Saturday, 22 April 2017

ಪುಸ್ತಕ ವಿಮರ್ಶಾಯಾನ -2

ತೆರೆದ ದಾರಿ-ಪುಸ್ತಕ ವಿಮರ್ಶೆ

ಕಾದಂಬರಿ-ಬದುಕೆಂಬ ಬೇತಾಳ

ಲೇಖಕರು-ಜಬಿಲಾಲ ಮುಲ್ಲಾ

ಸಾಧಿಸಬೇಕು ಎಂದು ಹೊರಟರೆ ದಾರಿಯಲ್ಲಿ  ಸುಮಾರು ನೋವುಗಳ  ಅಡ್ಡ ಬರುತ್ತದೆ. ಆದರೆ ಎದೆಗುಂದದೆ ಒಂದು ಹೆಣ್ಣು ಮಗಳು ತನ್ನ ತಂದೆ ತಾಯಿಗೆ ತಗಲಿದ "ಎಚ್ ಐ ವಿ"ರೋಗದ ಬಗ್ಗೆ ಊರಿನವರ ವರ್ತನೆಯಿಂದ ಮನಸ್ಸಿಗೆ ನಾಟಿ ಇದಕ್ಕೆ ನಾಂದಿ ಹಾಡಬೇಕು ಎಂದು ಇತ್ಯರ್ಥ ಮಾಡಿ ಇದರ ಸುತ್ತ ಹೆಣೆದಿರುವ ಕಥೆಯ "ಬುದುಕೆಂಬ ಬೇತಾಳ" ಕಾದಂಬರಿ  ಈ ಕಾದಂಬರಿಗೆ ಬಂದ ಟ್ಯಾಗ್ ಲೈನ್ "ಸಾವಿನಲ್ಲೂ ಬದುಕು ಕಂಡುಕೊಂಡ ಸಾವಿತ್ರಿ" ಇದು ಲೇಖಕರ ವಿಷಯ ವಸ್ತು ಮತ್ತು ಟ್ಯಾಗ್ ಲೈನ್ ಗೆ ಬಹಳ ಹತ್ತಿರವಾಗುವಂತೆ ಅಷ್ಟೆ ಚೆನ್ನಾಗಿ ಕಥೆ ಕಟ್ಟವ ಕೆಲಸ ಮಾಡಿದ್ದಾರೆ.

ಇಲ್ಲಿ ಬರುವ ಕೆಲವು ಪಾತ್ರಗಳಂತು ಬಹಳ ಕಾಡುವುದ ಮುಖ್ಯವಾಗಿ ಸಂಜಯ್ ನ ಪಾತ್ರ.
ಕೆಲವೊಮ್ಮೆ ಕೈ ತಪ್ಪಿ ಆದ ತಪ್ಪು ಇನ್ನೊಬ್ಬರ ಮನಸ್ಸಿನ ಮೇಲೆ ಬಹಳ ಗಂಭೀರ ಪರಿಣಾಮ ಬೀರುತ್ತದೆ ಅದೆ ರೀತಿ ಸಂಜಯನಿಗೆ ಮೊದಲು ಬೇಕಾದ ಸಾವಿತ್ರಿ ಪ್ರೇಮ ಅವರ ತಂದೆಗೆ ಇರುವ ಮಾರಕ ರೋಗ HIV  ಇದೆ ಎಂದು ಗೊತ್ತು ಆದ ಮೇಲೆ. ಅವಳನ್ನು ನಿರಾಕರಿಸಿ ಬೇರೆ ಹುಡಿಗಿಯ ಹರಿಸಿ ಹೋದ ಸಂಜಯ್. ಮತ್ತೆ ಅವಳ ಆಶ್ರಯಕ್ಕೆ ಬಂದು ತನ್ನ ಕುಟುಂಬವೇ ಆಶ್ರಮದಲ್ಲಿ ಉಳಿಯುವುದೂ ಕಾಲಚಕ್ರದಲ್ಲಿ ಹೇಗಾದರೂ ನಡೆಯಬಹುದು ಜೀವನದ ಗಾಲಿ ಮೇಲೆ ಕೆಳಗೆ ಆಗ್ಲೇ ಬೇಕು ಅದೆ ಜೀವನ ಎನ್ನುವುದನ್ನು ಸಾಬೀತುಪಡಿಸಿದ್ದನ್ನು ಮೆಚ್ಚಲೇಬೇಕು.

ಇನ್ನೂ ರಾಮಣ್ಣನಿಗೆ ಏಡ್ಸ್ ಬಂದಿದ್ದು ಸ್ವಲ್ಪ ವಿಚಿತ್ರ ಅನಿಸುತ್ತದೆ ನನಗೆ. ಎರಡು ವರ್ಷ ಹಿಂದೆ ಆಸ್ಪತ್ರೆಯಲ್ಲಿ ಒಂದು ಸೂಜಿಯಿಂದ ತಗಲಿದೆ ಎಂದು ಹೇಳಿದಾಗ ಇದು ಮಾರಕ ರೋಗ ಇಷ್ಟ ವಿಳಂಬ ಆಗಿದ್ದು ಹೇಗೆ ಎಂದು ನನ್ನೂಳಗೆ ಸ್ವಲ್ಪ ಗೊಂದಲ ಶುರುವಾಗಿತ್ತು .ಇದರ ಬಗ್ಗೆ ನನ್ನ ಸ್ನೇಹಿತ ವಿಜ್ಞಾನ ವಿದ್ಯಾರ್ಥಿಯಾದ ವಿರೇಶ ನಾಯಕ ಅವರೊಂದಿಗೆ ಚರ್ಚಿಸಿದಾಗ. ಸ್ವಲ್ಪ ಸಮಾಧಾನ ಆಯ್ತು ಈ ಏಡ್ಸ್ ರೋಗ ಅನ್ನೋದು  ಇನ್ನೊಬ್ಬರಿಗೆ ಚುಚ್ಚುಮದ್ದು ಬಳಿಸಿದ ತಕ್ಷಣ ಅವರ ಸೋಂಕು cells ನಮ್ಮ cells ಗಳ‌ಜೊತೆ ಬೆರೆತು ನಮ್ಮ ದೇಹದಲ್ಲಿನ antibody ಜೊತೆ ಹೊಂದಾಣಿಕೆ ಮಾಡಿಕೊಂಡು ಕ್ರಮೇಣವಾಗಿ ನಮ್ಮ ದೇಹದಲ್ಲಿರುವ antibody ಜೀವನಿರೋಧಕ ಶಕ್ತಿಯನ್ನು ಕೋಲ್ಲುತ್ತದೆ.ಅದಾದ ಮೇಲೆ ಇಡಿ ದೇಹ HIV ಸೊಂಕಿತ cells ಗಳಿಂದ ಆವೃತವಾಗುತ್ತದೆ ಆದರೆ ಇದರ ಪರಿಣಾಮ ತಕ್ಷಣ ಗೊತ್ತಾಗುವದಿಲ್ಲ ಕೆಲ ಒಮ್ಮೆ ವರ್ಷಗಳೆ ಹೋಗಬಹುದು
HIV ಇಂದ ಆವೃತವಾದ ಮನುಷ್ಯ ಅನೇಕ ಸಾಲು ಸಾಲು ರೋಗಗಳಿಗೆ ತುತ್ತಾಗಿ ಸಾಯುತ್ತಾನೆ ಇದಕ್ಕೆ syndrome(the chain of desease) ಎಂದು ಕರೆಯುತ್ತಾರೆ.
HIV ಗೆ ತುತ್ತಾದ ವೈಕ್ತಿಗೆ ತಕ್ಷಣವೆ ಅದರ ಪರಿಣಾಮ ಗೊತ್ತಾಗುವದಿಲ್ಲ.ಸಾಮಾನ್ಯ ನೆಗಡಿಯಿಂದ ಹಿಡಿದು ದೊಡ್ಡ ದೊಡ್ಡ ರೋಗದವರೆಗೆ ಆ ಮನುಷ್ಯ ಆವೃತನಾಗುತ್ತಾನೆ.
ಈ HIV ಇದೆಯೋ  ಇಲ್ವೊ ಎಂದು confirm ತಿಳಿಯೋಕೆ ಒಂದು ಪರೀಕ್ಷಾ ವಿಧಾನ ಇದೆ ಅದು ELISA(enzyme linked immuno sarbent essy)ಈ ವಿಧಾನದ ಮುಖಾಂತರ ತಿಳಿದುಕೊಳ್ಳಬಹುದು. ಅವನ ಜೊತೆಗೆ ಸುಮಾರು ಹೊತ್ತು ಚರ್ಚೆಮಾಡಿದಗ ಇದು ನನಗೆ ಸಂಗ್ರಹವಾದ ವಿಷಯ  ಇಲ್ಲಿ ಲೇಖಕರ ಚಾಣಾಕ್ಷತೆ ಬಹಳ ಮೆಚ್ಚುಳೆ ಬಹಳ ಹಾಳವಾಗಿ ಅದ್ಯಯನ ಮಾಡಿದ್ದೀರಾ ಎಂದು ಬಹಳ ಚೆನ್ನಾಗಿ ಗೊತ್ತಾಗುತ್ತದೆ.. 

ಇನ್ನೂ ಲೇಖಕರ ಮುಖ್ಯವಾಗಿ ನಿರೂಪಣೆಯಲ್ಲಿ ಬಹಳ ಸೋತಿದ್ದಾರೆ ನಿರೂಪಣೆ ಬಗ್ಗೆ ಇನ್ನೂ ಬಹಳ ಎಚ್ಚರವಹಿಸಬೇಕಾಗಿದೆ.ಇಲ್ಲಿ ಎಲ್ಲಿಯೂ ಪಾತ್ರಗಳು ಮಾತಾಡಿಲ್ಲಾ ಬರಿ ಲೇಖಕರ ಮಾತಾಡುತ್ತಾರೆ ಓದುಗನಿಗೆ ಸ್ವಲ್ಪ ಬೇಜಾರ ಅನಿಸುತ್ತದೆ.
ಇಲ್ಲಿ ಪ್ರೀತಿ ಅಂತಾ ಬಂದಾಗ ಸಿನಿಮಾ ಸಂಭಾಷಣೆಗಳು ಬಹಳ ಬಳಕೆ ಆಗುತ್ತೆ ಇದರ ಬಗ್ಗೆ ಸ್ವಲ್ಪ ಎಚ್ಚರ ವಹಿಸಿಬೇಕಾಗಿದೆ.
ಏನಪ್ಪಾ ಇವನ ಎಲ್ಲರಿಗೂ ಇದೆ ಮಾತು ಹೇಳ್ತಾನೆ ಅಂತ ಓದುಗರ ಅನ್ನಬಹುದು ಈಗಿನ ಕೆಲವು ಲೇಖಕರು ಪ್ರೀತಿ ವಿಷಯ ಬಂದಾಗ ನೇರವಾಗಿ ಸಿನಿಮಾ ಸಂಭಾಷಣೆಯ ಹಾದಿ ಹಿಡಿಯುವುದು ಇದು ಬೇಸರ ತರುವುತ್ತಿದೆ ತಮ್ಮ ಸಾಮರ್ಥ್ಯವನ್ನು ಬಳಿಸಿಕೊಂಡು ಇನ್ನೂ ಹೆಚ್ಚಿಗೆ ರೋಚಕ ಕಥೆ ಕಟ್ಟಬೇಕು. ಎಂದು ಎಲ್ಲರಲ್ಲಿಯೂ ಕೇಳುತ್ತೇನೆ.
ಇನ್ನೂ ಕಾದಂಬರಿಯಲ್ಲಿ ವಿಷಯ ವಸ್ತು ಎಲ್ಲಿಯೂ ವಿಸ್ತರಣೆ ಆಗಿಲ್ಲ ಕಾದಂಬರಿ ಎಷ್ಟು ಬೇಕು ಅಷ್ಟೆ ವಿಷಯವನ್ನು ಹೇಳಿತ್ತಾರೆ ಹೆಚ್ಚಿನ ವಿಷಯ ಬಳಕೆ ಆಗಿಲ್ಲ. ಇದು ಬಹಳ ಮೆಚ್ಚುಗೆ ಆಯ್ತು ಇದು ಪುಟ್ಟ ಕಾದಂಬರಿ ಆದರೂ ಚೊಕ್ಕವಾಗಿ ಮೂಡಿಬಂದಿದೆ ಅಂತ ಹೇಳಬಹುದು..

ಪಿ ಕೆ...?

Thursday, 20 April 2017

ಮತ್ತೆ ಮತ್ತೆ ಓದಿಸಿಕೊಳ್ಳುವ ಕಥೆ...

ತೆರೆದ -ಮನ ( ಕಥಾಭಿಪ್ರಾಯಗಳು )
ತಮಂಧದ ಕೇಡು - ಅಮರೇಶ ನುಗಡೋಣಿ .

ತಮಂಧದ ಕೇಡು, ನೀರು ತಂದವರು, ಧರೆ ಉರಿದರೆ ಕಥೆಗಳನ್ನು ಬರೆದಿರುವ ಲೇಖಕನು ಬೇರೆನನ್ನು ಬರೆಯದಿದ್ದರೂ ಶಾಶ್ವತವಾಗಿ ಉಳಿಯುತ್ತಾನೆ.

# ಎಚ್ ಎಸ್ ರಾಘವೇಂದ್ರ ರಾವ್.

____________________

ಅಮರೇಶ ನುಗಡೋಣಿಯವರು ಹೊಸ ತಲೆಮಾರಿನ ಬರಹಗಾರರಿಗೆ ಕಥನದ  ಒಂದು ಮಾದರಿಯನ್ನು ಕಲಿಸುವಷ್ಟು ಬೆಳೆದಿದ್ದಾರೆ.

# ಡಾ ಕೆ. ವಿ ನಾರಾಯಣ  .

__________________

ಈ ಹೊಸ ಕಥನಗಳಲ್ಲಿ ಮೂರ್ತವಾದ ಜಮೀನ್ದಾರಿ ಸಮಾಜದ ಶೋಷಣೆ ಇರುವುದಿಲ್ಲ; ಅಲ್ಲ ಸಂಕೇತವಾಗಿ ಊರ ಗೌಡನಿರುವುದಿಲ್ಲ.  ಅಗೋಚರನಾದ ಜುಗಾರಿ ಕ್ರಾಸನ ಬಾಸ್ ಇರುತ್ತಾನೆ. ಅಥವಾ virtual image ಇರುತ್ತದೆ.

# ರಾಜೇಂದ್ರ ಚೆನ್ನಿ

______________________

ಅಮರೇಶರ ತಮಂಧದ ಕೇಡು ಕಥೆಯನ್ನು  ಓದಿದಾಗ ಇಗಲೂ ಕಾಡುವ ಸಾಲೆಂದರೆ " ಇದೇನು ಬಸಣ್ಣಪ್ಪನ ಕಾಲ ಏನಲೆ ? ಚಪ್ಲಿ ಹೊಲಿವ ಕೈಗೆ ಲಿಂಗ ಬರದ್ಕಾ ". ದುರಗ ತನ್ನ ಮಗ ಚೆನ್ನನಿಗೆ ಹೇಳುವ ಮಾತಿದ್ದು. ಶಾಂತಗೌಡನ ಮಗಳಾದ ಅಕ್ಕಮಹಾದೇವಿ ಮತ್ತು  ಚೆನ್ನ ಪರಸ್ಪರ ಪ್ರೀತಿಸಿ ಮದುವೆಯಾಗಲೂ ಹೊರಟವರು, ವಿದ್ಯಾವಂತರು , ಆದರೆ ಇಲ್ಲಿ ಜಾತಿ ಮತ್ತು ವರ್ಗದ ವೈರುದ್ಧವಿದೆ. ಮಾದ್ಗನಾದ  ಚೆನ್ನ ಮತ್ತು ಗೌಡನ ಮಗಳು ಅಕ್ಕಮಹಾದೇವಿಯವರ ಮೌನದೊಲವು ಹೊರಗಡೆಗೆ ಬಂದಾಗ ಶಾಂತಗೌಡ ತನ್ನ ಜೀವಕ್ಕೆ ಜೀವ ಅಂತ ತಿಳಿದ ದುರಗನನ್ನೆ ಸಿಟ್ಟಿನಿಂದ ನೋಡಲಿಕ್ಕೆ ಸುರುಮಾಡುತ್ತಾನೆ.

ಇಡೀ ಕಥೆಯ ಜೀವಾಳವಿರುವುದೆ ದುರಗ ಮತ್ತು ಶಾಂತಗೌಡರ ಒಳಸಂಕಟದೊಳಗೆ, ಚಡಪಡಿಕೆಯೊಳಗೆ ; ಚಂದವ್ವನನ್ನು ( ದುರುಗನ ಹೆಂಡತಿ ) ತನ್ನ ಹೆಂಡತಿಯಾಗಿ ಸ್ವೀಕರಿಸುತ್ತೆನೆ ಎನ್ನುವ ಗೌಡನ ತೆರೆದುಕೊಳ್ಳವಿಕ್ಕೆಗೂ ನಂತರ ಚೆನ್ನ ತನ್ನ ಮಗಳನ್ನೆ ಪ್ರೀತಿಸುತ್ತಿರುವನೆಂದು ಗೊತ್ತಾದಾಗ ಆಗುವ ಬದಲಾವಣೆಗೂ ಅದೆಷ್ಟು ವ್ಯತ್ಯಾಸವಿದೆ. 12ನೇ ಶತಮಾನದಾಚೆಯದೆಂದೆ ಈ ಕಥೆಯನ್ನು ನಾವು ಪರಿಗಣಿಸಬಹುದು. ನಿರ್ದಿಷ್ಟ ಕಾಲಮೀತಿಯಾಗ್ಲಿ ಇದಕ್ಕಿಲ್ಲ. ನಮ್ಮಲ್ಲಿ ಈ ಜಾತಿಯತೆ ಎಷ್ಟು  ಆಳವಾಗಿ ಬೇರು ಬಿಟ್ಟಿದೆಯನ್ನುವುದನ್ನು ಈ ಕಥೆ ಪ್ರಚುರಪಡಿಸುತ್ತದೆ ಜೊತೆಗೆ ದುರಗನ ಗುಡಿಸಲಿನ ಮೇಲೆ ಛಾವಣಿ ಹಾಸಿದ ಬೃಹತ್  ಬೇವಿನ ಮರ ಕಡಿಯಲ್ಪಟ್ಟು ಬಂಡಿಯಾಕೃತಿಯಾಗಿ ಗೌಡನ ಮನೆ ಮುಂದೆ ನಿಂತಾಗ ಅದಕ್ಕೆ ಪೂಜೆ ಮಾಡುತ್ತಲೆ ಕಣ್ಣೀರಿಡುವ ದುರಗ , ಮನುಷ್ಯ ಭಾವನಾತ್ಮಕತೆಗಳಾಚೆ  ನಿಂತು ಎಷ್ಟು ಕಠೋರನಾಗಿರುವನೆಂದು (ವ್ಯವಹಾರಿಕ) ಸಾಂಕೇತಿಸುತ್ತದೆ.

ಸೂಗಪ್ಪ ಮಾಸ್ತರರ ಪಾತ್ರದರ್ಥವನ್ನು ಸರಿಯಾಗಿ ಗುರುತಿಸಿರುವ ಶ್ರೀಧರ ಬಳಿಗಾರರು " ಹನ್ನೆರೆಡನೆ ಶತಮಾನದ ವಚನ ಚಳುವಳಿಯ ಸಾಮಾಜಿಕ ಸುಧಾರಣೆಯ ಪ್ರತಿನಿಧಿಯಂತಿರುವ ಇಂಥ ಕೆಟಲಿಸ್ಟ್ ಪಾತ್ರಗಳು   ಅಮರೇಶರ ಕತೆಗಳಲ್ಲಿ ಉಪಸ್ಥಿತರಿರುವುದು ಆಕಸ್ಮಿಕವಲ್ಲ. ಪರೋಕ್ಷವಾಗಿ ಚರಿತ್ರೆಯ ಚಲನೆಗೆ ಕಾರಣವಾಗುತ್ತಾನೆ ಎನ್ನುತ್ತಾರೆ" ಹೌದು ಸೂಗಪ್ಪ ಎಲ್ಲವನ್ನೂ ಎಲ್ಲರನ್ನೂ  ಒಂದು ರೀತಿಯಲ್ಲಿ ಭೇಟಿಯಾಗಿಸುತ್ತ ಬಳಿಗಾರರು ಹೇಳುವಂತೆ ಚಲನೆಗೆ ಕಾರಣವಾಗಿದ್ದಾನೆ.
ಚೆನ್ನನ ಓದು, ಶಾಂತಗೌಡನ ಹೆಂಡತಿಗೆ ಭವಿಷ್ಯತನ ಬದುಕಿನ ದಾರಿಗಳು, ದುರುಗನಿಗೆ ಚೆನ್ನನ ಹತ್ತಿರ ನಗರಕ್ಕೆ  ಹೋಗಲು ಸೂಚಿಸುತ್ತಾನೆ, ಗೌಡನಿಗೆ ರುದ್ರಮ್ಮಕ್ಕನನ್ನು ಭೇಟಿಯಾಗಲು ಸೂಚಿಸುವುದು ಸಹಿತ ಮಾಸ್ತರನೆ.

ಇವುಗಳೆನೆಯಿರಲಿ ದುರುಗ ನನ್ನಗೋಂದರ್ಥದಲ್ಲಿ ಭಾವಜೀವಿಯೆನ್ನಿಸುತ್ತಿದೆ. ಎಲ್ಲವನ್ನೂ ತನ್ನೊಳಗೆ ಕುದಿಸಿಕೊಂಡು ನಿಶ್ಚಲವಾಗಿ (ಮೌನವಾಗಿ ) ಬೆವರುವ ಜೀವವೆನಿಸುತ್ತದೆ. ಕಾಣದ ಬೆಂಕಿ ಕಾವು  ಹೊರಬರಲಾರದಷ್ಟು ಧಗೆ ಅವನೆದೆಯಲ್ಲಿಟ್ಟಿದೆ, ಅದು ರೊಟ್ಟಿಗಳ ಬೆಯಿಸುತ್ತಿದೆ.
ತನ್ನ ಹೆಂಡತಿ ಮತ್ತು ಶಾಂತಗೌಡನ ಸಂಬಂಧ ತಿಳಿದಿದ್ದರೂ ಸಹಿತ ಬಂಡೆದ್ದಿಲ್ಲ ,  ಎಲ್ಲವನ್ನೂ  ಎಷ್ಟು  ಆರಾಮವಾಗಿ ಬೆವೆತು ಕಸವನ್ನು ನುಕಿಬಿಡುತ್ತಾನೆ ಅನ್ನಿಸುತ್ತಿದೆ.  ತನ್ನ ಮಗ ಜಾತಿ ಮೀರುವಾಗ ದುರುಗನಿಗೆ ಅಸಾಧ್ಯ ನೋವು ಹುಟ್ಟಿಸಿರುವುದ್ದಾರೂ ಏನು ? ತುಂಗಮ್ಮನನ್ನು (ನದಿ) ದಾಟಿಸುವಾಗಲು ಸಹಿತ ಗೌಡನಿಗೆ  ಅವನು ಹೇಳ ಹೊರಟದ್ದು ಅದೆ, ನನ್ನದೆನು ತಪ್ಪಿಲ್ಲವೆಂದೆ ಸಾಕ್ಷಿಕರಿಸುವ ಮನೋಭಾವ. ಅಸಾಧ್ಯ  ವಿಧಯತೆ ದುರುಗನದು ಅನ್ನದ  ಋಣವಿರಬಹುದು ! ಆದರೂ ಕೊನೆಗೆ ಶಾಂತಗೌಡ ಮತ್ತು ದುರುಗ ನೀರಿನಲ್ಲಿ ಲೀನವಾದಾಗ ಈ ಕೆಳಕಂಡ ಎಚ್.ಎಸ್. ಆರ್ ಮಾತು ನೆನಪಾಯ್ತು.
" ಅಮರೇಶ ನುಗಡೋಣಿ ಎಂಬ ವ್ಯಕ್ತಿಯ ಅಂತರಂಗ ಅನುಭವಗಳು ಅವರ ಕತೆಗಳಲ್ಲಿ ಸಂಪೂರ್ಣ ಗೈರು ಹಾಜರಾಗಿರುವುದು" - ಎಚ್ ಎಸ್ ರಾಘವೇಂದ್ರ ರಾವ್. ಶ್ರೀಧರ ಬಳಗಾರರು ಈ ಕೃತಿಯ ಮುನ್ನುಡಿಯಲ್ಲಿ ಈ ಮಾತನ್ನು ಸರಿಯಾಗಿ ಸಮರ್ಥಿಸಿದ್ದಾರೆ.

ಕಥೆಯ ಪ್ರಾರಂಭಕ್ಕೆ ದುರಗ ಕಂಡ ಭಯಾನಕ  ಕನಸಿನಲ್ಲಿಯು ಸಹಿತ ಗೌಡನಿಗೆ ಬೈಯುಲು ಹೊರಟ ಮಾತು ಕರಗಿರುತ್ತದೆ. ಈ ದುರಗನ ಮೌನದಾಳದೆದೆಯ ನೋವು ಹುಡುಕುತ್ತಿರುವೆ.......

ಈ ಕಥೆ ನನ್ನ  ಎಳಿ ವಯಸ್ಸಿಗೆ ಇಷ್ಟೇ ಅರ್ಥ ಕೊಟ್ಟಿರಬಹುದು ಆದರೆ ಎಂದಿಗೂ ಮುಗಿಯದ ಕಥೆ ಇದು ಹುಡುಕ ಹೊರಟಷ್ಟು ಅನಂತದರ್ಥವೆನ್ನಿಸುತ್ತಿದೆ....

# ಕಪಿಲ .ಪಿ .ಹುಮನಾಬಾದೆ

____________________

" ಪಲ್ಲವ ಪ್ರಕಾಶನದಿಂದ ಮೂರನೇ ಮುದ್ರಣಗೊಂಡಿರುವ ಅಮರೇಶ ನುಗಡೋಣಿಯವರ ಈ ಪುಸ್ತಕ ಬೆಲೆ -150/-. ಪುಟಗಳು-206. ಒಟ್ಟು ಕಥೆಗಳು- 9.
ಪುಸ್ತಕಗಳ ಪ್ರತಿಗಳಿಗಾಗಿ ಸಂಪರ್ಕಿಸಿ- 7829464653 ( ಪೊಸ್ಟ್ ಅಥವಾ ಕೊರಿಯರ ಮೂಲಕ ಕಳುಹಿಸಲಾಗುವುದು)

Wednesday, 19 April 2017

ಪೆದ್ರೊ ಪರಾಮೊ- 2

ಪೆದ್ರೊ ಪರಮೊ: ಓದು- 2

"ಕೊಮಾಲಕ್ಕೆ ಹೋದರೆ ಇನ್ನೂ  ಅಪಾರಾ ಧಗೆ.  ಆ ಊರು ಕೆಂಡದ ಮೇಲೆ ನರಕದ ಬಾಗಿಲಲ್ಲೇ ಕೂತಿದೆ.  ಅಲ್ಲಿನ ಜನ ಸತ್ತು ನರಕಕ್ಕೆ ಹೋದರೆ ನರಕದಲ್ಲಿ ತುಂಬಾ ಚಳಿ ಅನ್ನುತ್ತಾ ಕಂಬಳಿ ತಗೊಂಡು ಹೋಗುವುದಕ್ಕೆ ಊರಿಗೆ ವಾಪಸ್ಸು ಬರತಾರಂತೆ "
(ಪುಟ -151)

_______________

"ಅಲ್ಲಿ ಇನ್ನೂ ಚೆನ್ನಾಗಿ ಕೇಳಿಸುತೇನೆ ನಿನಗೆ ತುಂಬ ಹತ್ತಿರದಲ್ಲಿರತೇನೆ , ಸಾವಿಗೆ ದನಿ ಇದ್ದರೆ ನನ್ನ ನೆನಪುಗಳ ದನಿ ನನ್ನ ಸಾವಿನ ದನಿಗಿಂತ ಜೋರಾಗಿ ಕೇಳುತದೆ" ಅಮ್ಮ.... ಅಷ್ಟು ಜೀವಂತ
(ಪುಟ-154)

____________

"ಜನ ಹೋಗುವಾಗ ಮನೆ ಸಾಮಾನೆಲ್ಲ ತಂದು ನಮ್ಮ ಮನೆಯಲ್ಲಿ ತುಂಬಿದರು. ಒಬ್ಬರಾದರೂ ಬಂದು ಇದು ನಮ್ಮದು ಅಂತ ಹೇಳಲೆ ಇಲ್ಲ "
(ಪುಟ-155)

__________________

"ಎಷ್ಟೊಂದು ಗುರಿಗೆ ಬಾಣ ಬಿಡತಿದ್ದ, ಒಂದಾದರೂ ಗುರಿ ತಲುಪತಿತ್ತು"
__________

ಗಾಳಿಯಿದೆ,  ಬಿಸಿಲಿದೆ ಮತ್ತೆ ಮೋಡ  ಇವೆ ನೀಲಿ ಆಕಾಶ.  ಅದರಾಚೆ ಹಾಡುಗಳಿದ್ದಾವು, ಮಧುರ ದನಿಗಳಿದ್ದಾವು....ಒಂದೇ ಮಾತಿನಲ್ಲಿ...ಭರವಸೆ ಇದ್ದೀತು.
(ಪುಟ-170)

__________

ಬೋಳು ಬೆಟ್ಟಗಳಲ್ಲಿ ಬೇಸಾಯ ಎಷ್ಟು ನಡೆದಿದ್ದರೂ ನೇಗಿಲನ್ನು ಇನ್ನೂ ಕರೆಯುತಿತ್ತು..
(ಪುಟ- 182)

____________

ಊರಿನ ತುಂಬ ಪ್ರತಿಧ್ವನಿ. ಗೋಡೆಯ ಹಿಂದೆ, ರಸ್ತೆಯ ಕಲ್ಲುಗಳ ಕೆಳಗೆ ಸಿಕ್ಕಿಬಿದ್ದಿರುವ ಪ್ರತಿಧ್ವನಿ ಅನ್ನುವ ಹಾಗೆ. ಸರಬರ ಸದ್ದು. ಜನರ ನಗು. ಬಳಸಿ ಬಿಸಾಕಿದ ನಗು. ವರ್ಷಗಳುಜ್ಜಿ ಸವೆದು ಹೋದ ಸದ್ದು. ಹಾಗೆ. ಯಾವತ್ತೋ ಒಂದು ದಿನ  ಈ ಸದ್ದೂ ಸವೆದು ಹೋಗುತ್ತದೆ .
(ಪುಟ-185)

_________

ಹ್ವಾನ್ ರುಲ್ಫೋ ಸಮಗ್ರ ಸಾಹಿತ್ಯವನ್ನು ಓ. ಎಲ್. ಎನ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಯುದ್ಧ ಮತ್ತು ಶಾಂತಿ,  ಸಿಂಗರ್ ಕಥೆಗಳ ಅರ್ಧ- ಮರ್ಧ  ಓದು ಇಗಾಗಲೆ ಮಾಡಿರುವೆ. ಇವರ ಅನುವಾದಗಳೆ ಹಾಗೇ ಒಂದೆ  ಓದಿಗೆ ಆಳ ತಿಳಿಯುವುದಿಲ್ಲ. ಮತ್ತೆ ಮತ್ತೆ  ಓದಬೇಕು. ಐದು ನೂರು ಪುಟದ ಯಾವುದೋ ಕಾದಂಬರಿಯೊಂದು ಎರಡು ದಿನದಲ್ಲಿ ಓದಿ ತೆಗೆದೆ ಆದರೆ ನೂರೈವತ್ತು ಪುಟಗಳು ಅಲ್ಲದ ಪೆದ್ರೊ ಪರಾಮೊ ನಿಲ್ಲಿಸಿ ಯೋಚಿಸಲು ಹಚ್ಚಿ ಮುಂದಿನ ಪುಟಕ್ಕೆ ಕಳುಹಿಸುತ್ತಾನೆ. ಈ ಇಡೀ ಕೃತಿಯೆ ಸಂಗ್ರಹ ಯೋಗ್ಯ  ಆದರೆ ಒಂದಿಷ್ಟು  ಈ ಕೃತಿ ಕಡೆ ನಿಮಗಾಕರ್ಷಿಸಲು ಕೆಲವು ಸಾಲುಗಳು ಹಾಕುತ್ತಿರುವೆ. ಕೃತಿ ಹುಡುಕಿಕೊಂಡು ಓದಿ.......

ಸಂಗ್ರಹ: - ಕಪಿಲ

Tuesday, 18 April 2017

ಬೆಂಕಿ ಬಿದ್ದ ಬಯಲು ಮತ್ತು ಪೆದ್ರೊ ಪರಾಮೊ..

"ಹತ್ತು ವರ್ಷಗಳಿಂದ ಈ ಕಥೆ ನನ್ನ ತಲೆಯೊಳಗಿತ್ತು. ಒಂದೂ ಅಕ್ಷರ ಬರೆದಿರಲಿಲ್ಲ. ಆದರೆ ಮನಸ್ಸಿನಲ್ಲೇ ಬರೆಯುತ್ತ, ತಿದ್ದುತ್ತ  ಇದ್ದೆ "

- ರುಲ್ಪೋ (  ಪೆದ್ರೊ ಪರಾಮೊ"ಕಾದಂಬರಿ)

ರುಲ್ಪೋ ಬರೆದದ್ದು ಸುಮಾರು ಮೂನ್ನೂರು ಪುಟ ಮಾತ್ರ. "  ಆದರೆ ರುಲ್ಪೋನನ್ನು ಕುರಿತು ಮೂವತ್ತುಮೂರು ಭಾಷೆಗಳಲ್ಲಿ 567 ಪುಸ್ತಕಗಳು, 2646 ಪ್ರಬಂಧಗಳು ಬಂದಿವೆ.

__________

ನನ್ನ ಬದುಕಿನಲ್ಲಿ  ಅನೇಕ ಮೌನಗಳಿವೆ, ನನ್ನ ಬರವಣಿಗೆಯಲ್ಲೂ...ನೂರಾರು ಪುಟಗಳನ್ನು ಬರೆದು,  ಬರೆದದ್ದನ್ನು ಹೊಡೆದು ಕೊನೆಗೆ ಇಷ್ಟು  ಉಳಿಸಿಕೊಂಡೆ. ಕಾದಂಬರಿ ಬರೆಯುವುದೆಂದರೆ ಬರೆದದ್ದರಲ್ಲಿ ಎಷ್ಟನ್ನು ಬಿಡಬೇಕು ಅನ್ನುವ ಕಸರತ್ತು

- ರುಲ್ಫೋ
_________

"ಬರೆಯುವುದೆಂದರೆ ನಿಜವಾಗಿಯೂ ವೇದನೆ ಅನುಭವಿಸಬೇಕು"

______

ಯಾವುದೂ ಶಾಶ್ವತವಾಗಿ  ಇರುವುದಿಲ್ಲ. ಎಂದೂ ಬಾಡದಷ್ಟು ತೀವ್ರವಾದ ನೆನಪು ಯಾವುದೂ ಇಲ್ಲ..

:-
ಕನ್ನಡಕ್ಕೆ-  ಓ ಎಲ್ ನಾಗಭೂಷಣ ಸ್ವಾಮಿ

ಪುಸ್ತಕ ಓದು ಸಂಗ್ರಹ -1
ಕಪಿಲ.

Sunday, 16 April 2017

ಯುದ್ಧ ಮತ್ತು ಶಾಂತಿ - ಅನು: ಓ ಎಲ್ ಎನ್

ಯುದ್ಧ ಮತ್ತು ಶಾಂತಿ-  ಲಿಯೋ ಟಾಲ್ ಸ್ಟಾಯ್
ಅನು: ಓ ಎಲ್ ನಾಗಭೂಷಣ ಸ್ವಾಮಿ

ಯುದ್ಧ ಮತ್ತು ಶಾಂತಿ ಕಾದಂಬರಿ ಅವಸರದಲ್ಲಿ ಓದುವ ಪುಸ್ತಕವಲ್ಲ. ಅಯ್ಯೋ, ಇಷ್ಟು ದೊಡ್ಡದು ! ಒಂದು ಸಾವಿರದ ಎಂಟುನೂರು ಪುಟಗಳ ಗಾತ್ರವನ್ನು ಕಂಡು ಅಂಜುವವರಿಗೂ ಇದು ತಕ್ಕುದಲ್ಲ. "ಕಾದಂಬರಿ ಅನ್ನುವುದು ಯಾರಿಗೆ ಕೇವಲ ಕಥೆಯ ಕುತೂಹಲವಲ್ಲವೋ ಅವರು, ಸಾಹಿತ್ಯವೂ ಬದುಕನ್ನು ಕಾಣುವ ದಾರಿ ಅನ್ನುವ ತಿಳಿವಳಿಕೆ ಇರುವವರು ಮಗ್ನರಾಗಬೇಕಾದ ಕೃತಿ"

- ಓ ಎಲ್ ನಾಗಭೂಷಣ ಸ್ವಾಮಿ

ಯುದ್ಧ ಮತ್ತು ಶಾಂತಿ ಓದುತ್ತಿರುವೆ. ಪಾತ್ರಗಳು ಮಾತ್ರ ಮತ್ತೆ ಮತ್ತೆ ಮರೆತು ಹೋಗುತ್ತಿವೆ. ಒಟ್ಟು  500 ಪಾತ್ರಗಳು ಹೊಂದಿರುವ ಈ ಕಾದಂಬರಿಯಲ್ಲಿ ಮುಖ್ಯ ಪಾತ್ರಗಳೆಂದರೆ 50 ಅಂತೆ !

ನಿಧಾನ  ಓದಿನ ಮಧ್ಯೆ ಸಂಗ್ರಹಿಸಿದ ಕೆಲವು ಸಾಲುಗಳು: -

"ಸೂಜಿಯ ಕಣ್ಣಿನಲ್ಲಿ ಒಂಟೆ ಬೇಕಾದರೂ ತೂರಿ ಹೋದೀತು, ಆದರೆ  ಶ್ರೀಮಂತನಾದವನು ಸ್ವರ್ಗದ ಬಾಗಿಲಿನ ಮೂಲಕ ಸಾಗುವುದು ಬಹಳ ಕಷ್ಟ "
(ಪುಟ ನಂ - 139.)

_____________

"ಅನತೋಲ್, ಬದುಕೆಂದರೆ ತನಗಾಗಿ ಯಾರೋ ಏರ್ಪಾಟು ಮಾಡಿರುವ ಕೊನೆಯಿರದ ಪಾರ್ಟಿ  ಅಂದುಕೊಂಡಿದ್ದ"

______________

"ಪಿಯರೆಯು ಅತ್ಯಂತ ಅನಿರೀಕ್ಷಿತವಾಗಿ ಶ್ರೀಮಂತನಾಗಿ ಕೌಂಟ್ ಬೆಝಕೋವ್ ಅನ್ನುವ ಪದವಿಗೆ ಏರಿದ ಮೇಲೆ, ಇದುವರೆಗೆ ಅವನನ್ನು ಲೆಕ್ಕಕ್ಕೇ ಇಟ್ಟಿರದ ಈಗ ಭೇಟಿಯಾಗಿದಿದ್ದರೆ ಬೇಜಾರುಮಾಡಿಕೊಳ್ಳುವ ಲೆಕ್ಕವಿರದಷ್ಟು ಜನರನ್ನು ಕಂಡು ಮಾತಾಡಬೇಕಿತ್ತು "

_______________

" ಪಿಯರೆ ಹೆಲನಳ ಉಡುಪು ಮಾತ್ರ ಮರೆಯಾಗಿರುವ ಅವಳ ಮೈಯ ಚೆಲವು, ಆನಂದಗಳನ್ನು ಕಾಣುತ್ತಾ ಅನುಭವಿಸುತ್ತಿದ್ದ. ಒಮ್ಮೆ ಹೀಗೆ ಕಂಡಮೇಲೆ ಬೇರೆ ಥರ ಕಾಣುವುದು ಅಸಾಧ್ಯವಾಗಿತ್ತು - ಒಮ್ಮೆ ಬಯಲಾದ ರಹಸ್ಯವನ್ನು ಮರಳಿ ಕಟ್ಟಿಕೊಳ್ಳುವುದು ಅಸಾಧ್ಯವಾಗಿರುವ ಹಾಗೆಯೇ..."

_______________

" ಪಿಯರೆ ಇಷ್ಟು ಚಿಕ್ಕ ವಯಸ್ಸಿಗೇ ಇಂಥ ಶ್ರೀಮಂತಿಕೆಯ  ಭಾರ ಹೊರಬೇಕಾಗಿ ಬಂದಿದೆಯಲ್ಲ...ಯಾವ ಯಾವ ಪ್ರಲೋಭನೆಗಳಿಗೆ ಒಳಗಾಗುತಾನೋ ಅವನು ! ಈ ಜಗತ್ತಿನಲ್ಲಿ ನಿನಗೆ ಬೇಕಾದುದೇನು ಎಂದು ಯಾರಾದರೂ ಕೇಳಿದರೆ ಬಡ ಭಿಕ್ಷುಕನಿಗಿಂತ ಕಡು ಬಡವಳಾಗಿರುವುದೇ ನನ್ನ ಆಸೆ ಅನ್ನುತ್ತೇನೆ"

- ಪ್ರಿನ್ಸೆಸ್ ಮೇರಿ

________

ಸಂಗ್ರಹ: -
ಕಪಿಲ ಪಿ ಹುಮನಾಬಾದೆ.

Friday, 14 April 2017

ಕಾವ್ಯ ಮನೆಯ ವಿಮರ್ಶಾಯಾನ..

ಪುಸ್ತಕ ವಿಮರ್ಶೆ- 1
ಸ್ನೇಹಲತಾ ಗೌನ್ನಳ್ಳಿ

ವಿ.ಗೋಪಕುಮಾರ - 'ಸಾವಿರ ರೆಕ್ಕೆಯ ಪುಸ್ತಕ'

ವಿ.ಗೋಪಕುಮಾರ ಅವರ 'ಸಾವಿರ ರೆಕ್ಕೆಯ ಪುಸ್ತಕ'ವು ಸುಮಾರು 125 ನ್ಯಾನೋ ಕಥೆಗಳನ್ನು ಒಳಗೊಂಡ ಅನುಭವಾಲೋಚನೆಗಳ ಗುಚ್ಛವಾಗಿದೆ. ಇಲ್ಲಿನ ಕಥೆಗಳಿಗೆ ತಮ್ಮದೇ ಆದ ಸ್ಪಂದನೆಗಳಿವೆ.ಸಹೃದಯನನ್ನು ಹಿಡಿದಿಟ್ಟುಕೊಂಡು ಓದಿದಿಕೊಳ್ಳುವ ತಾಕತ್ತಿದೆ.ಪ್ರತಿ ಕಥೆಯನ್ನು ಓದಿದ ನಂತರ ಒಂದು ತಣ್ಣನೆಯ ಅಲೆ ಬಂದು ಅಂತರಂಗವನ್ನು ತಾಕಿ ಹೋದಂತಹ ಅನುಭವವಾಗುವುದು.ಹೆಸರೇ ಸೂಚಿಸುವಂತೆ ಈ ಕಥೆಗಳು ಗಾತ್ರದಲ್ಲಿ ವಾಮನನಂತೆ ಕಂಡರೂ ಅವುಗಳ ಧ್ವನಿ ಮಾತ್ರ  ತ್ರಿವಿಕ್ರಮನಂತೆ ಹೊರಡಿಸುತ್ತವೆ.
           'ಸಾವಿರ ರೆಕ್ಕೆಯ ಪುಸ್ತಕ' ಎನ್ನುವ ಮೊದಲ ಕಥೆಯಲ್ಲಿ ಪುಸ್ತಕದ ಹೆಸರಿನದ್ದೇ ಒಂದು ಪುಟ್ಟ ಕಥೆಯಿದೆ. ಬದಲಾದ ಜೀವನ ಶೈಲಿ,ಟಿವಿ,ಮೊಬೈಲ್, ವಿಡಿಯೋ ಗೇಮ್ ನಂತಹ ಗ್ಯಾಜೆಟ್ ಗಳು ಮಕ್ಕಳ ಪುಸ್ತಕ ಓದಿನ ಜೊತೆಗೆ ದೈಹಿಕ ಚಟುವಟಿಕೆಗಳನ್ನು ನುಂಗಿಹಾಕಿವೆ. ಒಂದು ಪುಸ್ತಕ ಅಂದರೆ ಅದೊಂದು ಅನುಭವ ಲೋಕ.ಇಂದಿನ ಮಕ್ಕಳಿಗೆ ಈ ಅನುಭವ ಲೋಕದ ಸವಿಯನ್ನು ಹಚ್ಚಬೇಕಾದ ತುರ್ತು ಅಗತ್ಯವಿದೆ ಎಂದು ಆರೇಳು ಸಾಲಿನ ಈ ಮೊದಲ ಕಥೆಯೇ ಇಷ್ಟೆಲ್ಲವನ್ನು ಹೇಳುತ್ತದೆ.
         ವ್ಯವಸ್ಥೆಯ ವಿರುದ್ಧ ಆಕ್ರೋಶ, ತೀವ್ರತರ ಪ್ರತಿರೋಧವಿಲ್ಲದೆ ಸಣ್ಣಗೆ ತಿರಸ್ಕಾರವಿರುವುದನ್ನು ಇಲ್ಲಿನ ಕಥೆಗಳು ಸಾರುತ್ತವೆ.ಮನುಷ್ಯ  ಸಂಬಂಧಗಳ ಆಳವಾದ ಅಂತಃಕರಣತೆಯನ್ನು ಹೆಚ್ಚಿನ ಕಥೆಗಳು ಒಳಗೊಂಡಿವೆ.
         ಈರುಳ್ಳಿ ಹೆಚ್ಚುವ ನವ ವಧುವಿಗೆ ಆಕೆಯ ಗಂಡ ಕಣ್ಣೀರು ಬಾರದಂತೆ ಈರುಳ್ಳಿ ಹೆಚ್ಚುವ ಟಿಪ್ಸ ಹೇಳಿದಾಗ ತನ್ನ ಗಂಡ ಎಷ್ಟು ಕಾಳಜಿಯುಳ್ಳವ ಎಂದೆನಿಸುತ್ತದೆ.ಕೊನೆಗೆ ಗಂಡ ನಿನ್ನ ಐ.ಎ.ಎಸ್ ಅಣ್ಣ ಹೇಳಿದಾನೆ ತಂಗಿಗೆ ಕಣ್ಣೀರು ಬಾರದಂತೆ ನೋಡಿಕೋ ಎಂದು ಅಂತ ಹೇಳಿದಾಗ ಆಕೆಗೆ ಅಣ್ಣನ ಮಮಕಾರ,ಪ್ರೀತಿ ನೆನಪಾಗಿ ಕೊನೆಗೂ ಕಣ್ಣೀರು ಬಂದೇ ಬಿಡುವುದು ಎಂಬಲ್ಲಿ ತೀರ ಕಾಳಜಿ,ಪ್ರೀತಿಯುಳ್ಳ  ಸಹೋದರ ಸಂಬಂಧದ ಕುರಿತು ಇಂತಹ ಪುಟ್ಟ ಕತೆಯಲ್ಲಿ ಹಿಡಿದಿಟ್ಟದ್ದು ಸೋಜಿಗವೇ ಸರಿ.
         ಅನಾಥ ರೋಗಿಯೊಬ್ಬ ವೈಧ್ಯರ ಅಲಕ್ಷದಿಂದ ಸತ್ತ ಶವ ಸಾಗಿಸುವ ಮಹಾದೇವ 'ಆಸ್ಪತ್ರೆಯನ್ನು ನೋಡಿ ಈ ಸರ್ಕಾರಿ ಆಸ್ಪತ್ರೆಗೂ ಒಂದು ಮನಸ್ಸು ಮತ್ತು ದೇಹವೆಂದು ಇದ್ದಿದ್ದರೆ ಇದನ್ನು ಎಂದೋ ವಾಹನದಲ್ಲಿ ಸಾಗಿಸಿ ಅಂತ್ಯಕ್ರಿಯೆ ಮುಗಿಸಿ ಬಿಡುತ್ತಿದ್ದೆ'ಎಂದು ಅಂದುಕೊಳ್ಳುವ ಮೂಲಕ ಇಲ್ಲಿ ಮಾನವೀಯ ಅಂತಕರಣವಿಲ್ಲದ ವೈಧ್ಯರ ಕುರಿತಾಗಿ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ ಕತೆಗಾರ.
      'ರೆಸಾರ್ಟ ರಾಜಕೀಯ' ಕಥೆಯಲ್ಲಿ ದುರಾಡಳಿತ,ಸ್ವಾರ್ಥಗಳ ಆಳದಲ್ಲಿ ಮುಳುಗಿ ಹೋದ ಇಂದಿನ ರಾಜಕೀಯ ನಾಯಕರುಗಳ ಅಸಲಿ ಬಣ್ಣದ ಕುರಿತು ವ್ಯಂಗ್ಯವಾಗಿ ಅನಾವರಣ ಮಾಡಿದ್ದಾರೆ.ತುಂಬಾ ವಿಪರ್ಯಾಸದ ಕತೆಯೆಂದರೆ 'ಹರಕೆ' . ಒಂದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಭಿನ್ನ ಆಲೋಚನೆಯುಳ್ಳವರು. ಪಕ್ಕದವನ ಫೋನ್ ನಿಂದ ಮನೆಗೆ ಫೋನಾಯಿಸಿ ಹೆಣ್ಣು ಮಗು ಹುಟ್ಟಿದ ಸುದ್ದಿಯಿಂದ ಹರಕೆ ಫಲಿಸಿತು ಎಂದು ಖುಷಿಗೊಂಡರೆ ಅದೇ ಆ ಪಕ್ಕದ ವ್ಯಕ್ತಿ ಹೆಂಡತಿಯ ಭ್ರೂಣದಲ್ಲಿರುವುದು ಹೆಣ್ಣೆಂದು ತಿಳಿದು ಕೊಲ್ಲಿಸಲು ಹೊರಟಂತಹ ವಿಚಿತ್ರ.  ತೀರ ಚಿಕ್ಕ ಸಾಲುಗಳಲ್ಲಿಯೇ ಅರ್ಥಗರ್ಭಿತ ಸಂದೇಶಗಳನ್ನು ನೀಡುವುದೇ ಈ ಕತೆಗಳ ಗುಣಾತ್ಮಕತೆಯಾಗಿದೆ.
     ಭಾರತದಲ್ಲಿ ಹುಟ್ಟಿ,ಬೆಳೆದು ವಿದೇಶಕ್ಕೆ ಹೋಗಿ ಉದ್ಯೋಗ ಮಾಡಿ ಕೊನೆಗೆ ಮರಳುವಂತಹ ಅತಿ ವಿದ್ಯಾವಂತ ದಡ್ಡರ ಕುರಿತು 'ನಮ್ಮೂರು' ಕತೆಯು ವಾಸ್ತವತೆಯನ್ನು ಬಿಚ್ಚಿಡುತ್ತದೆ.
      ಅಷ್ಟೂ ಕತೆಗಳಲ್ಲಿ 'ನಂಬಿಗೆಯ ಅಂಬಿಗ' ಕತೆ ಹೆಚ್ಚು ಮೆಚ್ಚುಗೆಯಾಗುವಂತಹದ್ದು.ಯಾವ ನಿರೀಕ್ಷೆಗಳನ್ನೂ ಇಟ್ಟುಕೊಳ್ಳದೆ ಕೆಲಸ ಮಾಡಬೇಕು ಎಂಬ ಸಂದೇಶವನ್ನು ನೀಡುತ್ತದೆ.ಸೋತ ಮನಸ್ಸಿಗೆ ಸ್ಪೂರ್ತಿಯನ್ನು ನೀಡುವಲ್ಲಿ 'ಕತೆ ಬರುವ ಹಾದಿ', 'ಸುಗಮ ದಾರಿ' ಕತೆಗಳು ಗೆಲ್ಲುತ್ತವೆ.
      ಕೃತಿಯ ಮುನ್ನುಡಿಯಲ್ಲಿ ಪ್ರೊ.ಕೃಷ್ಣೇಗೌಡರು "ಗೋಪಕುಮಾರ್ ಕರುಳಲ್ಲೇ ಕತೆ ಹೆಣೆಯುವ ಕಲೆಗಾರ. ಸಮಾಜದ ಅನ್ಯಾಯ,ಅನಾಚಾರ,
ಬೂಟಾಟಿಕೆ,ಅಸಹ್ಯಗಳ ಬಗ್ಗೆ ಬರೆಯುವಾಗಲೂ ಸುಖಾ ಸುಮ್ಮನೆ ಉರಿದುಕೊಳ್ಳದೆ ಅಂತಃಕರಣದ ದೀಪ ಹಚ್ಚಿಕೊಂಡು ಕತೆ ಬರೆಯುತ್ತಾರೆ.ಅಷ್ಟು ಮಾತ್ರವೇ ಅಲ್ಲದೆ ನಮ್ಮ ಸುತ್ತಣ ಜಗತ್ತಿನ ಘನವಂತಿಕೆಯನ್ನೂ,ಅರ್ಥವಂತಿಕೆ, ಸೌಂದರ್ಯಗಳನ್ನು ತಮ್ಮ ಈ ಹನಿಗತೆಗಳಲ್ಲಿ ಅನಾವರಣ ಮಾಡುತ್ತಾರೆ" ಎಂದು ಹೇಳಿರುವುದು ಅಕ್ಷರಶಃ ನಿಜವೆನಿಸುತ್ತದೆ ಕೃತಿಯ ಓದಿನ ನಂತರ.
       'ಚಿತೆ' ಕತೆಯಲ್ಲಿ ಕಾಮುಕರ ಅಟ್ಟಹಾಸಕ್ಕೆ ಬಲಿಯಾಗಿ ಸತ್ತ ಮಗಳ ಶವವನ್ನು ಸುಡಲು ಇಚ್ಛಿಸುವನು ತಂದೆ.ಯಾಕೆಂದರೆ ಸುಡದೇ ಹಾಗೇ ಹೂತಿಟ್ಟರೆ ಮಗಳ ಶವವನ್ನೂ ಬುಡುವುದಿಲ್ಲ ಕಾಮುಕ ದ್ರೋಹಿಗಳು ಎಂದು ಪರಿತಪಿಸುವ ಅಸಹಾಯಕ ನೊಂದ ತಂದೆಯನ್ನು ಕಂಡು ಓದುಗನ ಕಂಗಳು ನೆನೆಯದೆ ಇರಲಾರವು.
         ಪುಸ್ತಕ ಓದುವಾಗ ತೀರ ಸನಿಹವಿಟ್ಟುಕೊಂಡರೆ ಅಕ್ಷರಗಳು ಸ್ಪಷ್ಟವಾಗಿ ಕಾಣಿಸಲಾರವು,ಕೊಂಚ ಅಂತರದಲ್ಲಿಟ್ಟು ಓದಿದರೆ ಮಾತ್ರ ಅಕ್ಷರಗಳು ಕಂಡು ಅಲ್ಲಿನ ಸಂದೇಶ ಅರ್ಥೈಸಿಕೊಳ್ಳಬಹುದು.ಹಾಗೆಯೇ ಸಂಬಂಧಗಳೂ ಕೂಡ.ಸದಾ ಜೊತೆಗಿರುವ ಇಬ್ಬರು ಕೊಂಚ ದೂರಾದಾಗಲೇ ಮನಸ್ಸುಗಳು ಎಷ್ಟು ಹತ್ತಿರವೆಂದು ತಿಳಿಯಲು ಸಾಧ್ಯವೆಂಬುದನ್ನು 'ದೂರ ಸನಿಹ' ಕತೆಯಲ್ಲಿ ನಿರೂಪಿತವಾಗಿದೆ.
        ಒಟ್ಟಾರೆ ಇಲ್ಲಿಯ ಕತೆಗಳಲ್ಲಿ ವ್ಯಂಗ್ಯದ ಮೂಲಕ ವಾಸ್ತವವನ್ನು ಬಿಚ್ಚಿಡುವ, ಮನುಷ್ಯನ ಕ್ರೂರತೆ, ಪ್ರೇಮ, ಅಂತಃಕರಣ,ಪಕ್ಷರಾಜಕಾರಣಕ್ಕೆ ಬಲಿಯಾಗುವ ಮುಗ್ಧ ಪ್ರೇಮ, ತಾಂತ್ರಿಕ ಕ್ಷೇತ್ರದಲ್ಲಿ ಮುಂದುವರಿದಿರುವುದರ ಪರಿಣಾಮವಾಗಿ ಗೌಣವಾದ ಮನಸ್ಸಿನ ಭಾವನೆಗಳು,ಮಕ್ಕಳಿಂದ ತಾಳ್ಮೆಯ ಪಾಠದ ಕಲಿಕೆಗೊಳಪಡುವ ಸೋಜಿಗ, ಬೇಸತ್ತ ಬದುಕಿಗೆ ಸ್ಪೂರ್ತಿಯ ಬೆಳಕು ಹೀಗೆ ಹಲವಾರು ಅಂಶಗಳನ್ನು ಕಲಿಸುತ್ತವೆ.ಜೊತೆಗೆ ಕೆಲ ಕತೆಗಳು ಸಹೃದಯನ ಆಳಕ್ಕಿಳಿದು ಹೊಸ ಚಿಂತನೆಗೆ ಎಡೆ ಮಾಡಿಕೊಡುತ್ತವೆ.
           ಸ್ನೇಹಲತಾ,ಗೌನಳ್ಳಿ.

Wednesday, 5 April 2017

ಕೈಬರಹ ಪತ್ರಿಕೆ ವಿಶೇಷಾಂಕ

ಸ್ನೇಹಿತರೇ....

ದೀವಟಿಗೆ ಯುವಜನರ ಹೊಸ ಪ್ರಯೋಗವಾದ ಕೈಬರಹ ಪತ್ರಿಕೆಯು ಒಂದು ವರ್ಷವನ್ನು ಪೂರೈಸಿದ್ದು, ವಾರ್ಷಿಕ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡುವ ಸಂಭ್ರಮದಲ್ಲಿದೆ.

ನಮ್ಮೊಳಗಿನ ಯೋಚನೆಗಳನ್ನು, ಭಾವನೆಗಳನ್ನು, ಪ್ರತಿರೋಧಗಳನ್ನು ಹೊರಹಾಕಲು ನಾವೇ ಹುಡುಕಿಕೊಂಡ ದಾರಿಯಿದು. ಮೊದಲು ಕೆಲವು ಯುವಜನರಿಂದ ಆರಂಭವಾದದ್ದು ಇಂದು ಹಲವು ಯುವಜನರ ಭಾವನೆಗಳ ಆಭಿವ್ಯಕ್ತಿಗೆ ಮಾಧ್ಯಮವಾಗಿದೆ.. ಸಾಕಷ್ಟು ಜನ ಚಿಂತಕರು, ಹೋರಾಟಗಾರರು, ಪ್ರಗತಿಪರರ ಮೆಚ್ಚುಗೆಯನ್ನು ಗಳಿಸಿದೆ.. ಈ ಪ್ರಯತ್ನವು ಮತ್ತಷ್ಟು ಗಟ್ಟಿಗೊಂಡು ಸಾಹಸ್ರಾರು ಯುವಜನರನ್ನು ತಲುಪಿ, ಬರವಣಿಗೆಗೆ ಪ್ರೇರೇಪಿಸುವಂತೆ ಮಾಡಲು ನಿಮ್ಮೆಲ್ಲರ ಸಹಕಾರ ಅಗತ್ಯ....

ಇದೇ ಶನಿವಾರ, 8ನೇ ತಾರೀಖು ಸಂಜೆ ನಾಲ್ಕು ಗಂಟೆಗೆ ನಮ್ಮ ವಿಶೇಷ ಸಂಚಿಕೆಯ ಬಿಡುಗಡೆ ಕಾರ್ಯಕ್ರಮವಿದ್ದು, ನೀವೆಲ್ಲರೂ ಭಾಗಿಯಾಗಿ ನಮ್ಮೊಂದಿಗಿರುತ್ತೀರೆಂದು ಆಶಿಸುತ್ತೇವೆ..

ಧನ್ಯವಾದಗಳೊಂದಿಗೆ..

ದೀವಟಿಗೆ ಯುವಜನ ವೇದಿಕೆ...