Thursday 7 May 2020

ಮುದಿರಾಜ್ ಬಾಣದ್ ಅವರ ಬಿಡಿ ಚಿತ್ರಗಳ ಕಥನ ಚಾನ್ನೆ - ಕಪಿಲ ಪಿ ಹುಮನಾಬಾದೆ

ಚಾನ್ನೆ ( ಕಥಾಸಂಕಲನ)- ಮುದಿರಾಜ್ ಬಾಣದ್.

ನಮ್ಮ ಉತ್ತರ ಕರ್ನಾಟಕದ, ನಮ್ಮ ವಾರಿಗೆಯ ಹೊಸಬರ ಕಥಾಸಂಕಲನ ಇದು. ಹಲವು ಕಾರಣಕ್ಕೆ ಈ ಕಥೆಗಳು ಓದಿಸಿಕೊಂಡು ಹೋಗಿವೆ. ಸುಮಾರು 12 ಕಥೆಗಳಿರುವ ಈ ಸಂಕಲನ ತುಸು ಭಿನ್ನವಾಗಿದೆ. ಇಲ್ಲಿ ಯಾವ ಕಥೆಯೂ ಪುಟಗಳ ದೃಷ್ಟಿಯಿಂದ ದೀರ್ಘವಾಗಿಲ್ಲ. ತುಂಡು ತುಂಡು ಘಟನೆಗಳ ಬಣ್ಣ ಬಳಿದಿಟ್ಟ ಹಾಳೆಗಳು ಓದುಗನೆದುರು ಚದುರಿ ಬಿದ್ದಿವೆ, ನಾವೇ ಇಲ್ಲಿ ಈ ತುಂಡುಗಳು ಜೋಡಿಸಿಕೊಂಡು ನಮಗೆ ಬೇಕಾದ, ಆ ಸಮಯದಲ್ಲಿ ಸರಿಯೇನಿಸುವ ಚಿತ್ರ ಹೊಂದಿಸಿಕೊಂಡು ಕಥೆ ಪೂರ್ಣಮಾಡಿಕೊಳ್ಳಬೇಕು. ಇಲ್ಲಿ ಯಾವ ಕಥೆಗೂ ತುದಿಯೆಂಬುವುದಿಲ್ಲ. 

" ಬರೆದರೆ ಮಾತ್ರ ಹಗುರವಾಗುತ್ತೇನೆಂದು ಪ್ರಾಮಾಣಿಕವಾಗಿ ಬರೆದ ನನ್ನದೆ ನಿಜ ಜೀವನದ ಅಷ್ಟೂ ಇಲ್ಲಿನ ಕತೆಗಳಾಗಿ ಹೊರಹೊಮ್ಮಿವೆ" - ಎಂದು ಹೇಳಿಕೊಂಡಿರುವ ಮುದಿರಾಜ್ ಅವರ ಈ ಮಾತುಗಳು ಅವರ ಕಥೆಗಳು ಓದಿದಾಗ ನಿಜವೆನಿಸುತ್ತವೆ.  ಜೇಜಮ್ಮ ಕಥೆಯೊಂದು ಚೂರು ಬಿಟ್ಟರೆ ಇಲ್ಲಿ ಬರುವ ಬಹುತೇಕ ಕಥೆಗಳು ಮನುಷ್ಯನೊಬ್ಬನ ಅತ್ಯಂತ ನಿಕಟವಾದ ಕೌಟುಂಬಿಕ ಅನುಭವಗಳಂತೆ ಮೇಲುನೋಟಕ್ಕೆ ಕಾಣಿಸಿದರೂ, ಅದಲ್ಲದ ಯಾವುದೋ ಹೊಸ ಅನುಭವಗಳು ಬಿಚ್ಚಿಡುವ ಈ ಕಥೆಗಳು ರೂಪಕಗಳ ಮೂಲಕವೇ ಹಲವು ಸಂಗತಿಗಳು ಮೌನವಾಗಿಯೇ ಹೇಳುತ್ತವೆ.


ಸಿಂಹರಾಶಿ ಕಥೆಯಲ್ಲಿ ಬರುವ ಕೆಲವು ಸಾಲುಗಳಿವು -
"ಮತ್ತೆ ಅವನ ಮನಸ್ಸು ಎತ್ತಲೋ ಹರಿದರೂ ಸಹ ಅದು ಇವಳನ್ನು ದಾಟಿ ಹೋಗಲೊಲ್ಲದು. ಮನೆ ತುಂಬಾ ಕಸದ ರಾಶಿ. ಎಲ್ಲೆಂದರಲ್ಲಿ ಸಾಮಾನುಗಳು, ಹ್ಯಾಂಗರಿಗೆ ನೇಣುಹಾಕಿಕೊಂಡ ಶವಗಳಂತೆ ನೇತುಬಿದ್ದ ಶರ್ಟು ಪ್ಯಾಂಟುಗಳು, ಒಂದು ವಿಚಿತ್ರ ಮನಸ್ಥಿತಿಯಲ್ಲಿ ಓಡಾಡುವ ಇವಳು" - ಈ ಸಾಲುಗಳಂತೆ ಹಲವು ದಟ್ಟ ವಿವರಗಳು ನಮ್ಮೆದುರು ಬಿಡಿ ಚಿತ್ರಗಳ ಮೂಲಕ ಕಥೆಗಾರರು ಕೊಡುತ್ತಾರೆ.

ಇಲ್ಲಿ ಯಾವ ಕಥೆಯೂ ನೇರವಾಗಿ ಓದುಗನಿಗೆ ಹೇಳುವಂತಹವುಗಳಲ್ಲ. ಸಂಕೇತಗಳ ಮೂಲಕ ಧ್ವನಿಸುವ ಕಥೆಗಳಿವು.  

ಮೂಗುದಾಣದಲ್ಲಿ ಬರುವ ಮಕ್ಕಳ ಕಳ್ಳರು, ಸಿಂಹರಾಶಿ ಕಥೆಯಲ್ಲಿ ಬಸ್ಸೇರಿ ನಿಂತಿರುವ ಅಪರಿಚಿತ ಹುಡುಗರ ಮಾತುಗಳು, ಹೊತ್ತು ಮುಳುಗುವ ಮುನ್ನ ಆವರಿಸಿದ ಕತ್ತಲಲ್ಲಿ  ಬರುವ ಸೀಳು ನಾಯಿಗಳು, ಜೂಜು ಕಥೆಯಲ್ಲಿ ಬರುವ ಜಾಲಿ ಮರದ ಹಾದಿಯಲ್ಲಿ ಕಳೆದು ಹೋದ ಹುಂಜ, ಚಾನ್ನೆ ಕಥೆಯ ಬಾಯಿ ಬಾಯಿ ಬಡಿದುಕೊಳ್ಳುವ ಖಾಯಿಲೆ, ಜೇಜಮ್ಮನ ಮಾತುಗಾರಿಕೆ, ಕಟ್ಟಿರುವೆ ಕಥೆಯಲ್ಲಿ ಕಪ್ಪನೆಯ ಇರುವೆಗಳು ಮಗುವಿಗೆ ಗಾಯಗೊಳಿಸಿದ ಗುರುತು, ಕೈಚೀಲ ಕಥೆಯ ಭವಿಷ್ಯದ, ಭೂತದ ಸಂಗತಿಗಳ ಫೋಟೋಗಳು, ಹೇನು ಕಥೆಯಲ್ಲಿ ಅವಳ ಕೂದಲಿಂದ ಬುಳುಬುಳು ಬಿದ್ದ ಹೇನುಗಳು, ಅಂಬಿಕಾ ಕಥೆಯಲ್ಲಿ ಅಕ್ಕನ ಮಗಳು - ಹೀಗೆ ಈ ಎಲ್ಲಾ ಕಥೆಗಳಲ್ಲಿಯೂ ಒಂದು ರೂಪಕ ಅಥವಾ ಸಂಕೇತಗಳ ಮೂಲಕ ಭ್ರಮೆಗಳು ಓದುಗನೆದುರು ಕೆಡವಿಟ್ಟು ವಾಸ್ತವ ಹೇಳುವ ಮೂಲಕ ಕಥೆಗಳು ಭಿನ್ನವಾಗಿ ನಿಲ್ಲುತ್ತವೆ.

ಎಲ್ಲಾ ಕಥೆಗಳೂ ಒಂದೊಂದಾಗಿ ವಿವರಿಸಲು ಸಾಧ್ಯವಿಲ್ಲ. ಇವುಗಳೆಲ್ಲ ನಾಜೂಕಾಗಿ ಹೆಣೆದ ಬಲೆಯಂತೆ, ಕೌದಿಯಂತೆ ಕಾಣುತ್ತವೆ ಬಿಡಿಸಿ ನೋಡಿದಷ್ಟು ಅರ್ಥ ಜಾರುವ ಅಥವಾ ಈ ಕಥೆಗಳೆಲ್ಲ ಟ್ರೈನೊಂದುರ ಒಂದೊಂದು ಬೋಗಿಯಂತೆ ನನಗೆ ಕಾಣುತ್ತವೆ.

ಒಲ್ಲದ ಹೆಂಡತಿ, ಮುದ್ದಿನ ಮಕ್ಕಳು, ಬೇಸತ್ತು ನಿಂತಿರುವ ಗಂಡ, ಜೂಜಿನ ಅಪ್ಪ, ಮಗು ಮಲಗಿದ ರಾತ್ರಿ ಕೂಡುವ ಅವರ ಮಧ್ಯೆ ಕಟ್ಟಿರುವೆಗಳ ದಾಳಿ ಇವೆಲ್ಲ ಭಿನ್ನವಾಗಿ ಯೋಚಿಸುಂತೆ ಮಾಡುವ ಅವೇ ಪಾತ್ರಗಳ ಮರು ಬಂದು ನಿಂತು ಹೊಸ ಕಥೆ ಹೇಳಿದಂತೆ ಕಾಣುತ್ತವೆ.

ಮೊದಲ ಓದಿಗೆ ದಕ್ಕಿದ್ದಿಷ್ಟು. ಹಲವು ಮಗ್ಗಲುಗಳಲ್ಲಿ ಈ ಕಥೆಗಳು ನೋಡಬಹುದು. ಉದಾಹರಣೆಗೆ ಚಾನ್ನೆ ಕಥೆಯಲ್ಲಿಯೇ ಬರುವ ೫ ಭಾಗಗಳಲ್ಲಿಯೂ ಒಬ್ಬ ವ್ಯಕ್ತಿಯ ಬದುಕು ಹಿಂದಕ್ಕೂ ಮುಂದಕ್ಕೂ ಚಲಿಸಿ ವಾಸ್ತವಕ್ಕೆಸೆಯುತ್ತದೆ. ಶೇವಿಂಗ್ ಮಾಡಿಸುತ್ತಾ ಕೂತವ ಗೆಳೆಯನ ನೆನಪಿಗೆ ಜಿಗಿಯುತ್ತಾನೆ ಅಲ್ಲಿಂದ ಏಸುವಿನ ಪ್ರಾರ್ಥನೆ, ಅಪ್ಪನ ನೆನಪು, ಒಂಟಿತನದ ಬಯಕೆ, ಗಾಯಮಾಡಿಕೊಂಡ ಮಗಳು ಚಾನ್ನೆ, -"ಸುಮಾರು ವರ್ಷಗಳಿಂದ ಗಟ್ಟಿಯಾಗಿ ಅಲುಗಾಡದೆ ಇದ್ದ ಕಲ್ಲುಬಂಡೆಯಂತೆ" ಎನ್ನುವ ಹಾಲಿನೊಂದಿಗೆ ಈ ಕಥೆ ಮುಗಿಯುತ್ತದೆ. ಒಂದೇ ದಿಕ್ಕಿನಲ್ಲಿ ಇಲ್ಲಿನ ಕಥೆಗಳು ವಿವರಿಸಿಬಿಡುವುದು ಕಷ್ಟ.

ಒಂದೊಳ್ಳೆ ವಿಭಿನ್ನ ಪ್ರಯತ್ನದ ಮೂಲಕ, ಪ್ರಾಮಾಣಿಕ ಬರಹದ ಕಥೆಗಳ ಮೂಲಕ ಹಳೆ ಗಾಯಗಳಿಗೆ, ಮುಂದಿನ ಕನಸುಗಳಿಗೆ ಹೊಸ ಹಾಡು ಬರೆಯುತ್ತಿರುವಂತೆ ಇಲ್ಲಿನ ಕಥೆಗಳು ಕಾಣುತ್ತವೆ. ಒಂದು ಚೌಕಟ್ಟು ತಯಾರಿಸಿಟ್ಟುಕೊಂಡು ತಮಗೆ ಬೇಕಾದ ಕಥೆಗಳು ಅದರೊಳಗಿಟ್ಟು ಹೇಳುವ ಮುದಿರಾಜ್ ಬಾಣದ್ ಅವರು ಮುಂದೆ ಇನ್ನಷ್ಟು ಹೊಸ ಪ್ರಯೋಗಗಳ ಮೂಲಕ ಇದೇ ರೀತಿ ಭಿನ್ನ ನಿರೂಪಣೆ, ಚೌಕಟ್ಟಿನ ಕಥೆಗಳು ನೀಡಲಿ.

* ಚಾನ್ನೆ ಪದದ ಅರ್ಥ- ಬೆಳದಿಂಗಳು.

# ಕಪಿಲ ಪಿ ಹುಮನಾಬಾದೆ.
7/05/2020