Wednesday 29 March 2017

ಕಡಲ ಬೇಟೆಗಾರನ ಪದ್ಯ...

ಗೋರಿಯೊಂದು ಮಲಗಿದರು
ಅದರೊಳಗವಿತವನ್ಯಾರದ್ದೋ ಉಸಿರು
ಆಚೆ ಇಣುಕುತ್ತದೆ
ಸರದಿ ಸಾಲಿನ ಲೆಕ್ಕ ತಪ್ಪಿಸಿ ಅಲ್ಲೇ ಅರಳಿದ ಹೂ
ಆಗೆಲ್ಲ ತಂತಾನೆ ತೊಟ್ಟುಕಳಚಿ ಬೀಳುತ್ತದೆ.

ಒಂದೇ ನೇರಕ್ಕೆ ಮಲಗಿದ ಗೋರಿಯ ಬಿರುಕು
ಜಗದೆದುರು ತೆರೆದುಕೊಳ್ಳುವಲ್ಲಿ ಗೆಲ್ಲುತ್ತದೆ.
ಬಿರುಕು ಮುಚ್ಚುವ ಹಂತಕ್ಕೆ ಬಂದ ಬೀಳಲು
ಗೋರಿಯ ಎದೆ ರೋಮವಾಗುತ್ತದೆ.
ಒಳಗೆ ಮಲಗಿದವನು ಎದೆ ಕೆರೆದುಕೊಳ್ಳುತ್ತಾನೆ
ಬೇಸಿಗೆಯೆಂಬುವುದು ಹುಟ್ಟುವುದೇ ಆಗ.

ಕಾರಣಾಂತರಗಳಾಚೆಗೂ
ಎಲೆ ಉದುರಿಸಿಕೊಂಡ ಮರವೊಂದು
ಹೂಗಳ ಅರಳಿಸಿಕೊಂಡು ನಿಂತಿತೆಂದರೆ
ಸ್ಮಶಾನದೊಳಗಿನ ಗೋರಿಗೆ ಜೀವವಿದೆ
ಒಳಗೆ ಮಲಗಿದವ ಎದ್ದು ಹೊರಟಿದ್ದಾನೆ ಎಲ್ಲಿಗೋ
ಜಗತ್ತು ವಸಂತವೆಂದು ಕರೆಯುತ್ತಿದೆಯಷ್ಟೆ.

ಸ್ಮಶಾನವೆಂದರೆ ನೀರವ ಮೌನ
ಒಂದೊಂದು ಗೋರಿಯ ನಡುವೆ ಒಂದಷ್ಟು ಅಂತರ
ಗೋರಿಗೂ ಒಳಗಿರುವವನಿಗೂ ಮಾತಷ್ಟೆ
ನಡುವೆ ಬಂದು ತಲೆಹಾಕುವ ಹೂಗಳು.
ನಮಗ್ಯಾಕೆ ಊರ ಉಸಾಬರಿ.
ಇನ್ನಷ್ಟೇ ಮಳೆಗಾಲ ಇಣುಕುತ್ತಿದೆ
ಸೂರಿನ ಯೋಚನೆಯಲ್ಲಿದೆ ಗೋರಿ
ಸುಮ್ಮನಿರಿ
ಮಲಗಿರುವವನಾದರೂ ಬೆಚ್ಚಗಿರಲಿ.

#ಹಲ್ಕಾ_ಕವಿತೆ

ಕಡಲು

Sunday 26 March 2017

ಜಂಬಣ್ಣ ಅಮರಚಿಂತರ ಕಾದಂಬರಿ

ನಿನ್ನ ತಲೆ ಮೇಲಿನ ಬಿಜಲಿ ಬೆಳಕಿನ ತಳ ಕತ್ತಲಿಗೆ ನಾನು ಸಹ ಕಾರಣ ಕುರುಮಯ್ಯ.....

ತೆರೆದ- ಮನ (ಪುಸ್ತಕ ವಿಮರ್ಶೆ)
ಕುರುಮಯ್ಯ ಮತ್ತು ಅಂಕುಶದೊಡ್ಡಿ(ಕಾದಂಬರಿ) -ಜಂಬಣ್ಣ  ಅಮರಚಿಂತ.

ಬೀಜ ಮೊಳಕೆಯೊಡೆದು ಸಸಿಯಾದಾಗ ಆ  ನೆಲದೊಂದಿಗೆ ಬಿಡಿಸಲಾರದ ನಂಟಿರುತ್ತದೆ. ಅದು ಕಿತ್ತು  ಎಲ್ಲೋ ಬಿಸಾಡಿ ಬದುಕೆಂದಾಗ ಅರ್ಧ ಸತ್ತಿರುತ್ತದೆ. ಈ ಕುರುಮಯ್ಯನು ಸಹ ಹಾಗೇ ....ಕೊರವರವರ ಮುಖ್ಯಸ್ಥ ಕುರುಮಯ್ಯ. ಮುಖ್ಯಸ್ಥನೆಂದಾಕ್ಷಣ ಕೈಕೆಸರಾಗದೆ ಕಟ್ಟೆ ಏರಿ ಕುಳಿತವನಲ್ಲ. ಕುಶಾಲಪ್ಪ(ಧಣಿ) ಝರಿ ಬಾವಿ ಮಣ್ಣು ಮುಚ್ಚಿ ಸಿಟ್ಟು ತೀರಿಸಿಕೊಂಡಾಗಲೂ ಗುಡ್ಡದ್ದ ಇನ್ನೊಂದು ಬದಿ ಬಾವಿ ಕೊರೆದವ. ಹಂದಿ ಗೊಬ್ಬರ, ಇಚಲ ಮರದ ಕೈತಯಾರಿಕೆಗಳು, ಮುಳ್ಳು ಹಂದಿ ಬೇಟೆ, ಚಿಂದಿ ಬಟ್ಟೆಯ ಚಿಂದಿ ಡೇರೆಗಳು, ರಾಯಾಪುರದೊಂದಿಗಿಷ್ಟು ಸಂಬಂಧ ಇಷ್ಟೇ ಇವರ ಜಗತ್ತು. ಹಂದಿ ಸಾಕಾಣಿಕೆಯೆ ಬದುಕು. ಈ ಹಿಂದೆ ರಾಜರು ಕಾಡಾನೆಗಳನ್ನು ಇಲ್ಲಿ ತಂದು ಅಂಕುಶಗಳಿಂದ ಪಳಗಿಸುತ್ತಿದ್ದರಿಂದ ಇದಕ್ಕೆ ಅಂಕುಶದೊಡ್ಡಿಯಂದು ಹೆಸರು ಬಂದಿದೆ.

ಈ ಕಾದಂಬರಿಯ ಹರವು ವಿಸ್ತಾರವಾದದ್ದು. ಕೊರವರರ ಮುಗ್ಧ  ಸಮುದಾಯದ ಅವನತಿಗೆ ಕಾರಣಕರ್ತರಾಗುವ ಧಣಿಗಳ ಸೂಕ್ಷ್ಮವಾದ ಧಾಳಿಗಳ ಬಣ್ಣ ಬಯಲಿನಂತೆ ಕಂಡರೂ ಸಹ ಕನ್ನಡದಲ್ಲಿ ದಲಿತ, ಬಂಡಾಯ ಸಂದರ್ಭದಲ್ಲಿ ಈ ರೀತಿಯ ಕೃತಿಗಳು ಬಹುವಾಗಿ ಬಂದಿವೆ. ಆದರೆ ಕುರುಮಯ್ಯ  ಎಲ್ಲದಕ್ಕಿಂತಲೂ ಭಿನ್ನವಾಗಿ ಮುಖ್ಯವೆಂದನಿಸುವುದಕ್ಕೆ ಹಲವು ಕಾರಣಗಳಿವೆ.

ಕೊರವರರಲ್ಲಿ ಹೆಣ್ಣನ್ನು ಮಾರುವ ಹಕ್ಕು ಗಂಡನದಾಗಿರುತ್ತದೆ. ತನ್ನ ಹೆಂಡತಿಯನ್ನು ಮಾರಲೂಬಹುದು. ಈ ರೀತಿಯ ಅನಿಷ್ಟ ಪದ್ಧತಿಗಳನ್ನು ಕುರುವಯ್ಯ ಯಾರು ಯಾಕೆ ಮಾಡಿದರೆಂದು ಇಗಲೂ ಚಿಂತಿಸುತ್ತಾನೆ ಇಡೀ ಕೊರವರನ್ನು ಸಾಗಿಸುವ, ಬದುಕಿಸುವ ಯಜಮಾನಿಕೆ ಅವನದು. ಅವರಲ್ಲಿ ಏನೇ ಗಲಾಟೆಗಳಾದರೂ ಕುರುಮಯ್ಯನೇ ಬರಬೇಕು.
ಹಂದಿ ಗೊಬ್ಬರವೇ ಇವರ ಬದುಕು ಕುಶಾನಪ್ಪ 3ರೂಪಾಯಿಗೆ ಒಂದು ಚೀಲದಂತೆ ತೆಗೆದುಕೊಳ್ಳುತ್ತಿರುತ್ತಾನೆ ಆದರೆ ಸಾಮಾನ್ಯವಾಗಿ  ಎಲ್ಲವೂ ಈ ಜನರು ಅವನಲ್ಲಿ ಮಾಡಿರುವ ಸಾಲದಿಳಿಕೆಯಲ್ಲಿಯೆ ಕಳೆಯುತ್ತದೆ. ಈ ಕೊರವರರ ಬದುಕಿನ ಸಿಕ್ಕುಗಳು ಸಹ ಅಪಾರ ತಾವು ಮಾಡಿಕೊಂಡಿರುವ ರೂಢಿಗಳು  ಮಿರಬೇಕೊ ಅಥವಾ ಅವಕ್ಕೊಪ್ಪಿ ನಡೆಯಬೇಕೊ ? ಇದೇ ಚಿಂತೆ .

ಕುರುವಯ್ಯ ಮತ್ತು ಅಕುಂಶದೊಡ್ಡಿಯನ್ನು ಒಂದು ಜನಾಂಗದ ಅಳಿವು-ಉಳಿವು ಅಥವಾ ಅದರ ಅಧ್ಯಯನ ದೃಷ್ಟಿಕೋನದಿಂದ ನೋಡುವುದಕ್ಕಿಂತಲೂ ರಾಜಕೀಯ ಆಯಾಮದಿಂದ ನೋಡಿದರೆ ಹೊಸ ಹೊಳಹುಗಳು ಸಿಗಬಹುದೆಂದು ಯುವ ವಿಮರ್ಶಕ ನಾಗಣ್ಣ ಕಿಲಾರಿ ಆಡುವ ಮಾತುಗಳು ನಿಜವೆನಿಸುತ್ತವೆ. ಭೋರೆಂಬ
ಮಳೆ ಬಂದು ಇಡೀ ತಾಂಡ ಮುಳುಗಿ ಹೋದಾಗ ಗುಡ್ಡದ ನೆತ್ತಿ ಗುಡಿ ತಲುಪಿದ ಕೊರವರರು ಸಾಧು ಮಾತು ಕೇಳಿ ಒಳ ಪ್ರವೇಶಿಸುತ್ತಾರೆ ಅದು ಅವರಿಗೆ  ಎರಡು ದಿನ ರಕ್ಷಣೆ ಕೊಟ್ಟರೂ ಇಡೀ ಬದುಕು ಅಲುಗಾಡಿಸುತ್ತದೆ ಮೇಲ-ಜಾತಿಯ ಮಡಿವಂತಿಕೆ.

"ಕೊರವರರು ತಮ್ಮ ಪಾಡಿಗೆ ತಾವು ತಣ್ಣಗೆ ಬದುಕುತ್ತಿದ್ದಾರೆ ಹಾಗಂತ ಸಮಸ್ಯೆಗಳಿಲ್ಲವೆಂದಲ್ಲ ಆದರೆ ಆ ಸಮಸ್ಯೆಗಳು ರೂಢಿಯಿಂದ ಬಂದ ಕಟ್ಟುಪಾಡಗಳ ಮೀರುವಿಕೆ ಬಗ್ಗೆ ಮತ್ತು ಹಂದಿ ಗೊಬ್ಬರ ಕುಶಾಲಪ್ಪನ ಅಣತಿಯಂತೆ ಐವತ್ತು ಚೀಲ ಮಾಡುವುದು, ಜಂಬಯ್ಯ ಹಾಗೂ ಬುಡ್ಡಮ್ಮನ ಸಮಸ್ಯೆ  ಆಗಿರಬಹುದು  ಅಥವಾ ತಾಯವ್ವ.  ಇವರು ವಯೋಸಹಜ ಕಾಮನೆಗಳಿಗೆ ಬಿದ್ದು ಕುರುವಯ್ಯನಿಗೆ ಕಟ್ಟುಪಾಡು ಚಿಂತಿಸಲು ಹಚ್ಚಿದವರು. ಆದರೆ,
ಯಾವಾಗ ಕೊರವರರ ಸಣ್ಣ ಸಣ್ಣ ಆಸೆಗಳು ಸಹ ಧಣಿಗಳ ಮುಂದೆ ಬಿದ್ದಾಗ ಬೇರೆಯದೆ ರೂಪ ತಾಳುತ್ತವೆ. ಇದ್ದಲ್ಲಿಯೆ ಕೊಳೆಯದೆ ಆಚೆ ಜಿಗಿಯಬೇಕೆಂದಾಗಲೆಲ್ಲ ಧಣಿಗಳ ಕಟಾವ್ ಕಾರ್ಯ ನಿರಂತರ. ಒಂದು ಅಜ್ಞಾತ ಜನಾಂಗ ಹೋರ ಬರಲಾದೆ ಉಸಿರುಗಟ್ಟುವ ವಾತಾವರಣವಿದಾಗಿದೆ.

ಇದರ ಮಧ್ಯೆ  ಈ ಸಮುದಾಯದ ಬದುಕು ಸಹ ಬಹುಸೂಕ್ಷ್ಮವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ .ತಮ್ಮ ಕತ್ತೆಗಳು ಕಳೆದ್ದಾಗ ನೇರವಾಗಿ ಅಗಸರ ಕೇರಿಗೆ ಹೋಗುವ ಈ ಜನ ಅಲ್ಲಿ ಆ ಅಗಸರು ಆ ಕತ್ತೆಯಿಂದು ದುಡಿಸಿಕೊಂಡು ಗೂಟಕ್ಕೆ ಕಟ್ಟಾಕಿರುತ್ತಾರೆ ಇವ ಹೋಗಿ ಕತ್ತೆ ಗುರುತಿಸಿದಾಗ ಅಗಸರವನು" ಹಲ್ಲು ಬಿಚ್ಚಿ ನಕ್ಕು ನಿಮ್ದಾ ಕತ್ತೆ ಗೊತ್ತಾಗಲಿಲ್ಲ"- ಕೊರವರವ ಮರುಹೇಳುತ್ತಾನೆ ಒಳ್ಳೆಯದು ಮಾಡಿದೆ ನನ್ನ ಕತ್ತೆ ಕಟ್ಟಾಕಿ ಇಲ್ಲದಿದ್ದರೆ ಕಳೆದು ಹೋಗತಿತ್ತು. ನಿಜವಾದ ಮಾತೆಂದರೆ ಆ ಕತ್ತೆ ಅಗಸರವನೆ ಕದ್ದು ಒಯ್ದಿರುತ್ತಿದ್ದ ಇದು ಕೊರವರವನಿಗೂ ಗೊತ್ತಿರುತಿತ್ತು. ಈ ಸೂಕ್ಷ್ಮ ಚಿತ್ರಣದ ಮೂಲಕ ಲೇಖಕ ಏನೋ ಹೇಳಲು ಹೋರಟಿದಾರೆ ಈ ಧಣಿಗಳು ಕೂಲಿಯೊಂದಿಗೆ ಹೊಂದಾಣಿಕೆ ಆಗುವುದೆಯಿಲ್ಲ. ಗಂಡು ಹಂದಿಗಳ ಬಿಜ ಒಡೆಯುವುದು, ಅದರ ನಿರ್ವಹಣೆ ಬಗ್ಗೆಯು ಕೊಂಚ ಮಾತ್ರ ಬರೆದಿದ್ದಾರೆ .

ಕೊನೆಗೆ ಮುನಿಸಿಪಾಲಿಟಿಯವರು ಹಂದಿಜ್ವರ ಬಂದಿದ್ದು ಗುಲ್ಲೆಬ್ಬಿಸಿ ಇವರ ಹಂದಿ ಕೊಲ್ಲುತ್ತಾರೆ. ಈಚಲು ಮರಗಳ ಸೇಂದಿಗಾಗಿ ಕುಂಶಾಲಪ್ಪ ಈ ಜನರನ್ನೆ ಎತ್ತಂಗಡಿ ಮಾಡುತ್ತಾನೆ. ಅವರಿರುವ ಜಾಗದಲ್ಲಿ ಬೇಕಾದಷ್ಟು ಗಿಡಗಳಿರತವೆ . ಕೊನೆಗೆ ಬುಟ್ಟಿ, ಮರ ಹೆಣಿಯುವುದಕ್ಕೂ ಅವು ಸಿಗುವುದಿಲ್ಲ.

ಮುಂದೆ ಕುರುಮಯ್ಯ ಸಾಲು ಬೆಟ್ಟೆಗಳ ತುದಿಯಲ್ಲಿ ಬದುಕುತ್ತಾನೆ. ಏಳೆಂಟು ಡೇರೆಗಳೊಂದಿಗೆ. ಅಲ್ಲಿ ಹಸಿವು ತಾಂಡವಾಡುತ್ತದೆ. ಕುಲಕಸುಬಾದ ಹಂದಿ ಸಾಕಣಿಕೆ ಮತ್ತು  ಈಚಲು ಕೈತಯಾರಿಕೆಗಳಿಗೆ ಬರೆ ಬಿದ್ದಾಗ. ಒಬ್ಬ ಕಳ್ಳತನಕ್ಕಿಳಿದ್ದು ಜೈಲು ಸೆರುತ್ತಾನೆ, ಬುಡ್ಡಮ್ಮನ ತಂಗಿ ಲಾಡ್ಜನಲ್ಲಿ ಯಾರಿಗೋ ಮೈಚೆಲ್ಲುತಾಳೆ. ಕುರುಮಯ್ಯ ಕೊನೆಗೆ ಎಂ. ಎಲ್.ಎ ಆದ ಕುಂಶಾಲಪ್ಪನ ವಿಜಯದ ಮೆರವಣಿಗೆಯಲ್ಲಿ ತಲೆ ಮೇಲೆ ಬಿಜಲಿ ಹಿಡಿದಿರುತ್ತಾನೆ. ಹಸಿವಿಗೆ ಚಕ್ಕಾರ್ ಬಂದು ನೆಲಕ್ಕುರುಳುತ್ತಾನೆ ಆವಾಗ ಹನ್ನೆರೆಡು ವರ್ಷದ ಪುಟ್ಟ ಬಾಲಕ ಬಿಜಲಿ ಹೋರುತ್ತಾನೆ ಕುರುಮಯ್ಯ ವಿರೋಧಿಸುತ್ತಾನೆ ಅವರವ್ವ ಹೇಳುತ್ತಾಳೆ " ಇಗಲೆ ಕಲಿಯಲಿ ಬಿಡು ಮುಂದೆ ಇದೆ ಮಾಡಬೇಕಾಗುತ್ತದೆ". ತನ್ನ ಸಮುದಾಯದ ಅಳಿವು, ಗುಲಾಮಗಿರಿತನ ಮತ್ತು ಬಿಜಲಿ ಹೊತ್ತವನ ಮುಖ ಕತ್ತಲಲ್ಲಿಯೆ ಇರುತ್ತದೆ.

# ಕಪಿಲ ಪಿ ಹುಮನಾಬಾದೆ.
26/03/2017.
(ಕಾರಂತರ ಚೋಮನ ದುಡಿ ಚರ್ಚೆಯಾದಷ್ಟು. ಕುರುಮಯ್ಯ ಮತ್ತು  ಅಕುಂಶದೊಡ್ಡಿ ಆಗಲಿಲ್ಲ. ಬನ್ನಿ ನಾವೆಲ್ಲ ಸೇರಿ ಮರುಚರ್ಚಿಸೋಣ)

Thursday 23 March 2017

ನಿಮ್ಮ ಕೃತಿ ವಿಮರ್ಶೆಗಾಗಿ ನಮಗೆ ಕಳುಹಿಸಿ..

ಸಾಹಿತ್ಯ ಸಂಗಾತಿಗಳೇ,

ಈಗ ಪುಸ್ತಕಗಳ ಪರಿಚಯ  ಪತ್ರಿಕೆಗಳಲ್ಲೇ ಬರಬೇಕಿಂದಿಲ್ಲ. ಪತ್ರಿಕೆಯವರಂತೂ ಯಾವುದೇ ವಶೂಲಿಬಾಜಿ ಮಾಡದ, ಪ್ರಬಲ ಗುಂಪಿನಲ್ಲಿ ಗುರುತಿಸಿಕೊಳ್ಳದ, ಅಪರಿಚಿತರ ಹೊಸ ಪುಸ್ತಕ ವಿಮರ್ಶೆ ಮಾಡಿಸುವುದನ್ನು ಎಂದೋ ಬಿಟ್ಟುಬಿಟ್ಟಿದ್ದಾರೆ. ಈಗೇನಿದ್ದರೂ ಹೊಸಬರು ನಮ್ಮ ನಮ್ಮ ಗೆಳೆಯರ ಹೊಸ ಪುಸ್ತಕಗಳನ್ನು ನಾವೇ ಓದಿ ನಾವೇ ನಾಲ್ಕು ಸಾಲು ಬರೆದರೆ ಒಳ್ಳೆಯದಲ್ವಾ. ಇದಕ್ಕೆಂದೆ ನಮ್ಮ ಕಾವ್ಯಮನೆಯ ಕಪಿಲ ಒಂದು ವೇದಿಕೆ ಸಜ್ಜುಮಾಡಿಕೊಂಡಿದ್ದಾರೆ. ಹೊಸ ಬರಹಗಾರರನ್ನು ಗುರುತಿಸುತ್ತಿಲ್ಲ ಎಂಬ ಕೊರಗನ್ನೂ ಈ ಮೂಲಕ ಒಂದಿಷ್ಟು ಕಡಿಮೆ ಮಾಡಿಕೊಳ್ಳಬಹುದೇನೋ. ಹೊಸಬರಲ್ಲ. ಎಲ್ರೂ ಇದರಲ್ಲಿ ಕೈಜೋಡಿಸಿ

# ಹನುಮಂತ ಹಾಲಿಗೇರಿ 
Kavymane.blogspot.in
Khumnabaade580@gmail.com

_ನಿಮ್ಮ ಪುಸ್ತಕ ವಿಮರ್ಶೆಗಾಗಿ ನಮಗೆ ಕಳುಹಿಸಿ. ಕಾವ್ಯ ಮನೆ ತಂಡ ವಿಮರ್ಶೆ ಮಾಡುತ್ತದೆ.

1)
ಕವನ ಸಂಕಲನಗಳ ವಿಮರ್ಶೆಗಾಗಿ:-
ಚಾಂದ್ ಪಾಷ ಎನ್ ಎಸ್, 
ನಂ. 15A. 15ನೇ ಮುಖ್ಯ ರಸ್ತೆ. 19ನೆ ಅಡ್ಡ ರಸ್ತೆ.
ಜೆ ಸಿ ನಗರ. ಕುರುಬರಹಳ್ಳಿ. ಬೆಂಗಳೂರು 560086
Mo. 8722039612

2) 
ಕಥಾಸಂಕಲನಗಳ ವಿಮರ್ಶೆಗಾಗಿ:-
ಮಹೇಶ ಕಾಂಬಳೆ
ಗ್ರಾಮ ಲೆಕ್ಕಾಧಿಕಾರಿ,
ತಹಶೀಲದಾರ ಕಚೇರಿ ಕುಂದಗೋಳ
ತಾ/- ಕುಂದಗೋಳ
ಜಿ/- ಧಾರವಾಡ
Pincode- 581113
Mob- 9620193011

3)
ಕಾದಂಬರಿ ವಿಮರ್ಶೆಗಾಗಿ:-
ಪ್ರವೀಣಕುಮಾರ ಬೀ 
ಹೋನ್ನಕುದರಿ
ಅಂಬೇಡ್ಕರ್ ನಗರ ನವಲಗುಂದ 
ತಾಲೂಕು.ನವಲಗುಂದ
ಜಿಲ್ಲೆ ಧಾರವಾಡ 
ನಂಬರ್ 9964355637

4) ಸಂಶೋಧನಾ ಕೃತಿಗಳ ಅವಲೋಕನಕ್ಕಾಗಿ:-
ಆರಡಿಮಲ್ಲಯ್ಯ. ಪಿ
ಕವಿ.ವಿಮಶ೯ಕ ಮತ್ತು ಸಂಸದೋಧಕರು
ಚಾವಿ೯ತ ಜೆರಾಕ್ಸ್ ಮತ್ತು ಕಂಪ್ಯೂಟರ್
ಹೆಚ್.ಪಿ.ಪಿ.ಸಿ.ಸಕಾ೯ರಿ ಪ್ರಥಮ ದಜೆ೯ ಕಾಲೇಜು. ಮುಂಭಾಗ
ತ್ಯಾಗರಾಜ ನಗರ
ಚಳ್ಳಕೆರೆ
9482370430.

5) ನಾಟಕ ಮತ್ತು  ಇತರೆ ಕೃತಿಗಳ ವಿಮರ್ಶೆಗಾಗಿ,
ಪ್ರವೀಣ ಮುತಾಲಿಕ್ 
ಸತ್ಯನಾರಯಣ ಪೇಟೆ 3 ನೇ ಕ್ರಾಸ್ . ಶಾರದ ವಿದ್ಯ ಪೀಠ ಶಾಲೆಯ ಹತ್ತಿರ ಬಳ್ಳಾರಿ .. 583101
7338286942.

ನಿಮ್ಮ ಕೃತಿ ಕುರಿತು ಪುಸ್ತಕ ಅಭಿಪ್ರಾಯ ಬರೆಯುವವರು:- ಶಾಂತೇಶ ಕೋಡ್ಲೆ,  ಚಾಂದ್ ಕವಿಚಂದ್ರ, ಕಾವ್ಯ, ಕಪಿಲ, ಸ್ನೇಹಲತಾ, ಮಹೇಶ್, ಮುತಾಲಿಕ್, ಪ್ರವೀಣ ಪಿ.ಕೆ.....

ಮಾರ್ಗದರ್ಶಕರು:-
ಹನುಮಂತ ಹಾಲಿಗೇರಿ, ಖ್ಯಾತ ಕಾದಂಬರಿಕಾರರು
ಬೆಂಗಳೂರು 
ಅರಡಿಮಲ್ಲಯ್ಯ. ಪಿ, ಚಿತ್ರದುರ್ಗ 
ಅಬ್ದುಲ್ ಹೈ.ತೋ, ಹಿರಿಯ ಸಾಹಿತಿಗಳು, ಬಳ್ಳಾರಿ 

ನಿಮ್ಮ ಪುಸ್ತಕದ ಎರಡು ಪ್ರತಿಗಳು ಕಳುಹಿಸಿ ಜೊತೆಗೆ ಸ್ವಪರಿಚಯ ಪತ್ರವರಲಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- 7829464653.
ಧನ್ಯವಾದಗಳು...

Wednesday 22 March 2017

ಕಾವ್ಯ ಚುಟುಕುಗಳು


ಕಪ್ಪು ಹುಡುಗ ಅತ್ತಾಗಲೆಲ್ಲಾ
ಮೋಡ ಕವಿಯುತ್ತಿತ್ತು ಅನ್ನೋದು
ನನ್ನೊಳಗೆ ನಾನೇ ಮಾಡಿಕೊಂಡ
ಹುಚ್ಚು ಕಲ್ಪನೆ ನಿಜವಾಗಿ
ಮಳೆಯೇ ಆಗುತ್ತಿತ್ತು
ನನ್ನವನು ಮಳೆ ಹುಡುಗಾ!..
____________

ಅವನಿಗೆ ಅಂಜಿ ಮುಂಗುರುಳ
ಹಾರ ಬಿಟ್ಟಿದ್ದು ಗುಳಿಕೆನ್ನೆಯ
ಮರೆಸಲು ಅನ್ನೋದು ಈವಾಗಲೂ
ತಿಳಿಯಲಾಗಲಿಲ್ಲ ಅವನಿಗೆ
ಮುಸಿ ನಗು ಮರೆಸಲು ನಾ ಮಾಡಿದ
ಕಿತಾಪತಿ ಅನ್ನೋದು ನನಗಷ್ಟೇ
ಗೊತ್ತಿರುವ ಅಗೋಚರ ಸತ್ಯ.!
______________

ಹೆಜ್ಜೆ ಜಾಡು ಹಿಡಿಯುವ
ನಿಪುಣನಿಗೆ ಸಾವಕಾಶ ಕೊಡದೇ
ನಡೆದದ್ದು ತೀರಾ ಬಸವಳಿಸಲು,
ಆದರೂ ಕಪ್ಪು ಹುಡುಗಾ
ನೆರಳಿಗೆ ಜೋತು ಬೀಳುತ್ತಿದ್ದ
ನನ್ನೊಳಗೇ ಅವನೊಂದು ಶಿಲೆಯಂತೆ.!
___________________

ಎದುರು ಬದುರು ನಿಲ್ಲುವಾಗ
ಉಸಿರ ಬಿಗಿಯೇ ಹಿಡಿಯುತ್ತಿದ್ದೆ
ಚೆಹರೆಯಲ್ಲಿ ಬರದ ಕೋಪ
ಮೂಡಿಸಲೆಂಬ ಮುಂದಾಲೋಚನೆಯಂತ
ಅವನಿಗೆ ಹೊಳೆಯಲಿಲ್ಲ
ಉಸುರಿದರೆ ಸೋಲುವ
ಪ್ರಮೇಯ ನನ್ನದಾಗುತ್ತಿತ್ತು..!
___________

ಮೌನ ದಿನದ ಲೆಕ್ಕ ಹಾಕುವಾಗ
ರಾತ್ರಿಯಲ್ಲಿ ನಕ್ಕು ಬಿಡುತ್ತೇನೆ
ಅವನೊಳಗೆ ಇಳಿದು ಕನಸಲ್ಲಿ
ಆಡಿದ ಮಾತುಗಳು ಅವನೂ ಕೇಳಲಿಲ್ಲ ನನಗೂ ಮುಗಿಯಲಿಲ್ಲ
ಹೇಳದಿರುವ ಒಲವಲ್ಲಿ ಸ್ವಾದ
ಹೆಚ್ಚಿರುತ್ತಂತೆ..!

# ಕಾವ್ಯ ಎಸ್ ಕೋಳಿವಾಡ

Tuesday 21 March 2017

ರಮ್ಯರವರ ಪದ್ಯ

ಧಾರೆ

ವರ್ಷದ ಮೊದಲ ಧಾರೆ
ಧರಧರನೆ ಸುರಿಯುತಿಹುದು
ಬಾಡಿದ ತರುಲತೆ ಬಳ್ಳಿಗಳು
ಮನಸ್ಬಿಚ್ಚಿ ಮೈವೊಡ್ಡುತ್ತಿಹುದು !

ಬಿಸಿಲ ಮಳೆಯನ್ನೇ ಉಂಡು
ಬಿರುಕಾಗಿದ್ದ ಧಾತ್ರಿ ಚುಂಬಿಸಿದ
ಪ್ರತೀ ಹನಿಯನ್ನು ದಡಬಡನೇ ಹೀರಿಕೊಳ್ಳುತ್ತಿದ್ದಾಳೆ ನಾಳಿನ ಬಿರುಕನ್ನಾದರೂ 
ಮುಚ್ಚುವ ಬಯಕೆಯಿಂದ

ಮುನಿಸಿನಿಂದ ಮೌನವಾಗಿದ್ದ
ಬೆಳ್ಳಿಮೋಡ ಮೌನ ತೊರೆದು
ಆರ್ಭಟಿಸುತಿದ್ದಾನೆ
ಮೊದಲ ಚುಂಬನದಲ್ಲೇ ಮಣ್ಣ ವಾಸನೆ
ವಿದೇಶಿ ಸುಂಗಧದ್ರವ್ಯಗಳನ್ನೆಲ್ಲ
ಹಿಂದಿಕ್ಕಿ ಮನವ ತಣಿಸುತಿದೆ....

ಪದೇ ಪದೇ ಮುನಿಯುವ ಮಳೆಗಂಜಿ ದೂರದಲ್ಲಿ ಕಂಬಳಿ
ಹೊದ್ದ ಅಜ್ಜ ನೆನೆಯುತ್ತ ಮಡಿಕೆ
ಕುಡಿಕೆಗಳಲ್ಲೆಲ್ಲ ಹನಿ ಹನಿಯ ಕೂಡಿಸುತಿದ್ದಾನೆ
ಮೂಲೆಯಲ್ಲೊಂದು ಕುರಿ ಒಣಹುಲ್ಲು ನೆಕ್ಕುತ್ತಿದೆ

ಕಾದು ಧಣಿದ ಚಕ್ರವಾಕ ನಲಿಯುತ್ತಿದ್ದಾನೆ
ಬದುಕಿದ ತೃಪ್ತಿ ಕೂಗಲ್ಲಿ ತೋರಿಸುತ
ಬಾನೆತ್ತರಕೆ ಹಾರುತ್ತಿದ್ದಾನೆ

ಮೊದಲ ವರ್ಷಧಾರೆ ಕ್ಷಣದಲ್ಲಿ ನಗು ಹಂಚುವ ಜಾಧೂಗಾರನಾಗಿ ಸುಡುಬಿಸಿಲಿಗೆ ತಂಪೆರಚಿದ
ಮತ್ತೆ ಬರುವ ಆಶಯವಿತ್ತವ ಮರೆಯಾದ  ಮನಸ ತಣಿಸಿ

ಮತ್ತೆ ಬರುವನೋ ಇಲ್ಲವೋ ?
ಮರುಕ್ಷಣವೇ ಸಣ್ಣ ಗುಡುಗುಮಿಂಚು
ಒಣ ಮರದ ಮೇಲೆ!

# ರಮ್ಯ

Monday 20 March 2017

ಪುಸ್ತಕ ವಿಮರ್ಶೆ ಪಿ.ಕೆ


ಕೃತಿ-ಗುಬ್ಬಚ್ಚಿ ಗೂಡಿನಲ್ಲಿ
ಕವಿ-ಅನಿಲ್ ಗುನ್ನಾಪುರ

ಗುಬ್ಬಚ್ಚಿ ಗೂಡಿನಲ್ಲಿ ಅಂದೊಡನೆ ನನಗೆ ನೆನಪು ಆಗಿದ್ದು ಕೆ ಪಿ ಪೂರ್ಣಚಂದ್ರ ತೇಜಸ್ವಿ ರವರು ಅವರ "ಕರ್ವಾಲೋ" ಹಾಗೂ
"ಏರೋಪ್ಲೇನ ಚಿಟ್ಟೆಗಳು"  ಓದಿದ ಮೇಲೆ ಅವರ ಪರಿಸರದ ಬಗ್ಗೆ ಇರುವ ವ್ಯಾಮೋಹಕ್ಕೆ ನಾನು ಪೀದಾ ಆಗಿರುವೇನು.

ಆದರೆ ಇಲ್ಲಿ "ಗುಬ್ಬಚ್ಚಿ ಗೂಡಿನಲ್ಲಿ" ಯುವ ಕವಿಯ ಪ್ರೇಮ ಆಲಾಪನೆಗಳು ಸಾಮಾಜಿಕ ತುಡಿತ ಎಲ್ಲವನ್ನೂ ಕವಿತೆಯಲ್ಲಿ ನೋಡಿದಾಗ ಏನೋ ಒಂಥರಾ ಖುಷಿ.
ಈ ಹರಿಯದ ಕವಿಯ ಪ್ರೇಮ ಭಾವನೆಗಳು ವಿರಹ ವೇದನೆಗಳನ್ನು ಯಾಕೋ ನನಗಾದಂತೆ ಅನಿಸುತ್ತದೆ. ಇಬ್ಬರೂ ಯುವಕರ ಆಗಿರುವುದರಿಂದ ಭಾವನೆಗಳು ಬೇರೆಯಾದರೆ ಮನಸ್ಸಿನ ತುಡಿತಗಳು ಒಂದೆ ಇರುತ್ತದೆ ಅನ್ನೋದು ಬಹಿರಂಗ ಪಡಿಸುವುದೆ.
"ಗುಬ್ಬಚ್ಚಿ ಗೂಡಿನಲ್ಲಿ" ಟ್ಯಾಗ್ ಲೈನ್ "ಕನಸುಗಳು ಮರಿ ಹಾಕಿವೆ"

ಗುಬ್ಬಚ್ಚಿ ಗೂಡಿನಲ್ಲಿ ಎಂದ ಕೂಡಲೇ ಇಲ್ಲಿ ಪರಿಸರ ದರ್ಶನ ಆಗಬಹುದು ಎಂದುಕೊಂಡೆ ?
ಒಂದೆರಡು ಕವಿತೆಗಳನ್ನು ಬಿಟ್ಟರೆ ಪರಿಸರ ದರ್ಶನ ಆಗಲಿಲ್ಲ. ಇದು ನನಗೆ ಬೇಸರದ ಸಂಗತಿ.
ಇಲ್ಲಿ ಪರಿಸರ ಕಾಳಜಿಗಿಂತ ಸಾಮಾಜಿಕ ತುಡಿತ ಬಹಳ ಎಚ್ಚರಿಸಲು ಮುಂದಾಗುತ್ತದೆ.
ಕವಿಯು ಗುಬ್ಬಚ್ಚಿ ನನ್ನ ಇಷ್ಟವಾದ ಪಕ್ಷಿ ಎಂದು ಹೇಳಿಕೊಂಡ ಒಂದು ಕಡೆ ಪಕ್ಷಿ ಪ್ರೇಮಿಯಾಗಿಯ ಉಳಿಯುತ್ತಾರೆ.

"ಅಸಾಮಾನ್ಯಳು" ಕವಿತೆಯಲ್ಲಿ ಪೌರಕಾರ್ಮಿಕರ ದಿನ ನಿತ್ಯದ ದಿನಚರಿಯನ್ನು ನಮಗೆ ದರುಶನ ಮಾಡಿಸಿ. ವಾಸ್ತವತೆಗೆ ಹಿಡಿದ ಕೈಗನ್ನಡಿಯಾಗಿದ್ದಾರೆ ಎನ್ನಬಹುದು.
ಅಸಾಮಾನ್ಯಳಲ್ಲಿ ಸಮಾನತೆಯನ್ನು ಎಷ್ಟು ಸೊಗಸಾಗಿ ನಿರೂಪಣೆ ಮಾಡಿದ್ದಾರೆ.
"ಬೆಳಕು" ಕವಿತೆಯಲ್ಲಿ ಬುಧ್ಧ ಕೃಷ್ಣ ಅಲ್ಲಾ ಯೇಸುವಿನನ್ನು ಬರುವ ನಾಲ್ಕು ಪ್ಯಾರದಲ್ಲಿನ ಹೋಲಿಕೆ ನೋಡಿದಾಗ ದೇವರು ಒಂದೇ ಎಂದು ಸಾಬೀತುಪಡಿಸುತ್ತಾರೆ.
"ಅಣ್ಣ ಬಸವಣ್ಣ" ಈ ಕವನ ಸಂಕಲನದಲ್ಲಿ ನನಗೆ ಇಷ್ಟವಾದ ಕವಿತೆಯ ಸಾಲಿನಲ್ಲಿ ಮೊದಲನೇ ಸಾಲಿನಲ್ಲಿ ಇದೆ
"ನೀ ಆಡಿ ಬೆಳೆದ ಅಂಗಳದಲ್ಲಿ ಕಸ ಇನ್ನೂ ಹಾಗೇ ಇದೆ ಗುಡಿಸುವೆನು ಚೂರು ಬಾರಿಗೆ ನೀಡು ಬಾರಣ್ಣ" ಎಂದು  ನೇರವಾಗಿ ಕಾಲಜ್ಞಾನಿ ಬಸವಣ್ಣನವರನ್ನು ನೇರವಾಗಿ ಕರೆಯುತ್ತಾರೆ ಎಂದರೆ ನಮ್ಮ ಸಮಾಜ ಪರಿಸ್ಥಿತಿ ಬದಲಾಗಿಲ್ಲ ಇನ್ನೂ ಎಂದರ್ಥವೇ ಸರಿ ಅಸಹಾಯಕತೆಯಿಂದಲ್ಲೆ ಈ ಕವಿತೆ
ಹುಟ್ಟಿರಬಹುದು.

ಇಲ್ಲಿ ಬಹಳ ಕವಿತೆಗಳು ಕಾವ್ಯಾತ್ಮಕವಾಗಿಯ ಬಂದಿದೆ ಆದರೆ ಅಲ್ಲೊಂದು ಇಲ್ಲೊಂದು ಕವಿತೆಗಳು ಯಾಕೋ ಸ್ವಲ್ಪ ಗದ್ಯಮಿಶ್ರಿತವಾಗಿವೇ ಅದರ ಬಗ್ಗೆ ಸ್ವಲ್ಪ ಎಚ್ಚರ ವಹಿಸಿಕೊಳ್ಳಬೇಕಿತ್ತು.
"ಬಸವ ನಿಲಯ" ಕವಿತೆ ಗದ್ಯಮಿಶ್ರಿತವಾದರು ಅದರ ಆಳ ಅಗಲ ವಿಚಾರಕ್ಕೆ  ಪ್ರಾಮುಖ್ಯತೆ ಕೊಡಲೇ ಬೇಕು ಅಷ್ಟು  ಸರಳ ಸಜ್ಜು ಓದುಗರನ್ನು ಹಿಡಿದಿಡುತ್ತದೆ.
ಈ ಕವಿಯ ಕವಿತೆ ಕಟ್ಟುವ ಕರಾಮತ್ತು ನೋಡಿದಾಗ ಇನ್ನೂ ಭರ್ಜರಿಯಾಗಿ ಪದ ಪ್ರಯೋಗ ಮಾಡಿ ಭಾವನೆಗಳುನ್ನು ಹರಿಬಿಟ್ಟು
ತಮ್ಮದೆ ಆದ ಹೊಸ ಲೋಕವನ್ನು ಕಟ್ಟಬಹುದಿತ್ತು ಅನಿಸುತ್ತದೆ.

"ಪ್ರೇಮ ಬಳ್ಳಿ" ಕವಿತೆಯ ಸಾಲುಗಳು ಗ್ರಾಮೀಣ ಜಾನಪದ ಸೊಬಗನ್ನು ನೆನಪಿಸಿ ನೇರೆವಾಗಿ ಮನಮುಟ್ಟಿತ್ತದೆ.
"ತುಂಬಾ ಮಾತಾಡಬೇಕಿದೆ" ಈ ಕವಿತೆಯಲ್ಲಿ ಅಷ್ಟೇ ಅಲ್ಲ ನಿಮ್ಮ ಇಡೀ ಕವನ ಸಂಕಲನವೇ ತುಂಬಾ ಮಾತುಡುತ್ತೀದೆ. ಒಂದು ಭರವಸೆಯ ಮಾತನ್ನು ಹೇಳಬಯಸುತ್ತೇನೆ ನೀವು ತುಂಬಾ ಮಾತು ನಾಡಿದ್ದೀರಾ ನಿಮ್ಮ ಬಗ್ಗೆ ನಾವುಗಳು ಮಾತನಾಡುವುದು ಬಾಕಿ ಇದೆ ಎಂಬ ಭರವಸೆ ಮಾತನ್ನು ನಾನು ಕೊಡುತ್ತೇನೆ.

ಪಿ ಕೆ...?
ನವಲಗುಂದ

Friday 17 March 2017

ತೆರೆದ ಮನ(ವಿಮರ್ಶೆ)

ತೆರೆದ ಮನ (ಪುಸ್ತಕಭಿಪ್ರಾಯ)
ಇತಿಹಾಸ- ಎಸ್ ದಿವಾಕರ್.

ಒಂಭತ್ತು ಕಥೆಗಳು ಹೊಂದಿರುವ ಇತಿಹಾಸ ಕಥಾಸಂಕಲನದಲ್ಲಿ ಎರಡು ಭಾಗಗಳಿವೆ. ಕೇವಲ ವಿಷಯ ವಸ್ತು  ಅಥವಾ ಕಥಾ ರಚನೆಯ ಕಾಲಘಟ್ಟದಾಧರದ ಮೇಲೆ ದ್ವಿಭಾಗ ಮಾಡಿಲ್ಲ. ಸಂಪೂರ್ಣ ವಿಷಯ- ವಸ್ತು, ರಚನೆ, ತಂತ್ರ ಎಲ್ಲದರಲ್ಲಿಯೂ ಭಿನ್ನತೆಯಿದೆ. ಮೊದಲ ಭಾಗದ ಕಥೆಗಳಲ್ಲಿರುವ ಮನುಷ್ಯ ಮನಸ್ಸುಗಳ ಹುಡುಕಾಟ,  ತಲ್ಲಣಗಳು, ಬದುಕಿನೊಳನೋಟಗಳು ಎರಡನೇ ಭಾಗದಲ್ಲಿ  ಮಾಯವಾಗಿ ಇನ್ನೊಂದು   ಮುಖವೇ ಪಡೆದಿವೆ. ಸಂಪೂರ್ಣ ಕಾಲ್ಪನಿಕ  ಕಥೆಗಳೆಂದರೂ ಸರಿ. ಶಾಂತಿನಾಥ ದೇಸಾಯಿ ಸಹಿತ ಇದೇ ಹೇಳುತ್ತಾರೆ ಆದರೆ " ಒಂದು ಘಟನೆ" ಕಥೆ ಭಿನ್ನವಾಗಿದೆ.

ಕೌರ್ಯ ಕಥೆಯಲ್ಲಿ ಒಬ್ಬ ಮನುಷ್ಯನಿಗಿರಬೇಕಾದ ಸಾಮಾನ್ಯ  ಸಂವೇದನದ ಕಥೆಯಿದೆ ಮನುಷ್ಯತ್ವದ ಹುಡುಕಾಟವಿದೆ. ಅಲುಮೇಲು ಸಾಯುತ್ತ ರಸ್ತೆಯಲ್ಲಿ ಬಿದ್ದಾಗ ತಳ್ಳುಗಾಡಿಯಲ್ಲಿ ಉಪ್ಪು ಮಾರುವ ಪಳನಿಚಾಮಿಯ ತನ್ನ ತೊಡೆಯ ಮೇಲೆ ಆಕೆಗೆ ಮಲಗಿಸಿಕೊಂಡಿರುತ್ತಾನೆ "
"ನಾನು ಕಪ್ಪಗೇ ಹುಟ್ಟಿದ್ದು ಇವನ ಮಗಳಾಗಿದ್ದಿದ್ದರೆ ನನ್ನನ್ನು ಎಷ್ಟೆಲ್ಲ ಪ್ರೀತಿಸುತ್ತಿದ್ದಿರಬಹುದು ಅಥವಾ ಇವನೇ ಬೆಳ್ಳಗಿದ್ದು ನನ್ನ  ಅಪ್ಪನಾಗಿದ್ದಿದ್ದರೆ, ಅವನ ಹಣೆಯಿಂದಿಳಿದು ತನ್ನ ತಲೆಯ ಮೇಲೆ ತೊಟ್ಟಿಡುತ್ತಿದ್ದ ಬೆವರು  ನಿಜವಾದ ಬದುಕನ್ನು ಕರೆತಂದ ಹಾಗೆ....- ಅಲುಮೇಲು ಆಡುವ ಈ ಮಾತುಗಳು ಇವರೆಗೂ ಅವಳು ಮನುಷ್ಯ ಪ್ರೀತಿಯೆ ಕಂಡಿರಲಿಕ್ಕಿಲ್ಲ, ಮರಭೂಮಿಯ ಅನಂತತೆಯಲ್ಲಿ ಓಯಸಿಸ್ ಕಾಣದ ಒಂಟೆಯಂತೆಯಂಬುವುದು ಸೂಚಿಸುತ್ತವೆ. ಇಗ  ಆ ಪ್ರೀತಿ ಕಂಡು ಸುಖಿಸುತ್ತಿದ್ದಾಳೆ. ಅಪ್ಪ ಫಿಲಾಸಫಿ ಪ್ರೋಫೇಸರ್ ಆದ್ರು ಪ್ರೀತಿ ತೋರಿಸದಿರುವುದಕ್ಕೆ ಕಾರಣವೆಂದರೆ  ಮಗಳು ಪೋಲಿಯೊಕ್ಕೆ ತುತ್ತಾಗಿ ಅಡ್ಡದಿಡ್ಡ ಬೆಳೆದಿದ್ದಾಳೆ. ಅಪ್ಪ,  ಅಮ್ಮ  ಅವಳನ್ನು ಮನುಷ್ಯಳೆಂದು ಕಂಡೆಯಿಲ್ಲ. ತುಂಬಾ ಸಂಕೀರ್ಣವಾದ ಈ ಕಥೆ ನಿಜಕ್ಕೂ ಯಶಸ್ವಿಯಾಗಿದೆ. ಅಲುಮೇಲುವಿಗೂ ಸಹಜತೆಗಳಿವೆ ಯಾರದೋ ಮದುವೆಯಲ್ಲಿ ಮೈಸವರಿದವನ ಬಗ್ಗೆ, ರೈಲಿನ ಕಂಬಿ ಇನಿಯ, ಯಾರೋ ಮದುಕಿ ಅಂತ ಚುಡಾಯಿಸಿದ್ದು...

ಅನಾಥರು ಇದೊಂದು ಇತ್ತೀಚಿನ ಸಾಮಾನ್ಯ ಸಂಗತಿಯಂದೆ ಹೇಳಬಯಸುತ್ತೇನೆ. ಹಳ್ಳಿಯಿಂದ ನೆಮ್ಮದಿ ಹುಡುಕಿಕೊಂಡು ಬರುವ ವೃದ್ಧದಂಪತಿಗಳು ಇಲ್ಲಿ ಕಾಣುವುದು ಮೇಲ - ನೆಲದ ಸುಖ ಮಾತ್ರ, ಒಳಗೆ ಒಂಟಿತನ, ಭಯ, ಅಭದ್ರತೆ ಕೊರೆಯುತ್ತಲೆಯಿದೆ. ನೆಲೆ ಕಥೆ ಒಂದು ರೀತಿಯಲ್ಲಿ ಜಯಾಳ ಸಾಮಾಜಿಕ  ಪರಿಸರದೊಂದಿಗೆ ಹೊಂದಿಕೊಳ್ಳುವಿಕೆ ಬಗ್ಗೆ ಇದೆ. ಅಷ್ಟೇನೂ ಅರ್ಥ ಸಾಧ್ಯತೆಗಳಿಗೆಳೆಯುವುದಿಲ್ಲ ಈ ಕಥೆ. ಯಾಕೆಂದರೆ "-ಮನುಷ್ಯ ಯಾವಾಗಲೂ ಇಂದು ಒಂದಿದ್ದರೆ ನಾಳೆ ಇನ್ನೊಂದಕ್ಕೆ ತೋಳಲಾಡುತ್ತಲೆಯಿರುತ್ತಾನೆ. ಒಂದೇ ಆವರಣದೊಳಗೆ ಬದುಕುವ ಭಿನ್ನ ಪರಿಸ್ಥಿತಿ ಮತ್ತು ಹಿನ್ನಲೆಯ ಮನುಷ್ಯರ ಗುದ್ದಾಟವಿದೆ ಆದರೆ ಎಲ್ಲವೂ ಇಲ್ಲಿ ಹುಚ್ಚುತನಗಳ ಮಧ್ಯೆಯೆ ಮುಗಿಯುತ್ತದೆ.

ಮೃತ್ಯುಂಜಯ - ಒಂದೇ ಸಾರಿಗೆ ಎದೆ ಛಲ್ಲೆನಿಸಿದ ಕಥೆ. ಡಾ ಸ್ವಾಮಿನಾಥನ ಪೊಸ್ಟ್ ಮಾರ್ಟಂಗೆ ಬಂದ ಎಸ್ ಮೃತ್ಯುಂಜಯ ಹೆಸರಿನ ಹೆಣದ ಪೂರ್ವ ಬದುಕಿನನಾವರಣವೇ ಈ ಕಥೆ. ಇದೊಂದು ಪತ್ತೇದಾರಿ  ಕಥೆಯಂದರೆ ಮಿತಿಯಾಗುತ್ತದೆ. ಬದುಕಿರುವ ಮನುಷ್ಯ ಮನುಷ್ಯರ ನಡುವಿನ ಅಪರಿಚಿತತನಗಳ ಹೆಚ್ಚುವಿಕೆಯಂತಹ ಈ ಸಂದರ್ಭದಲ್ಲಿ. ಈ ಕಾಡಿದ್ದು ಸಾಮಾನ್ಯ . " ಬೆಂಗಳೂರಿಗೆ ಮೃತ್ಯುಂಜಯನ ತಂದೆ ತಾಯಿ ಬಂದು ಕಾಯುತ್ತಿರಬಹು"- ಇಡೀ ಕಥೆಯ ಜೀವಾಳವೇ ಇದು. ರಾಧ ಸಹಿತ ಅನ್ಯಾಯವಾಗಿ ಬಲವಂತದಿಂದ ಹಾಸಿಗೆ ಸೇರಿದವಳು
ಅವಳ ಬಸಿರಿಗೂ ಅವಳ ಪ್ರೀಯಕರ ಮೃತ್ಯುಂಜಯನಿಗೂ ಸಂಬಂಧವೇಯಿಲ್ಲ. ಆದರೆ ಸಾವಿಗೆ ?

ಇತಿಹಾಸ ಕಥೆಯೂ ಕೆಲವು ಮಿತಿಗಳನ್ನು ಹೊಂದಿದೆ. ಅದೇ "ಅಸ್ಪಷ್ಟತೆ "ಇದರ ಯಶಸ್ವಿತನವು ಸಹಿತ ಇದೆ ಇರಬಹುದು. ಇತಿಹಾಸವನ್ನು ಸಾಹಿತ್ಯ ಕಟ್ಟಿಕೊಡುವಾಗ ಒಂದೇ ಮುಖ ನೋಡುತ್ತದೆಯೇ ? ಸದಾಶಿವನಿಗೆ ಮದುಕನು ಹೇಳಿದ ಮಾತುಗಳು ಸತ್ಯವೇ ? ಗುರಪ್ಪ ಕೆಟ್ಟವನೇ, ಜನರ ದೌರ್ಬಲ್ಯ ಅರಿತವನೇ ? ಗುರುಪ್ಪನ ಹೆಂಡತಿ ಪೂರ್ವಿತಿಹಾಸವೇನು ?ದುರ್ಗ? - ಒಂದು ಪ್ರಶ್ನೆಯಾಗಿಯೇ ಉಳಿದು ಕಥೆ ಮುಗಿಯುತ್ತದೆ. ಪಟ್ಟಭದ್ರ ಹಿತಾಸಕ್ತಿಗಳೆ ಯಾವಾಗಲೂ  ಎಲ್ಲವನ್ನೂ  ಆಳೊದು. ಇತಿಹಾಸ ಸಹ. ಅರಮನೆಯಲ್ಲಿಯು ಜೈಲಿರುತ್ತದೆಯಂದು ಸದಾಶಿವ ಕಂಡಿದ್ದಿಲೆ.

ಭಾಗ-2 ಕಥೆಗಳು  ಎಷ್ಟೇ ಭಿನ್ನವಾಗಿದ್ದರೂ ಸಹ. ಒಂದರ್ಥದಲ್ಲಿ ಅವೆಲ್ಲ ಮಿಥ್ ಶೈಲಿಯವು. ಕಂಬಾರರ ಹುಲ್ಲು ಹೋಗಿ ಸೈನಿಕರಾಗುವಂತಹ ಪರಿಕಲ್ಪನೆಯವು.
ಮಾರುತಿಗೆ ಹೃದಯಗಳ ಮಂದಿರ ಕಟ್ಟುವುದಾಗಿರಬಹುದು ಅಥವಾ ಹಾರುವ ಮನುಷ್ಯರಾಗಿರಬಹುದು . ಒಂದು ಆಶಯವಂತೂ ಹೊಂದಿವೆ." ದಾರಿಯಲ್ಲಿ "- ಇದೊಂದು ಬೆರಗುಗೊಳಿಸುವ ಕಥೆಯಂತೇ ಹೇಳಬಹುದು ಏನೋ ಹೊಸತನವಿದೆ. ತಂತಿಗಳಿಲ್ಲದೂರು, ಜನರ ಬಾಯಿಗಳೇ ಸಂದೇಶ ರವಾನಿಗಳು. ಕುಡಿದು ಬಂದವನಿದ್ದರೆ ಮುಗಿಯಿತು ಸುದ್ಧಿಯೆ ಪಲ್ಟಿಯಾಗುತ್ತದೆ. ಆದರೂ ಟ್ಯಾಕ್ಸಿ ಡ್ರೈವರ್ ಮನುಷ್ಯನ ಬಾಯಿ ತಂತಿ ತಾರು ಉತ್ತಮವೇನುತ್ತಾನೆ.

ಕಣ್ಣೆದುರು ಚಿತ್ರವೊಂದು ಬಿಡಿಸಿಟ್ಟು ಮಾಯಾವಾಗುವ ಕಥೆಗಾರನನ್ನು "ದಾರಿಯಲ್ಲಿ" ಮತ್ತು  "ಒಂದು ಘಟನೆ" ಈ ಎರಡು ಕಥೆಗಳಲ್ಲಿಯು ಕಾಣಬಹುದು....
"ಅನುಭವವನ್ನು ಮೂರ್ತೀಕರಿಸುವಲ್ಲಿ ಅವರಿಗೆ ನಿಜವಾದ ಅಸ್ಥೆಯಿದೆ, ಆಸ್ಥೆಗೆ ತಕ್ಕಂತೆ ಹುಲುಸಾದ ಕಲ್ಪಕತೆಯಿದೆ"- ಶಾಂತಿನಾಥ ದೇಸಾಯಿವರ ಈ ಮಾತುಗಳು ನಿಜವೆನಿಸುತ್ತವೆ.ಕೊನೆಯ ನಾಲ್ಕು ಕಥೆಗಳೊದಿದ್ದಾಗ.....

ಕಪಿಲ ಪಿ. ಹುಮನಾಬಾದೆ.
17-03-2017

Wednesday 15 March 2017

ಅವಿಜ್ಞಾನಿ ಪದ್ಯ


ಕೋಲ ಮುರಿದ ಸದ್ದು

ಹೆಜ್ಜೆ ಸದ್ಧು ಕೇಳುವಾಗಲೆಲ್ಲ 
ನನ್ನ ಒಂಟಿತನ ವಯಸ್ಸಿಗೆ ಬರುತ್ತದೆ..
ಹಳೆಯ ಹಾಡಿಗೆ ಗೀರಿದ ಕಡ್ಡಿಯು 
ನೋವಿನ ನೆಂಟಸ್ತಿಕೆ ಬೆಳೆಸುತ್ತದೆ...
ಕಾಯುವಿಕೆಯು ಮಾಸವಾದರೆ ಅವಳೊಂದು ಶಿಲೆ ಆಗುತ್ತಾಳೆ..!!

ನನ್ನವಳೆಂದೇ ಮುದ್ರೆ ಒತ್ತುವಾಗ ಆಷಾಡಕ್ಕೆ ಕಲೆಯಾಗುತ್ತಾಳೆ...
ಬೆರಗು ಪದದ ಮುಖವನ್ನೊಮ್ಮೆ ಸುಮ್ಮನೇ ನೋಡಿ ಬಿಡುತ್ತೇನೆ....!!
ಇನ್ನೂ ಬೇಕೆಂಬ ಅಹವಾಲಿನ ಪಟ್ಟಿಯೊಂದು ಕಣ್ಣಿನಲ್ಲೇ ಮೆತ್ತಿ ಹೋಗುತ್ತಾಳೆ

ನವಿರು ಜಪಕೆ ಹೆಸರು ಆಗಲು ಕಾದಿರುವಂತೆ ಸೋಲಿಸುತ್ತಾಳೆ
ಬೇಡವೆಂದು ತೊದಲಿ ಹೋಗುವಾಗ ಹಗ್ಗ ಕಡಿದ ಹಲಿಗೆಯನ್ನು ಕೊಟ್ಟು ಹೋಗುತ್ತಾಳೆ ..!!

ಸೀಳಿ ಹೋದ ಅಲೆಯ ಮೇಲೆ ಕೆತ್ತಲಾದ ಹೆಸರಿಗೆ ಉಪ್ಪು ಮೆತ್ತಿದೆ..!!!
ಕಪ್ಪು ಒಡಲ ರಂಗವಲ್ಲಿ ಆಗತಾನೇ ರೆಕ್ಕೆ ಬಿಟ್ಟಿದೆ
ಹಳ್ಳದಂತೆ ಕೊಳವೆಯೊಂದರ ಹೆರಿಗೆಯಾಗಿದೆ.....

ತುಮುಲವೆಲ್ಲ ತೇಪೆ ಹಾಕುವಾಗ ವ್ಯಾಕುಲವೆಲ್ಲ ಮಾಸವಾಗುತ್ತದೆ
ಮೋಸ ಪಡೆದ ಕಪ್ಪು ಕಲ್ಲು ಹೊಡೆದು ನೂರು ಚೂರಾಗಿದೆ

ಹಣೆಯ ಬೊಟ್ಟು ದಟ್ಟವಾಗಲು ಹೆಣದ ನಾತ ಜೋರು ಬಡಿದಿದೆ
ಮಸಣ ಘಾಟು ಸುಗಂಧವಾಗಲು
ಬಿಳಿಯ ಬಟ್ಟೆಯು ಒಗೆತ ಕಂಡಿದೆ..!!

-ಅವಿಜ್ಞಾನಿ

Tuesday 14 March 2017

ಇಸ್ಮಾಯಿಲ್ ಚುಟುಕುಗಳು...


1.
ಕಾಶ್ಮೀರದ ಸೇಬುಗಳು ಹೆಚ್ಚು ಕೆಂಪಾರಲು ಬಹುಶಃ ದಿನವೂ ಅಲ್ಲಿ ಗುಂಡಿಗೆಗಳಿಂದ ಸಿಡಿಯುವ ರಕ್ತವೇ ಕಾರಣವಿರಬಹುದು!

2.
ಹಸಿರೆಲೆ ಡಿಜಿಟಲ್ಲಾಯ್ತು ,
ಭತ್ತದ ತೆನೆಗೆ ನೀರುಣಿಸುವ ಬೇರಿಗೂ ಕೇಬಲ್ಲಿನ ಲೇಪನ ,
ಹೊಟ್ಟೆಗಿಳಿಯುವ ಅನ್ನಕ್ಕೆ
ಕರೇನ್ಸಿ ಬೇಕಾಯ್ತು..!!
ಹಸಿವು ಮಾತ್ರ ಇನ್ನೂ
ತಿಪ್ಪೆಯಲ್ಲೆ ರಿಂಗಣಿಸುತ್ತಿದೆ!!

3.
ಅಯ್ಯೋ ದೇವ್ರೆ!
ಆ ಕರ್ರಗಿನ ಆಕಾಶದಲ್ಲಿ
ಕಾಣುತ್ತಿದ್ದದ್ದು
ಚುಕ್ಕಿ ಎಂದುಕೊಂಡಿದ್ದಾರೆ!

ಪಾಪ ಅವರಿಗೇನು ಗೊತ್ತು
ಅವು,
ನನ್ನವಳ ಜೊತೆ ಸೇರಿ
ನಾ ಬಿತ್ತಿದ ಕನಸ ಬೀಜಗಳೆಂದು!!!

# ಇಸ್ಮಾಯಿಲ್

Sunday 12 March 2017

ತೆರೆದ- ಮನ (ಪುಸ್ತಕಭಿಪ್ರಾಯ)

ಹೇಮಂತಗಾನ(ಕಾದಂಬರಿ)  - ವ್ಯಾಸರಾಯ ಬಲ್ಲಾಳ.

1954ರಲ್ಲಿ ಬಂದ ಬಲ್ಲಾಳರ ಹೇಮಂತಗಾನ ಈ ಹೊತ್ತಿಗೆ ಎಷ್ಟು ಪ್ರಸ್ತುತ  ? ಅಪ್ರಸ್ತುತ ? ಈ ದ್ವಂದ್ವವಿಟ್ಟುಕೊಂಡೆ ಬರೆಯುತ್ತೇನೆ . ಬಸವರಾಜ ಕಟ್ಟೀಮನಿಯವರ ಜ್ವಾಲಮುಖಿಯ ಮೇಲೆ, ಮಾಡಿ ಮಾಡಿದವರು ಓದಿದವರಿಗೆ  ಹೇಮಂತಗಾನ ಸ್ವಾತಂತ್ರ್ಯ ಹೋರಾಟದ ಇನ್ನೊಂದು ಮುಖದನಾವರಣ ಎನಿಸುತ್ತದೆ  ಇಲ್ಲಿ ಸ್ವಾತಂತ್ರ್ಯ ಬಂದನಂತರವು ಮುಂದುವರೆಯು ಕಥಾಹಂದರವಿದೆ.

ಜ್ವಾಲಮುಖಿಯ ಮೇಲೆಯಲ್ಲಿ ಕ್ರಾಂತಿ ಪತ್ರಿಕೆ ಪ್ರಕಟಿಸಲು ಒದ್ದಾಡುವ ಸಂಗಾತಿಗಳು ಇಲ್ಲಿ ಕಹಳೆ !...ಆದರ್ಶವನ್ನೆ ಮೈತುಂಬಿಕೊಂಡಿರುವ ಹುಡುಗ ಅನಂತ  ಉಡುಪಿಯಿಂದ ಮುಂಬೈಯಲ್ಲಿ ಬಂದು. ಯಾವುದೋ ಕಂಪನಿಯಲ್ಲಿ ದುಡಿಯುತ್ತಿದ್ದಾನೆ. ಆದರೆ ಆರ್ಥಿಕ ಸಮಾನತೆ, ರಾಜಕೀಯ ಸಮಾನತೆಗಾಗಿ ಹೋರಾಡುತ್ತಲೆಯಿದ್ದಾರೆ ಪತ್ರಿಕೆಯ ಮೂಲಕ ! ಅಲ್ಲೊಂದು  ಸಂಘಟನೆ ಕಟ್ಟಿ ಕೆಲಸ ಕಳೆದುಕೊಳ್ಳುತ್ತಾನೆ .ತೀರಾ ಆದರ್ಶಕ್ಕೆ ಜೊತು ಬಿದ್ದು ವೈಯಕ್ತಿಕ ಬದುಕು, ಕುಟುಂಬವನ್ನೆ ಮರೆಯುತ್ತಾನೆ . ರಾಜೀವ, ಸೊಮಾಯಾಜಿ , ಅನಂತ, ಕಹಳೆ ಪತ್ರಿಕೆ, ಭಾರತೀ, ಇಂದಿರೆ, ಪದ್ದು, ಶ್ರೀಪತಿರಾಯರು, ತಲಪಾಡಿಯವರು, ಉಡುಪರು, ಪಾರ್ವತಿ, ನಾಗೇಶ  ಒಂದೊಂದು ಪಾತ್ರವೂ ಸಹ ಕಾಡುತ್ತವೆ.

ನಾಳೆ ಎಂಬುದು ನಮ್ಮಗೆ ಪ್ರಶ್ನೆಯೇ.-ಅನಂತನ ಈ ಮಾತು ಇಡೀ ವವ್ಯವಸ್ಥೆಯ ಮೇಲೆ ವಾಕರಿಕೆ ಹುಟ್ಟಿಸುತ್ತದೆ. ಕೇಶವ ಹೇಳಿದ್ದು ನಿಜವಿರಬಹುದು ಗಾಂಧಿ ಹೃದಯಗಳನ್ನು ಕಟ್ಟುತ್ತಿದ್ದಾರೆ ಆದರೆ ಇಗ ಪ್ರಯೋಜನವಿಲ್ಲ. ಕ್ರಾಂತಿಯಾಗಬೇಕು !... ಅನಂತನ  ಹೆಂಡತಿ ಭಾರತೀ ಸ್ತ್ರೀಸಹಜ ಯೋಚನೆಗಳು ಹೊಂದಿರುವ ಮತ್ತು  ಅದೇ ರೀತಿಯ ಬದುಕು ಬಯಸುತ್ತಿದ್ದಾಳೆ. ಇಂದಿರೆ ?-ಹೋರಾಟದ ಕೆಚ್ಚಿಗೆ ಉತ್ಸವ ಮೂರ್ತಿಯಾಗಿದ್ದಾಳೆ. ಶ್ರೀಪತಿರಾಯರು ಹೋರಾಟದ ಆದರ್ಶ ಬದುಕು ಮತ್ತು ವೈಯಕ್ತಿಕ ಬದುಕು ಎರಡನ್ನೂ ತಣ್ಣಗೆ ಅವಲೋಕಿಸುತ್ತಲೆ ಅನಂತ ಮತ್ತು ಭಾರತೀಗೆ ಜೀವ ತುಂಬುತಿದ್ದಾರೆ.

ಹರಿದ ಚಪ್ಪಲಿಗೆ ಮೊಳೆ ಹೊಡೆಸಲು ಹಣವಿಲ್ಲ, ಮನೆಗೆ ಹೋಗಲು ಬಸ್ಸಿಗೆ ಹಣವಿಲ್ಲ, ಇರಾಣಿ ಅಂಗಡಿಯಲ್ಲಿ ಒಂದು ಲೋಟ ಕಾಫಿಗೂ ಹಣವಿಲ್ಲ, ಮನೆಯ ಬಾಡಿಗೆ, ಹಾಲಿನವಿನಿಗೆ ಹಣ, ಅಕ್ಕಿ ಬ್ಯಾಳಿ ? -ಅನಂತ ಸಮಾಜದ ವ್ಯವಸ್ಥೆಯನ್ನೆ ಬದಲಾಯಿಸುತ್ತೆನೆಂದು ಹೋರಟಲ್ಲಿ ಸಣ್ಣ ದೀವಟಿಗೆ ಹಚ್ಚುವ ಕೆಲಸ ತೀವ್ರವಾಗಿ ಪ್ರಾಮಾಣಿಕವಾಗಿ ಮಾಡ್ತಿದ್ದಾನೆ.

" ಅಣ್ಣ ಮುಂಬೈಯಲ್ಲಷ್ಟೆ ಅಲ್ಲ ಉಡುಪಿಯಲ್ಲಿಯು ಬಡವರಿದ್ದಾರೆಂದು" ತಂಗಿ ಪಾರ್ವತಿ ಪತ್ರ ಬರೆದ್ದಾಗ. ತೀರಾ ಕುಸಿಯುತ್ತಾನೆ. ಉತ್ತಮ ಬದುಕಿಗಾಗಿ  ಇಂದು ನಡೆಯುತ್ತಿರುವ ಸಾರ್ವತ್ರಿಕ ಹೋರಾಟವನ್ನೇ ಇನ್ನೊಂದು ರೀತಿಯಲ್ಲಿ ಮಾಡುತ್ತಿದ್ದ ತನ್ನ ಸಂಸಾರದ ಚಿತ್ರ ಕಣ್ಣಮುಂದೆ ಬಂತು.

"ಸಮಗ್ರ ಜಗತ್ತೇ ಅದೇ ರೀತಿ.  ಒಂದು ವ್ಯವಸ್ಥಿತ ಜೀವನಕ್ರಮಕ್ಕೆ ಬದಲಾವಣೆಯಂಬುದೇ ಇಲ್ಲ" - ಅನಂತನ ಈ ಮಾತುಗಳು ಅವನಿಗೆ ವೈಯಕ್ತಿಕ ಬದುಕು ಕುಟುಂಬಕ್ಕಿಂತಲೂ ಹೋರ ಜಗತ್ತು  ಎಷ್ಟು ಮುಖ್ಯವೆಂದು ತೋರಿಸುತ್ತದೆ ಆದರೆ ಅದೇ ಶ್ರೀಪತಿರಾಯರು " ಅನಂತ  ಒಂದು ಜನಾಂಗದ ವ್ಯವಸ್ಥೆಯೆ ಬದಲಾಯಿಸಲು ಹೋರಟವನಿಗೆ, ನನ್ನ ಮಗುವಿಗೆ ನೋವು ಕಾಡಬಾರದು ನೋಡು".
ಕೊನೆಗೂ ಅನಂತ  ಇಂದಿರೆಯ ಕೊನೆ ಭೇಟಿಗೆ ಹೋರಾಟಗ ರೈಲಿನ ದುರಂತದಲ್ಲಿ ಸಾಯುತ್ತಾನೆ....

ವೈಯಕ್ತಿಕ ಬದುಕು,  ಆದರ್ಶಗಳು ಅದಕ್ಕೆ ಸುತ್ತಲಿನ ಮನುಷ್ಯರು ಸ್ಪಂದಿಸುವ ರೀತಿ  , ಬಡವರು, ಆಸ್ಪತ್ರೆ, ಹೇಳಹೆಸರಿಲ್ಲದ ರೋಗಗಳು......

ತನ್ನೊಳಗೆಳೆಂದು ಕೊಂಡು ಓದಿಸಿಕೊಳ್ಳುವ ದುರಂತ ಗಾನವೇ ಹೇಮಂತಗಾನ !!.....

# ಕಪಿಲ ಪಿ ಹುಮನಾಬಾದೆ
13/03/2017.