Sunday, 1 December 2019

ಹಾಣಾದಿ ಕುರಿತು ರಾಜೇಶ್ ಶಿಂಧೆಯವರ ವಿಮರ್ಶೆ ಲೇಖನ

ಮೂರು ತಾಸಿನ ಸಿನಿಮಾದಂತೆ ಗೋಚರವಾಗುವ "ಹಾಣಾದಿ" ಇದನ್ನ ಒಂದೆ ಗುಕ್ಕಿನಲ್ಲಿ ಹೈರಾಣಾಗದೆ ನಡೆದು ಬಂದೆ..

ಕನ್ನಡ ಸಾರಸ್ವತ ಲೋಕದಲ್ಲಿ ಹೊಸ ಪ್ರಯೋಗಗಳ ಜೊತೆಗೆ ಯುವ ಬರಹಗಾರರ ದಂಡು ಸೃಜನಶೀಲರಾಗಿ ಸೃಜನಾತ್ಮಕ ಬರವಣಿಗೆಯ ಮೂಲಕ‌ ತಮ್ಮ‌ ಛಾಪನ್ನೂ ಮೂಡಿಸುವಲ್ಲಿ ತನ್ನ ಗಟ್ಟಿಯಾದ ನಿಷ್ಣಾತ ಕಾವ್ಯಭಿವ್ಯಕ್ತಿಯಿಂದ ಗುರುತಿಸಿಕೊಂಡಿದ್ದಾರೆ ಕೆಲವರ ಬರಹಗಳು ಮೋಡಿ ಮಾಡಿ.ಓದುಗಪ್ರೀಯರು ನಿರುತ್ತರರಾಗಿದ್ದಾರೆ ಅಂತವರ ಸಾಲಲ್ಲಿ ನಿಲ್ಲುವ 
ನಮ್ಮ ಬೀದರ ಜಿಲ್ಲೆಯ 
ಭರವಸೆಯ ಯುವ ಬರಹಗಾರರಾದ ಕಪೀಲ್ ಪಿ ಹುಮನಬಾದೆ ಅವರ "ಹಾಣಾದಿ" ಕಾದಂಬರಿಯ ಕುರಿತು ಒಂದು ಅವಲೋಕನ ತಿಳಿದಂತೆ ನನ್ನದೆ ಶೈಲಿಯಲ್ಲಿ..!

ಈ ಹಾಣಾದಿ ಕಾದಂಬರಿಯಲ್ಲಿ ಇಡಿ ಕತೆಯನ್ನ ಒಂದು ವೃದ್ಧ ಆತ್ಮವೆ ಆವರಿಸಿಕೊಂಡು ವಿವರಿಸಿಕೊಂಡು ಕತೆ ದಣಿಯದ ವೃದ್ಧ ಆತ್ಮದಂತೆ ಸಾಗುತ್ತದೆ.ಇಲ್ಲಿ ಬರುವ ಹಲವು ಪಾತ್ರಗಳು ಇಡಿ ಕಾದಂಬರಿಯುದ್ದಕ್ಕು ಆಧಾರ ಹಾಗೂ ಸಾಕ್ಷಿ ಒದಗಿಸುತ್ತಾ ಸಾಗುತ್ತದೆ.ಹಾಣಾದಿ ಎಂದರೆ ನಮ್ಮ ಬೀದರ ಭಾಷೆಯಲ್ಲಿ "ಜೋಡೆತ್ತಿನ ಗಾಡಿ ಹೋಗುವ ದಾರಿ ಅಥವಾ ನಮ್ಮಲ್ಲಿ ಹೊಲಗಳಿಗೆ ಹೋಗುವಾಗ ಅಕ್ಕಪಕ್ಕದ ಹಚ್ಚ ಹಸಿರಿನ ಎದೆ ಸೀಳಿಕೊಂಡು ಆದ ಕಾಲ್ದಾರಿ ಸಹ ಆಗುತ್ತದೆ" ಕತೆಯು ಸಹ ವಿಶಿಷ್ಟ ಮತ್ತು ಕೌತುಕದ ತಿರುವು ಪಡೆಯುತ್ತಾ ಅಲ್ಲಲ್ಲಿ ಆತಂಕಕ್ಕೆ ತಳ್ಳಿ ಮತ್ತೆ ಮೇಲೆತ್ತಿ ನಿರೂಪಕನ ಗೊಂದಲದ ಗೂಡಿಗೆ ಮತ್ತಷ್ಟು ಮಗದಷ್ಟು ಕಸ ಕಡ್ಡಿ ತುಂಬಿಸುತ್ತಾ ಒಳಗೊಳಗೆ ಅದು ಮಜಬೂತ್ ಆಗುತ್ತಾ ಕೊನೆಯ ಘಳಿಗೆಯಲ್ಲಿ ಎಲ್ಲವೂ ತಿಳಿದು ಒಮ್ಮೆ ಬೆಚ್ಚಿ ಬೀಳುವ ಮೂಲಕ ಹಾಗೂ ಹಲವು ಪ್ರಶ್ನೆಗಳು ಹುಟ್ಟುಹಾಕುವ ಮೂಲಕ ಮುಕ್ತಾಯವಾಗುತ್ತದೆ.

ಕಾದಂಬರಿ ಎಂದರೆ ಒಂದು ನೈಜತೆ ಅಥವಾ ಕಲ್ಪನೆಯಲ್ಲಿ ಪರಿಪಕ್ವವಾಗಿ ಮೂಡಿ ಬರುವ ಒಂದು ಕಥನ.ಎಲ್ಲ ಕತೆಗಳಲ್ಲಿ ಪಾತ್ರಗಳು ವಸ್ತುಗಳು ಸ್ಥಳಗಳು ಇವ್ವುಗಳನ್ನಿಟ್ಟುಕೊಂಡು ನಡೆಯುತ್ತಿರುವ/ನಡೆದ ಘಟನೆಗಳ ಸ್ಥೂಲವಾದ ವಿವರಣಾತ್ಮಕ ರಚನೆಯೆ ಕಾದಂಬರಿಯಾದರೆ, ಹಾಣಾದಿಯ ಕತೆ ಪ್ರಾರಂಭವಾಗೋದು ನಿರೂಪಕನ ಪಟ್ಟಣದ ದಿನನಿತ್ಯದ ಅಮೂಲಾಗ್ರ ಸಮಸ್ಯೆಗಳಿಂದ ಸಣ್ಣ ಸಮಧಾನದ ಸೆಳೆವು ಅನ್ನುವಂತಹ  ರಜೆ ದಿನಗಳಿಂದ ಹಲವು ವರ್ಷಗಳಿಂದ ಊರಿನ ಮುಖವೇ ನೋಡದ ನಿರೂಪಕ ಊರಿನ ಬಸ್ ಹತ್ತಿ ಅದರ ವೇಗಕ್ಕೆ ವಿರುದ್ಧವಾಗಿ ತನ್ನ ಬಾಲ್ಯದ ನೆನಪುಗಳತ್ತ ಟೈಮ್ ಮಷೀನ್ ಹತ್ತಿ ಹೋಗಿ ಅಲ್ಲಿನ ಹಲವಾರು ಅನೂಹ್ಯ ಅತೀತ ನೆನಪುಗಳ ಬುತ್ತಿ ಬಿಚ್ಚಿಕೊಂಡಾಗ ಓದುಗನಿಗೆ ಒಂದು ಕ್ಷಣ ತನ್ನದೆ ಈ ನೆನಪುಗಳು ಅನ್ನುವಷ್ಟು ಮೊದಲಿಗೆ ಕತೆ ಆಪ್ತವಾಗದೆ ಇರಲಾರದು ಅನ್ನೊದೊಂದು ಸಂಭ್ರಮವೇ ಸರಿ.ಪಟ್ಟಣದ ಬದುಕಿಗೆ ಸಣ್ಣದೊಂದು ವಿದಾಯ ಹೇಳಿ ತನ್ನ ಹುಟ್ಟೂರಿನತ್ತ ಬಸ್ ಓಡುವಾಗ ನೆನಪುಗಳು ಸಾಲು ಸಾಲಾಗಿ ಎದೆಗವಚಿಕೊಂಡು ಹಳ್ಳಿಗೆ ಬಂದಾಗ ಸ್ವಾಗತಕ್ಕೆ ಇದ್ದ ಅಜೀವ ಆಕೃತಿಗಳಿಂದಲೆ ಕತೆಯ ಹೊಸ ರೂಪಕ್ಕೆ ತಿರುಗುತ್ತದೆ.ಅಲ್ಲಿಂದ ಶುರುವಾದ ನಿರೂಪಕ ಕತೆ ನೇರವಾಗಿ ಊರೊಳಗೆ ಪ್ರವೇಶಿಸಿದಾಗ ಆತನಿಗೆ ಅದೆಷ್ಟೋ ವರ್ಷಗಳ ಕೆಳಗೆ ಗಲ್ಲಿ ಗಲ್ಲಿ ಸುತ್ತಿ ಆಡಿ ಬೆಳೆದು ನೆನಪುಗಳ ಮೂಟೆಯನ್ನ ಹೋರಿಸಿದ ಊರು ಅಕ್ಷರಶಃ ಯಾರು ಯಾರಿಲ್ಲದಂತೆ ಬಾಯಾರಿದಾಗ ನೀರಿಲ್ಲದ ಬಾವಿಯಲ್ಲಿ ಕಸ ಕಡ್ಡಿ ಹೊಲಸು ತುಂಬಿ ನಾರುವಾಗ ಅಲ್ಲಿ ಒಬ್ಬ ಅಜ್ಜಿ ದುತ್ತೆಂದು ಕಾಣಿಸಿಕೊಂಡು ನಿರೂಪಕನ ಹಣೆಯ ಮೇಲಿನ ಗೆರೆಗಳೆಲ್ಲಾ ತಿಳಿಯಾಗುವಂತೆ ಮಾಡಿ ಬಳಲಿ ಬೆಂಡಾಗಿ ಬಾಯಾರಿದವನಿಗೆ ಅಮೃತ ತುಂಬಿದ ಕೊಡ ಸಿಕ್ಕಂತೆ ಅನುಭವಾಗುವ ಸಮಯಕ್ಕೆ ಕತೆ ಮೂಲ ರೂಪ ಪಡೆಯೊದು ಇಲ್ಲೆ ಕಾರಣ ಅಜ್ಜಿಯ ಪ್ರವೇಶವೇ ಈ ಕತೆಯಲ್ಲಿ ತಿರುವು ನೀಡುತ್ತದೆ‌.ಈ ಕಾದಂಬರಿಯ ಕತೆಯ ಆಧಾರವೇ ಈ ಅಜ್ಜಿ ಹೇಳುವ ಕತೆಯೊಳಗಿನ ಕತೆಗಳ ಚಿತ್ರಣ ಮತ್ತು ನಿರೂಪಕನಿಗೆ ಕೌತುಕದ ಮಿಶ್ರಣ ಮನದೊಳಗೆ ಶುರುವಾದರೆ ಓದುಗನಿಗೆ ಎಡೆಬಿಡದೆ ಓದಿಸಿಕೊಳ್ಳುವ ಹೂರಣ.ಅಸಲಿಗೆ ಬಹುತೇಕ ಕತೆಗಾರರು ಪಾತ್ರದಿಂದ ಹೊರಗುಳಿದು ಕತೆ ಕಟ್ಟುತ್ತಾರೆ ಆದರೆ ಇಲ್ಲಿ ಕತೆಗಾರನೆ ಕತೆಯ ನಿರೂಪಕನ ಪಾತ್ರವನ್ನ ಅತ್ಯಂತ ಸಮರ್ಪಕವಾಗಿ ತುಂಬಿ ಭೇಷ್ ಅನಿಸಿಕೊಂಡಿದ್ದಾರೆ.ಅಜ್ಜಿಯ ಗುಟ್ಟು ಬಿಟ್ಟುಕೊಡದ ಒಗಟಿನಂತ ಮಾತುಗಳು ಅತ್ಯಂತ ಕ್ಲುಪ್ತವಾಗಿ ಕತೆಯ ಕೊನೆತನಕ ನಿಭಾಯಿಸಿದ ಹೌದೌದು ಪರಿ ಮೆಚ್ಚಬೇಕು.

ಇದೊಂದು ಹಳ್ಳಿಯಲ್ಲಿ ನಡೆದ ಕಥಾಸರಣಿಗಳ ಗುಚ್ಚವನ್ನ ಇಲ್ಲಿ ಹಿಡಿದಿಟ್ಟಂತೆ ಮನನವಾಗುತ್ತದೆ ನಿರೂಪಕನ ತಂದೆಯ ಬಾದಾಮಿ ಗಿಡದ ಮೇಲಿನ ವ್ಯಾಮೋಹ ಪ್ರೇಮ ಎಲ್ಲದಕ್ಕು ಮಿಗಿಲಾಗಿ ಆ ಬಾದಾಮಿ ಗಿಡದ ಸುತ್ತ ನಡೆಯುವ ಕಾಕತಾಳಿಯವಾದರು ಸತ್ಯವೆನಿಸುವಂತೆ ಊರಲ್ಲಿ ನಡೆಯುವ ಪ್ರತಿ ಘಟನೆ ಈ ಬಾದಾಮಿ ಗಿಡದ ಬುಡಕ್ಕೆ ಬಂದು ಕಗ್ಗಂಟಿನ ಬೇರಾಗಿ ನಿರೂಪಕನ ತಂದೆಯ ನೋವಿನ ಖಾತೆಗೆ ದಿನವೊಂದು ಜಮೆಯಾಗುವ ನಿದರ್ಶನವಾಗುವ ಎಲ್ಲ ಘಟನೆಗಳು ಅತ್ಯಂತ ಸೂಕ್ಷ್ಮವಾಗಿ ಹಿಡಿದಿಟ್ಟು ಕತೆಗೆ ರೋಚಕತೆಯ ಲೇಪ ಮೆತ್ತಿದ ಬರಹಗಾರರ ಜಾಣ್ಮೆ ಮೆಚ್ಚುವಂತದ್ದು.ನಿರೂಪಕನ ಪ್ರತಿ ಪ್ರಶ್ನೆಯಿಂದ ಹೊಸ ಆತಂತ ಕೌತುಕ ಹುಟ್ಟುವ ಮಾತುಗಳಾಡುವ ಗುಬ್ಬಿ ಅಜ್ಜಿ (ಆಯಿ) "ಹಾಳೂರಿಗುಳಿದವನೇ ಗೌಡ" ಅನ್ನೋ ರೀತಿಯಲ್ಲಿ ಇಡಿ ಊರೆ ಪಾಳು ಬಿದ್ದು ಸ್ಮಶಾನವಾಗಿದ್ದ (ಆ ಊರೆ ಕತೆಗೆ ಎಲ್ಲ ರೀತಿಯ ವಿಷಯ ವಸ್ತು ಪಾತ್ರಗಳು ಒದಗಿಸುತ್ತದೆ.) ಅನ್ನುವಂತ ಸ್ಮಶಾನ ತದ್ರೂಪಿ ಊರಿಗೆ ಆ ಗುಬ್ಬಿ ಆಯಿನೆ ವಾರಸುದಾರಳು ಅನ್ನುವಂತೆ ನಿರೂಪಕನ ಯೋಗಕ್ಷೇಮ ವಿಚಾರಿಸುತ್ತಾ 
ಹಕ್ಕಿ ಕಾಲಿಡದ ಊರಲ್ಲಿ ನಿರೂಪಕನ‌ ಹಸಿದ ಹೊಟ್ಟೆಗೆ ಬಿಸಿ ಬಿಸಿಯಾದ ರೊಟ್ಟಿ ಹಾಗೂ ಮಲಗಕ್ಕೆ ಪರವಾಗಿಲ್ಲ ಅನ್ನುವಂತ ವ್ಯವಸ್ಥೆ ಕಲ್ಪಸಿಕೊಟ್ಟು ಅವನನ್ನ ಚೆನ್ನಾಗಿ ನೋಡಿಕೊಳ್ಳುತ್ತಾ ಇರ್ತಾಳೆ ಅದೆಲ್ಲಿಂದ ಒಂದು ಸಣ್ಣ ಹುಡುಗಿ ಈ ಮುದುಕಿ ಹತ್ರ ಬರುತ್ತೆ ಅದು ನಿರೂಪಕನ ತಂದೆಯ ಆಳು ಕಂಠಿಯ ಮೊಮ್ಮಗಳು ಅಜ್ಜ ಸತ್ತಾಗಿಂದ ಈ ಗುಬ್ಬಿ ಆಯಿ ಹತ್ರಾನೆ ಇರುತ್ತಾಳೆ ಹೀಗೆ ಸಾಗುವ ಕತೆಯಲ್ಲಿ ಮಧ್ಯದಲ್ಲಿ ಬರುವ ಕೆಲವು ಸಣ್ಣ ಪಾತ್ರಗಳು ಕೊನೆಯಲ್ಲಿ ಏನಾದವು ಅವ್ವು ನಿಜಕ್ಕು ಬದುಕಿದ್ದವಾ ಅನ್ನೋದು ಪ್ರಶ್ನೆ..?.ಉತ್ತರ ಕೊನೆಯಲ್ಲಿದೆ.ಹೀಗೆ ಸಾಗುತ್ತಾ ಕತೆಗಾರನ ಪ್ರತಿ ಕದಲಿಕೆಗೆ ಹೊಸ ಆಯಾಮವೆಂಬಂತಹ ಮಾತುಗಳು ಕತೆಯ ರೋಚಕತೆಗೆ ಹಿಡಿದ ಕೈಗನ್ನಡಿ.ಇಲ್ಲಿ ಕತೆಗಾರ ಅನ್ವೇಷಕ ಹಾಗೂ ನಡೆಯುವ ಪ್ರತಿ ಸನ್ನಿವೇಶಕ್ಕೆ ಮೂಕ ಕಿವುಡ ಸಾಕ್ಷಿಯಂತೆ ಉಳಿಯುವ ಅನಿವಾರ್ಯತೆ ಸೃಷ್ಟಿ ಆಗುತ್ತದೆ ಅಜ್ಜಿಯ ನಡೆ ನುಡಿಯನ್ನ ಕೇಳದೆ ಬೇರೆ ದಾರಿಯಿಲ್ಲ ಕಾರಣ ಹಲವೂ ವರ್ಷಗಳ ನಂತರ ಊರಿಗೆ ಬಂದಿದ್ದಿನಿ ಊರು ಮನೆಯಲ್ಲಿ ಥೇಟ್ ಸ್ಮಶಾನದ ಅನುಭವ.ತನ್ನ ತಂದೆಯ ಅನುಪಸ್ಥಿತಿಯ ಯಾಕಿದೆ.? ಅಪ್ಪ ಎಲ್ಲಿದ್ದಾನೆ..? ಅನ್ನೋ ಹಲವಾರು ಪ್ರಶ್ನೆಗಳೆ ಕತೆ ಸಾಗೋದಕ್ಕೆ ಕಾರಣವಾಗ್ತವೆ.ಗುಬ್ಬಿ ಆಯಿಯಲ್ಲಿ ತನ್ನ ತಂದೆಯ ಬಗ್ಗೆ ಕೇಳಿದಾಗೊಮ್ಮೆ ಅವಳು ಏನೇನೋ ಹೇಳಿ ಒಂದು ಪೂರ್ವ ನಿರ್ಧಾರಿತ ಮೂಹುರ್ತದಂತ ಸಮಯಕ್ಕಾಗಿ ಕಾಯ್ಕೊಂಡು ಬರೋತನಕದ ಕತೆಯ ನಿರೂಪಣ ಶೈಲಿ ಚೆನ್ನಾಗಿದೆ.ಇಲ್ಲಿ ನಿರೂಪಕನ ತಂದೆ ನೆಟ್ಟ ಬಾದಾಮಿ ಗಿಡದಿಂದಲೇ ಊರಿನವರಿಗೆ ಒಂದಲ್ಲ ಒಂದು ಆಘಾತಕಾರಿ ಸಮಸ್ಯೆಗಳು ಆಗುತ್ತಿದ್ದೆ ಎಂಬ ಪ್ರತಿಯೊಂದು ಘಟನೆಯು ಎಷ್ಟು ಸತ್ಯವನಿಸುವಷ್ಟು ನಡೆದುಕೊಳ್ಳೊ ಜನರು ಅದು ಕಾಕತಾಳಿಯೋ ಸತ್ಯವೋ ತರ್ಕಿಸದೆ ಹಾಗೆ ಸತ್ಯ ಯಾವುದು ಅನ್ನೋದು ಅರಿಕೆಗೆ ಬರದೆ ಎಲ್ಲವೂ ನಿರೂಪಕನ ತಂದೆಯನ್ನ ಗುರಿಯಾಗಿಸಿಕೊಂಡು ಆ ಬಾದಾಮಿ ಗಿಡಕ್ಕೆ ನೇರ ದೋಷಣೆ ಮಾಡ್ತಾರೆ ಅದು ನೆಟ್ಟಾಗಿಂದ ತಮಗಾಗುತ್ತಿರುವ ಸಮಸ್ಯೆ ಈ ಗಿಡದಿಂದ ಇದನ್ನ ಕಡಿದು ಹಾಕಬೇಕು ಅನ್ನೋ ಹಲವು ಸರಿಯ ತೀವ್ರ ಪ್ರಯತ್ನಗಳು ನಡೆದರು ಅದು ಕತೆಗಾರನ ತಂದೆಯ ಧೃಡ ಸಂಕಲ್ಪದ ಎದುರು ಮಗುಚಿ ಬಿದ್ದು ಹೋಗುತ್ತವೆ.ಇಲ್ಲಿ ಮೂಲ ಕಾರಣ ಏನು ಅಂತ ತಿಳಿಯದ ಜನರ ಪ್ರತಿಗಾಮಿತನ ಎಷ್ಟು ಅನ್ನೋದು ಸ್ಪಷ್ಟವಾಗಿ ತಿಳಿದು ಬರುತ್ತದೆ‌‌.ಗುಬ್ಬಿ ಆಯಿ ಈ ಕತೆಗಳು ನಿರೂಪಕನಿಗೆ ವಿವರಿಸುತ್ತಾ ಮಧ್ಯ ಕಂಠಿ (ಇವನು ನಿರೂಪಕನ‌ ತಂದೆಯ ಆಳು) ಅನ್ನೋ ದೈತ್ಯ ದೇಹಿಯೊಬ್ಬನ ಕತೆಯೊಂದು ಪ್ರವೇಶ ಮಾಡಿ ಈ ಹಾಣಾದಿಯ ಮೊಳಕಾಲುದ್ದ ಕೆಸರಿನ ಖೆಡ್ಡಾದಲ್ಲಿ ಬಿದ್ದು ಸತ್ತು ಹೋದ ಕತೆ ಸೆಲೆಯೊಂದು ಹಾದು ಹೋಗುತ್ತದೆ ಇಲ್ಲಿ ಹಾಣದಿ ಅನ್ನೋದು ಎಂತಹ ಅಪಾಯಕಾರಿ ಅನ್ನೋದು ಊಹಿಸಬಹುದು.

ಆನಂತರ ಊರ ಹಾಣಾದಿಗೆ ಕತೆ ಬರುತ್ತದೆ ಗುಬ್ಬಿ ಆಯಿ ಮತ್ತು ನಿರೂಪಕ ತನ್ನ ತಂದೆ ಎಲ್ಲಿ ಅಂತ ಮುಂದಿಡುವ ಪ್ರಶ್ನೆಗೆ ಅಜ್ಜಿ ಖಂದಿಲು ಹಿಡಿದು ಹಾಣಾದಿಯಲ್ಲಿ ನಡೆಸ್ಕೊಂಡು ಹೋಗುವ ಮೂಲಕ ಒಂದೊಂದೆ ಕತೆಯನ್ನ ಮತ್ತು ಜನರು ಬಾದಾಮಿ ಗಿಡದ ಬೇರುಗಳಿಗಿಂತ ಜಾಸ್ತಿ ಕಟ್ಟಿರುವ ಕತೆಗಳು ಹೇಳುತ್ತಾ ಸಾಗುತ್ತಾಳೆ.ಆ ಕಗ್ಗತ್ತಲ ರಾತ್ರಿಯ ಪ್ರತಿ ಹೆಜ್ಜೆಯು ಹೊಸ ಕತೆ ಪ್ರತಿಯೊಂದು ಶಬ್ದವು ಭಯ ಮತ್ತು ಸತ್ಯ ಅರಗಿಸಿಕೊಳ್ಳುವ ಎಚ್ಚರಿಕೆಗಳೆರಡು ನೀಡುತ್ತಾ ಸಾಗುತ್ತದೆ ಕತೆ ಹಾಣಾದಿ ಅಂತ ಕಾದಂಬರಿಗೆ ಹೆಸರು ಇಲ್ಲಿಂದಲೆ ಬಂದದ್ದು.

ಕಂಠಿಯ ಸಾವಿನ ನಂತರ ನಿರೂಪಕನ ತಂದೆ ಒಂಟಿಯಾಗಿದ್ದರಿಂದ ಗುಡ್ಡದ ಮೇಲಿರೋ ಗುಬ್ಬಿ ಆಯಿಯನ್ನ ತನ್ನ ಮನೆಗೆ ತಂದು ಇಟ್ಕೊಂಡು ಹೊತ್ತನ್ನಕ್ಕೆ ಆಸರೆ ಕೊಟ್ಟು ತನಗೊಂದಷ್ಟು ಬೇಯಿಸಿ ಹಾಕಲು ಇರಲಿ ಅನ್ನೋ ಕಾರಣಕ್ಕೆ.ಈ ಬಾದಾಮಿ ಗಿಡದ ಕೆಳಗೆ ಒಂದಿನ ಈ ಅಜ್ಜಿ‌ ನಿಂತರೂ ಸಹ ಅದನ್ನ ದೆವ್ವ ಅಂತ ಜನರು ನೋಡಿದವರು ಆಡಿಕೊಳ್ಳಲು ಶುರು ಮಾಡ್ತಾರೆ ಆದರೆ ಇದ್ಯಾವುದೂ ಬಾದಾಮಿ ಗಿಡದಿಂದ ಆಗುತ್ತಿಲ್ಲ ಅನ್ನೋದು ಗುಬ್ಬಿ ಆಯಿಗೆ ಮತ್ತು ಇವನ ತಂದೆಗೆ ಚೆನ್ನಾಗಿ ಗೊತ್ತಿರುತ್ತೆ ಆದರೆ ಮಡಕೆ ಬಾಯಿ ಮುಚ್ಚಬಹುದು ಜನರ ಬಾಯಿ ಮುಚ್ಚೋದು ಕಷ್ಟ. ಮಗನಿಗಿಂತ ಹೆಚ್ಚಾಗಿ ಪ್ರೀತಿಯಿಂದ ಬೆಳಸಿದ ಬಾದಾಮಿ ಗಿಡ ಎಷ್ಟೆಕ್ಕಾ ಆತಂಕಗಳು ಸೃಷ್ಟಿ ಮಾಡುತ್ತಿದೆ ಅನ್ನೋದು ಸುಳ್ಳು ಅದನ್ನ ಜನರಿಗೆ ಹೇಗೆ ತಿಳಿಸಿದರು ಜನರ ಕ್ಯಾರೆ ಅನ್ನಲ್ಲ ಯಾಕೆಂದರೆ ಅಲ್ಲಿನ ಒಬ್ಬ ಸ್ವಾಮಿ ಕಟ್ಟಿದ ಕತೆಗೆ ಹೂಂ ಅಂತ ತಲೆಯಾಡೀಸೋ ಜನ ಅವನು ಊರಿಗೆ ಊರೆ ಬಾದಾಮಿ ಗಿಡಕೆ ಗತಿ ಕಾಣಿಸಿ ಎಂದು ಹಾಗೂ ಊರಲ್ಲಿ ಆಗುತ್ತಿರುವ ಎಲ್ಲದಕ್ಕು ನೇರ ಬಾದಾಮಿ ಗಿಡ ಕಾರಣ ಅನ್ನೋ ಸುದ್ದಿಯನ್ನ ಮತ್ತು ಭಯವನ್ನ ಜನರ ಮನದಲ್ಲಿ ನೆಲೆ ನಿಲ್ಲುವಂತೆ ಮಾಡಿ ಕೊನೆಗೂ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಗಿಡ ಕಡೆಸುವಲ್ಲಿ ಸಫಲವಾಗ್ತಾನೆ ಆ ಗಿಡ ಕಡಿದಾರೆಂಬೂದು ತಿಳಿದಾಕ್ಷಣದಿಂದ ಅದರ ಮಾಲಿಕ ಮಾನಸಿಕ ಸ್ಥಿಮಿತ 
ಕಳೆದುಕೊಂಡು ಹಗಲು ರಾತ್ರಿ ಎನ್ನದೆ ಹುಚ್ಚನಂತೆ ಹಲಬುತ್ತಾ ಕಂಡ ಕಂಡವರಿಗೆ ಬೈಯುತ್ತಾ ಕೊನೆಗೊಂದು ರಾತ್ರಿ ಗುಬ್ಬಿ ಆಯಿ ಮಲಗಿದ್ದಾಗ ಗಿಡದ ಮಾಲಿಕ್ ಹೊರಗಿಂದ ಚಿಲಕ ಹಾಕಿ ಆ ಬಾದಾಮಿ ಗಿಡದ ಕಟ್ಟಿಗೆಗಳಿಗೆ ಬೆಂಕಿ ಹಾಕಿ ನೇರವಾಗಿ ಅಗ್ನಿಗಾಹುತಿ ಆಗ್ತಾನೆ (ಒಂದು ಗಿಡಕ್ಕು ಇಷ್ಟೊಂದು ಪ್ರೀತಿಯಿಂದ ಸಾಕಿ ಅದರೊಟ್ಟಿಗೆ ಮಗನ/ಳ ಹಾಗೆ ಭಾವನಾತ್ಮಕ ಸಂಬಂಧ ಬೆಳೆಯುತ್ತೆ ಅನ್ನೋದು ಮೊದಲು ಓದಿದ್ದು)
ಇದು ಹಾಣಾದಿಯುದ್ದಕ್ಕು ನಿರೂಪಕನ ತಂದೆಯ ದುರಂತ ಅಂತ್ಯದ ಬಗ್ಗೆ ವಿವರಿಸುತ್ತಾ ಸಾಗುವ ಅಜ್ಜಿ ಈ ಹುಡುಗನಿಗೆ ತಾನೊಂದು ಆತ್ಮ ಅನ್ನೋದು ತಿಳಿಯೋದಕ್ಕೆ ಅವಕಾಶ ಕೊಡದಂತೆ ನಡೆಸಿಕೊಂಡು ಬಂದು ಕೊನೆಗೆ ಅವನ ತಂದೆಯನ್ನ ಹೂತು ಹಾಕಿದ ಹೊಲದ ಹತ್ರ ಬಿಟ್ಟು ತಾನೂ ಹೊಟ್ಟೆಪಾಡಿಗೆ ಮಾಡುವ ಕೆಲಸ ಕಾಯಿಗಳನ್ನ ಹಸನು ಮಾಡಿಸುವ ಹೆಣ್ಣು ಮಗಳತ್ರ ಹೋಗಿ ಬರುವುದಾಗಿ ಹೇಳಿ ಹೋದಾಗ ಭಯದಲ್ಲೆ ತನ್ನ ತಂದೆಯನ್ನ ಹೂತ ಜಾಗಕ್ಕೆ ಬಂದು ಒಂದು ಋಣಾತ್ಮಕ ಭಾವಕ್ಕೆ ವಶವಾಗಿ ಸ್ತಬ್ದವಾಗಿ ನಿಂತಾಗ ಬೆಳಗಿನ ಮೂರನೆಯ ಜಾವದ ಆರಂಭ ಪಕ್ಕದ ಗಿಡಗಂಟಿಗಳಿರೋ ಜಾಗದಲ್ಲಿ ಒಂದು ಸಣ್ಣ ಬೆಂಕಿಯ ಕಿಡಿ ಕಾಣಿಸಿ ಅದರೊಟ್ಟಿಗೆ ಮುಂದಕ್ಕೆ ಹೆಜ್ಜೆ ಹಾಕುತ್ತಾ ಬರುವ ಆಕೃತಿಯನ್ನ ಬೆಚ್ಚಿ ನೋಡುವ ನಿರೂಪಕ ಅವನು ಬಂದು ಮಾತಾಡಿಸಿ ತಾನು ನಿಮ್ಮ ತಂದೆಯವರ ಆಳು ಕಂಠಿಯ ಮಗ ಎಂದಾಗ ಕತೆಗಾರ ಇಲ್ಲಿತನ ನಡೆದ ಘಟನೆ ವಿವರಿಸಿದಾಗ ಕಂಠಿಯ ಮಗ ಬೆಚ್ಚಿ ಬೆವತು ಹೋಗುವಂತಹ ಸತ್ಯವನ್ನ ಹೇಳ್ತಾನೆ ಅಸಲಿಗೆ ಈ  ಗುಬ್ಬಿ ಅಜ್ಜಿ ಯಾರು ಆಕೆ ಸತ್ತು ಎಷ್ಟು ವರ್ಷ ಆಯ್ತು ಆ ಚಿಕ್ಕ ಹುಡುಗಿ ಯಾರು ಆಕೆ ಬದುಕಿದ್ದಾಳ ಅನ್ನೋದೆಲ್ಲಾ ಗೊತ್ತಾಗಕ್ಕೆ ಮುರಾನೆಯ ಚುಮು ಚುಮು ಚಳಿಯ ಜಾವ ಸಾಕ್ಷಿಯಾಗಿರುತ್ತದೆ.
ಅಸಲಿಗೆ ಗುಬ್ಬಿ ಆಯಿ‌ ಒಂದು ಆತ್ಮ ಆ ಮನೆಯಲ್ಲಿ ಇರೋ ಸಣ್ಣ ಹುಡುಗಿ ಸಹ ಆತ್ಮ ಇಲ್ಲಿ ಒಂಥರಾ ನಿರೂಪಕನಿಗೆ ಭ್ರಾಮಕ‌ ಲೋಕದಲ್ಲಿ ಅಲೆಸುತ್ತಾ ಅವನ ತಂದೆಯ ಬದುಕಿನ ಕಡು ಸತ್ಯ ಅರುಹಿ ಮರೆಯಾದ ಅಜ್ಜಿ.ಎಲ್ಲವೂ ಆತ್ಮಕತೆ ಇನ್ನಿತರೆ ಕತೆಗಳಾದರೆ ಇಲ್ಲಿ ಆತ್ಮಗಳೆ ಕತೆಗೆ ಕಥಾವಸ್ತು ಮತ್ತು ಕತೆಯ ಮುಖ್ಯ ಪಾತ್ರಗಳು ಹಾಗೂ ಕತೆಯೊಳಗಿನ ಕತೆಗಳನ್ನ ಸಮಯೋಚಿತವಾಗಿ ವಿವರಿಸುತ್ತಾ ಸಾಗುವ ನಿರೂಪಕ.

ಓದಿದಾಗ ಕೆಲವೊಂದು ಅಂಶಗಳು ಹೀಗೂ ಇರುತ್ತೆ ಅನ್ನುವಂತೆ ಮನಗಂಡು ಬಿಟ್ಟಿದ್ದಿನಿ.

೦೧)ಜನರು ಒಬ್ಬ ಮನುಷ್ಯನಿಗೆ ಮತ್ತು ಗಿಡ ಮರ ಪಕ್ಷಿ ಪ್ರಾಣಿಗಳೊಂದಿಗೆ ಇರುವ ಗಾಢ ಮುಗ್ಧ ಪ್ರೀತಿಯನ್ನ ಅರ್ಥ ಮಾಡಿಕೊಳ್ಳದೆ ಭ್ರಮನಿರಶನಕ್ಕೆ ಒಳಗಾಗಿ ಹೃದಯಹೀನರಂತೆ ವರ್ತಿಸೋದು.

೦೨)ಒಂದು ಮರದೊಂದಿಗೆ ಅಥವಾ ಇತರೆ ಸಜೀವ ನಿರ್ಜೀವ ವಸ್ತುಗಳು ಮನುಷ್ಯನ ಭಾವನಾತ್ಮಕ ವಿಚಾರಗಳಿಗೆ ಎಷ್ಟು ಹತ್ತಿರವಾಗಿರುತ್ತವೆ ಹಾಗೆ ಅದನ್ನ ದೂರದಾಗ ಅದರಿಂದ ಆತನ ಮೇಲೆ ಯಾವ ತರದ ಪರಿಣಾಮ ಬೀರುತ್ತೆ ಅನ್ನೋದು ಕಾದಂಬರಿ ಸಾಕ್ಷಿಕರಿಸುತ್ತದೆ.

೦೩)ಗಿಡದಿಂದ ಹೀಗೂ ಆಗುತ್ತಾ ಅನ್ನೋದು ತರ್ಕಿಸದೆ ಮೂಲ ಕಾರಣಕ್ಕೆ ಹುಡಕಾಡದೆ ಕಾಕತಾಳೀಯ ಎಂಬಂತೆ ಎಲ್ಲವೂ ನಡೆದಂತೆ ನಡೆದದ್ದು ಒಪ್ಪಿಕೊಂಡು ಒಬ್ಬರ ಮೇಲೆ ಹೀಗೆಲ್ಲಾ ಜನ ಮುಗಿಬಿದ್ದು ಹಿಂಸೆ ಕೊಡ್ತಾರೆ ಅನ್ನೋದು ಸಹ ಇಲ್ಲಿದೆ.

೦೪)ಬಾದಾಮಿ ಗಿಡಕ್ಕೆ ನೇತು ಬಿದ್ದ ಕಾಕತಾಳೀಯ ಕತೆಗಳಿಗೆ ಒಂದಿನ ಗಿಡವೆ ಹೇಗೆ ಬಲಿಯಾಯ್ತೋ ಗಿಡದ ಮಾಲಿಕನ ಶಾಪಕ್ಕೋ ಅಥವಾ ಇನ್ಯಾವುದೋ ಕಾಕತಾಳೀಯ ಕತೆಗೆ ಊರ ಜನರ ಮನೆ ಆಸ್ತಿಪಾಸ್ತಿ ನೆಮ್ಮದಿ ಇದ್ದದ್ದು ಎಲ್ಲಾ ಬಲಿಯಾಯ್ತು.


ಒಬ್ಬ ಬರಹಗಾರ ಹೇಗೆ ಕಾವ್ಯಲೋಕಕ್ಕೆ ಅಂಬೆಗಾಲಿಟ್ಟು ಬಂದು ಒಂದು ಇಲ್ಲಿ ಗಮ್ಯ ಕಂಡುಕೊಂಡು ತನ್ನ ಗಟ್ಟಿಯಾದ ಬರಹಗಳ ಮೂಲಕ‌ ಜನಮಾನಸದಲ್ಲಿ ಖಾಯಂ ಆಗಿ ನಿಲ್ಲುತ್ತಾನೋ ಹಾಗೇಯೇ ಈ ಕಾದಂಬರಿಯಲ್ಲಿ ಬಾಲ್ಯದ ನೆನಪುಗಳು ಮೆಲಕು ಹಾಕುವ ಮೂಲಕ ಶುರುವಾದ ಕತೆ ತನ್ನೂರಿಗೆ ಬಂದು ನಡೆಯೋದು ಕಲಿತು ಯಾವುದೆ ಗೊಂದಲ ಆಭಾಸ ಎನಿಸಿದರೆ ಓದಿಸಿಕೊಂಡು ಸಾಗುತ್ತದೆ.ಕತೆಗಾರ ಹೊಸಬರಾದರು ಕತೆ ಪೂರ್ಣತೆ ಕಂಡುಕೊಂಡಿದೆ ನಮ್ಮ ಭಾಗದ ಭಾಷೆಯ ಸಮಯೋಚಿತ ಸಮರ್ಪಕವಾದ ಬಳಕೆ ಮತ್ತು ಅಚ್ಚುಕಟ್ಟಾದ ಪಾತ್ರಗಳನ್ನ ಕತೆಯುದ್ದಕ್ಕು ನಿಭಾಯಿಸುತ್ತಾ ಅಲ್ಲಲಿ ಕೆಲವು ಉಪಮೇಗಳು ಹಿರಿಯರ ಮಾತಿನಂತೆ ನೆನಪಲ್ಲಿ ಉಳಿತವೆ.ಮೂಲಕ ಗದ್ಯಕೃತ್ರುಗಳ ಸಾಲಿಗೆ ಸೇರುವು ಯಾವುದೆ ಅನುಮಾನವಿಲ್ಲ.ಅಭಿನಂದನೆಗಳು ಕಪೀಲ್ ಬ್ರದರ್ ಇನ್ನು ಹೆಚ್ಚಿನ ಕಾದಂಬರಿಗಳು ನಿಮ್ಮಿಂದ ಹೊರಬಂದು ನಾಡಿನ ಜನರ ಮನದಲ್ಲಿ ಅಚ್ಚಳಿಯದೆ ಉಳಿಯಲಿ ಎಂದು ಶುಭಹಾರೈಸುತ್ತೆನೆ.ಹಾಗೇಯೆ ಇದರಲ್ಲಿ ಆದ ಕೆಲವೂ ಸಣ್ಣ ತಪ್ಪುಗಳು ಸಹ ಫೋನಲ್ಲಿ ಚರ್ಚೆ ಮಾಡಲಾಗಿದೆ ನಿಮ್ಮೊಟ್ಟಿಗೆ..

ತಿಳಿದ ರೀತಿ ಬರೆಯುವ ಪ್ರಯತ್ನ ಮಾಡಿದ್ದಿನಿ ಧನ್ಯವಾದಗಳು "ಹಾಣದಿ" ಕೈಗೆತ್ತಿ ಒಂದೆ ಗುಕ್ಕಿಗೆ ಓದಿಸಿದಕ್ಕೆ
✍🏻✍🏻✍🏻✍🏻
*ರಾಜೇಶ ಶಿಂಧೆ*

No comments:

Post a Comment