Thursday 7 May 2020

ಮುದಿರಾಜ್ ಬಾಣದ್ ಅವರ ಬಿಡಿ ಚಿತ್ರಗಳ ಕಥನ ಚಾನ್ನೆ - ಕಪಿಲ ಪಿ ಹುಮನಾಬಾದೆ

ಚಾನ್ನೆ ( ಕಥಾಸಂಕಲನ)- ಮುದಿರಾಜ್ ಬಾಣದ್.

ನಮ್ಮ ಉತ್ತರ ಕರ್ನಾಟಕದ, ನಮ್ಮ ವಾರಿಗೆಯ ಹೊಸಬರ ಕಥಾಸಂಕಲನ ಇದು. ಹಲವು ಕಾರಣಕ್ಕೆ ಈ ಕಥೆಗಳು ಓದಿಸಿಕೊಂಡು ಹೋಗಿವೆ. ಸುಮಾರು 12 ಕಥೆಗಳಿರುವ ಈ ಸಂಕಲನ ತುಸು ಭಿನ್ನವಾಗಿದೆ. ಇಲ್ಲಿ ಯಾವ ಕಥೆಯೂ ಪುಟಗಳ ದೃಷ್ಟಿಯಿಂದ ದೀರ್ಘವಾಗಿಲ್ಲ. ತುಂಡು ತುಂಡು ಘಟನೆಗಳ ಬಣ್ಣ ಬಳಿದಿಟ್ಟ ಹಾಳೆಗಳು ಓದುಗನೆದುರು ಚದುರಿ ಬಿದ್ದಿವೆ, ನಾವೇ ಇಲ್ಲಿ ಈ ತುಂಡುಗಳು ಜೋಡಿಸಿಕೊಂಡು ನಮಗೆ ಬೇಕಾದ, ಆ ಸಮಯದಲ್ಲಿ ಸರಿಯೇನಿಸುವ ಚಿತ್ರ ಹೊಂದಿಸಿಕೊಂಡು ಕಥೆ ಪೂರ್ಣಮಾಡಿಕೊಳ್ಳಬೇಕು. ಇಲ್ಲಿ ಯಾವ ಕಥೆಗೂ ತುದಿಯೆಂಬುವುದಿಲ್ಲ. 

" ಬರೆದರೆ ಮಾತ್ರ ಹಗುರವಾಗುತ್ತೇನೆಂದು ಪ್ರಾಮಾಣಿಕವಾಗಿ ಬರೆದ ನನ್ನದೆ ನಿಜ ಜೀವನದ ಅಷ್ಟೂ ಇಲ್ಲಿನ ಕತೆಗಳಾಗಿ ಹೊರಹೊಮ್ಮಿವೆ" - ಎಂದು ಹೇಳಿಕೊಂಡಿರುವ ಮುದಿರಾಜ್ ಅವರ ಈ ಮಾತುಗಳು ಅವರ ಕಥೆಗಳು ಓದಿದಾಗ ನಿಜವೆನಿಸುತ್ತವೆ.  ಜೇಜಮ್ಮ ಕಥೆಯೊಂದು ಚೂರು ಬಿಟ್ಟರೆ ಇಲ್ಲಿ ಬರುವ ಬಹುತೇಕ ಕಥೆಗಳು ಮನುಷ್ಯನೊಬ್ಬನ ಅತ್ಯಂತ ನಿಕಟವಾದ ಕೌಟುಂಬಿಕ ಅನುಭವಗಳಂತೆ ಮೇಲುನೋಟಕ್ಕೆ ಕಾಣಿಸಿದರೂ, ಅದಲ್ಲದ ಯಾವುದೋ ಹೊಸ ಅನುಭವಗಳು ಬಿಚ್ಚಿಡುವ ಈ ಕಥೆಗಳು ರೂಪಕಗಳ ಮೂಲಕವೇ ಹಲವು ಸಂಗತಿಗಳು ಮೌನವಾಗಿಯೇ ಹೇಳುತ್ತವೆ.


ಸಿಂಹರಾಶಿ ಕಥೆಯಲ್ಲಿ ಬರುವ ಕೆಲವು ಸಾಲುಗಳಿವು -
"ಮತ್ತೆ ಅವನ ಮನಸ್ಸು ಎತ್ತಲೋ ಹರಿದರೂ ಸಹ ಅದು ಇವಳನ್ನು ದಾಟಿ ಹೋಗಲೊಲ್ಲದು. ಮನೆ ತುಂಬಾ ಕಸದ ರಾಶಿ. ಎಲ್ಲೆಂದರಲ್ಲಿ ಸಾಮಾನುಗಳು, ಹ್ಯಾಂಗರಿಗೆ ನೇಣುಹಾಕಿಕೊಂಡ ಶವಗಳಂತೆ ನೇತುಬಿದ್ದ ಶರ್ಟು ಪ್ಯಾಂಟುಗಳು, ಒಂದು ವಿಚಿತ್ರ ಮನಸ್ಥಿತಿಯಲ್ಲಿ ಓಡಾಡುವ ಇವಳು" - ಈ ಸಾಲುಗಳಂತೆ ಹಲವು ದಟ್ಟ ವಿವರಗಳು ನಮ್ಮೆದುರು ಬಿಡಿ ಚಿತ್ರಗಳ ಮೂಲಕ ಕಥೆಗಾರರು ಕೊಡುತ್ತಾರೆ.

ಇಲ್ಲಿ ಯಾವ ಕಥೆಯೂ ನೇರವಾಗಿ ಓದುಗನಿಗೆ ಹೇಳುವಂತಹವುಗಳಲ್ಲ. ಸಂಕೇತಗಳ ಮೂಲಕ ಧ್ವನಿಸುವ ಕಥೆಗಳಿವು.  

ಮೂಗುದಾಣದಲ್ಲಿ ಬರುವ ಮಕ್ಕಳ ಕಳ್ಳರು, ಸಿಂಹರಾಶಿ ಕಥೆಯಲ್ಲಿ ಬಸ್ಸೇರಿ ನಿಂತಿರುವ ಅಪರಿಚಿತ ಹುಡುಗರ ಮಾತುಗಳು, ಹೊತ್ತು ಮುಳುಗುವ ಮುನ್ನ ಆವರಿಸಿದ ಕತ್ತಲಲ್ಲಿ  ಬರುವ ಸೀಳು ನಾಯಿಗಳು, ಜೂಜು ಕಥೆಯಲ್ಲಿ ಬರುವ ಜಾಲಿ ಮರದ ಹಾದಿಯಲ್ಲಿ ಕಳೆದು ಹೋದ ಹುಂಜ, ಚಾನ್ನೆ ಕಥೆಯ ಬಾಯಿ ಬಾಯಿ ಬಡಿದುಕೊಳ್ಳುವ ಖಾಯಿಲೆ, ಜೇಜಮ್ಮನ ಮಾತುಗಾರಿಕೆ, ಕಟ್ಟಿರುವೆ ಕಥೆಯಲ್ಲಿ ಕಪ್ಪನೆಯ ಇರುವೆಗಳು ಮಗುವಿಗೆ ಗಾಯಗೊಳಿಸಿದ ಗುರುತು, ಕೈಚೀಲ ಕಥೆಯ ಭವಿಷ್ಯದ, ಭೂತದ ಸಂಗತಿಗಳ ಫೋಟೋಗಳು, ಹೇನು ಕಥೆಯಲ್ಲಿ ಅವಳ ಕೂದಲಿಂದ ಬುಳುಬುಳು ಬಿದ್ದ ಹೇನುಗಳು, ಅಂಬಿಕಾ ಕಥೆಯಲ್ಲಿ ಅಕ್ಕನ ಮಗಳು - ಹೀಗೆ ಈ ಎಲ್ಲಾ ಕಥೆಗಳಲ್ಲಿಯೂ ಒಂದು ರೂಪಕ ಅಥವಾ ಸಂಕೇತಗಳ ಮೂಲಕ ಭ್ರಮೆಗಳು ಓದುಗನೆದುರು ಕೆಡವಿಟ್ಟು ವಾಸ್ತವ ಹೇಳುವ ಮೂಲಕ ಕಥೆಗಳು ಭಿನ್ನವಾಗಿ ನಿಲ್ಲುತ್ತವೆ.

ಎಲ್ಲಾ ಕಥೆಗಳೂ ಒಂದೊಂದಾಗಿ ವಿವರಿಸಲು ಸಾಧ್ಯವಿಲ್ಲ. ಇವುಗಳೆಲ್ಲ ನಾಜೂಕಾಗಿ ಹೆಣೆದ ಬಲೆಯಂತೆ, ಕೌದಿಯಂತೆ ಕಾಣುತ್ತವೆ ಬಿಡಿಸಿ ನೋಡಿದಷ್ಟು ಅರ್ಥ ಜಾರುವ ಅಥವಾ ಈ ಕಥೆಗಳೆಲ್ಲ ಟ್ರೈನೊಂದುರ ಒಂದೊಂದು ಬೋಗಿಯಂತೆ ನನಗೆ ಕಾಣುತ್ತವೆ.

ಒಲ್ಲದ ಹೆಂಡತಿ, ಮುದ್ದಿನ ಮಕ್ಕಳು, ಬೇಸತ್ತು ನಿಂತಿರುವ ಗಂಡ, ಜೂಜಿನ ಅಪ್ಪ, ಮಗು ಮಲಗಿದ ರಾತ್ರಿ ಕೂಡುವ ಅವರ ಮಧ್ಯೆ ಕಟ್ಟಿರುವೆಗಳ ದಾಳಿ ಇವೆಲ್ಲ ಭಿನ್ನವಾಗಿ ಯೋಚಿಸುಂತೆ ಮಾಡುವ ಅವೇ ಪಾತ್ರಗಳ ಮರು ಬಂದು ನಿಂತು ಹೊಸ ಕಥೆ ಹೇಳಿದಂತೆ ಕಾಣುತ್ತವೆ.

ಮೊದಲ ಓದಿಗೆ ದಕ್ಕಿದ್ದಿಷ್ಟು. ಹಲವು ಮಗ್ಗಲುಗಳಲ್ಲಿ ಈ ಕಥೆಗಳು ನೋಡಬಹುದು. ಉದಾಹರಣೆಗೆ ಚಾನ್ನೆ ಕಥೆಯಲ್ಲಿಯೇ ಬರುವ ೫ ಭಾಗಗಳಲ್ಲಿಯೂ ಒಬ್ಬ ವ್ಯಕ್ತಿಯ ಬದುಕು ಹಿಂದಕ್ಕೂ ಮುಂದಕ್ಕೂ ಚಲಿಸಿ ವಾಸ್ತವಕ್ಕೆಸೆಯುತ್ತದೆ. ಶೇವಿಂಗ್ ಮಾಡಿಸುತ್ತಾ ಕೂತವ ಗೆಳೆಯನ ನೆನಪಿಗೆ ಜಿಗಿಯುತ್ತಾನೆ ಅಲ್ಲಿಂದ ಏಸುವಿನ ಪ್ರಾರ್ಥನೆ, ಅಪ್ಪನ ನೆನಪು, ಒಂಟಿತನದ ಬಯಕೆ, ಗಾಯಮಾಡಿಕೊಂಡ ಮಗಳು ಚಾನ್ನೆ, -"ಸುಮಾರು ವರ್ಷಗಳಿಂದ ಗಟ್ಟಿಯಾಗಿ ಅಲುಗಾಡದೆ ಇದ್ದ ಕಲ್ಲುಬಂಡೆಯಂತೆ" ಎನ್ನುವ ಹಾಲಿನೊಂದಿಗೆ ಈ ಕಥೆ ಮುಗಿಯುತ್ತದೆ. ಒಂದೇ ದಿಕ್ಕಿನಲ್ಲಿ ಇಲ್ಲಿನ ಕಥೆಗಳು ವಿವರಿಸಿಬಿಡುವುದು ಕಷ್ಟ.

ಒಂದೊಳ್ಳೆ ವಿಭಿನ್ನ ಪ್ರಯತ್ನದ ಮೂಲಕ, ಪ್ರಾಮಾಣಿಕ ಬರಹದ ಕಥೆಗಳ ಮೂಲಕ ಹಳೆ ಗಾಯಗಳಿಗೆ, ಮುಂದಿನ ಕನಸುಗಳಿಗೆ ಹೊಸ ಹಾಡು ಬರೆಯುತ್ತಿರುವಂತೆ ಇಲ್ಲಿನ ಕಥೆಗಳು ಕಾಣುತ್ತವೆ. ಒಂದು ಚೌಕಟ್ಟು ತಯಾರಿಸಿಟ್ಟುಕೊಂಡು ತಮಗೆ ಬೇಕಾದ ಕಥೆಗಳು ಅದರೊಳಗಿಟ್ಟು ಹೇಳುವ ಮುದಿರಾಜ್ ಬಾಣದ್ ಅವರು ಮುಂದೆ ಇನ್ನಷ್ಟು ಹೊಸ ಪ್ರಯೋಗಗಳ ಮೂಲಕ ಇದೇ ರೀತಿ ಭಿನ್ನ ನಿರೂಪಣೆ, ಚೌಕಟ್ಟಿನ ಕಥೆಗಳು ನೀಡಲಿ.

* ಚಾನ್ನೆ ಪದದ ಅರ್ಥ- ಬೆಳದಿಂಗಳು.

# ಕಪಿಲ ಪಿ ಹುಮನಾಬಾದೆ.
7/05/2020

Thursday 16 April 2020

ಚಾರ್ಲಿ ಚಾಪ್ಲಿನ್ ( ಕುಂ.ವೀ) ಪುಸ್ತಕ ಪರಿಚಯ - ಕಪಿಲ ಹುಮನಾಬಾದೆ

*ಜಗತ್ತು ಕಂಡ ಶ್ರೇಷ್ಠ ನಟ ಚಾರ್ಲಿ ಚಾಪ್ಲಿನ್ ಅವರ 131ನೇ ಜನ್ಮದಿನವಿಂದು*. ಚಾರ್ಲಿ ಚಾಪ್ಲಿನ್ (16/04/1889-25/12/1977).

ಚಾಪ್ಲಿನ್ (ಜೀವನ ಮತ್ತು ಸಾಧನೆ)
- ಕುಂ . ವೀರಭದ್ರಪ್ಪ.

ಮೇಜಿನ ಮೇಲೆ ಈ ತಿಂಗಳು ಓದಲೆಂದು ಕೂಡಿಟ್ಟ ಪುಸ್ತಕಗಳೆಲ್ಲ ನನ್ನಾಕಳಿಕೆಗೆ ನಿದ್ದೆ ಹೊಡೆಯುತ್ತಿದ್ದವು. ಏಳೆಂಟು ಪುಸ್ತಕಗಳು ಓದೋಣವೆಂದು ಪ್ರಯತ್ನಿಸಿದರೂ ಆಗಲಿಲ್ಲ. ಒಂದೆರೆಡು ಪುಟಗಳೊದುವುದರಲ್ಲಿಯೇ ಪುಟ ಮಡಚಿಟ್ಟು ಇವೆಲ್ಲ ಇಂಟರೆಸ್ಟ್ ಹುಟ್ಟಿಸದ ಪುಸ್ತಕಗಳೆಂದು ಸುಮ್ಮನೆ ಚಾಪ್ಲಿನ್ ಓದುತ್ತಾ ಕೂತೆ. ಒಂದೇ ಉಸಿರಿಗೆ ನನ್ನೊಳಗೊಬ್ಬ ಚಾಪ್ಲಿನ್ ಪ್ರವೇಶಿಸಿದ.

ಲಂಡನಿನ ಯಾವುದೋ ಕೊಳಚೆಯಲ್ಲಿ, ಬಡ ಕುಟುಂಬದಲ್ಲಿ ಹುಟ್ಟಿದ ಚಾಪ್ಲಿನ್ ಮುಂದೊಂದು ದಿನ ಇಡೀ ಜಗತ್ತಿನಲ್ಲಿಯೇ ಹೆಚ್ಚು ವೆಚ್ಚವುಳ್ಳ ದ್ವೀಪವೊಂದಕ್ಕೆ ಹೋಗಿ ಇದ್ದು ಬರುತ್ತಾನೆ. ಚಾಪ್ಲಿನನ ಬದುಕೆ ಒಂದು ವಂಡರಫುಲ್ ಜಗತ್ತು. ಅಪ್ಪನ ಪ್ರೀತಿಯಿಲ್ಲದ, ದಿನವೂ ಊಟದ ಕನಸು ಕಾಣುತ್ತಲೆ ಮಲಗುವ ಚಾರ್ಲಸ್ ಸ್ಪೆನ್ಸರ್ ಚಾಪ್ಲಿನ್ ಮುಂದೊಂದು ದಿನ ಶ್ರೇಷ್ಠ ನಟನಾಗಬಹುದೆಂದು ಅವನು ಓಡಾಡಿದ ಬೀದಿಗಳು ಸಹ ಊಹಿಸಿರಲಿಕ್ಕಿಲ್ಲ.

ನೋವು, ಹಸಿವು , ಅವನವ್ವಳಿಂದ ಬಂದ ರಂಗಭೂಮಿ ನಂಟು ಇವುಗಳೆಲ್ಲ ಚಾಪ್ಲಿನನ್ನು ರೂಪಿಸಿದವು. ತೇಜಸ್ವಿಯಂತಹ ಕ್ರೀಯಾಶೀಲ ಮನುಷ್ಯರನ್ನು ನೋಡಿದಾಗ ನಾವೆಲ್ಲ ಎಷ್ಟು ನಿರುಪಯುಕ್ತವಾಗಿ ಕಾಲ ಹರಣ ಮಾಡುತ್ತಿದ್ದೆವಲ್ಲ ಎನಿಸುತ್ತದೆ. ಚಾಪ್ಲಿನ್ ಸಹ ಹಾಗೇ ಸದಾ ಏನಾದರೊಂದು ಮಾಡುತ್ತಿರುವ ಕಿತಾಪತಿಯ ಮನುಷ್ಯ.

ಕುಂವೀಯವರ ಅದ್ಭುತ ಬರವಣಿಗೆ ಶೈಲಿ ಚಾಪ್ಲಿನನ್ನು ಇಲ್ಲೆಲ್ಲೋ ನಮ್ಮೆದುರೆ ಬೆಳೆಯುತ್ತಿರುವ, ಬೆಳೆದ ಮನುಷ್ಯನೊಬ್ಬನಂತೆ ಪರಿಚಯಿಸುತ್ತದೆ. ಚಾಪ್ಲಿನ್ ನಿರ್ಮಿಸಿದ ಚಿತ್ರಗಳ ಹಿಂದಿನ ಪ್ರೇರಕತೆಯೇ ಅವನ ಬದುಕು. ಅವನು ಈ  ಬದುಕನ್ನು ನೋಡುವ ರೀತಿ, ಇವುಗಳೆಲ್ಲ ನಮಗೆ ಆಶ್ಚರ್ಯ ಮತ್ತು ಮೆಚ್ಚುಗೆಗಳು ಸೂಚಿಸುತ್ತದೆ. ಚಾಪ್ಲಿನ್ ಒಮ್ಮಿಂದೊಮ್ಮೆಲೆ ಬೆಳೆದು ನಿಂತವನಲ್ಲ. ಅವನು ಪಟ್ಟ ಕಷ್ಟಗಳು, ಎದುರಿಸಿದ ಸವಾಲುಗಳು ದೊಡ್ಡವು ಅವುಗಳೆ ಅವನನ್ನು ಇನ್ನೂ ಎತ್ತರಕ್ಕೆ ಬೆಳಸಿದವು.

ಕುಂವೀಯವರ ಈ ಪುಸ್ತಕ ಅದ್ಬುತ ಕಾದಂಬರಿಯೊಂದು ಓದಿದಂತಹ ಅನುಭವ ನೀಡುತ್ತದೆ.  " ತಮ್ಮ ಕಷ್ಟಸುಖಗಳಿಗೆಂದೂ ಆಗದೆ ಪರಕೀಯರಂತೆ ಉಳಿದು ಬಿಡುವ ಜನರ ಅಭಿಪ್ರಾಯದ ಕಡೆ ಕಿವಿ ಚಾಚಬಾರದೆಂದು "  ಚಾಪ್ಲಿನ್ ತಾಯಿ ತನ್ನ ಮಗನಿಗೆ ಬಾಲ್ಯದಲ್ಲಿಯೇ ಬುದ್ದಿ ಹೇಳುತ್ತಾಳೆ. ಸ್ಕೂಲ್ ತಪ್ಪಿಸಿಕೊಂಡು ಹಸಿದ ಹೊಟ್ಟೆಯಲ್ಲಿ ಗೊಂಬೆ, ಬಲೂನುಗಳು ಮಾರುತ್ತ ಚಾಪ್ಲಿನ್ ಬಾಲ್ಯವನ್ನು ಕಳೆದ.

ಮಗುತನ ಮತ್ತು ತನ್ನನ್ನು ತಾನೇ ಲೇವಡಿ ಮಾಡಿಕೊಳ್ಳುವ ಗುಣದಿಂದ ಚಾಪ್ಲಿನ್ ಎತ್ತರಕ್ಕೆ ಬೆಳೆದ. ಮಕ್ಕಳು ಮತ್ತು ನಾಯಿಗಳಿಂತ ಅದ್ಭುತ ನಟರಿಲ್ಲವೆಂದು ಅವ ಹೇಳುತ್ತಿದ್ದ. ನಿರಕುಂಶಾಧಿಕಾರವನ್ನು ವಿರೋಧಿಸಿದ. ಒಬ್ಬ ಕಲಾವಿದನಾಗಿ ರಾಜಕೀಯ ಅಂಶಗಳಿಗೆ ಸ್ಪಂದಿಸುತ್ತಿದ್ದ. ಐನಸ್ಟೈನ್ ಸೇರಿದಂತೆ, ಕವಿಗಳು, ಸಾಹಿತಗಳ ಜೊತೆ ಗಾಢಸಂಪರ್ಕವನ್ನು ಚಾಪ್ಲಿನ್ ಹೊಂದಿದ್ದ. ಪುಸ್ತಕದಲ್ಲಿ ಇಡೀ ಚಾಪ್ಲಿನಿನ ಕಥೆಯೇ ಇದೆ...

ಒಂದು ಸಣ್ಣ ಕಲ್ಪನೆಯ ಮೇಲೆ ಅವ ಬಿಡಿಸುತ್ತ ಹೋಗುವ ಚಿತ್ರಕಥೆಗಳು, ಹಾಸ್ಯದ ಮೂಲಕವೇ ಗಂಭೀರವಾದದ್ದನನ್ನು ತಾನು ಹೇಳಬೇಕೆಂದುಕೊಂಡಿರುವುದನ್ನು ಹೇಳುವ ಅದ್ಭುತ ಶಕ್ತಿ ಅವನೊಳಗಿತ್ತು. 

ಚಾಪ್ಲಿನ್ ಹಲವು ಕಾರಣಕ್ಕೆ ನನಗ ಅಳಸಿದ, ನನ್ನ ಕುರಿತು ನಾನೇ ಅಸಹ್ಯಪಟ್ಟುಕೊಳ್ಳುವಂತೆ ಮಾಡಿದ, ಅನಾಥವಾಗಿ ಬೀದಿಯಲ್ಲಿ ನಡೆಯುವವನಿಗೆ ಕೈಹಿಡಿದ. ಅವನೊಳಗಿನ ಸೃಜನಶೀಲತೆಯ ಚಿತ್ತಾರ ಸೆಳೆದು ಕಾಡಿಸುತ್ತಿದೆ. ನಮ್ಮ ಮುಂದೆ ನಗುವ, ನಗಿಸುವ ಚಾಪ್ಲಿನ್ ಕಣ್ಣೀರಿನ ಸಮುದ್ರವನ್ನೇ ಬೆನ್ನಿಗೆ ಕಟ್ಟಿಕೊಂಡಿದ್ದಾನೆ. ಚಾಪ್ಲಿನ್ ನಮಗೂ ಸ್ಪೂರ್ತಿಯಾಗುತ್ತಾನೆ. ಇಷ್ಟೆಲ್ಲ ಅವಕಾಶಗಳಿದ್ದು ನಮ್ಮೊಳಗಿನ ನಿರುತ್ಸಾಹಕ್ಕೆ ಕನ್ನಡಿ ಹಿಡಿದು ಮಾತಾಡಿಸುತ್ತಾನೆ...

# ಕಪಿಲ ಪಿ. ಹುಮನಾಬಾದೆ.
6-2-2019

Wednesday 15 April 2020

ಬಿದಿರು( ಸಣ್ಣಕಥೆ) - ಕಪಿಲ ಪಿ ಹುಮನಾಬಾದೆ.

                  ಬಿದಿರು

ಪೋರ್ಟಿಕೊದ ಆರಾಮ ಚೇರಲ್ಲಿ ಬೆನ್ನು ಒತ್ತಿ ಕೂತ ಗಂಗಾಧರನ ಕೈಯಿಂದ ಪುಸ್ತಕವೊಂದು ಟಪ್ ಎಂದು ನೆಲದ ಮೇಲೆ ಬಿದ್ದಾಗಲೇ ಎಚ್ಚರವಾಯ್ತು. ಪುಸ್ತಕದ ರಟ್ಟಿನ ತುದಿ ಛಿದ್ರವಾಗಿದ್ದಕ್ಕೆ ಬೇಸರದಿಂದಲೆ ಅದನ್ನೆತ್ತಿ ತೊಡೆಮೇಲೆ ಇಟ್ಟುಕೊಂಡು, ಮನೆ ಮುಂದಿನ ಗಾರ್ಡನಿನಲ್ಲಿ ಬೆಳೆದು ನಿಂತ ದಟ್ಟ ಬಿದಿರು ನೋಡುತ್ತ ಕೂತ. ಅವ ದಿಟ್ಟಿಸುತ್ತ ಹೋದಂತೆ ಅವನ ಕಣ್ಣೆದುರೆ ರಭಸವಾಗಿ ಬಿದಿರು ಬೆಳೆಯುತ್ತಿದ್ದವು. ಇಲ್ಲಿ ಮನೆ ಕಟ್ಟಿ ಐದಾರು ವರ್ಷವಾಗಿರಬಹದು ಆವಾಗಿನಿಂದ ಇವು ಬೆಳೆಯುವುದು ನಿಲ್ಲಿಸಿಲ್ಲ. ಅವುಗಳ ಗುಂಪು ಎಂದಿಗಿಂತ ಇವತ್ತು ಅವನನ್ನು ತುಸು ಜೋರಾಗಿಯೇ ಸೆಳೆಯುತ್ತಿತ್ತು. ಉದ್ದವಾದ ಬೊಂಬುಗಳಂತೆ ಎದ್ದುನಿಂತಿರುವ ಹಸಿರು ಬಿದುರಿನ ಗಿಡಗಳು ಕೈಬೀಸಿ ಕರೆಯುತ್ತಿದ್ದವು. ಅವುಗಳ ಮೇಲೆ ಕುಂತು ಚಿಂವ್ ಚಿಂವ್ ಮಾಡುತ್ತಿರುವ ಪುಟ್ಟ ಗುಬ್ಬಿಗಳು, ಗಾಢಹಸಿರಿನ ಗಿಳಿಗಳು ಕಣ್ಣು ಅತ್ತಿತ್ತ ತಿರುಗಿಸುತ್ತ ಏನೋ ಹುಡುಕುತಿದ್ದವು. 
ಗಂಗಾಧರನ ಹತ್ತು ವರ್ಷದ ಮಗಳು ಜೀನವನ್ಮುಖಿ  ಯೇ ಅಪ್ಪ ನೀ ಇಲ್ಲಿ ಕುಂತಿದಿಯಾ?! ನಿನಗೆ ಮನೆ ತುಂಬಾ ಹುಡುಕದೆ, ಚಹಾ ತಗೋ ಎಂದು ಹೇಳಿದಾಗಲೆ ಅವನು ಬಿದುರು ಗಿಡಗಳಿಂದ ಹೊರಬಂದ.
ಮಗಳ ಅಕ್ಕಿಯಂತಹ ಹಲ್ಲುಗಳು, ಎಳಿ ಕೈಕಾಲುಗಳು, ಅವಳು ಉಟ್ಟಿದ್ದ ಪುಟ್ಟ ಲಂಗ, ಅವಳ ಕೂದಲಿಗೆ ಕಚ್ಚಿಕೊಂಡ ಪಿನ್ನು, ಹಣೆ ಮೇಲೆ ಜಾರಿ ಬೀಳುತಿದೆಯೇನೋ ಅನ್ನುವಂತಹ ನೀರಿನ ಸಣ್ಣ ಚುಕ್ಕಿಯಂತಹ ಸ್ಟಿಕರ್ ಹಚ್ಚಿಕೊಂಡು ಚಹಾ ಕೈಯಲ್ಲಿ ಹಿಡಿದುಕೊಂಡು ನಿಂತಿದಳು. 
ಅಪ್ಪ ಕೈಸುಡಲತದ ಫಸ್ಟ್ ಚಹಾ ತೊಗೊರೋ ಎಂದಾಗಲೇ ಅವಳನ್ನು ದಿಟ್ಟಿಸುವುದು ಬಿಟ್ಟ. ಮನೆಯಲ್ಲಿ ಈಗ ಒಂದು ವಾರವೇ ಆಯ್ತು ಇವನು ಬದಲಾಗಿ. ನಡುರಾತ್ರಿವರೆಗೂ ಸಿಗರೇಟ್ ಸುಡುತ್ತ ಕಣ್ಣು ತೆರೆದು ರಾತ್ರಿ ನೋಡುತ್ತಿದ್ದ. ಹಗಲು ಅವನಿಗೆ ನುಂಗುತಿರುವಂತೆ ಅನಿಸುತ್ತಿತ್ತು. ಹೆಂಡತಿ ಪಕ್ಕದಲ್ಲಿ ಮಲಗುವುದನ್ನು ಬಿಟ್ಟಿದ್ದ. ಅವಳು ಎಷ್ಟೇ ಬೈದರೂ, ಏನೇ ಕೇಳಿದರು ನನಗೆ ಏನು ಸಂಬಂಧವೇ ಇಲ್ಲವೆಂಬಂತೆ ಇರುತ್ತಿದ್ದ. ತಾನಾಯ್ತು ತನ್ನ ಪುಸ್ತಕಗಳಾಯ್ತು ಇಷ್ಟೇ ಅವನ ಬದುಕು ಆಗಿತ್ತು.
ಮನೆಗೆ ಬಂದವರೆದುರು ಗಂಗಧಾರನ ಹೆಂಡತಿ ಹೇಳುವುದು ಒಂದೇ ಮಾತು  ನಿನ್ನೆ ಮೊನ್ನೆವರೆಗೂ ಎಲ್ಲಾ ಆರಾಮ ಇದ್ರು, ಯಾವಾಗ ಅವರ ಊರಿಗಿ ಹೋಗಿ ಬಂದ್ರೊ ಆವಾಗಿನಿಂದ ಹಿಂಗ ಆಗ್ಯಾರ ಅಂತ ಹೇಳುತ್ತಿದ್ದಳು.
 ಡಿಗ್ರಿ ಕಾಲೇಜೊಂದರಲ್ಲಿ ಲೈಬ್ರರಿಯನ್ ಆಗಿರುವ ಗಂಗಧಾರನಿಗೆ, ಪುರುಸೊತ್ತು ಎಂಬುವ ಪದದ ಅರ್ಥವೇ ಗೊತ್ತಿಲ್ಲದಂತಿರುವ ಮನುಷ್ಯ ಒಮ್ಮಿಂದೊಮ್ಮೆಲೆ ಹೀಗೆ ಮುದುಡಿ ಹೋಗಿರುವ ಅವನ ಬಗ್ಗೆ ಹೆಂಡತಿಗಂತೂ ಹೇಳಲಾಗದ ಏನೇನೋ ಯೋಚನೆಗಳು ಕುಕ್ಕುತಿದ್ದವು.
ಪೋರ್ಟಿಕೊದಲ್ಲಿ ಒಂದೊಂದು ಸಲ ಕಾಲೇಜಿಗೆ ಹೋಗದೆ ಪುಸ್ತಕ ಓದುತ್ತ ಕುಂತು ಬಿಡುತ್ತಿದ್ದ. ಅವ ಒಂದು ತಿಂಗಳಿಂದ ಒಂದೇ ಪುಸ್ತಕ ತಿರುಗಿ ತಿರುಗಿ ಓದುತ್ತಿದ್ದ. ಆ ಪುಸ್ತಕ ಯಾಕೆ ಅವ ಅಷ್ಟು ಸಾರಿ ಓದುತ್ತಿದ್ದಾನೋ ಯಾರಿಗೂ ಗೊತ್ತಾಗಲಿಲ್ಲ. ಮನೆಮುಂದಿನ ಬಿದಿರುಗಳ ಬುಡದಲ್ಲಿ ಹೋಗಿ ನಿಂತು ಒಂದು ಪ್ಯಾಕ್ ಫುಲ್ ಸಿಗರೇಟ್ ಸೇದಿ ಬರುತ್ತಿದ್ದ.
ಕೂತಲ್ಲಿಂದ ಎದ್ದವನೆ ಎಂದಿನಂತೆ ಬಿದಿರುಗಳ ಗುಂಪಿನತ್ತ ನಡೆದ. ಅಲ್ಲೊಂದು ಹಸಿರು ಬಟ್ಟೆಯ ಚಿಂದಿ ಅವುಗಳಿಗೆ ಜೋತು ಬಿದ್ದಿತ್ತು. ಅದನ್ನು ಎಷ್ಟು ನಾಜೂಕಾಗಿ ಎಳೆದರು ಪರ್ ಅಂತ ಹರಿದೆ ಹೊಯ್ತು. ಅದರ ಕೆಳಗೆ ಕುಂತವನೆ ಗಳಗಳನೆ ಅತ್ತ. ಯಾರೂ ನೋಡಿಲ್ಲವೆಂದು ತುಸು ಖಾತ್ರಿ ಪಡಿಸಿಕೊಂಡು ಎದ್ದು ನಿಂತ. ಅವನ ಅಳುವಿಗೆ ಯಾವ ಕಾರಣವಿರಬಹುದೆಂದು ಅವನೊಬ್ಬನಿಗೆ ಮಾತ್ರ ಗೊತ್ತಿತ್ತು.
ಒಂದುವಾರದ ಹಿಂದೆ ಇವನ ಆತ್ಮೀಯ ಬಾಲ್ಯದ ಗೆಳೆಯ ದಿನೇಶ್ ಪೋನ್ ಮಾಡಿದ್ದ ಲೇ ಫ್ರೀ ಇದಿಯೇನೊ, ಒಂದ ಅರ್ಜಂಟ್ ಮಾತ ಹೇಳದದ. ನೀ ಗಾಭರಿ ಆಗಬ್ಯಾಡ, ಸಮಾಧಾನನಿಂತ ಕೇಳು 'ನಿಮ್ಮ ಮನಿ ಬಾಜುದ ಮೀನಾ ಸತ್ತಾಳ ಲೇ, ವಿಷ ತಗೊಂಡ ಎಂದ. ಆ ಕಡೆಯಿಂದ ಧ್ವನಿ ಬರುತ್ತಿದ್ದರೂ ಇವ ಏನನ್ನೂ ಮಾತಾಡದೆ ಪೋನ್ ಕೆಳಗಿಳಿಸಿ ಜೇಬಲ್ಲಿ ಇಟ್ಟುಕೊಂಡ. ಕಾರ್ ಸ್ಟಾರ್ಟ ಮಾಡಿ ಊರಿನ ದಾರಿ ಹಿಡಿದ. ಅಳು ಒಳಗಿನಿಂದ ಚೆಲ್ಲುತಿತ್ತು. ಹೇಗೊ ಸಂಭಾಳಿಸಿಕೊಂಡು ಕಾರು ಓಡಿಸುತ್ತಿದ್ದ. ಹೊರಗಡೆಗೆ ಕಾರಿನ ಗ್ಲಾಸಿನ ಮೇಲೆ ಬೀಳುತ್ತಿದ್ದ ಮಳೆ ನೀರು ರ್ಯಾಪರ್ ಒರೆಸುತ್ತಿತ್ತು. ಇವ ಬೆವರಿನಿಂದ ತೊಯ್ದು ಹೋಗಿದ್ದ. ದಿನೇಶ್ ಪೋನಿನಲ್ಲಿ ಹೇಳಿರುವ ಮೀನಾ ಇವನ ಆತ್ಮೀಯ ಹೈಸ್ಕೂಲ್ ಗೆಳತಿ. ಅವಳು ದೊಡ್ಡವಳಾದ ಮೇಲಿನಿಂದ ಇವನಿಗೆ ಅವಳ ಮೇಲೆ ವಿಶೇಷ ಆಸಕ್ತಿ.  ಅವಳು ಮದುವೆ ಆಗಿ ಹೋಗುವವರೆಗೂ ಅವಳೊಂದಿಗೆ ಎಲ್ಲಾ ರೀತಿಯ ಸಂಪರ್ಕಗಳು ಹೊಂದಿದ್ದ. ಅವರಿಬ್ಬರೂ ಹೊಲದ ಬಣಮಿಗಳ ಮರೆಯಲ್ಲಿ ಎಷ್ಟೋ ಸಲ ಕೂಡಿದ್ದರು. ಅದೆಲ್ಲ ಗಂಗಾಧರನಿಗೆ ಮೊದಮೊದಲ ಪುಳಕಗಳು. ಇವ ಎಲ್ಲಾ ಹುಡುಗರಂತೆ ಸಿಟಿ ಸೇರಿಕೊಂಡು ಓದಿಗಿಳಿದ. ಅವಳ ಮದುವೆ ಆಗಿ ಹೋದಳು. ಇದಾದ ಮೇಲೆ ಅವರಿಬ್ಬರಿಗೂ ಸಂಪರ್ಕವೆ ಇಲ್ಲ. ಅವ ಆಗಾಗ ಹಳೆ ನೆನಪುಗಳಲ್ಲಿ ಮರುಗುತ್ತಿದ್ದನಾದರೂ ಬೆಳೆದಂತೆ ಬದಲಾಗುತ್ತ ನಡೆದ. 
ಕುಡುಕ ಗಂಡನ ದೆಸೆಯಿಂದ ಮೀನಾ ವಿಷ ಕುಡಿದಿದ್ದಳು. ಹೆಣ ಗೋಡೆಗೊರಗಿಸಿ ಕೂಡಿಸಿದ್ದರು. ಇವ ಒಮ್ಮಿಂದೊಮ್ಮೆಲೆ ಹೀಗೆ ಪ್ರತ್ಯಕ್ಷವಾಗಿರುವುದಕ್ಕೆ ಊರಲ್ಲಿ ಯಾರು ಖುಷಿಪಡಲಿಲ್ಲ. ಅವರಿಬ್ಬರ ಮಧ್ಯೆ ಇದ್ದ ಹಳೆ ಸಂಬಂಧಗಳು ಸಹ ಅಲ್ಲಿ ಯಾರಿಗೂ ಗೊತ್ತಿರಲಿಲ್ಲ. ಅವನ ಗೆಳೆಯ ದಿನೇಶನಿಗೆ ಬಿಟ್ಟು. 
'ಇದೇನೆ ಯವ್ವಾ ಅಪೆಸಿ ಬಂದು ಅಂಗಳಾಗ ನಿಂತದ ಅಲಾ' ಎಂದು ಜನ ಮಾತಾಡಿಕೊಂಡರು.
ಮೀನಾಳ ಮುಖಕ್ಕೆ ಬಿಳಿ ಬಟ್ಟೆ ಸುತ್ತಿದ್ದರು. ಆಗತಾನೆ ಮೈತೊಳೆದು ಕೂಡಿಸಿರಬಹುದು ಕೆಂಪು ಸೀರೆ ಉಡಿಸಿದ್ದರು. ಅವಳ ಮುಂದೆ ಅವಳವ್ವ ಜೋರಾಗಿ ಅತ್ತು ಅತ್ತು ಸುಸ್ತಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಅವಳ ಅಪ್ಪ ಅಂಗಳದಲ್ಲೆ ಬೀಡಿ ಸೇದುತ್ತ ಕಣ್ಣು ತುಂಬಾ ನೀರು ತುಂಬಿಕೊಂಡಿದ್ದ. ಅವಳ ಜೀವವಿಲ್ಲದ ಮುಖ ನೋಡಿದ ಗಂಗಾಧರನಿಗೆ ವಾಕರಿಗೆ ಬಂದ ಹಾಗಾಯ್ತು. ಈ ತುಟಿಗಳಲ್ಲವೆ ನಾ ಧೀರ್ಘವಾಗಿ ಮುತ್ತಿಟ್ಟದ್ದು. ಕಪ್ಪು ಬಿದ್ದ ಈ ಕೆನ್ನೆಗಳ ಮೇಲೆ ಅಲ್ಲವೆ ನಾ ಮಲಗಿ ಮುದ್ದಾಡಿದು. ಅವಳ ಸೆಟದು ನಿಂತಿರುವ ಒಣ ಕಟ್ಟಿಗಿಯಂತಹ ಕೈಗಳೆ ಅಲ್ಲವೆ ನನ್ನ ಕೂದಲು ಸುರುಳಿ ಸುತ್ತಿ ಆಟವಾಡಿದ್ದು. ಗಂಗಾಧರ ಯೋಚಿಸುತ್ತ ಹೋದಂತೆ ಒಳಗೊಳಗೆ ಪುಡಿಪುಡಿಯಾಗುತ್ತ ಕುಸಿಯುತಿದ್ದ. ಅವಳ ಹೆಣ ಎತ್ತಲು ಮಾಡಿದ ಬಿದಿರು ಕುರ್ಚಿ ಅವನನ್ನು ಕರೆಯುತಿರುವಂತೆ ಭಾಸವಾಗುತ್ತಿತ್ತು. ಅದಕ್ಕೆ ನಯವಾಗಿ ಜೋಡಿಸಿದ ಸಣ್ಣ ಬಿದರಿನ ತುಂಡುಗಳ ಸಿಬಿರು ಅವನ ಮೈಯಲ್ಲ ಚುಚ್ಚುತ್ತಿದ್ದವು. ಅದರ ಸುತ್ತ ನಿಂತ ಯುವಕರು ಅದನ್ನು ಸಪ್ಪೆ ಮುಖ ಮಾಡಿಕೊಂಡು ನೋಡುತ್ತಿದ್ದರು. ಅವಳ ಹೆಣ ನೋಡಿದವನಿಗೆ ಇಷ್ಟು ದಿನ ಎಲ್ಲಿದ್ದವೋ ಏನೋ ಆ ಕಣ್ಣೀರುಗಳು, ಗಳಗಳನೆ ಅತ್ತ. ಊರ ಮಂದಿ ದಂಗು ಆಗಿ ಹೋದರು.
ಗಂಗಾಧರ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟಿದ್ದ.  ಅವನನ್ನು ಎತ್ತಿ ಅಂಗಳದಲ್ಲಿ ಕೂಡಿಸಿ ಮೂಗಿನಲ್ಲಿ ಬೀಡಿಯ ಖಾಟ್ ನೀಡುತ್ತಿದ್ದರು. ಪಾದಗಳು ಜೋರಾಗಿ ಉಜ್ಜಿದರು. ಬೇಹೊಸ್ ಬಿದ್ದಿದ್ದ ಗಂಗಾಧರ ಮಿಸುಕಾಡುವಂತೆ ಕಾಣಲಿಲ್ಲ. ಅವನ ಸುತ್ತ ನೆರದಿದ್ದ ಮಂದಿಗೆಲ್ಲ ಸರಿಸಿ ಗಾಳಿಗೆ ಜಾಗ ಬಿಟ್ಟರು. ಗಂಗಾಧರ ಮೆಲ್ಲಗೆ ಎಚ್ಚರಗೊಂಡು ಮೂಲೆಯಲ್ಲಿ ಕೂತ. ಅಂಗಳದ ತುಂಬಾ ಕಣ್ಣಾಡಿಸಿದ ದಿನೇಶನ ಸುಳಿವೆ ಕಾಣಲಿಲ್ಲ. ಒಂದಿಬ್ಬರೂ ಮುದುಕಿಯರು ಹೆಣದ ಮುಂದೆ ಕುಂತು ಕಥೆ ಹೇಳಿ ಹಾಡಿ ಹಾಡಿ ಅಳುತ್ತಿದ್ದರು. 
ಹೋದ ವರ್ಷವೆ ಇರಬಹುದು. ಗಂಗಾಧರನ ಅಪ್ಪ ಹಾರ್ಟ್ ಅಟ್ಯಾಕ್ ಆಗಿ ಸತ್ತಾಗ. ಊರಿಂದ ಬಂದಿದ್ದ ಗಂಗಾಧರ ಒಂದು ಹನಿ ಕಣ್ಣೀರು ಸಹ ಹಾಕಿರಲಿಲ್ಲ. ಇವನ ಅಕ್ಕ ಕೊಳ್ಳಿಗೆ ಬಿದ್ದು ಅಳುವಾಗ  ಯಾವ ಪ್ರತಿಕ್ರೀಯೆ ತೋರಿಸದೆ ಅವಳಿಗೆ ತುಸು ಸಮಾಧಾನ ಮಾಡಿ. ಸುಮ್ಮನೆ ಕಲ್ಲು ಕಂಬದಂತೆ ನಿಂತಿದ್ದ. 
ಅವನಪ್ಪನ ಹೆಣ ಎತ್ತಲು ತಂದ ಬಿದಿರು ಕುರ್ಚಿ ನೋಡಿ ಒಳಗೊಳಗೆ ಎಷ್ಟು ಚಂದ ಹೆಣೆದಿದ್ದಾರೆ ಎಂದುಕೊಂಡು ಅದು ತಂದವರಿಗೆ ಒಂದಿಷ್ಟು ಹೆಚ್ಚಿಗೆ ದುಡ್ಡು ಕೊಟ್ಟು ಕಳಿಸಿದ. ಅವನ ಜೊತೆ ಬಂದಿದ್ದ ಗೆಳೆಯರಿಗೆ ಅದರ ವಿಶೇಷತೆಗಳೆಲ್ಲ ವಿವರಿಸಿ ಹೇಳುತ್ತಿದ್ದ. ಇವನ ಜೊತೆ ಬಂದವರೆ ಇವನ ಮಾತುಗಳಿಂದ ತಪ್ಪಿಸಿಕೊಳ್ಳಲು ತಲೆ ತಗ್ಗಿಸಿ ನಿಂತಿದ್ದರು. ಒಂದಿಬ್ಬರೂ ಬೀಡಿ ಸೇದುತ್ತ ನಿಂತ ಮುದುಕರು, ಆ ಕುಚರ್ಿಯ ವಿಶೇಷತೆಗಳಲ್ಲಿ ಇಲ್ಲದ್ದು ಇದ್ದಿದ್ದು ಎಲ್ಲಾ ಸೇರಿಸಿ ಗಂಗಾಧರನೆದುರು ಕೊರೆಯುತ್ತಿದ್ದರು. ಇವ ಏನೋ ಅದ್ಭುತವಾದದ್ದು ಕೇಳಿಸಿಕೊಳ್ಳುತ್ತಿರುವಂತೆ, ಅವರನ್ನು ದೇವಧೂತರಂತೆ ನೋಡುತ್ತಿದ್ದ.
ಆವತ್ತು ಊರಿನ ಹಳೆ ಮುದುಕಿಯೊಂದು ಯಾರದೋ ಕಿವಿಯಲ್ಲಿ ಮೆಲ್ಲಗೆ ಊಸುರುತ್ತಿದ್ದಳು  ಇವ ನಮ್ಮ ಗಂಗ್ಯಾ ಮೊದಲಿಂದ ಹಿಂಗೆ ಅದ ಪಾರ, ತನ್ನ ಜೀವ ಛೋಲೋ ಇದ್ರ ಸಾಕ ಅಂತದ, ಅವರ ಮುತ್ಯಾ ಸತ್ತಾಗ ಒಂದು ಗೆಣ ಇತ್ತ ನೋಡ ಪಾರ, ಅವರ ಮುತ್ಯಾಂದ ಹೆಣ ಅಂಗಳಾಗ ಹೊರಸಿನ ಮ್ಯಾಲ ಮಲಗಿಸಿರು, ಈ ಗಂಗ್ಯಾ ಏನ ಜಿದ್ದಿಗಿ ಬಿತ್ತು ಅಂತಿ, ಆವತ್ತ ನನಗ ಅನ್ನ ಬೇಕಂದರ ಬೇಕು ಅಂತ ಅಂಗಳದಾಗ ನೆಲ ತಿಕ್ಕಾಡಿ ಅಳಲತಿತು ನೋಡ. ಆವತ್ತು ಅಲ್ಲಿ ಇದ್ದ ನಾನೇ ಹೇಳದೆ  ಇವತ್ತ ಕುಣ್ಯಾಗ ಒಯ್ದು ಇಡೋ ಹೆಣದ ಸಲ್ಯಾಕ ಎಳಿ ಪಾರಂದ ಹೊಟ್ಟಿ ಯಾಕ ಸುಡತರಿ ಅನ್ನ ಮಾಡ ಹಾಕರಿ ಅಂದೆ.  ಈ ಪಾರ ಆಗ ಅವರ ಮುತ್ಯಾನ ಹೆಣದ ಕಾಲಬಲ್ಲೆ ಕುಂತ ಉಣ್ಣುತು ನೋಡ. ಊರ ಮಂದಿ ಎಲ್ಲಾ  ಆ ಪರಮಾತ್ಮ ಆಡಸದಂಗ ಅದ ಅಂತ ಹೇಳಿ ಸುಮ್ಮನಾದರು.
'ಈಗ ಇಷ್ಟು ದೊಡ್ಡ ಕೋಣ ಆಗ್ಯಾದ ಸ್ವಂತ ಅಪ್ಪನ ಹೆಣದ ಮುಂದ ನಾಕ ಹನಿ ಅಳಬಾರದ' ಅಂತ ಅಜ್ಜಿ ಮಾತಾಡಿಕೊಂಡಿತು.
ಅವರಪ್ಪನ ಮಣ್ಣು ಆದಮೇಲೆ ಮರುದಿನ ದಿನೇಶ್ ಕೇಳದ  ಯಾಕಲೇ ನಿನೌವನ ನಿಮ್ಮಪ್ಪನೆದುರು ನಾಲ್ಕ ಹನಿ ಅಳಲಿಲ್ಲ ಅಲ್ಲೊ?
'ಯಾಕೋ ಏನೋ ಅಳುನೆ ಬರಲಿಲ್ಲ ಎಂದ ಗಂಗಾಧರ.
ಅಪ್ಪನ ಮುಂದೆ ಅಳಲಾರದವ ಇವತ್ತು ಮೀನಾ ಹೆಣದ ಮುಂದ ಅತ್ತಾನ ಅಂದರ ಏನದ ಇದರ ಒಳಗಿಂದ ಮಾತು ಎಂದು ತಿಳಿದುಕೊಳ್ಳಬೇಕೆನ್ನುವ ಕೆಟ್ಟ ಕುತೂಹಲ ದಿನೇಶನಿಗೆ ಸೇರಿದಂತೆ ಊರಿನವರಿಗೂ ಇತ್ತು. ಮೀನಾ ಮಣ್ಣು ಮಾಡಿದ ಮರುದಿನವೇ ದಿನೇಶ ಹೆಗಲಿಗೊಂದು ಬ್ಯಾಗ್ ಎರಿಸಿಕೊಂಡು ಸಿಟಿಗೆ ಹೋಗಿ ಗಂಗಾಧರನ ಮನೆ ಹಾದಿ ಹಿಡಿದ.
ಪೋರ್ಟಿಕೊದಲ್ಲಿ ಕಣ್ಣು ಮುಚ್ಚಿ ಕೂತಿದ್ದ ಗಂಗಾಧರ ಇವ ಬರುವುದು ಅವನಿಗೆ ಮೊದಲೆ ಗೊತ್ತಿದೆ ಏನೋ ಎಂಬಂತೆ ಪಕ್ಕದಲ್ಲಿ ಚೇರ್ ಕೊಟ್ಟು  ನೋಡೊ ದಿನೇಶ ನನ್ನಪ್ಪ ಸತ್ತಾಗ ಯಾಕ ಅಳಬೇಕು ಅನ್ನಸಲಿಲ್ಲವೋ ನನಗೆ ಈಗಲೂ ಗೊತ್ತಿಲ್ಲ. ಅವನ ಜೊತೆ ನೆನಪು ಭಾಳ ಇದಾವೆ ಆದರೆ ಯಾವು ಕೂಡ ಕಣ್ಣೀರು ಬರಸಲಿಲ್ಲ. ನೀ ನಮ್ಮಪ್ಪನ ಹೆಣ ನೋಡಿದ್ದಿ? ಅವನೌನ ಹೆಂಗ ಮಲಗಿದ್ದ ಹುಲಿ, ಅದೆ ಖಡಕ್ ಮುಖ ಇತ್ತು. ಹೆಂಗ ಅಳಬೇಕೊ ಅದರ ಎದುರು ?
ಮೀನಾ ಸುದ್ಧಿ ತಗೋ, ನನ್ನ ಮೈಮೇಲಿನ ಪ್ರತಿ ಕೂದಲಿಗೂ ಅವಳ ವಾಸನೆ ಗೊತ್ತದ, ಅವಳ ಮುಖ ನೋಡಿದಿ ಹೆಂಗ ಕಪ್ಪು ಆಗಿತ್ತು. ಆ ಮುಖಕ್ಕೆ ಅಲ್ವಾ ನಾ ಮುತ್ತಿಟ್ಟದ್ದು ಎಂದು ಬಿಕ್ಕಿ ಬಿಕ್ಕಿ ಅಳಲು ಫ್ರಾರಂಭಿಸಿದ.
ಅವರಿಬ್ಬರೂ ಮಾತಾಡುತ್ತ ಕೂತವರು, ಬಿದಿರಿನ ಗುಂಪು ಗಿಡಗಳತ್ತ ನಡೆದರು. ತನ್ನ ಬದುಕಿನ ಅಂತ್ಯವೆಲ್ಲ ಅವುಗಳ ಬುಡದಲ್ಲಿಯೇ ಇರುವಂತೆ ದಿನೇಶನಿಗೆ ಗಂಗಾಧರ ಅದರ ಮೈಮಾಟಗಳೆಲ್ಲ ವರ್ಣಿಸುತ್ತಿದ್ದ. ಚೂಪಾದ ಬಿದಿರೊಂದು ಹೊಟ್ಟೆಯಲ್ಲಿ ಯಾರೋ ತಿವಿಯುತಿರುವಂತೆ ಆಗಿ ರಾತ್ರಿಯಲ್ಲ ಕಣ್ಣಿಗೆ ನಿದ್ದೆಯೇ ಇಲ್ಲವೆಂದು ದಿನೇಶನಿಗೆ ಹೇಳಿ, ಬಿಕ್ಕುತ್ತ ಮಗುವಂತೆ ಅತ್ತ...


Saturday 4 April 2020

ರಾಗಿಮುದ್ದೆ ಪ್ರಬಂಧಗಳು - ಪುಸ್ತಕ ಓದು ಕಪಿಲ ಪಿ. ಹುಮನಾಬಾದೆ.

ರಾಗಿಮುದ್ದೆ ( ಪ್ರಬಂಧ ಸಂಕಲನ)- ರಘುನಾಥ ಚ.ಹ

ರಾಗಿಮುದ್ದೆ ಪ್ರಬಂಧ ಸಂಕಲನ ಮತ್ತು ನೆನಪುಗಳು!

ಮೊನ್ನೆ ಕಲಬುರ್ಗಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಹಳೆ ಪುಸ್ತಕಗಳೆಲ್ಲ ಗುಡ್ಡೆ ಹಾಕಿಕೊಂಡು ಕೂತವನ ಅಂಗಡಿಯಲ್ಲಿ ಹಲವು ಅಪರೂಪದ ಪುಸ್ತಕಗಳು ಸಿಕ್ಕವು. ಅಲ್ಲಿ ಕಣ್ಣಿಗೆ ಬಿದ್ದ ರಘುನಾಥ ಚ.ಹ ಅವರ ರಾಗಿಮುದ್ದೆ ಪ್ರಬಂಧ ಸಂಕಲನ ತಟ್ಟನೆ ತೆಗೆದುಕೊಂಡೆ. ಇದಕ್ಕೆ ಕಾರಣ, ನಾ ಪಿಯುಸಿ ಫಸ್ಟ್ ಇಯರ್ ಇದ್ದಾಗ, ಸೀಕುಬಾಕು ಎಂದರೇನು ? ಲಕ್ಷ್ಮಣಯ್ಯ ತಮ್ಮ ಪತ್ನಿಯ ಬಳಿ ಹೇಳಿಕೊಂಡಿದ್ದ ಕೊನೆಯ ಆಸೆ ಏನು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಬಾಯಿಪಾಠು ಮಾಡಿ ಸಾಕಾಗಿ ಹೋಗುತ್ತಿತ್ತು. ಸುಡು ಸುಡು ರೊಟ್ಟಿ ತಿಂದು ಗೊತ್ತಿದ್ದ ನಮಗೆ ಒಟ್ಟಾರೆ, ಎಂದಿಗೂ ನೋಡಿರದ ಈ ರಾಗಿ ಮುದ್ದೆ ಒಂದು ಅದ್ಭುತ ಕಲ್ಪನೆಯೆ ಆಗಿತ್ತು. ಪ್ರಬಂಧದಲ್ಲಿ ಜರ್ಮನಿಯಲ್ಲಿ ವಿಶ್ವಕಪ್ ಫುಟ್ಬಾಲ್ ಸಮಯದಲ್ಲಿ " ತುಟಿಬಣ್ಣ ಕೆಡದಂತೆ ಚಮಚೆಯಲ್ಲಿ ತಿನ್ನುವ ಚೆಲುವೆಯರು." ಇದೊಂದೆ ಸಾಲು ಆ ಸಮಯದಲ್ಲಿ ನಮಗೆ ಸರಿಯಾಗಿ ನೆನಪಿರುತ್ತಿತ್ತು.
- ಪುಸ್ತಕ ಕೈಗೆ ಸಿಕ್ಕಿದ ತಕ್ಷಣ ಇಲ್ಲಿರುವ ೧೨ ಪ್ರಬಂಧಗಳಲ್ಲಿ ರಾಗಿಮುದ್ದೆ ಪ್ರಬಂಧ ಬಿಟ್ಟು ಉಳಿದವು ಓದಿದೆ. ಕೊನೆಗೆ ರಾಗಿಮುದ್ದೆ ಓದಿದೆ. ಎಷ್ಟೊಂದು ಹಳೆ ನೆನಪುಗಳು ಕಣ್ಣು ಮುಂದೆ ಬಂದು ಹೋದವು. ಒಂದು ಟೈಮಲ್ಲಿ  ಈ ಪ್ರಬಂಧ ಪರೀಕ್ಷೆ ದೃಷ್ಟಿಯಿಂದ ಓದಿ ವಿಪರೀತ ಕಿರಿಕಿರಿ ಅನುಭವಿಸುತ್ತದ್ದ ನಾನು, ಈಗ ಓದುತ್ತಿದ್ದರೆ ಬೇರೆಯದೆ ಲೋಕ ಕಟ್ಟಿಕೊಡುತ್ತಿವೆ.

ಇಲ್ಲಿನ ಎಲ್ಲಾ ಪ್ರಬಂಧಗಳು ನನಗೆ ನೇರವಾಗಿಯೇ ಮನಸಿಗೆ ನಾಟಿ, ಚಿಗುರೊಡೆಯುತ್ತಿವೆ. ಇಲ್ಲಿರುವ ಹಲವು ಪ್ರಬಂಧಗಳು ಹಳ್ಳಿಗಳಲ್ಲಿ ಬಾಲ್ಯ ಕಳೆದ ಯಾವ ವ್ಯಕ್ತಿ ಸಹ ಕನೆಕ್ಟ್ ಮಾಡಿಕೊಳ್ಳಲು ಸಾಧ್ಯವಿದೆ. ನನ್ನೂರಿನ ಮಳೆ, ತಗಡಿನ ಸಂದಿಯಲ್ಲಿ ಗೂಡು ಕಟ್ಟಿದ ಗುಬ್ಬಿ, ಕಾಲೇಜಿನಲ್ಲಿ ಇಷ್ಟವಾದ ಹುಡುಗಿ, ಮುಂಜಾನೆ ಕೈಯಲ್ಲಿ ಚೆಂಬು ಹಿಡ್ಕೊಂಡು ಬಯಲಿಗೆ ಹೋಗಿ ಕೂತು ಗೆಳೆಯರೆಲ್ಲ ಹರಟೆ ಹೊಡೆಯುತ್ತಾ ಕುಳಿತುಕೊಳ್ಳುತಿದ್ದದ್ದು, ನಮ್ಮೂರಿನಾಚೆಯ ಜಾತ್ರೆ ಅಲ್ಲಿನ ನೆನಪುಗಳು ಎಲ್ಲವೂ ಕಣ್ಮುಂದೆ ಬಂದು ಹೋದವು.

ಈ ಪ್ರಬಂಧಗಳಲ್ಲಿ ಕಟ್ಟಿಕೊಟ್ಟಿರುವ ನಗರದ ತಣ್ಣನೆಯ ನರಳಾಟದ ಚಿತ್ರಗಳು ಸಹ ಎಲ್ಲಿಯೋ ನೋಡಿರುವುದೆ ಆಗಿದೆ. ಓದಿನ, ಉದ್ಯೋಗದ ಕಾರಣಕ್ಕೆ ನಗರಕ್ಕೆ ಬಂದು ಇಲ್ಲಿ ಮೈಹೊಂದಿಸಿಕೊಂಡಿದ್ದೆವೆ. ಆದರೆ ನಮ್ಮೆಲ್ಲರ ಮನಸ್ಸು ನಾವು ಬೆಳೆದು ಬಂದ ಹಳ್ಳಿಗಳಲ್ಲಿಯೇ ಇದೆ. ಎರಡರ ಮಧ್ಯೆ ತೀವ್ರವಾಗಿ ಒದ್ದಾಡುತ್ತಿದ್ದೆವೆ. ರಾಗಿಮುದ್ದೆ ಪ್ರಬಂಧಗಳು ಓದುವಾಗ ನನ್ನ ಸುತ್ತಲಿನ ಚಿತ್ರಣಗಳಿಗೆ ಎಷ್ಟೊಂದು ಅರ್ಥಗಳಿವೆ. ಇಲ್ಲಿನ ಸಂಗತಿಗಳು ಎಷ್ಟು ವಿಸ್ತಾರವಾಗಿ ಚಾಚಿಕೊಂಡಿವೆ ಅನಿಸಿತು.

ರಾಗಿಮುದ್ದೆ ಅಷ್ಟಾಗಿ ನಮಗೆ ಪರಿಚಯವಿಲ್ಲ. ಆದರೂ ಈ ಪ್ರಬಂಧ ಓದುವಾಗ ರಾಗಿಮುದ್ದೆಯ ಮಹತ್ವ. ಅದು ಹೇಗೆ  ಶ್ರಮಿಕರ ಮಹತ್ವದ ಆಹಾರ, ಒಂದು ನಾಡಿನ ಪ್ರತೀಕ ಎಂಬುವುದು ಕಣ್ಮುಂದೆ ಬರುತ್ತದೆ.  " ಆಹಾರ ಮನುಷ್ಯಕುಲದ ಕೇಂದ್ರ ಚಟುವಟಿಕೆ ಹಾಗೂ ಸಂಸ್ಕೃತಿಯ ಬಹುಮುಖ್ಯ ಲಕ್ಷಣಗಳಲ್ಲೊಂದು" ಎಂಬ ಸಾಲು ಓದುವಾಗ ನಮ್ಮ ಕಡೆ ಮುಂಜಾನೆ ಎದ್ದ ರೈತನಿಂದ ಹಿಡಿದು, ಎಲ್ಲರಿಗೂ ಜೋಳದ ರೊಟ್ಟಿ ಬೇಕೆ ಬೇಕು ಎನ್ನುವಷ್ಟು ಹಾಸುಹೊಕ್ಕಾಗಿರುವುದು ನೆನಪಿಗೆ ಬಂತು.

ನಾಯಿ ನೆರಳು ಒಂದು ಅದ್ಭುತ ಪ್ರಬಂಧ. ಬಾಲ್ಯದಲ್ಲಿ ನಾಯಿ ಸಾಕಲು ಮಾಡಿದ ಸಾಹಸಗಳು, ಅದರ ಬೆಳವಣಿಗೆ, ದುರಂತ ಅಂತ್ಯ. ಎಲ್ಲವೂ ಸಹಜವಾಗಿ ನಿನ್ನೆ ಮೊನ್ನೆ ನಮ್ಮೊಂದಿಗೆ ಆಡುತ್ತಿದ್ದ ನಾಯಿಯ ಕಥೆಯೇನೊ ಎನ್ನುವಂತೆ ಬರೆದಿದ್ದಾರೆ. 

" ನಾಯಿಗೂ ಮಗುವಿಗೂ ಏನಾದರೂ ವ್ಯತ್ಯಾಸವುಂಟಾ ಎನ್ನುವ ಯೋಚನೆ ಬಂದದ್ದು ಇದೇ ಕಾಲದಲ್ಲಿ. ನಾಯಿಯನ್ನು ಮುದ್ದಿಸಿಬಹುದು, ಮಗುವನ್ನೂ ಮುದ್ದಿಸಬಹುದು. ಎರಡನ್ನೂ ದಂಡಿಸಬಹುದು" ಹೀಗೆ ಮುಂದುವರೆಯುವ ಈ ಹೋಲಿಕೆಯ ಸಾಲುಗಳು ನಾಯಿಯೆಷ್ಟು ಪ್ರೀತಿಪಾತ್ರವೆಂಬುವುದು ಅದರೊಂದಿಗೆ ಒಡನಾಟ ಅನುಭವಿಸಿದವನಿಗೆ ಗೊತ್ತೆಂಬುವುದು ಓದಿದವರಿಗೆ ತಿಳಿಯುತ್ತದೆ.

ಅವಳು ಅಹಲ್ಯೆ! ಇವನು ನಹುಷ!! ಪ್ರಬಂಧ ಸಂಕೀರ್ಣವಾಗಿದೆ. ಓದುಗರೆದುರು ಹಲವು ಚಿತ್ರಗಳು ಚೆಲ್ಲಿ. ಕುಕ್ಕುತ್ತದೆ. 
"ಮಹಾನಗರದ ಶಾಪಗ್ರಸ್ತ ಚಿತ್ರಗಳ ಲೆಕ್ಕ ಮುಗಿಯುವಂಥದ್ದಲ್ಲ" ಎಂದು ಹೇಳುತ್ತಲೆ ನಮ್ಮೊಂದಿಗೆ ಎಂದೋ ನಡೆದಿರುವ ಘಟನೆಗಳು ಸಹ ನೆನಪಿಗೆ ಬರುತ್ತವೆ. ಊರಿಗೆ ಹೋಗಲು ದುಡ್ಡಿಲ್ಲ. ಆಮೇಲೆ ಮರಳಿಸುತ್ತೆವೆ... ಹೀಗೆ ಕೈಚಾಚುವ ಸಂಕಟದ ಹಲವು ಮುಖಗಳು ಮತ್ತು ಇವುಗಳ ಹಿಂದೆ ಸತ್ಯವೆಷ್ಟೋ ನಾಟಕವೆಷ್ಟೋ ಎಂಬುವುದು ಬಿಡಿಸಿ ನೋಡಲಾಗದ ದರ್ದು  ಇಲ್ಲಿದೆ. " ಬಡತನ, ಸಂಕಟ, ನೋವುಗಳೆಲ್ಲ ಅವರವರು ಸೃಷ್ಟಿಸಿಕೊಂಡ ನರಕ. ಆ ನರಕಕ್ಕವರು ಅರ್ಹರು. ಅವರ ಸ್ಥಿತಿಗಾಗಿ ಯಾರೂ ಮರುಗಬೇಕಿಲ್ಲ. ಎನ್ನುವ ಮಾತು ಒಪ್ಪಲು ಎಂದಿಗೂ ಸಾಧ್ಯವಿಲ್ಲ: ಆದರೂ ಬೇಡುವ ಚಿತ್ರಗಳ ಕಂಡಾಗೆಲ್ಲ ಆ ಮಾತು ನೆನಪಾಗುತ್ತದೆ. ಟೊಳ್ಳು ವ್ಯಕ್ತಿತ್ವ ಬಯಲಾದಂತೆನ್ನಿಸಿ ದಿಗಿಲು ಕವಿಯುತ್ತದೆ"- ಈ ಸಾಲುಗಳು ಓದುವಾಗ ಹೌದಲ್ವಾ ? ನಾವು ಎಂದೋ ಹಿಂಗೆ ಅಂದುಕೊಂಡೆ. ಸಮಾಧಾನಿಸಿಕೊಂಡಿದ್ದೆವಲ್ಲ ಎಂದು ಅನ್ನಿಸುತ್ತದೆ.

ಅಧರಂ ಮಧುರಂ ಹಲವು ಕಾರಣಕ್ಕೆ ನನಗೆ ಅತ್ಯಂತ ಪ್ರಿಯವಾದ ಪ್ರಬಂಧವಾಗುತ್ತಿದೆ. ತುಟಿಗಳ ಮಿಲನದ ಮಹಾತ್ಮೆ ಹೇಳುವ ಈ ಪ್ರಬಂಧ ಅತ್ಯಂತ ಸಹಜವಾಗಿ, ಕವಿತೆಗಳ ಸಾಲಿನಿಂದ ಇನ್ನಷ್ಟು ಆಪ್ತವಾಗುತ್ತದೆ.
ಪ್ರೇಮಿಗಳ ತುಟಿಗಳಲ್ಲಿ ಆತ್ಮಗಳ ಸಮಾಗಮ- ಷೆಲ್ಲಿ

" ನಾನು ಮೊದಲ ಬಾರಿ ಸಿಗರೇಟು ಸೇದಿದ್ದು ಹಾಗೂ ಹುಡುಗಿಯನ್ನೂ ಚುಂಬಿಸಿದ್ದು ಒಂದೇ ದಿನ. ಪ್ರಥಮ ಚುಂಬನದ ನಂತರ ಸಿಗರೇಟು ಸೇದಲು ಸಮಯವೇ ಸಿಕ್ಕಿಲ್ಲ"- ಪ್ರೇಮಿಯೊಬ್ಬನ ಮಾತು.

ಈ ಪ್ರಬಂಧದಲ್ಲಿ ಲೇಖಕರು ಬರೆದಿರುವ ಆಲ್ಫ್ರೆಡ್ ಐಸೆನಸ್ಟೆಡ್ಟ್ ಕ್ಲಿಕಿಸಿದ್ದ ಚುಂಬನ ಪ್ರಸಂಗದ ಚಿತ್ರದ ಕುರಿತು ಓದಿದಾಗ ಈಗಲೂ ನಗು ಬರುತ್ತಿದೆ. ಈ ಸಾಲುಗಳೆಲ್ಲ ಉಲ್ಲೇಖಿಸುತ್ತ ಲೇಖಕರು  "ಮುತ್ತು ಪ್ರೇಮ ರೂಪಕ ಆಗಿರುವಂತೆಯೇ ಮೃತ್ಯು ರೂಪಕವೂ ಆಗಿರಬಹುದು" ಎನ್ನುತ್ತಾರೆ. ಇದಕ್ಕೆ ಹಲವು ವಿವರಣೆಗಳು ಸಹ ನೀಡಿದ್ದಾರೆ. ಆದರೂ ನಮ್ಮಂತಹ ಹುಡುಗರಿಗೆ ಸಿಗರೇಟು ಮತ್ತು ಮುತ್ತಿನ ಸಾಲು ಸದಾ ನೆನಪಿನಲ್ಲಿ ಉಳಿಯುತ್ತವೆ.

ಫ್ಲೈಓವರ್ ಪ್ರಬಂಧದಲ್ಲಿ " ಸ್ಥಾವರದ ಮೇಲಿನ ಬದುಕುಗಳು ಮಾತ್ರ ಜಂಗಮ" ಎಂದು ಹೇಳುತ್ತಲೆ. ಮಾಯವಾದ ಪಾರಿವಾಳಗಳ, ಮನುಷ್ಯರ ಬೆವರಿನ, ದುಡಿಮೆಯ ಕಥೆ ಹೇಳುತ್ತಾರೆ.

ಮಳೆ ಮೂರು ಹನಿ ಪ್ರಬಂಧ ಓದುವಾಗ ಮತ್ತೆ ಬಾಲ್ಯಕ್ಕೆ ಮರಳಿದೆ. ಅವ್ವನ ಕಣ್ತಪ್ಪಿಸಿ ಮಳೆಗಿಳಿದು ಕುಣಿದ, ಆಡಿದ ದಿನಗಳು ಈಗಲೂ ಮಾಸಿಲ್ಲ. " ಮಗುವಿನ ಅಳುವಿಗೊಂದು ಲಯವಿದೆ. ಆ ಲಯಕ್ಕೆ ಗುಡುಗು ಸಿಡಿಲುಗಳ ಪಕ್ಕವಾದ್ಯವಿದೆ. ಮಿಂಚು ಬೆಳಕಿನ ಪ್ರಭಾವಳಿಯಿದೆ. ಆಲಿ ಕಲ್ಲುಗಳು ಅಕ್ಷತೆಯಿದೆ. ಎಲ್ಲೋ ಮಗು ಅಳುತಾ ಇರುವಂತೆ ಮಳೆ ಸುರಿಯುತ್ತಿದೆ". 

"ಅಮ್ಮನ ಸೆರಗಿಗೆ ತಲೆಯೊಡ್ಡಿ, ಮಳೆನೀರನ್ನೆಲ್ಲ ಕಣ್ಣಲ್ಲಿ ಸುರಿಸುತ್ತ ಬಿಕ್ಕುತ್ತಿದ್ದೆವು"

ಈ ಪ್ರಬಂಧ ಓದುವಾಗ ನಮ್ಮೂರಿನ ಕೆಂಪು ಮಣ್ಣಿನಲ್ಲಿ ಮಳೆ ಬಿದ್ದಾಗ ಮಣ್ಣಿನಿಂದ ಬರುತ್ತಿದ್ದ ಘಮಲು ಮೂಗಿಗೆ ಬಂದು ಬಡಿಯಿತು.

ಹಲ್ಲು ತೊಳೆಸಿಕೊಳ್ಳುತ್ತ ಅಮೆಜಾನ್ ಕಾಡುಗಳಲ್ಲಿ-ಈ ಪ್ರಬಂಧದಲ್ಲಿ ಹಲ್ಲು ಕೀಳುವ ಪ್ರಸಂಗ ಕುರಿತು ಅದರ ಬಗ್ಗೆ ಇರುವ ಭಯ, ಕಲ್ಪನೆಗಳು ಇಲ್ಲಿ ನಗು ಉಕ್ಕಿಸುತ್ತವೆ. ಹಲ್ಲು ನೋವೆಂದು ದವಾಖಾನೆಗೆ ಬಂದ ಸರ್ವಾಧಿಕಾರಿ ಮೇಯರ್ ಹಲ್ಲನ್ನು ಮತ್ತು ಬರಿಸುವ ಇಂಜೆಕ್ಷನ್ ಕೊಡದೆ ಕಿತ್ತ ವೈದ್ಯನ ಕಥೆ - ಮಾರ್ಕ್ವೆಜದು ನೆನಪಾಯಿತೆಂದು ಲೇಖಕರು ಹೇಳುತ್ತಾರೆ. ಈ ಕಥೆ ಹುಡುಕಿ ಓದಬೇಕಿದೆ. ಆಸನದ ಸುಖ ಎಂದಿಗೂ ವೈದ್ಯ ಅನುಭವಿಸುವುದಿಲ್ಲ. ಅಮೆಜಾನ್ ಕಾಡುಗಳಲ್ಲಿ ಕಲ್ಪನೆಯಲ್ಲಿಯೇ ಓಡಾಡಿ ಹಲ್ಲು ಕೀಳಿಸಿಕೊಳ್ಳುವುದು ಇವೆಲ್ಲ ಓದುವಾಗ ನಮ್ಮ ಕಲ್ಪನೆಯು ಚಾಚುತ್ತದೆ.

ಕಂಬಕಂಬಗಳಿಗೆ ಚಂದಿರನ ನೇಣು ಪ್ರಬಂಧದಲ್ಲಿ ರಾತ್ರಿಯ ಕುರಿತು ವರ್ಣನೆ ಇದೆ. "ಇರುಳು ವೇದನೆಗಳನ್ನು ಹೀರುವ ಇಂಗುಕಾಗದ" ಎಂದು ಒಬ್ಬ ಹೇಳಿದರೆ. ವಿನ್ಸೆಂಟ್ ವ್ಯಾನ್ ಗೋ " ಹಗಲಿಗಿಂತ ಇರುಳು ಹೆಚ್ಚು ಜೀವಂತ, ಹೆಚ್ಚು ವರ್ಣರಂಜಿತ" ಎಂದು ಹೇಳುತ್ತಾನೆ. ಎರಡು ಅಭಿಪ್ರಾಯಗಳು ಉಲ್ಲೇಖಿಸಿರುವ  ಪ್ರಬಂಧ. ಎರಡು ದಿಕ್ಕುಗಳಲ್ಲಿ ಕಾವ್ಯಾತ್ಮಕವಾಗಿ ಇರುಳು ಪರಿಚಯ ಮಾಡಿಸುತ್ತದೆ.

ಮುಂಜಾನೆ ಯಾತ್ರೆಯ ಚಿತ್ರಗಳು ಪ್ರಬಂಧ ಓದುವಾಗ, ಒಂದು ವಿಧದಲ್ಲಿ ಬಯಲು ಶೌಚಾಲಯದ ಮಹತ್ವ, ಸಹಜತೆ, ಅಲ್ಲಿ ಚಿಗುರೊಡೆಯುವ ಮುಂಜಾನೆಯ ಬೆಳಗಿನ ಚಟುವಟಿಕೆಗಳು ಹೀಗೆ ಹತ್ತು ಹಲವು ದಿಕ್ಕುಗಳಿಂದ ಯೋಚಿಸುವಂತೆ ಮಾಡುತ್ತಲೆ ಹಲವು ಪ್ರಸಂಗಗಳು ಬಿಚ್ಚಿ ತೋರಿಸುತ್ತದೆ. ಈಗ ರೂಮಿಗೊಂದು ಬಾತರೂಮಗಳು ಕಟ್ಟಿಕೊಳ್ಳುವ ನಾವುಗಳು ಹಿಂದೆ ಬಯಲಿಗೆ ಕೂತು ಗೆಳೆಯರೊಂದಿಗೆ ಹರಟೆ ಹೊಡೆದಿದ್ದು ಈಗಲೂ ನೆನಪಿಗೆ ಬರುತ್ತದೆ. ಜೀವದ ಗೆಳೆಯನಿಗೆ ಬರದಿದ್ದರೂ ಅವನೊಂದಿಗೆ ಹೋಗಲೆಬೇಕಾದ ಅನಿವಾರ್ಯತೆ ಆಪ್ತತೆ ಬೆಳೆಸುತ್ತದೆ. ಅಡ್ಡಾದಿಡ್ಡಿ ತಿನ್ನುವುದು ಸಹ ಇದು ಕಡಿಮೆ ಮಾಡಿಸುತ್ತದೆ. ಲೇಖಕರಿಗೆ ಹಲವು ಸಂಗತಿಗಳ ಬಗ್ಗೆ ಎಚ್ಚರ ಸಹ ಇಲ್ಲಿದೆ. ಹೆಣ್ಣು ಮಕ್ಕಳ ಸಮಸ್ಯೆಗಳು ಸಹ ಅವರು ಉಲ್ಲೇಖಿಸುತ್ತಾರೆ. ನನಗೆ ಬಹಳ ಇಷ್ಟವಾಗಿದ್ದು " ಹೆಣ್ಣುಮಕ್ಕಳು ಚೆಂಬಲ್ಲಿ ಒಂದಿಷ್ಟು ನೀರುಟ್ಟುಕೊಂಡೆ ಬಂದು ಗಿಡಗಳಿಗೆ, ಹೂಸಸಿಗಳಿಗೆ ನೀರು ಚೆಲ್ಲುತ್ತಾರೆ" ಎಂಬರ್ಥದ ಮಾತುಗಳು.

ಗುಬ್ಬಿಗಳಿಗೊಂದು ಮನೆಯ ಕಟ್ಟಿಕೊಟ್ಟೆವು ಪ್ರಬಂಧ ಹಕ್ಕಿಗಳ ಸೂಕ್ಷ್ಮತೆ, ಸಹಜತೆ ಮತ್ತು ಅವುಗಳನ್ನು ಪ್ರೀತಿಯಿಂದ ಬರಮಾಡಿಕೊಳ್ಳುವವರ ಆಸೆಗಳು, ಒಡನಾಟ ದಾಖಲಿಸುತ್ತದೆ. ಅವುಗಳು ಮನುಷ್ಯನೊಂದಿಗೆ ಒಡನಾಟ ಬೆಳೆಸುವ ಮುಂಚೆ ಹಲವು ಬಾರಿ ಯೋಚಿಸುತ್ತವೆ. ಇಲ್ಲಿ ಲೇಖಕರ ಅತ್ತಿಗೆ ಮಗಳು " ಗುಬ್ಬಚ್ಚಿಗೆ ಕಾಳು" ಎಂದಾಗ ನನ್ನ ಕಿವಿ ನೆಟ್ಟಗಾದವು. ಬದಲಾಗುತ್ತಿರುವ ಸುತ್ತಲಿನ ವಾತಾವರಣದೊಂದಿಗೆ ಹೊಸ ಪೀಳಿಗೆ ಜೊತೆ ಅವು ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿವೆ.

ಜಾತ್ರೆಯೆಂಬ ಕಾಮನಬಿಲ್ಲು-ನಾವು ಸಣ್ಣವರಿದ್ದಾಗ ಆಟ ಸಾಮಾನುಗಳು ನೆನಪಾದರೆ ಸಾಕು ಜಾತ್ರೆವರೆಗೂ ಕಾಯುತ್ತಿದ್ದೆವು. ಇಲ್ಲಿ ಲೇಖಕರು ಬಹಳ ವಿಶಾಲವಾಗಿ ಅದೆಷ್ಟೋ ಜಾತ್ರೆಯ ಮುಖಗಳು ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಭೇಟಿಯಾಗುವ ಹೊಸ ಹುಡುಗಿ-ಹುಡುಗರು, ಸಂಬಂಧಗಳ ಗಟ್ಟಿಯಾಗುವುದು, ಸ್ಥಳಿಯರಿಗೆ ಸಂತೆ, ರಥ ಹೀಗೆ ನಾನಾ ವಿಷಯಗಳು ಇಲ್ಲಿವೆ.

ಸಂಪೂರ್ಣ ರಾಮಾಯಣ ಪ್ರಬಂಧದಲ್ಲಿ ಹಳೆ ಕಾಲದ ನಾಟಕದ ತಯಾರಿ, ಅದರಲ್ಲಿ ಸೇರಿಸುವ ಹನುಮಂತನ ಸುತ್ತ ಕುಣಿಯುವ ಸ್ತ್ರೀಯರು  ಪ್ರಸಂಗದಿಂದಾಗಿ ಶುರುವಾದ ಗಲಾಟೆ. ಟಿ.ವಿಯ ಅಪರೂಪತೆ ವಿವರಿಸುತ್ತಾ ನಗಿಸುತ್ತಾರೆ.

ಒಟ್ಟು ಪ್ರಬಂಧಗಳು ಓದುವಾಗ ನಕ್ಕಿದ್ದೇನೆ, ಹಳೆ ನೆನಪುಗಳೊಂದಿಗೆ ಮಾತಾಡುತ್ತಾ ಕೂತಿದ್ದೇನೆ. ಲೇಖಕರು ಜಾನಪದದ ಸಾಲುಗಳು,  ಕವಿಗಳ ಸಾಲುಗಳು, ನಾವು ಎಲ್ಲೋ ಈ ಹಿಂದೆ ನೋಡಿದಂತೆ ಅನ್ನಿಸುವ ಪ್ರಸಂಗಗಳು, ಸಾಮಾನ್ಯನೊಬ್ಬ ಹೇಳಿದ ಮಾತುಗಳು ಎಲ್ಲವೂ ಇಲ್ಲಿ ಉಲ್ಲೇಖಿಸುತ್ತಾರೆ. ಅವರ ಓದಿನ ವಿಸ್ತಾರದಿಂದ ಈ ಊರಿನ ಕಥೆ ಮತ್ಯಾವುದೋ ಊರಿನವನ ಮಾತು ಸೇರಿ ವಿಶಾಲವಾಗುತ್ತದೆ.   ಕಾವ್ಯಾತ್ಮಕ ಸಾಲುಗಳಿಂದ ತುಂಬಿರುವ ಕೆಲವು ಪ್ರಬಂಧಗಳಿಗೆ ಒಂದು ರೀತಿಯ ತಾಳ್ಮೆಯ, ಎಚ್ಚರದ ಓದು ಸಹ ಅಗತ್ಯವಿದೆ. ಎಲ್ಲಾ ಪ್ರಬಂಧಗಳು ಒಂದೇ ರೀತಿಯಲ್ಲಿ ಇಲ್ಲ. ಒಂದಿಷ್ಟು ಸಂಪೂರ್ಣ ಕಲ್ಪನೆಯೊಳಗರಳಿದರೆ, ಅನುಭವಗಳಿಂದ ರೂಪುಗೊಂಡಿರುವ ಪ್ರಬಂಧಗಳ ಪ್ರಸಂಗಗಳು ಹೆಚ್ಚು ಸಹಜವಾಗಿ ಕಾಡುತ್ತವೆ...

# ಕಪಿಲ ಪಿ.ಹುಮನಾಬಾದೆ.
4/03/2020