Saturday 29 July 2017

ಪುಸ್ತಕ ಓದು - ೧

ರೂಪದರ್ಶಿ - ಕೆ.ವಿ.ಅಯ್ಯರ್ 
(ಕಾದಂಬರಿ)

ಒಬ್ಬ ಸಾಮಾನ್ಯ ಹಳ್ಳಿಯಲ್ಲಿ ಇದ್ದ ಮನುಷ್ಯನ ಜೀವನದಲ್ಲಿ, ಆಧುನಿಕತೆ ಪ್ರವೇಶವಾದೊಡನೆ ಆ ವ್ಯಕ್ತಿಯ ಜೀವನದಲ್ಲಿ ನಡೆಯುವ ದುರಂತ ಕಥನಗಳ ಕಥಾ ಹಂದರವನ್ನು ಈ 'ರೂಪದರ್ಶಿ' ಕಾದಂಬರಿ ಒಳಗೊಂಡಿದೆ.

ಈ ಕಾದಂಬರಿ ಹುಟ್ಟುವಿಕೆಯನ್ನು ಲೇಖಕರೇ ಹೇಳುವಂತೆ, "1942 ನೇ ಇಸವಿ ಏಪ್ರಿಲ್ ತಿಂಗಳಲ್ಲಿ ಪ್ರಚುರವಾದ 'Readers Digest' ಎಂಬ ಅಮೇರಿಕಾದ ಮಾಸ ಪುಸ್ತಕದಲ್ಲಿ 'The Face of Judas Iscariot' ಎಂದು ಮುಕ್ಕಾಲು ಪುಟದಷ್ಟು ಒಂದು ಕತೆ ಇತ್ತು. ಅದರಲ್ಲಿನ ಪಾತ್ರಗಳು ಎರಡೇ: ಯಾರೋ ಒಬ್ಬ ಕಲಾವಂತ ಶಿಲ್ಪಿ, ಅವನಿಗೆ ರೂಪದರ್ಶಿಯಾಗಿ ಸಿಕ್ಕಿದ ಒಬ್ಬ ಬೀದಿಯ ಹುಡುಗ. ಕತೆಯೂ ಬಹು ಚಿಕ್ಕದು. ಅದನ್ನು ಓದಿದಾಗ. 'ಕಥಾವಸ್ತು ಚೆನ್ನಾಗಿದೆ. ಒಂದು ಪುಟದಲ್ಲಿರುವ ಇದನ್ನು ಎಂಟು ಹತ್ತು ಪುಟಗಳ ಪುಟ್ಟ ಕತೆಯಾಗಿ ಕನ್ನಡದಲ್ಲಿ ಬರೆಯಬಹುದು' ಎನ್ನಿಸಿತು. ಬರೆಯುವುದಕ್ಕೆ ತೊಡಗಿದಾಗ, ಹೀಗೆ, ಈಗ ಇರುವ ಸ್ಥಿತಿಗೇ ಬೆಳೆಯಿತು; ನನ್ನ ಮನಸ್ಸಿನಲ್ಲಾಗಲಿ ಲೇಖಕನಿಗಾಗಲಿ ತಡೆಯಿಲ್ಲದೆ, ಶ್ರಮವಿಲ್ಲದೆ, ಈ ಕತೆ ರೂಪ ತಾಳಿತು. ಮೂಲದಲ್ಲಿ 'ಶಿಲ್ಪಿ' ಮತ್ತು ಅವನ 'ರೂಪದರ್ಶಿ' ಹೊರತು ಉಳಿದೆಲ್ಲ ಪಾತ್ರಗಳೂ ನನ್ನ ಮನಃಸೃಷ್ಟಿ". ಎನ್ನುವ ಕಾದಂಬರಿಕಾರರು, ಇಟಲಿ ದೇಶದ 'ಫ್ಲಾರೆನ್ಸ', 'ಪೀಸಾ', 'ಕರಾರಾ', 'ರೋಂ' ಮತ್ತು 'ಎಂಪೊಲಿ' ಎನ್ನುವ ಸ್ಥಳಗಳಲ್ಲಿ ಕಥೆ ನಡೆಯುತ್ತದೆ.

ಇಟಲಿ ದೇಶದ ಪ್ರಸಿದ್ಧ ಶಿಲ್ಪಿಯಾದ 'ಮೈಕಲ್ ಆಂಜೆಲೋ' ಇಡೀ ಕಾದಂಬರಿಯ ಹೃದಯವಾದರೆ, ಮೈಕಲ್ ಆಂಜೆಲೋಗೆ  ರೂಪದರ್ಶಿಯಾಗಿ ಪೀಸಾ ನಗರದ ಬಡ ಹುಡುಗ 'ಅರ್ನೆಸ್ಟ್' ಇಡೀ ಕಾದಂಬರಿಯ ನಾಯಕ. ಅತಿ ಮುಖ್ಯವಾಗಿ ಈ ಬಡ ಹುಡುಗನ ಜೀವನವೇ ಈ ಕಾದಂಬರಿ ಅಂದರೂ ತಪ್ಪಲ್ಲ. 

ಮೈಕಲ್ ಆಂಜಲೋ ಚೆರ್ಚವೊಂದರ ಶಿಲ್ಪಕಲೆಯ ಕೆತ್ತನಾ ಕಾರ್ಯವನ್ನು ಒಪ್ಪಿಕೊಂಡಿರುತ್ತಾನೆ. ಅಲ್ಲಿ ಯೇಸುವಿನ ಇಡೀ ಜೀವನವನ್ನು ಸಾರುವ ಕಲಾಕೃತಿಯನ್ನು ಕೆತ್ತುವ ಕಾರ್ಯದಲ್ಲಿರುತ್ತಾನೆ. ಮೊದಲು ಯೇಸುವಿನ ಬಾಲ್ಯದ ಚಿತ್ರಗಳನ್ನು ಇಳಿಸಲು ಬಾಲ ಯೇಸುವಿನ ಹುಡುಕಾಟದಲ್ಲಿರುವಾಗಿ ಸಿಕ್ಕಿದ್ದೆ ಈ ಬಹ ಹುಡುಗ 'ಅರ್ನೆಸ್ಟ್'. ಅರ್ನೆಸ್ಟ್ ತಂದೆ-ತಾಯಿ ಇಲ್ಲದವ ಅಜ್ಜಿಯ ಆರೈಕೆಯಲ್ಲೇ ಬೆಳೆಯುತ್ತಿರುವವನಿಗೆ, ಮೈಕಲ್ ಅವರನ್ನು ತನ್ನೂರಿಗೆ ಕರೆದುಕೊಂಡು ಬಂದು ಚಿತ್ರಗಳೆಲ್ಲ ಮುಗಿಸಿ, ಒಂದಷ್ಟು ಹಣವನ್ನು ಅರ್ನೆಸ್ಟ್ ನ ಓದಿಗೆ ಕೊಟ್ಟು, ಅಜ್ಜಿ-ಮೊಮ್ಮಗನನ್ನು ಪುನಃ ಅವರ ಹಳ್ಳಿಗೆ ತಂದು ಬಿಡುತ್ತಾರೆ. ಮೈಕಲ್ ಕೊಟ್ಟ ಹಣ, ಮೊಮ್ಮಗನ ಅವನ ವಿದ್ಯಾಭ್ಯಾಸಕ್ಕೇ ಇರಲೆಂದು 'ಜಿಯೋವನಿ' ಎಂಬ ಸಾಹುಕಾರನ ಬಳಿ ಎಲ್ಲ ಹಣವನ್ನು ಅರ್ನೆಸ್ಟ್ ನ ಅಜ್ಜಿ ಇಟ್ಟಿರುತ್ತಾಳೆ. ಮುಂದೆ ಕಥೆ ಸಾಗಿ, ಅಜ್ಜಿ ಒಂದು ದಿನ ಸಾಯುತ್ತಾಳೆ. ಆಗ ಸಾಹುಕಾರನಿಂದ ಮೋಸಗೊಳ್ಳುವ 'ಅರ್ನೆಸ್ಟ್' ನಿರ್ಗತಿಕನಾಗಿ ತನ್ನಗೆ ತನ್ನವರು ಯಾರೂ ಇಲ್ಲದೆ ಬೇರೊಂದು ಹಳ್ಳಿಗೆ ಹೋಗಿ ಕಳ್ಳತನ, ಮೋಸ, ವಂಚನೆ, ದರೋಡೆಯ ಕೆಲಸಗಳಲ್ಲಿ ತೊಡಗಿರುತ್ತಾನೆ. ಯೇಸುಕ್ರಿಸ್ತನ ಜೀವನ ಚರಿತ್ರೆಯ ಶಿಲ್ಪಕೆತ್ತನೆಯ ಕಾರ್ಯದಲ್ಲಿ ವಿಳಂಬವಾಗಿ ಮುಂದೆ ಹಲವು ವರ್ಷಗಳ ನಂತರ ಯೇಸುವಿಗೆ ಮೋಸಮಾಡಿದ ಶಿಶ್ಯನಾದ 'ಜುದಾಸ್'ನ ಶೋಧನೆಯಲ್ಲಿರುವಾಗ ಈ ಅರ್ನೆಸ್ಟ್ ಸಿಗುತ್ತಾನೆ. ಇವೆಲ್ಲವುದರ ಮಧ್ಯೆ, 'ಲೀನಾ', 'ಟಾಯಿಟ್' ಎನ್ನುವ ಎರಡು ಪಾತ್ರಗಳು ಸಹ ಕಾದಂಬರಿಯಲ್ಲಿ ಬಹು ಮುಖ್ಯವಾದ ಪಾತ್ರವಹಿಸುತ್ತವೆ.

ಪ್ರೀತಿ, ಮಮತೆ, ಕರುಣೆ, ಕ್ರೌರ್ಯ, ಮೋಸ, ಇತ್ಯಾದಿಗುಣಗಳುಳ್ಳ ವಿವಿಧ ಪಾತ್ರಗಳು ಕಾದಂಬರಿಯುದ್ದಕ್ಕೂ ನಮಗೆ ಕಾಣಸಿಗುತ್ತವೆ. ಬಹುಮುಖ್ಯವಾಗಿ ಕಾದಂಬರಿಯಲ್ಲಿ ಆಡಳಿತಷಾಹಿ ವ್ಯವಸ್ಥೆಯ ದೌರ್ಜನ್ಯಕ್ಕೆ ಜನಸಾಮಾನ್ಯರು ಬಲಿಯಾಗುವ ವ್ಯವಸ್ಥೆಯನ್ನು ವಿರೊಧಿಸುವ ಮನೋಭಾವನೆಯನ್ನು ಅಸಾಹಾಯಕ ವ್ಯಕ್ತಿಯೊಬ್ಬ 'ಭಾವನಾತ್ಮಕ ಪರಿಧಿಯಲಿ' ಸಿಕ್ಕಿ, ವ್ಯವಸ್ಥೆಯ ವಿರುದ್ಧ ಖಂಡಿಸುವುದನ್ನೇ ಮರೆಯುತ್ತಾನೆ.

ಕಾದಂಬರಿಯಲ್ಲಿ ದೇವರ ವಿಷಯಕ್ಕೆ ಸಂಬಂಧಿಸಿದಂತೆ ಈ ಮಾತು ಯಾವಾಗಲೂ ಪ್ರಸ್ತುತವೆನಿಸುತ್ತದೆ. "ಈ ಪ್ರಪಂಚದಲ್ಲಿ ಎಷ್ಟೊಂದು ಜನ ಷಂಡರು, ದೇವರು, ದೇವರು ಎಂದು ನಂಬಿ ನನ್ನಂತೆ ಕಷ್ಟಪರಂಪರೆಗಳಿಗೆ ಸಿಕ್ಕಿ ಕೊಚ್ಚಿಹೋಗಿರುವರೊ? ಈ ಪ್ರಪಂಚದಲ್ಲಿ ನ್ಯಾಯವೂ ಧರ್ಮವೂ ಎರಡೂ ಇಲ್ಲ. ಕಾಡಿನ ಮೃಗಗಳಂತೆ, ನೀರಿನೊಳಗಿನ ಮೀನುಗಳಂತೆ, ಬಲಿಷ್ಟ ಪ್ರಾಣಿಯನ್ನು ನುಂಗುತ್ತ... ದೊಡ್ಡದು ಚಿಕ್ಕದನ್ನು ತಿನ್ನುತ್ತ ಜೀವಿಸುತ್ತದೆ".

ಒಟ್ಟಾರೆಯಾಗಿ ಕನ್ನಡಕ್ಕೆ ಒಳ್ಳೆ ಕಾದಂಬರಿಯನ್ನು ಕೆ.ವಿ.ಅಯ್ಯರ್ ಅವರು ಕೊಟ್ಟಿದ್ದಾರೆ. ಇದರಾಚೆಗೂಸಹ ಕಾದಂಬರಿ ಹಲವು ಅರ್ಥಗ್ರಹಿಕೆಯಲ್ಲಿ ನಾವು ಗ್ರಹಿಸಬಹುದಾಗಿಗೆ.
     

- ಶಾಂತೇಶ ಕೋಡ್ಲೆ (ಕಲಬುರಗಿ) 

Thursday 27 July 2017

ಯುದ್ಧ ಚರ್ಚೆ ಮತ್ತು ತೇಜಸ್ವಿ ಮಿಲನಿಯಮ್.

ಮಹಾಯುದ್ಧ - 1
ಮಹಾಯುಧ್ಧ -2

- ಕೆ ಪಿ ಪೂರ್ಣಚಂದ್ರ ತೇಜಸ್ವಿ .

ತೇಜಸ್ವಿಯವರ ಮಿಲನಿಯಮ್ ಸಿರಿಸಗಳು ನಿಜಕ್ಕೂ ವಿಶ್ವಮಾನವ ಸಂದೇಶದ ವಾಹಕಗಳು. ಹೃದಯದಿಂದ ಓದುವ ಓದುಗನಿಗೆ ಎದೆ ತಟ್ಟಿ  ಒಳಗಣ್ಣು ದಿಟ್ಟಿಸುವಂತೆ ಮಾಡುತ್ತವೆ. ಅಲ್ಲಲ್ಲಿ  ಯುದ್ಧದ ಬಗ್ಗೆ  ಮಾತುಗಳು ಕೇಳುತ್ತಿರುವಾಗ ಯಾಕೋ  ಅದರ ಬಗ್ಗೆ ಬರೆಯಬೇಕೆನಿಸಿತು.  ಇಪ್ಪತ್ತೊಂದನೆ ಶತಮಾನಕ್ಕೆ ದಾಟುವ ಮುನ್ನವೆಂದು ತೇಜಸ್ವಿ ಬರೆಯುತ್ತ. ಇದರಿಂದ ನಾವು ಕಲಿಯಬೇಕಾಗಿರುವುದು ತುಂಬಾ ಇದೆಯಂದು ಹೇಳುತ್ತಾರೆ.

-: " ಎಷ್ಟೋ ಜನ ನನ್ನ ಮಿತ್ರರು ನಮ್ಮ ಸುತ್ತಲಿನ ಬಡತನ, ಜಾತೀಯತೆ, ಅನಕ್ಷರತೆ, ಭ್ರಷ್ಟಾಚಾರ, ಕೊಳಕು ಇದನ್ನೆಲ್ಲ ನೋಡಿ ರೋಸಿಹೋಗಿ ಪ್ರಜಾಪ್ರಭುತ್ವವನ್ನು ಬಯ್ದು ಇಲ್ಲಿ ಮಿಲಟರಿ ಆಳ್ವಿಕೆಯೋ, ಸರ್ವಾಧಿಕಾರಿ ಆಡಳಿತವೋ ಬಂದರೆ ಮಾತ್ರ  ಎಲ್ಲ ಸರಿ ಹೋಗುತ್ತದೆಂದು ಕೋಪದಿಂದ ಬಿಸುಸುಯ್ಯುತ್ತಾರೆ. ಸಮಭಾಜಕ ವೃತ್ತದ ಅಡಿ ಇರುವ ನೂರಾರು ಹಿಂದುಳಿದ ರಾಷ್ಟ್ರಗಳಲ್ಲಿ ಇವರು ಹೇಳುವ ಎಲ್ಲ ರೀತಿಯ ಆಡಳಿತಗಳೂ ಇವೆ ಖಾಯಿಲೆಗಳು ಮಾತ್ರ  ಒಂದೇ ! .

-: ನನಗೆ ನಿಜವಾಗಿಯೂ ನಮ್ಮ ಸ್ವಾತಂತ್ರ್ಯದ ಅಮೂಲ್ಯತೆಯ ಬಗ್ಗೆ  ಅರಿವು ಅಭಿಮಾನ ಮೂಡುವುದು ಮಹಾಯುದ್ಧ ಮತ್ತು  ಆನಂತರ ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ನಡೆದ ಕಡ್ಡಾಯ ಶ್ರಮಶಿಬಿರಗಳ ಕತೆಗಳನ್ನು ಕೇಳಿದಾಗ ಮತ್ತು  ಓದಿದಾಗ.

ತೇಜಸ್ವಿಯವರ ಮೇಲಿನ ಎರಡು ಮಾತುಗಳು ತುಂಬಾ ಯೋಚಿಸುವಂತೆ ಮಾಡುತ್ತವೆ. ಈ ಪುಸ್ತಕಗಳಲ್ಲಿನ ಯುದ್ಧದ ಭೀಕರತೆ ಬಗ್ಗೆ ಬರೆಯಲಿಕ್ಕೂ ಮನಸಾಗುತ್ತಿಲ್ಲ. ಅದೊಂದು ರೀತಿಯ ಅಫೀಮು. " ಬರ್ಲಿನ್ ಮೇಲೆ ರಷ್ಯಾ ನುಗ್ಗಿದ್ದಾಗ , ಇಗಾಗಲೇ ಸಾವಿನಂಚಿಗಿದ್ದ ಹಿಟ್ಲರ್ ಮತ್ತೆ ಮರು ರಷ್ಯಾದ ಮೇಲೆ ದಾಳಿ ಮಾಡಬಹುದಾದ ಸಾಧ್ಯತೆ ವಿವರಿಸುವಾಗ ಇನ್ನೊಂದು ಸಾರಿ ಪ್ರಯತ್ನ ಮಾಡಬೇಕೆಂದೆನಿಸಿತು ಎಂದು ಜನರಲೊಬ್ಬ  ಹೇಳುತ್ತಾನೆ. ಹಿಟ್ಲರಂತೂ ದೊಡ್ಡ ಮನುಷ್ಯ ರಾಕ್ಷಸ. ಅಣುಬಾಂಬಿನ ಹಾನಿಗಳು, ರಷ್ಯಾದ ಕಮ್ಯುನಿಷ್ಟರು ಬರ್ಬರವಾಗಿ ಕೊಂದ ಚಕ್ರವರ್ತಿಗಳ ಕಥೆ ಓದುವಾಗ, ಈ ಯುದ್ಧಗಳು ಸೀಮಿತ ಜನರ ಅಪೇಕ್ಷೆಗಳಾಗಿ ಸಾಮಾನ್ಯ ಜನರ ಮೇಲೆ ದೊಡ್ಡ ಪ್ರಭಾವ ಸದಾ ಬೀರುತ್ತವೆ. ಹಿರೊಶಿಮಾದ ಮೇಲೆ ಅಮೇರಿಕಾದ ಮೂರು ವಿಮಾನಗಳಿಂದ ಕೆಳಗಿಳಿಯುವ ಪ್ಯಾರೆಚೂಟ್ ನೋಡಿ ಅಲ್ಲಿನ ಜನ ವೈಮಾನಿಕ ತೊಂದರೆಯಿಂದ ಯಾವುದೋ ವ್ಯಕ್ತಿ ಕೆಳಗಿಳಿಯುತ್ತಿದ್ದಾನೆಂದು ಕೈಬೀಸಿದರು ಆದರೆ ಆ ಮಾನವರಹಿತ ಪ್ಯಾರಚೂಟನಲ್ಲಿ ಅಣುಬಾಂಬು ಸಿಡಿಯುವುದಕ್ಕೆ ಬರುತಿತ್ತು. !
ಯುದ್ಧವೆಂದರೆ ಲೆಕ್ಕವಿಲ್ಲದಷ್ಟು ನಾಟಕಗಳ ಅಥವಾ ಮುಖವಾಡಗಳ ರಂಗ...

ಜರ್ಮನ ಸೈನಿಕರು ಜ್ಯೂ ಮಕ್ಕಳನ್ನು ಸಿಕ್ಕಲ್ಲಿ ಕೊಲ್ಲುವುದರ ಹಿಂದಿದ್ದದ್ದು ಬರೀ ರಕ್ತಪಿಪಾಸೆ.
ವಿಚಿತ್ರಗಳು. ಊಹಿಸಲಾಗದಷ್ಟು ಕೀಳುಮಟ್ಟದ ಮೋಸಗಳು. ಇದರ ಮಧ್ಯೆ ಮಾನವೀಯತೆ ಮರೆದವರು, ನಾಯಿಗಳ ಚಾಣಕ್ಷತನದ ಕಥೆಗಳು  ಇತ್ಯಾದಿ.

ಬುದ್ಧ ಮತ್ತು ಯುದ್ಧ ಹೀಗೆ ಏನೇನೋ ಚರ್ಚೆಯಾಗುತ್ತಿರುವಾಗ ತೀರಾ ಇದನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ. ಟೀ ಅಂಗಡಿಯಲ್ಲಿ ಟೀ ಕುಡಿಯುತ್ತ ಕುಳಿತಿದ್ದವರಿಗೆ ಪ್ಯಾರಚೂಟನಲ್ಲಿ  ಅಣುಬಾಂಬವೊಂದು ಬರುತ್ತಿದೆಯಂದು ಗೊತ್ತೆ ಇರಲಿಲ್ಲ. ಆ ಬಾಂಬ್ ಬಿದ್ದ ಮೇಲೆ ಹಿರೂಶಿಮಾ ಅಲ್ಲಿ ಹುಟ್ಟೆ ಇಲ್ಲವೆಂಬಂತೆ ಬೂದಿಯಾಗಿತ್ತು.

ಯುದ್ಧ ಆಗಬೇಕೆನ್ನುವರು ಒಂಚೂರು ಚರಿತ್ರೆ  ಓದಲಿ. ಯುದ್ಧಕ್ಕೆ ಹಚ್ಚಿ ಗೆದ್ದಾಗ ಬಾವುಟ ನೆಲಕ್ಕೆ ತಿವಿದು ಸಂಭ್ರಮ, ಸೋತಾಗ ತಣ್ಣನೆಯ ಒಪ್ಪಂದ ಸತ್ತವರು ಸಾಮಾನ್ಯ ಜನ ಮಾತ್ರ. ಜರ್ಮನ ಸೈನಿಕನೊಬ್ಬ ಯುದ್ಧ ಮುಗಿದ ನಂತರ ಹೊಟ್ಟೆ ಪಾಡಿಗೆ ಕಿರಾಣಿ ಅಂಗಡಿಯೊಂದು ತೆರೆಯುತ್ತಾನೆ...

ಭೂಮ್ಯಾಕಾಶದ ಅನಂತದೊಳಗೆ ಲೆಕ್ಕವಿಲ್ಲದಷ್ಟು ವಿಸ್ಮಯಗಳು ಕೂಡಿರುವಾಗ ಜಾತಿ, ಮತ ಅಂತ ಗುದ್ದಾಡುತ್ತಿದ್ದೆವೆ. " ಸಾಯುವಾಗ ನನ್ನಜ್ಜಿ ಹೇಳಿದ ಹಾಡುಗಳು ಬರೆದುಕೊಳ್ಳಲಿಲ್ಲವಲ್ಲ ಎನ್ನುವ ನೋವು ಕಾಡಬೇಕು ಎಂದು ಎಲ್ಲೋ ಲಂಕೇಶ್ ಹೇಳುತ್ತಾರೆ. ತರಿಕೇರಿ ಸರ್ ಹೇಳುವ ಹಾಗೇ ನಮ್ಮ ಭಾರತ ಬಹುತ್ವಗಳಿಂದ ಕೂಡಿ ಒಗ್ಗಟ್ಟಾಗಿದೆ. ಸಾಂಸ್ಕೃತಿಕ ರಾಜಕಾರಣವಂತೂ ಪುರೋಹಿತಶಾಹಿಗಳು ತುಂಬಾ ನೀಟಾಗಿ ಎಲ್ಲದರ ಮೇಲೆಯು ಪ್ರಯೋಗಿಸುತ್ತಿದ್ದಾರೆ.  ವಿಜ್ಞಾನಿಗಳ ಮತ್ತು ಕಲಾವಿದರನ್ನು ನೋಡುವಾಗ ಖುಷಿ ಉಕ್ಕಿ ಬರುತ್ತದೆ. ನಾವು ಮಕ್ಕಳಿಗೆ ಹೇಗಾದರೂ ಮಾಡಿ ಸಾಧನೆ ಮಾಡಿಯಂತ ಹೇಳುತ್ತಿದ್ದೆವೆ ಹೊರತು ಸಾಹಸಗಳ ಬಗ್ಗೆ ಹೊಸತನಗಳ ಬಗ್ಗೆ ಮಾತಾಡುವುದೆಯಿಲ್ಲ...
" ಆಕಾಶದ ನಕ್ಷತ್ರಗಳು ದಿಟ್ಟಿಸುವಾಗ ನಾವೆಲ್ಲ  ಎಂತಹ ಸುಂದರ ಪ್ರಪಂಚದಲ್ಲಿ ಬದಕುತ್ತಿದ್ದೆವಲ್ಲವೆ ?

- ಕಪಿಲ್ ಪಿ. ಹುಮನಾಬಾದೆ.
27/7/2017.

Thursday 20 July 2017

ಕಾವ್ಯ ಕವನ...

ಗುಂಡು ಸಿಡಿವ ಬಂದೂಕಿನಲಿ ಪಾರಿವಾಳ ಗೂಡು ಕಟ್ಟಬಾರದೇ ಎಂದು ಸೈನಿಕನ ಮುದ್ದು ಮಗು ಪ್ರಾರ್ಥಿಸಿತ್ತು.....  ಪುಟ್ಟ ಕಂಗಳಿಂದ ಉದುರಿದ ಹನಿ ತಂಗಾಳಿಯನೂ ಬಿಸಿಯಾಗಿಸಿತ್ತು .
ಇರಿದ ಚೂರಿಯ ಮೇಲಿನ ರಕ್ತದ ಕಲೆಯಲಿ ಬುದ್ದನ ನಗುವಿತ್ತು.  ಅಳಿಸಿದ ಪುಟ್ಟ ವಿಧವೆಯ ಕುಂಕುಮದಂತೆ ಬಿಳಿಯ ರೆಕ್ಕೆಗಳೂ ಈಗ ಕೆಂಪು ಕೆಂಪು ......

ಮುಗಿಲಲಿ ಮಲಗಿದ್ದ ಚಂದಿರನ ಮೌನ ಮುಗುಳು  , ಹಾಲು ಗಲ್ಲದ ಕಂದನ ಅಳು ಇಮ್ಮಡಿಸಿತ್ತು.
ತೋಳಜೋಲಿಯಲಿ ತೂಗಿ  ಮಲಗಿಸುತಿದ್ದ ಅಪ್ಪನಿಗೀಗ ಕೈಗಳಿಲ್ಲ‌. ಬುದ್ಧನ ನಗುವಿಗೂ ಈಗೀಗ ಮೆತ್ತಿದಂತಿದೆ ಸಾವಿನ ಕಮಟು...

ಜಂಗುಳಿಯೊಳಗೆ  ಅಮ್ಮ ಸಿಕ್ಕದೆ ಅಲೆದಾಡಿದ ಮಗು , ರಕ್ತ ಸಿಕ್ತ ದೇಹ , ಚೆಲ್ಲಾಪಿಲ್ಲಿ  ದೇಹಗಳ ನೋಡಿ  ಬೆಚ್ಚಿ ಬಿದ್ದಿದೆ . ಎಲ್ಲಿಯದೋ ಅಳು .‌
ಅದು  ಉಗ್ರನ ಎದೆಯೊಳಗಿನ
ಸತ್ತ ಮಾನವೀಯತೆಯದು ಅಂತ
ಅದಕಿನ್ನು  ಗೊತ್ತಿಲ್ಲ .

ಪೈನ್ ಮರದ ಎಲೆ ಕಚ್ಚಿಕೊಂಡು ಹಾರುತಿರುವ ಹಕ್ಕಿಯಾದರೂ ತನ್ನ ಉಳಿಸಬಹುದಿತ್ತೆಂದು
ಸಹಸ್ರ ಆಯ್ಲಾನ್‌‌ರು  ಮುಗ್ಧವಾಗಿ ಬೆದರಿದ ಕಣ್ಣಿಂದ ನೋಡುತ್ತಲೇ ಇದ್ದಾರೆ .
ಕಟುಕ ಸಮುದ್ರ ಅವರನ್ನ ಮತ್ತೆ ಮತ್ತೆ ದಡಕೆ ತಂದು ಹಾಕುತ್ತಲೇ ಇದೆ ...

~ ಕಾವ್ಯ ಎಸ್ ಕೋಳಿವಾಡ

Tuesday 18 July 2017

ನೇಮಿಚಂದ್ರ

ತೆರೆದ -ಮನ ( ಪುಸ್ತಕಭಿಪ್ರಾಯ)
ನೋವಿಗದ್ದಿದ ಕುಂಚ - ನೇಮಿಚಂದ್ರ .

ಪ್ರಸಿದ್ಧ ಚಿತ್ರಕಾರ ವ್ಯಾನಗೋನ ಜೀವನ ಚಿತ್ರವೆ ಈ ನೋವಿಗದ್ದಿದ ಕುಂಚ ಪುಸ್ತಕ. ವ್ಯಾನ್ ಗೋ ಎನ್ನುವುದು ಪ್ರಸಿದ್ಧ ಮನೆತನ ಆದರೆ ವಿನ್ಸೆಂಟ್ ವ್ಯಾನ್ ಗೋ ಬದುಕಿದ್ದ ರೀತಿಯೆ ಬೇರೆ. ಸಿದ್ಧ ಮಾದರಿಯ ದಾರಿಗಳನ್ನು ಕತ್ತರಿಸಿಕೊಂಡು  ಒಂಟಿತನದಿಂದ ಎಲ್ಲೋ ನುಗ್ಗವ ಮತ್ತು  ನಡೆಯುವ ಪಾದಗಳಿಗೆ ರೆಕ್ಕೆ  ಅಂಟಿಸದೆ ನಿಂತ ನೆಲ ತೋರಿಸುವ ಹೆಜ್ಜೆಗಳೆ ವ್ಯಾನ್ ಗೋನ ಬದುಕು.

ಶಿಕ್ಷಕನಾಗಿದ್ದ, ಗುಮಾಸ್ತನಾದ ನಂತರ ಅಲ್ಲಿಯು ನಿಲ್ಲಲಿಲ್ಲ ಏನೋ ಹುಡುಕಿ ನಡೆದ. ಕೊನೆಗೆ ಚಿತ್ರ ಬಿಡಿಸುವ ಹುಚ್ಚು ಹಿಡಿಸಿಕೊಂಡ. ಕಲಾವಿದನಾದ." ನೀ ಬರೆಯದೆಯು ಬದುಕಬಹುದೆಂದರೆ ನೀ ಬರೆಯದಿರುವುದೆ ಒಳ್ಳೆಯದು"- ರಿಲ್ಕೆ ಹೇಳುವ ಈ ಮಾತು  ಚಿತ್ರ ಬಿಡಿಸುವ ವ್ಯಾನ್ ಗೋ ನೂರಕ್ಕೆ ನೂರು ಪಾಲಿಸಿದನೆನೋ ?...

"ದಿನದಿನದ ಯಾಂತ್ರಿಕತೆಯಲ್ಲಿ ಹೊಂದಾಣಿಕೆಯಲ್ಲಿ ಲೆಕ್ಕಾಚಾರದ ತರ್ಕಗಳಲ್ಲಿ, ಯೋಜಿತ ಬದುಕಿನ ಹಳಿದಾರಿಯಲ್ಲಿ ನಿಯಮಬದ್ಧವಾಗಿ ಸಾಗುವ ಜನಕ್ಕೆ ಅರ್ಥವಾಗಬಲ್ಲದೆ ಎಗ್ಗಿಲ್ಲದೆ ಹರಿವ ಪ್ರೀತಿಯ ಚಿತ್ರಗಳು? "
ಸೇಪ್ ಜೋನಗಳಲ್ಲಿ ನಿಂತು ನೋಡುವವರಿಗೆ ವ್ಯಾನ್ ಗೋ ಹುಚ್ಚನಂತೆ ಕಂಡರು. ಅವನು ತಾನು ನಂಬಿದ ಕಲೆಗಾಗಿ ಏನನ್ನು ಸಹ ಮಾಡಲು ಸಿದ್ಧನಿದ್ದ. ಒಂದು ಕಡೆ ನಿಲ್ಲುವುದೆ ಅವನಿಂದಾಗುತ್ತಿರಲಿಲ್ಲ. ಅವನ ಚಿತ್ರಗಳಲ್ಲಿ ನುಣುಪಾದ ಚರ್ಮದ ರೂಪದರ್ಶಿಯರಿರಲಿಲ್ಲ... ರಾತ್ರಿಯ  ಒರಟು ವೇಶ್ಯೆಯರು, ಕಲ್ಲಿದ್ದಲಿನ ಜೊತೆ ದುಡಿಯುವ ಮನುಷ್ಯರು, ಹೊಲಗಳು , ರೈತರು...
ಅವನಿಗೆ ಚಿತ್ರಗಳ ಸ್ತಬ್ಧತೆ ಇಷ್ಟವಾಗುತ್ತಿರಲಿಲ್ಲ. ಸದಾ ಅದು ಹರಿಯುತ್ತಿರಬೇಕು ಸತ್ತಿರಬಾರದು.

"ಕುಡಿತಕ್ಕೆ ಬಿದ್ದವ ಕೈಗೆ ಕಾಸು ಬಿದ್ದೊಡನೆ ಹೆಂಡದಂಗಡಿಗೆ ಓಡುವಂತೆ ನಾನು ಬಣ್ಣದಂಗಡಿಗೆ ಓಡುತ್ತಿದ್ದೆ. ಮುಂದಿನ ದಿನಗಳ ಖಾಲಿತನ ಕಣ್ಣೆದುರು ನಿಂತರೂ ತಡೆಯಲಾರದ ಬೆರಳ ತುಡಿತಕ್ಕೆ ಬಲಿ ಬಿದ್ದಿದ್ದೆ."
-ವ್ಯಾನ್ ಗೋನ ತಾಯಿ ತನ್ನ ಮೊದಲ ಮಗು ವಿನ್ಸೆಂಟ್ ಸತ್ತಿದ್ದಾಗಿನಿಂದ ಅದರ ಮರುವರ್ಷವೆ ಹುಟ್ಟಿದ ಈ ಮಗುವಿಗೆ ವಿನ್ಸೆಂಟ್ ಎಂದೆ ಹೆಸರಿಟ್ಟು ಮೊದಲನೆಯವನನ್ನು ಇವನಲ್ಲಿ ಹುಡುಕುತ್ತಿದ್ದಳು. ವ್ಯಾನ್ ಗೋಗೆ ಇದು ತುಂಬಾ ಪ್ರಭಾವ ಬೀರಿತು. ಕ್ರಮಬದ್ಧವಾದ ಯೋಜಿತ ಬದುಕಿನೆಡೆಗೆ ಅವ ಎಂದಿಗೂ ಹೆಜ್ಜೆ  ಇಡಲೆ ಇಲ್ಲ. ಖಾಲಿತನಕ್ಕೆ ಪ್ರೀತಿ ತುಂಬುಲು ತಿರುಗಿದ.

ವಿಚಿತ್ರ ಮನಸ್ಥಿತಿಯ ವ್ಯಾನ್ ಗೋ  ಹುಚ್ಚಾಸ್ಪತ್ರೆ ಸೇರಿದ, ಪ್ರೀತಿಗಾಗಿ ಅಲೆದ, ಬಸಿರಾದ ವೇಶ್ಯೆ ಸೀಯಳಿಗಾಗಿ ಹಂಬಲಿಸಿದ ಉತ್ಕಟವಾಗಿ ಪ್ರೀತಿಸಿದ ?, ಸದಾ ಉದ್ವೇಗದಲ್ಲಿರುತ್ತಿದ್ದ. ಕ್ಯಾನ್ವಾಸ್ ಮೇಲೆ ಬರೀ ಒರಟುತನಗಳು ಯಾವುದೇ ಬಳಕುತನವಿಲ್ಲದ ಮತ್ತು  ಗೆರೆಗಳಿಲ್ಲದ ಗಾಢ ಬಣ್ಣಗಳು . ತಮ್ಮ ಥೀಯೋನ ಹಣದ ಮೇಲೆಯೆ ಅವಲಂಬಿತವಾಗಿದ್ದ ಅವನ ಬದುಕು. ಅವ ಬಿಡಿಸಿಟ್ಟ ಚಿತ್ರಗಳು ಅವ ಬದುಕಿದ್ದಾಗ ಯಾರೂ ಸಹ ಮೂಸಿ ಸಹ ನೋಡಲಿಲ್ಲ. ಹಸಿದರು ಬಣ್ಣಗಳಿಗೆ ಕಡಿಮೆ ಮಾಡಿದವನಲ್ಲ. ಒಂದು ಹೊತ್ತಿನ  ಊಟವಿಲ್ಲದಿದ್ದರೆ ನಡೆಯುತ್ತಿತ್ತೆನೊ ಆದರೆ ಅವನಿಗೆ ಬಣ್ಣ ಬೇಕು. ಹಸಿದ. ಬರೀ ಕಾಫಿ ಕುಡಿದು ದಿನಗಳು ನೂಕಿದ.

ವ್ಯಾನ್ ಗೋ ಬದುಕಿದ್ದಾಗ ಅವನ ಚಿತ್ರಗಳು ಮಾರಾಟವಾಗಲೆ ಇಲ್ಲ. ಕೊನೆಗೂ ಆತ್ಮಹತ್ಯೆ ಮಾಡಿಕೊಂಡ. ಇಗ ದೊಡ್ಡ ರಕ್ಷಣಾ ಪಡೆಯೊಡನೆ ಇವನ ಚಿತ್ರಗಳು ಹರಾಜಿಗೆ ಬರುತ್ತಿವೆ.!  ವ್ಯಾನ್ ಗೋನ ಚಿತ್ರಗಳು ಅತ್ಯಧಿಕ ಬೆಲೆಯ ಚಿತ್ರಗಳಾಗಿ ಗಿನ್ನೀಸ್ ಪುಸ್ತಕದಲ್ಲಿ ದಾಖಲಾಗಿವೆ. ಅವ ಬದುಕಿದ್ದಾಗ ಮಾತ್ರ ಯಾವ ಚಿತ್ರವು ಅವನ ಒಂದು ಹೊತ್ತಿನ  ಊಟ ಕೊಡಲಿಲ್ಲ.....

* ಸಣ್ಣಗೆ ಕಡ್ಡಿಯಂಥಾ ಅರೆಜೀವದ ಗಣಿ ಕಾರ್ಮಿಕರಿಗೆ ಬೈಬಲ್ ಉಣಿಸಿದೆ...ಉಪದೇಶಿಸಿದೆ ( ಮಿಷನರಿ ಆಗಿದ್ದಾಗ)

* ನನ್ನ ಪ್ರೀತಿಗೆ ಆತ್ಮೀಯತೆಗೆ ಎಲ್ಲರೂ ಬೆದರುವವರೇ . ಕಲೆಗಾಗಿ ಕಷ್ಟಗಳನ್ನು ಸಹಿಸಬೇಕು.

* ಬದುಕಿನ ಇಷ್ಟೆಲ್ಲ ಬಣ್ಣಗಳನ್ನು , ಪ್ರಕೃತಿ ತೆಗೆದೊಗೆದು ಮತ್ತೆ ತೊಡುವ ನೂರು ಬಣ್ಣಗಳನ್ನು ಹೇಗೆ ಹಿಡಿಯುವುದು ?

* ಕನಸುಗಳನ್ನಷ್ಟೇ ಕೊಳ್ಳುವ ಜಗತ್ತಿಗೆ ನನ್ನ ದಟ್ಟ ವಾಸ್ತವಗಳು ಹಿಡಿಸೀತೆ ?

* ಬದುಕಿನ ಅನಿವಾರ್ಯತೆ, ಅವಶ್ಯಕತೆಗಳೆದರು ಮಾತಿನ ಪ್ರೀತಿಗೆ ಯಾವ ಹೆಣ್ಣು ಹಿಡಿದಿಡುವ ಬಲವಿತ್ತು ?

* ಅನುಕಂಪದಲ್ಲಿ ಒಳಹೊಕ್ಕ ಸಮಾಜಸುಧಾರಕ ಕ್ಷಣದಲ್ಲಿ ಚಿತ್ರಕಾರನಾಗುತ್ತಿದ್ದ .

* ದೇವರೆ ತಿಂದುಂಡು ಆರೋಗ್ಯವಾಗಿ ಉಳಿಯಬಲ್ಲ ಕಲಾವಿದರನ್ನು ನಾನೆಂದಾದರೂ ನೋಡಬಲ್ಲೆನೆ ?

ನನಗೆ ಸಾಧ್ಯವಾದಷ್ಟು ವ್ಯಾನ್ ಗೋನ ಸಾಲುಗಳು ಉಲ್ಲೇಖಿಸಿರುವೆ. ಈ ಪುಸ್ತಕ  ಓದಿದಾಗ
ಓಡುವ ಬದುಕಿಗೆ ನಡೆಯುವುದನ್ನು ಕಲಿಸುತ್ತಾನೆ ವ್ಯಾನ್ ಗೋ.....ನೇಮಿಚಂದ್ರ ಅವರ ಬರಹವೆ ಹಾಗೇ ಅವರೊಂದು ಕನ್ನಡದ ಕ್ಷಿತಿಜ

# ಕಪಿಲ್ ಪಿ ಹುಮನಾಬಾದೆ.

Saturday 15 July 2017

ಅಂಡಮಾನ್ (ಪ್ರವಾಸದನುಭವ) - ಡಾ ಎಸ್ ಅನುಪಮಾ.

ಮನುಷ್ಯ ತನ್ನ ಅವಸರದ ಬದುಕಿನ ಮಧ್ಯೆ  ಒಂದಿಷ್ಟು  ಬಿಡುವು ಮಾಡಿಕೊಂಡು  ಅನಂತ ಆಕಾಶದ ಮೋಡಗಳು, ನಕ್ಷತ್ರಗಳು ಸುಮ್ಮನೆ ಗಮನಿಸುತ್ತಿರಬೇಕು, ಕಣ್ಣಿಗೆ ತುದಿಯಿಲ್ಲದ ಕಡಲು, ಯಾವುದೋ ಅಪರಿಚಿತ ಊರಿನಲ್ಲಿನ ಓಡಾಟ, ಪರಿಚಯವಿಲ್ಲದವನೊಬ್ಬ ಎಂದೋ, ಯಾವುದೋ ಗಳಿಗೆಯಲ್ಲಿ ತೋರಿಸುವ ಅಪಾರ ಪ್ರೀತಿ,  ಇವೆಲ್ಲವೂ ಮನುಷ್ಯನ ಶೂನ್ಯತನವನ್ನು ತೋರಿಸುತ್ತದೆ. ಶೂನ್ಯವೆಂದರೆ ಖಾಲಿತನವೆಂದಲ್ಲ.

ತೇಜಸ್ವಿಯವರ ಅಂಡಮಾನ್ ಪ್ರವಾಸ ಕೃತಿ ಓದಿದ ನನಗೆ ಅನುಪಮಾ ಮೇಡಂರವರ ಪ್ರವಾಸ ಕಥನ ಓದಿದ ನಂತರ ಭಿನ್ನ ದೃಷ್ಟಿಗಳೆರೆಡು ಕಂಡವು. ಅವರವರು ನಿಂತು ಯೋಚಿಸುವ ನೆಲೆ, ಕಾಲ, ವಿಚಾರಗಳು, ಆಸಕ್ತಿ  ಎಲ್ಲವೂ ಭಿನ್ನವಾಗಿರುತ್ತದೆ. ಅನುಪಮಾ ಮೇಡಂರವರೆ ಹೇಳುವ ಹಾಗೇ " ತೇಜಸ್ವಿ ಪುಸ್ತಕದ ತುಂಬ ರೀಲು, ರಾಡು, ಮೀನು, ಏಡಿ, ಲೋಬಸ್ಟರಗಳನ್ನೇ ತುಂಬಿದ್ದಾರೆ" ಅವರು ಮುಂದುವರೆದು ಹೇಳುವಂತೆ - ತೇಜಸ್ವಿ, ತರಿಕೇರಿ ಅವರು ಭೇಟಿ ಕೊಟ್ಟಾಗ ಇನ್ನೂ ಬಿಜೆಪಿ ಗಾಳಿ ಬೀಸಿರಲಿಲ್ಲ. ಜಾಗತೀಕರಣದ ಭರಾಟೆ ಶುರುವಾಗಿರಲಿಲ್ಲ.

ಇಡೀ ಪ್ರವಾಸ ಕಥನವನ್ನು ಲೇಖಕಿ ಪ್ರವಾಸದನುಭವವೆಂದು ಕರೆದಾಗಲೆ ಇದಕ್ಕೊಂದು ಹೊಸತಿದೆ ಎನಿಸಿತು. "ಸೊಕ್ಕಿದ ಹರೆಯದಂತೆ ಸುಂದರ, ನಿಗೂಢ, ಆಕರ್ಷಕ ಮತ್ತು  ಅಪಾಯಕರ ನೆಲ, ಅಂಡಮಾನ್ ! .- ಅಹಾ ! ಈ ಕೃತಿಯ ಮೊದಲ ಪುಟದಲ್ಲಿ ಕಂಡ ಸಾಲುಗಳು  ಇಡೀ ಅಂಡಮಾನನ್ನು ನೋಡಬೇಕಾದ ಮನಸ್ಥಿತಿಯನ್ನು ತೋರಿಸುತ್ತದೆ.  ಅಂಡಮಾನ್ ಬಗ್ಗೆ  ಇದ್ದ ಕಲ್ಪನೆಗಳು ಮತ್ತು  ಅದರ ಸುತ್ತ ಹೆಣೆದುಕೊಂಡ ಭಯಾನಕ ಸಂಗತಿಗಳು ವಿವರಿಸುತ್ತಾರೆ.ಆಗ 1941ರಲ್ಲಿ 34 ಸಾವಿರ ಇದ್ದ ಜನಸಂಖ್ಯೆ  ಈಗ 3.8 ಲಕ್ಷ ಆಗಿದೆಯಂತೆ !. ಅಲ್ಲಿನ ಭೌಗೋಳಿಕತೆ ಮತ್ತು  ಅಲ್ಲಿನ ಕೈಗಾರಿಕೆ ಆದ ಮರದ ಸಾಮಿಲ್ ಬಗ್ಗೆ  ವಿವರಣೆ ನೀಡುತ್ತಾರೆ. ಅಂಡಮಾನಿನ ವಿಶಿಷ್ಟತೆ ಮತ್ತು ಸಂಕುಚಿತತೆಗಳು, ಬಾಹ್ಯ  ಆಕ್ರಮಣ  ಎಲ್ಲವನ್ನೂ ವಿವರಿಸುತ್ತಲೆ ಲೇಖಕಿ ಸಾಗುತ್ತರೆ.

ಸೆಲ್ಯುಲಾರ್ ಜೈಲಿನ ಬಗ್ಗೆ ಹೊರಗಿನವರಿಗೆ ಮೋಡ ಮುಸುಕಿದಂತಿರುವ ಕಲ್ಪನೆಗಳನ್ನು ಈ ಬರಹ ಚದುರಿಸುತ್ತದೆ .

ಅಲ್ಲಿ ತಾರೆಗಳಿರಲಿಲ್ಲ
ನೆಲವಿರಲಿಲ್ಲ, ಕಾಲವಿರಲಿಲ್ಲ
ಬಂಧನವಿರಲಿಲ್ಲ, ಬದಲಾವಣೆಯಿರಲಿಲ್ಲ
ಒಳ್ಳೆಯದಿಲ್ಲ, ಅಪರಾಧವಿಲ್ಲ,
ಅಲ್ಲಿ ಬದುಕಿನದೂ ಅಲ್ಲದ, ಸಾವಿನದೂ ಅಲ್ಲದ ಮೌನ...
ಕಟ್ಟಿದ ಉಸಿರು..

ಬಂಧಿತರ ಬಗ್ಗೆ ಬರೆದ ಲಾರ್ಡ್ ಬೈರನ ಸಾಲುಗಳು ತುಂಬಾ ಕಾಡಿದವು. "ಏಕಾಂತ ಸೆರೆವಾಸ ಯಾವುದೇ ಕ್ರಿಯಾಶೀಲ ವ್ಯಕ್ತಿಯನ್ನು ಇಂಚಿಂಚೇ ಕೊಲ್ಲಬಲ್ಲದು ".

ಜೈಲಿನಲ್ಲಿ ಪ್ರತಿದಿನ ಜೈಲುವಾಸಿಗಳ ದನಿ ಹಾಗೂ ಜೈಲು ಆವರಣದ ಭಯಾನಕ ಚೀರಾಟದ ಶಬ್ದಗಳು ರಿಚಾರ್ಜ್ ಮಾಡಲು ಪ್ರಯತ್ನಿಸಲಾಗಿದೆ. ಸಾವರ್ಕರ್ ವಾಸಿಸಿದ ಸೆಲಗೆ ವಿಶೇಷ ಒತ್ತುಕೊಟ್ಟು ರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ - ಒಂದು ಕಡೆ ತೀರಾ ಕೆಳವರ್ಗದ ಅಲೆಮಾರಿಗಳ ಮತ್ತು  ಬುಡಕಟ್ಟು ಸಮುದಾಯಗಳ ಆಹಾರ, ವಸತಿ, ಬದುಕಿನ ಅಳಿವು ಉಳಿವಿನ ಬಗ್ಗೆ ಅಲ್ಲಿನ ವಾಸ್ತವ ನೆಲದ ಚಿತ್ರಗಳು ಮಾತಾಡುತ್ತಿದ್ದರೆ ಇನ್ನೊಂದೆಡೆ ಬೆಂಕಿ ಉಗುಳುವ ಬೆಟ್ಟಕ್ಕೆ ಹಸಿರು ತೊಡಿಸಿ ಒಳಗಿನ ಬೆಂಕಿ ಮುಚ್ಚಿಟ್ಟು ಅಲ್ಲಿನ ವಿಕಾರ ಧ್ವನಿಗಳನ್ನು ಮನುಷ್ಯನ ಭಾವನಾತ್ಮಕ ಕರುಣೆಯ ಪದರು ಸ್ಪರ್ಶಿಸುವುದಕ್ಕೆ ತಾಂತ್ರಿಕವಾಗಿ ಪ್ರಯತ್ನಿಸಲಾಗುತ್ತಿದೆ. ಅದು ದೇಶಪ್ರೇಮ ಹೊಮ್ಮಿಸಬಹುದೆಂಬ ದುರಾಸೆಯಿಂದ.

ಎಲ್ಲದರ ನಡುವೆ ಸ್ವಾತಂತ್ರ್ಯದ ಹಕ್ಕಿ ಜೈಲಿನಲ್ಲೇ ಗೂಡು ಕಟ್ಟುತ್ತದೆ - ಇನ್ನೆಷ್ಟೋ ಜೈಲುಗಳು ಪ್ರತಿ ದೇಶದಲ್ಲೂ ಭದ್ರತೆ- ಸಮಗ್ರತೆ-ರಾಷ್ಟ್ರೀಯತೆ ಹೆಸರಿನಲ್ಲಿ ತಲೆಯತ್ತಿವೆ. ಅನುಪಮಾ ಮೇಡಂರವರು ಸೆಲ್ಯುಲರ ಜೈಲಿನ ಬಗ್ಗೆ ತುಂಬಾ ಮಾಹಿತಿ ಸಂಗ್ರಹಿಸಿದ್ದಾರೆ. ಆ ಜೈಲು ನೆಪವಾಗಿಟ್ಟುಕೊಂಡು ಬೇರೆ ಬೇರೆ ಸಂಗತಿಗಳು ಹೆಣೆಯುತ್ತ ಸಾಗುತ್ತಾರೆ.

ಅಂಡಮಾನಿನ ಬುಡಕಟ್ಟುಗಳ ಕುರಿತು  ಅಲ್ಲಿನ ಮೂಲಜನರ ಕುರಿತು ಮಾತಾಡಬೇಕಿದೆ. ಅಲ್ಲಿನ ಜೈಲನ್ನೆ ನಾವು ವೈಭವಿಕರಿಸುತ್ತಿದ್ದೆವೆ.
ಜರವಾ ಬಗ್ಗೆ ಹತ್ತಿರದಿಂದ ಕಂಡು ಬರೆದಿದ್ದಾರೆ. ಕಲ್ಚರಲ್ ಶಾಕ್ ಬಗ್ಗೆ ಮಾತಾಡಿರುವ ಅನುಪಮಾ ಮೇಡಂರವರು ಆ ಜರವಾ ಜನಾಂಗಕ್ಕೆ ಬೇಕಾದ ಸ್ವಾತಂತ್ರ್ಯತೆ ಕೊಡಬೇಕಾಗಿದೆ. ಬೊವಾ ಭಾಷೆ ಮಾತಾಡುವ ಏಕೈಕ ಮುದುಕಿ ಕಣ್ಣು ಮುಚ್ಚಿದಾಗ ಆ ಭಾಷೆಯು ಕಣ್ಣು ಮುಚ್ಚಿದ್ದು ದುರಂತವೆ ಸರಿ.

*ನಾಲಿಗೆ ಮತ್ತು ಹೊಟ್ಟೆಯ ಒತ್ತಡಕ್ಕೆ ಕೈಕಾಲು ತಲೆ ಹೇಗೆ ಬೇಕಾದರೂ ಕುಣಿಯುತ್ತದೆ.

* ಬುಡಕಟ್ಟು ಪ್ರದೇಶಗಳು ಪ್ರವಾಸಿಗರಿಗೆ ಮ್ಯೂಸಿಯಂಗಳಾಗುವ ಅಪಾಯವಿದೆ. (ಡಿಆರ್ ಮಾತು ನೆನಪಿಸುತ್ತಾರೆ)

* ನಮ್ಮ ನಾಗರಿಕ ಸೊಕ್ಕನ್ನು ಅಂಡಮಾನ್ ಇಳಿಸತೊಡಗಿತ್ತು.

* ದೇವರು ಹಳ್ಳಿಗಳನ್ನು ಸೃಷ್ಟಿಸಿದ, ಮಾನವ ನಗರಗಳನ್ನು ಸೃಷ್ಟಿಸಿದ. - ಇಂಗ್ಲಿಷ್ ಗಾದೆ.

ಈ ಪುಸ್ತಕ  ಓದುವಾಗ ಕಾಡಿದ ಸಾಲುಗಳು.

20 ರೂಪಾಯಿ ಪಾಯಿಂಟ್,  ಕಾಜಾಣ,  ಕಡಲ ಕರೆಗೆ ಕಾದು ನಿಂತ ಅನಾರೋಗ್ಯ ಪೀಡಿತ ಮಗನ ತಾಯಿ, ಅಗ್ನಿ ಉಗುಳುವ ಬೆಟ್ಟ, ಜರವಾಗಳು ಹೀಗೆ ಮುಂತಾದ ವಿವರಗಳನ್ನು  ಅಂಕಿಅಂಶಗಳ ಸಮೇತ ನೀಡುತ್ತಾರೆ.

ನಾನೊದಿದ ಸುಮಾರು ಪ್ರವಾಸ ಕಥನಗಳಿಗಿಂತ ಭಿನ್ನ  ಅನ್ಸುತ್ತೆ ಈ ಪುಸ್ತಕ ಯಾಕಂದರೆ ಮನುಷ್ಯತ್ವದ ನೆಲೆಯಲ್ಲಿ ನಿಂತು ಧ್ಯಾನಸ್ಥವಾಗಿ ನೋಡುವ, ಲೇಖಕಿ ಆತ್ಮವಿಮರ್ಶೆ ಮಾಡಿಕೊಳ್ಳುವತನ ಪ್ರತಿ ಹಂತದಲ್ಲಿಯು ಎದ್ದು ಕಾಣುತ್ತದೆ. ತಾನು ಬರೆಯುವ ಕೊಳದ ಮೀನಾಗುವ ಲೇಖಕಿ ನಿಜಕ್ಕೂ ಅಲ್ಲಿನವರೆ ಆಗಿ ಅಲ್ಲಿನ ಏಳುಬೀಳುಗಳಿಗೆ ಕನ್ನಡಿ ಹಿಡಿಯುವ ಕೆಲಸ ಮಾಡಿದಾರೆ. " ಬುಡಕಟ್ಟು ಕುಲವೇ, ಅಣತಿಯಿಲ್ಲದ ಅತಿಕ್ರಮಣಕ್ಕಾಗಿ ನಮ್ಮನ್ನು ಕ್ಷಮಿಸು....- ಈ ಸಾಲಿನಲ್ಲಿರುವ ನೋವು, ವಿನಯತೆ ಬಹುಮುಖ್ಯವಾಗಿ ನಮ್ಮಗೆಲ್ಲರಿಗೂ ಕಾಡುವಂತಹದು. ಅಂಡಮಾನ್ ಕೃತಿ ಓದಿದ ನಂತರ ಆ ಊರು ನಮ್ಮದಾಗುತ್ತದೆಯೊ ಅಥವಾ ಇಲ್ಲವೋ ಅಲ್ಲಿನ ಜನರಂತೂ ನನ್ನವರೆ ಆಗಿರುತ್ತಾರೆ...

# ಕಪಿಲ್ ಪಿ. ಹುಮನಾಬಾದೆ.
16/7/2017.

Tuesday 4 July 2017

ವಿಸ್ಮಯ ವಿಶ್ವ- ೧( ಪುಸ್ತಕ ವಿಮರ್ಶೆ)

ರಷ್ಯಾದ ಚಕ್ರವರ್ತಿ ನಿಕೋಲಾಸ್ ಕಗ್ಗೊಲೆಯನ್ನು ಅರುವತ್ತು
ವರ್ಷಗಳ ಬಳಿಕ ಜಾಡು ಹಿಡಿಯುತ್ತಾ ಕಮ್ಯುನಿಷ್ಟರ ನಿಷ್ಠೂರ ಕ್ರೌರ್ಯವನ್ನು ಪತ್ತೆ ಹಚ್ಚುವ ವೃತ್ತಾಂತದ ರೋಮಾಂಚಕಾರಿ ವಿವರಣೆಯೇ ಈ‌‌ ಪುಸ್ತಕ.ಕೊಲೆಯ  ೧೬ ವರ್ಷಗಳ ತರುವಾಯ ಜನಿಸಿದ ರೈಬೋವ್ ಅನ್ನುವ ಹೆಸರಿನ ಪತ್ರಕರ್ತ ಖೂನಿಯಾದ ರಾಜನ ಕುಟುಂಬದವರ ಮೃತದೇಹ, ಮತ್ತು‌‌ ಕೊಲೆಯ ಹಿಂದಿನ ರಹಸ್ಯ ಭೇಧಿಸುತ್ತಾನೆ. ಬಹುಃಶ ಆಂಗ್ಲ ಬಾಷೆಯಲ್ಲಿ ಚರಿತ್ರೆಗಾರನೊಂದಿಗೆ‌ ಗೋರಿ ಸೇರ ಬೇಕಾದ ಅದ್ಭುತ ಚರಿತ್ರೆ ಕನ್ನಡದಲ್ಲಿ ಪಡಿಮೂಡುವುದೇ ಮಿಲೇನಿಯಂ ಸರಣಿಗಳ ಸ್ವಾರಸ್ಯ. ಅನಿಷ್ತಿಸಿಯಾ ಎಂಬ ನಿಕೋಲಸ್ ಚಕ್ರವರ್ತಿಯ ಮಗಳು ದಶಕಗಳ ಕಾಲ ಹೋರಾಡಿಯೂ ಮಂಜಿನಲ್ಲಿ ಮಾಯವಾಗುವ ಸ್ಥೂಲವಾದ ಕಥೆಯನ್ನು ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ.
ಜೀವ ಕೌತುಕದ ಮಡಿಲಾದ ತೇಜಸ್ವಿ ಬರಹಗಳು ,ವಿಸ್ಮಯ ವಿಶ್ವ ಪುಸ್ತಕದಲ್ಲೂ ಹೊರತಾಗಿಲ್ಲ. ಗೋಡೆಯ ಮೇಲೆ ಹರಿವ ಸಣ್ಣ ಹಲ್ಲಿ ಆಕಾರದ ಉಡಗಳು ನಮಗೆ ಡ್ರ್ಯಾಗನ್ ದಂತಕಥೆಗಳಿಗೆ ಪುಷ್ಟಿ ನೀಡುತ್ತಲೇ ಬರುತ್ತದೆ. ನಿಜವಾದ ಡ್ರ್ಯಾಗನ್ಗಳ ಜಗತ್ತಿಗೆ ಪರಿಚಯಿಸಲು ಡೋಗ್ಲಾಸ್ ಬರ್ಡನ್ ಪಟ್ಟ ಪಾಡು ಪುಸ್ತಕದಲ್ಲಿ ಅಡಕವಾಗಿದೆ. ಕಡಲಾಮೆಗಳ ಜೀವನ ಸಂತತಿಯನ್ನು ಉಳಿಸಲು ಚಂದ್ರಸ್ಸಿರಿಯೆಂಬ ಹುಡುಗನು ಎಸಗಿದ ಸಾಹಸಗಳು ರೋಮಾಂಚಕ!. ಫಾಸ್ಪೇಟ್ ರಫ್ತಿನಿಂದ ಆಲಸಿಗಳಾದ ನೌರಿ ದ್ವೀಪ ಜನರ ದುರಂತ ಚರಿತ್ರೆ ನಿಜಕ್ಕೂ ದುಃಖಕರ. ಶತಮಾನಗಳಲ್ಲಿ ಬಿಡಿಸಲಾಗದ ಕಗ್ಗಂಟು ಟುರಿನ್ ಶಾಲಿನ ರಹಸ್ಯ ಚಿಂತೆಗೆ ಹಚ್ಚುತ್ತದೆ‌. ವಿಸ್ಮಯ ಜಗತ್ತಿನ ಅಭೇಧ್ಯ ರಹಸ್ಯಗಳು, ವಿಚಿತ್ರ ಜೀವ ಸಂಕುಲಗಳು ತೇಜಸ್ವಿಯವರ ಮಿಲೇನಿಯಂ ಸರಣಿ ಪುಸ್ತಕಗಳ ವಸ್ತು. ಕುತೂಹಲದ ಪರಾಕಾಷ್ಠೆಗೆ ತಲುಪಿದಾಗಲೆಲ್ಲಾ ತೇಜಸ್ವಿ ಇನ್ನೊಮ್ಮೆ ಹುಟ್ಟಿಬರಲೆಂದು ಮನದ ಮೂಲೆಯಲ್ಲಿ ಹಾರೈಕೆಯೊಂದು ನಮಗರಿವಿಲ್ಲದೆ ಜೀವ ತಳೆಯುತ್ತದೆ.

- ಮುನವ್ವರ್ ,ಜೋಗಿಬೆಟ್ಟು

ಶೇಕ್ ಸ್ಪಿಯರ್ ಯರ್ ಮನೆಗೆ ಬಂದ - ನಟರಾಜ್ ಹುಳಿಯಾರ್.

ಕದೀದೇ ಇರೋ ರೈಟರ್ ಯಾವನಾದ್ರೂ ಇದಾನೇನ್ರೀ ?! ಬರೆಯೋನು ಕದೀಲೇಬೇಕು...ಜೀವನದಿಂದ ಕದೀ ಬೇಕು. ಇಲ್ಲಾ ಇನ್ನೊಬ್ಬರ ಪುಸ್ತಕದಿಂದ ಕದೀಬೇಕು. ಯಾರಿಗೆ ಕಂಡುಹಿಡಿಯೋಕೆ ಬರುತ್ತೋ ಅವನಿಗೆ ಕದಿಯೋಕೂ ಬರುತ್ತೆ.....

(ಅಹಾ ! ಮಾಂತ್ರಿಕ ನಾಟಕ. ಒಂದೇ ಸಿಟಿಂಗನಲ್ಲಿ ಮುಗಿತು. ಎಂತಹ ತಂತ್ರ. ಈ ನಾಟಕ ಬರೀ ಶೇಕ್ ಸ್ಪಿಯರನ್ನು ಮಾತ್ರವಲ್ಲ ಯಾವುದೇ ದೊಡ್ಡ ಬರಹಗಾರನನ್ನು ಓದುಗ ಸ್ವೀಕರಿಸಬೇಕಾದ ಗಾಢ ಮೌನವನ್ನು ತೋರಿಸುತ್ತದೆ...)

ತರುಣ ತರುಣಿಯರ ಪ್ರೀತಿ ಕಣ್ಣಲ್ಲಿರುತ್ತೇ ಹೊರತು ಹೃದಯದಲ್ಲಲ್ಲ.

-ಕಪಿಲ್