೆನ್ನಳತೆ ತಿಳಿಯದು!
ನಿನ್ನ ಕಿರು ಬೆರಳನೂ ತಾಕದ ಕಣ್ಣೊಳಗಿನ ಕೈಯಲಿ ಯಾವ ಮೈಥುನದ ಗುರುತೂ ಇಲ್ಲ!
ಮಳೆಗಾಲಕೆ ಮೈಯೊಡ್ಡಿದ ಕೊಡೆಯಂತ್ತಿರುವ ನಿನಗೂ ತೊಟ್ಟಿಕ್ಕುವ ತವಕ ಇರಬಹುದೇನೋ?

                        # ಕವಿಚಂದ್ರ