Saturday 14 October 2017

ಡಾನ್ ಕ್ವಿಕ್ಸಾಟನ ಸಾಹಸಗಳು - ಮಿಗುವೆಲ್ ಸರ್ವಾಂಟಿಸ್.
ಅನು: ಕೆ.ವಿ.ತಿರುಮಲೇಶ್.

ಇದರ ಹೆಸರು ನೋಡಿದ ಕೂಡಲೆ ಇದೊಂದು ರೋಚಕ ಪುಸ್ತಕವೆಂದೂಹಿಸಿದರೆ ಅದು ನಮ್ಮದೆ ತಪ್ಪು.  ಇದೊಂದು ಹಾಸ್ಯ ಪ್ರಧಾನ ಕಾದಂಬರಿ. ಇದರ ಲೇಖಕ ಜೈಲಿನಲ್ಲಿದ್ದಾಗ ಬರೆದದ್ದು. ಕಂಬಾರರು ಒಂದು ಕಡೆ ಲೇಖಕನೊಬ್ಬನಿಗೆ ಆತ್ಮಕಥೆ ಬರೆಯುವ ಜರೂರತ್ತು  ಇರುವುದಿಲ್ಲ ಅವನ ಸಾಹಿತ್ಯವೆ ಅವನ ಕಥೆಯಾಗಿರುತ್ತದೆ ಎಂದು ಹೇಳಿದ ನೆನಪು. ಮಿಗುವೆಲನ ತಂದೆ ಶಸ್ತ್ರಚಿಕಿತ್ಸಕ. ಈ ವೃತ್ತಿಗೆ ಇಗಿರುವಷ್ಟು ವ್ಯಾಲಿವ್ ಆಗಿರಲಿಲ್ಲ.  ಊರಿಂದ ಊರಿಗೆ ಅಲಿಯಬೇಕಾಗಿತ್ತು. ಕ್ಷೌರಿಕರೆ ಕೆಲವು ಸಲ ಸಣ್ಣ ಪುಟ್ಟ ಶಸ್ತ್ರಚಿಕಿತ್ಸಗಳು ಮಾಡುತ್ತಿದರಂತೆ. ತಂದೆಯ ಅಲೆದಾಟ ಮಿಗುವೆಲಗೆ ಹೊಸ ಲೋಕ ಪರಿಚಯಿಸಿತು. "ಡಾನ್ ಕ್ವಿಕ್ಸಾಟನ ಪಾತ್ರರಚನೆಯಲ್ಲಿ ಅವನು ಸ್ವಲ್ಪಮಟ್ಟಿಗೆ ತನ್ನದೇ ಈ ಗೀಳನ್ನು ಗೇಲಿ ಮಾಡಿದ್ದಿರಲೂಬಹುದು ! ಎಂದು ತಿರುಮಲೇಶರು ಹೇಳುತ್ತಾರೆ. ಮಿಗುವೆಲ್ ಯುದ್ಧದಲ್ಲಿಯು ಭಾಗವಹಿಸಿದವನು ಅವನ ಹಿನ್ನಲೆ ನೋಡಿದರೆ ಈ ಕಾದಂಬರಿ ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತದೆ. ಮಿಗುವೆಲನಿಗೆ ಇದೊಂದೆ ಪುಸ್ತಕದಿಂದ ಇಂಗ್ಲೆಂಡನಲ್ಲಿ ಶೇಕಸ್ಪಿಯರನಷ್ಟೇ ಲೋಕಪ್ರಸಿದ್ಧಿ ಮತ್ತು ಮಹತ್ವ ಪಡೆದನಂತೆ.

ಇದೊಂದು ಅಮಿತ ಸಾಹಸ ಕೃತಿಗಳು ಓದಿದವನೊಬ್ಬ ಕಾಲಾಂತರದಲ್ಲಿ ಮತಿಭ್ರಮಣೆಗೊಳಗಾದ ಕಥೆ. ಪುಸ್ತಕಗಳನ್ನು ಕೊಳ್ಳುವುದಕ್ಕಾಗಿ ತನ್ನ ಜಮೀನಿನ ಬಹುಭಾಗವನ್ನೆ ಮಾರುತ್ತಾನೆ .ಹೊಟ್ಟೆ ಹುಣ್ಣಾಗುವಷ್ಟು ನಗಿಸುವ ಮತ್ತು ಬದುಕಿನ ಇತರ ಸಂಗತಿಗಳು  ಪರಿಚಯಿಸುವ ಕೃತಿ ಇದು. ತಾನು ಓದಿದ ಸರದಾರರಂತೆ ಆಗಬೇಕೆಂದು ಕ್ವಿಕ್ಸಾಟನ  ಬಡ ಬಂಟ ಸಾಂಕೋ ಜೊತೆ ಮತ್ತು ತನ್ನ ಕತ್ತೆ ಏರಿ ಹಾದಿಯಿಲ್ಲದ ನೆಲಕ್ಕೆ ನಡೆಯುತ್ತಾನೆ. ತನ್ನೆದುರು ಕುರಿಗಳ ಹಿಂಡು ಬರುತ್ತಿದ್ದರು ಅದೊಂದು ಯಾವುದೋ ದೊಡ್ಡ ಸೈನ್ಯವೆಂದು ತಿಳಿದು ಅನೇಕ ಕುರಿಗಳ ಸತ್ತು ಹೊಡೆಯುತ್ತಾನೆ. ಛತ್ರವು ಸಹ ದುರ್ಗವೆಂದೆ ಭಾವಿಸುತ್ತಾನೆ. ಡಲ್ಸೀನಿಯಾ ಡೆಲ್ ಟೊಬೋಸೋ ಎನ್ನುವುದು ಅವನ ಕಲ್ಪಿತ ದೇವ ಪ್ರೇಯಸಿ ಇವಳಿಗವ ಮಾಡುವ ಪ್ರಾರ್ಥನೆಗಳು ಅಯ್ಯೋ  ಎನಿಸುತ್ತವೆ ಜೊತೆಗೆ ನಗು ಕೂಡ.

ಇವನ ಮನೆಯವರು ಇವನ ಸಂಗ್ರಹದ ಪುಸ್ತಕಗಳೆಲ್ಲ ಸುಡುತ್ತಾರೆ. ಕೊನೆಗೆ ಅದು ಹೇಗೊ ಅವನೂರಿನ ಕ್ಷೌರಿಕ ಮತ್ತು ಪುರೋಹಿತ ಕಳೆದ ಕ್ವಿಕ್ಸಾಟನಗೆ ವಾಪಸ್ ತಂದು ಮನೆಗೆ ಮುಟ್ಟಿಸುತ್ತಾರೆ. ಇದೊಂದು ಬರೀ ಕಥೆಯಲ್ಲ ಸೂಕ್ಷ್ಮವಾಗಿ ನೋಡಿದರೆ ಬದುಕಿದೆ. ಇವನೊಂದಿಗೆ ಹೋದ ಬಂಟ ಮರಳಿ ಬಂದಾಗ ಅವನ ಹೆಂಡತಿ ನನಗೆ ಲಂಗ ತಂದಿಯಾ ? ಮಕ್ಕಳಿಗೆ ಉಡಲು ಬಟ್ಟೆ ? ಎಂದು ಕೇಳುತ್ತಾಳೆ.  ಈ ಎಲ್ಲಾ ಪ್ರಶ್ನೆಗಳು ಧೂಳಂತೆ ಪುಡಿ ಮಾಡಿ ಬಂಟ ಸಾಂಕೋ ಹೇಳುತ್ತಾನೆ ಮುಂದೊಂದು ದಿನ ನೀ ದೊರೆಸಾನಿ ಆಗುತಿ ಎನ್ನುತ್ತಾನೆ ನನ್ನಗನಿಸುವುದೆನೆಂದರೆ ಒಬ್ಬ ಸಾಮಾನ್ಯ ಮನುಷ್ಯನೊಳಗಿನ ಅಪರಿಮಿತ ಕನಸುಗಳು ಗುಳ್ಳೆ ಒಡೆದು ಹೋರಬಂದಾಗ ಅವು ನಿಲ್ಲಲಾರವು. ಆ  ಕಾಲದ ಜಿತ ಪದ್ದತಿ, ಘೋರ ಶಿಕ್ಷೆಗಳು, ಮೇಲ್ವರ್ಗ, ದಾರಿಹೋಕರು, ಪಾದ್ರಿ ಎಲ್ಲರನ್ನೂ ಎಲ್ಲರನ್ನೂ ಕ್ವಿಕ್ಸಾಟ ಭೇಟಿಯಾಗುತ್ತಾನೆ ಸಾಮಾನ್ಯ ಮನುಷ್ಯನಂತೆ ಅಲ್ಲ ವೀರ ಸರದಾರನಂತೆ.

ಕೊನೆಗೆ ಬಂಟ ಸಾಂಕೋ ಹೇಳುತ್ತಾನೆ :-
" ಕೆಲವೊಂದು ಸಾಹಸಗಳು ನಾವು ಬಯಸುವಷ್ಟು ಇಷ್ಟವಾಗುವಂಥವು ಅಲ್ಲ ಎನ್ನುವುದೇನೋ ನಿಜ. ಯಾಕಂದರೆ ನೂರರಲ್ಲಿ ತೊಂಬತ್ತೊಂಬತ್ತರಷ್ಟು ದುರದೃಷ್ಟಕರವಾಗಿರುತ್ತವೆ  ಆದರೂ ಸಾಹಸದ ನಿರೀಕ್ಷೆ ಸಂತೋಷವನ್ನೆ ನೀಡುತ್ತದೆ.

ತಿರುಮಲೇಶರವರ ಕಾವ್ಯಾತ್ಮಕ ಅನುವಾದ ಇಷ್ಟವಾಗುವಂತಹದು. ಬಟ ಸಾಂಕೋ ಕಥಾನಾಯಕನಿಗಿಂತ ಕಾಡುತ್ತಾನೆ.

# ಕಪಿಲ ಪಿ ಹುಮನಾಬಾದೆ.
15/10/2017.