Saturday 4 April 2020

ರಾಗಿಮುದ್ದೆ ಪ್ರಬಂಧಗಳು - ಪುಸ್ತಕ ಓದು ಕಪಿಲ ಪಿ. ಹುಮನಾಬಾದೆ.

ರಾಗಿಮುದ್ದೆ ( ಪ್ರಬಂಧ ಸಂಕಲನ)- ರಘುನಾಥ ಚ.ಹ

ರಾಗಿಮುದ್ದೆ ಪ್ರಬಂಧ ಸಂಕಲನ ಮತ್ತು ನೆನಪುಗಳು!

ಮೊನ್ನೆ ಕಲಬುರ್ಗಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಹಳೆ ಪುಸ್ತಕಗಳೆಲ್ಲ ಗುಡ್ಡೆ ಹಾಕಿಕೊಂಡು ಕೂತವನ ಅಂಗಡಿಯಲ್ಲಿ ಹಲವು ಅಪರೂಪದ ಪುಸ್ತಕಗಳು ಸಿಕ್ಕವು. ಅಲ್ಲಿ ಕಣ್ಣಿಗೆ ಬಿದ್ದ ರಘುನಾಥ ಚ.ಹ ಅವರ ರಾಗಿಮುದ್ದೆ ಪ್ರಬಂಧ ಸಂಕಲನ ತಟ್ಟನೆ ತೆಗೆದುಕೊಂಡೆ. ಇದಕ್ಕೆ ಕಾರಣ, ನಾ ಪಿಯುಸಿ ಫಸ್ಟ್ ಇಯರ್ ಇದ್ದಾಗ, ಸೀಕುಬಾಕು ಎಂದರೇನು ? ಲಕ್ಷ್ಮಣಯ್ಯ ತಮ್ಮ ಪತ್ನಿಯ ಬಳಿ ಹೇಳಿಕೊಂಡಿದ್ದ ಕೊನೆಯ ಆಸೆ ಏನು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಬಾಯಿಪಾಠು ಮಾಡಿ ಸಾಕಾಗಿ ಹೋಗುತ್ತಿತ್ತು. ಸುಡು ಸುಡು ರೊಟ್ಟಿ ತಿಂದು ಗೊತ್ತಿದ್ದ ನಮಗೆ ಒಟ್ಟಾರೆ, ಎಂದಿಗೂ ನೋಡಿರದ ಈ ರಾಗಿ ಮುದ್ದೆ ಒಂದು ಅದ್ಭುತ ಕಲ್ಪನೆಯೆ ಆಗಿತ್ತು. ಪ್ರಬಂಧದಲ್ಲಿ ಜರ್ಮನಿಯಲ್ಲಿ ವಿಶ್ವಕಪ್ ಫುಟ್ಬಾಲ್ ಸಮಯದಲ್ಲಿ " ತುಟಿಬಣ್ಣ ಕೆಡದಂತೆ ಚಮಚೆಯಲ್ಲಿ ತಿನ್ನುವ ಚೆಲುವೆಯರು." ಇದೊಂದೆ ಸಾಲು ಆ ಸಮಯದಲ್ಲಿ ನಮಗೆ ಸರಿಯಾಗಿ ನೆನಪಿರುತ್ತಿತ್ತು.
- ಪುಸ್ತಕ ಕೈಗೆ ಸಿಕ್ಕಿದ ತಕ್ಷಣ ಇಲ್ಲಿರುವ ೧೨ ಪ್ರಬಂಧಗಳಲ್ಲಿ ರಾಗಿಮುದ್ದೆ ಪ್ರಬಂಧ ಬಿಟ್ಟು ಉಳಿದವು ಓದಿದೆ. ಕೊನೆಗೆ ರಾಗಿಮುದ್ದೆ ಓದಿದೆ. ಎಷ್ಟೊಂದು ಹಳೆ ನೆನಪುಗಳು ಕಣ್ಣು ಮುಂದೆ ಬಂದು ಹೋದವು. ಒಂದು ಟೈಮಲ್ಲಿ  ಈ ಪ್ರಬಂಧ ಪರೀಕ್ಷೆ ದೃಷ್ಟಿಯಿಂದ ಓದಿ ವಿಪರೀತ ಕಿರಿಕಿರಿ ಅನುಭವಿಸುತ್ತದ್ದ ನಾನು, ಈಗ ಓದುತ್ತಿದ್ದರೆ ಬೇರೆಯದೆ ಲೋಕ ಕಟ್ಟಿಕೊಡುತ್ತಿವೆ.

ಇಲ್ಲಿನ ಎಲ್ಲಾ ಪ್ರಬಂಧಗಳು ನನಗೆ ನೇರವಾಗಿಯೇ ಮನಸಿಗೆ ನಾಟಿ, ಚಿಗುರೊಡೆಯುತ್ತಿವೆ. ಇಲ್ಲಿರುವ ಹಲವು ಪ್ರಬಂಧಗಳು ಹಳ್ಳಿಗಳಲ್ಲಿ ಬಾಲ್ಯ ಕಳೆದ ಯಾವ ವ್ಯಕ್ತಿ ಸಹ ಕನೆಕ್ಟ್ ಮಾಡಿಕೊಳ್ಳಲು ಸಾಧ್ಯವಿದೆ. ನನ್ನೂರಿನ ಮಳೆ, ತಗಡಿನ ಸಂದಿಯಲ್ಲಿ ಗೂಡು ಕಟ್ಟಿದ ಗುಬ್ಬಿ, ಕಾಲೇಜಿನಲ್ಲಿ ಇಷ್ಟವಾದ ಹುಡುಗಿ, ಮುಂಜಾನೆ ಕೈಯಲ್ಲಿ ಚೆಂಬು ಹಿಡ್ಕೊಂಡು ಬಯಲಿಗೆ ಹೋಗಿ ಕೂತು ಗೆಳೆಯರೆಲ್ಲ ಹರಟೆ ಹೊಡೆಯುತ್ತಾ ಕುಳಿತುಕೊಳ್ಳುತಿದ್ದದ್ದು, ನಮ್ಮೂರಿನಾಚೆಯ ಜಾತ್ರೆ ಅಲ್ಲಿನ ನೆನಪುಗಳು ಎಲ್ಲವೂ ಕಣ್ಮುಂದೆ ಬಂದು ಹೋದವು.

ಈ ಪ್ರಬಂಧಗಳಲ್ಲಿ ಕಟ್ಟಿಕೊಟ್ಟಿರುವ ನಗರದ ತಣ್ಣನೆಯ ನರಳಾಟದ ಚಿತ್ರಗಳು ಸಹ ಎಲ್ಲಿಯೋ ನೋಡಿರುವುದೆ ಆಗಿದೆ. ಓದಿನ, ಉದ್ಯೋಗದ ಕಾರಣಕ್ಕೆ ನಗರಕ್ಕೆ ಬಂದು ಇಲ್ಲಿ ಮೈಹೊಂದಿಸಿಕೊಂಡಿದ್ದೆವೆ. ಆದರೆ ನಮ್ಮೆಲ್ಲರ ಮನಸ್ಸು ನಾವು ಬೆಳೆದು ಬಂದ ಹಳ್ಳಿಗಳಲ್ಲಿಯೇ ಇದೆ. ಎರಡರ ಮಧ್ಯೆ ತೀವ್ರವಾಗಿ ಒದ್ದಾಡುತ್ತಿದ್ದೆವೆ. ರಾಗಿಮುದ್ದೆ ಪ್ರಬಂಧಗಳು ಓದುವಾಗ ನನ್ನ ಸುತ್ತಲಿನ ಚಿತ್ರಣಗಳಿಗೆ ಎಷ್ಟೊಂದು ಅರ್ಥಗಳಿವೆ. ಇಲ್ಲಿನ ಸಂಗತಿಗಳು ಎಷ್ಟು ವಿಸ್ತಾರವಾಗಿ ಚಾಚಿಕೊಂಡಿವೆ ಅನಿಸಿತು.

ರಾಗಿಮುದ್ದೆ ಅಷ್ಟಾಗಿ ನಮಗೆ ಪರಿಚಯವಿಲ್ಲ. ಆದರೂ ಈ ಪ್ರಬಂಧ ಓದುವಾಗ ರಾಗಿಮುದ್ದೆಯ ಮಹತ್ವ. ಅದು ಹೇಗೆ  ಶ್ರಮಿಕರ ಮಹತ್ವದ ಆಹಾರ, ಒಂದು ನಾಡಿನ ಪ್ರತೀಕ ಎಂಬುವುದು ಕಣ್ಮುಂದೆ ಬರುತ್ತದೆ.  " ಆಹಾರ ಮನುಷ್ಯಕುಲದ ಕೇಂದ್ರ ಚಟುವಟಿಕೆ ಹಾಗೂ ಸಂಸ್ಕೃತಿಯ ಬಹುಮುಖ್ಯ ಲಕ್ಷಣಗಳಲ್ಲೊಂದು" ಎಂಬ ಸಾಲು ಓದುವಾಗ ನಮ್ಮ ಕಡೆ ಮುಂಜಾನೆ ಎದ್ದ ರೈತನಿಂದ ಹಿಡಿದು, ಎಲ್ಲರಿಗೂ ಜೋಳದ ರೊಟ್ಟಿ ಬೇಕೆ ಬೇಕು ಎನ್ನುವಷ್ಟು ಹಾಸುಹೊಕ್ಕಾಗಿರುವುದು ನೆನಪಿಗೆ ಬಂತು.

ನಾಯಿ ನೆರಳು ಒಂದು ಅದ್ಭುತ ಪ್ರಬಂಧ. ಬಾಲ್ಯದಲ್ಲಿ ನಾಯಿ ಸಾಕಲು ಮಾಡಿದ ಸಾಹಸಗಳು, ಅದರ ಬೆಳವಣಿಗೆ, ದುರಂತ ಅಂತ್ಯ. ಎಲ್ಲವೂ ಸಹಜವಾಗಿ ನಿನ್ನೆ ಮೊನ್ನೆ ನಮ್ಮೊಂದಿಗೆ ಆಡುತ್ತಿದ್ದ ನಾಯಿಯ ಕಥೆಯೇನೊ ಎನ್ನುವಂತೆ ಬರೆದಿದ್ದಾರೆ. 

" ನಾಯಿಗೂ ಮಗುವಿಗೂ ಏನಾದರೂ ವ್ಯತ್ಯಾಸವುಂಟಾ ಎನ್ನುವ ಯೋಚನೆ ಬಂದದ್ದು ಇದೇ ಕಾಲದಲ್ಲಿ. ನಾಯಿಯನ್ನು ಮುದ್ದಿಸಿಬಹುದು, ಮಗುವನ್ನೂ ಮುದ್ದಿಸಬಹುದು. ಎರಡನ್ನೂ ದಂಡಿಸಬಹುದು" ಹೀಗೆ ಮುಂದುವರೆಯುವ ಈ ಹೋಲಿಕೆಯ ಸಾಲುಗಳು ನಾಯಿಯೆಷ್ಟು ಪ್ರೀತಿಪಾತ್ರವೆಂಬುವುದು ಅದರೊಂದಿಗೆ ಒಡನಾಟ ಅನುಭವಿಸಿದವನಿಗೆ ಗೊತ್ತೆಂಬುವುದು ಓದಿದವರಿಗೆ ತಿಳಿಯುತ್ತದೆ.

ಅವಳು ಅಹಲ್ಯೆ! ಇವನು ನಹುಷ!! ಪ್ರಬಂಧ ಸಂಕೀರ್ಣವಾಗಿದೆ. ಓದುಗರೆದುರು ಹಲವು ಚಿತ್ರಗಳು ಚೆಲ್ಲಿ. ಕುಕ್ಕುತ್ತದೆ. 
"ಮಹಾನಗರದ ಶಾಪಗ್ರಸ್ತ ಚಿತ್ರಗಳ ಲೆಕ್ಕ ಮುಗಿಯುವಂಥದ್ದಲ್ಲ" ಎಂದು ಹೇಳುತ್ತಲೆ ನಮ್ಮೊಂದಿಗೆ ಎಂದೋ ನಡೆದಿರುವ ಘಟನೆಗಳು ಸಹ ನೆನಪಿಗೆ ಬರುತ್ತವೆ. ಊರಿಗೆ ಹೋಗಲು ದುಡ್ಡಿಲ್ಲ. ಆಮೇಲೆ ಮರಳಿಸುತ್ತೆವೆ... ಹೀಗೆ ಕೈಚಾಚುವ ಸಂಕಟದ ಹಲವು ಮುಖಗಳು ಮತ್ತು ಇವುಗಳ ಹಿಂದೆ ಸತ್ಯವೆಷ್ಟೋ ನಾಟಕವೆಷ್ಟೋ ಎಂಬುವುದು ಬಿಡಿಸಿ ನೋಡಲಾಗದ ದರ್ದು  ಇಲ್ಲಿದೆ. " ಬಡತನ, ಸಂಕಟ, ನೋವುಗಳೆಲ್ಲ ಅವರವರು ಸೃಷ್ಟಿಸಿಕೊಂಡ ನರಕ. ಆ ನರಕಕ್ಕವರು ಅರ್ಹರು. ಅವರ ಸ್ಥಿತಿಗಾಗಿ ಯಾರೂ ಮರುಗಬೇಕಿಲ್ಲ. ಎನ್ನುವ ಮಾತು ಒಪ್ಪಲು ಎಂದಿಗೂ ಸಾಧ್ಯವಿಲ್ಲ: ಆದರೂ ಬೇಡುವ ಚಿತ್ರಗಳ ಕಂಡಾಗೆಲ್ಲ ಆ ಮಾತು ನೆನಪಾಗುತ್ತದೆ. ಟೊಳ್ಳು ವ್ಯಕ್ತಿತ್ವ ಬಯಲಾದಂತೆನ್ನಿಸಿ ದಿಗಿಲು ಕವಿಯುತ್ತದೆ"- ಈ ಸಾಲುಗಳು ಓದುವಾಗ ಹೌದಲ್ವಾ ? ನಾವು ಎಂದೋ ಹಿಂಗೆ ಅಂದುಕೊಂಡೆ. ಸಮಾಧಾನಿಸಿಕೊಂಡಿದ್ದೆವಲ್ಲ ಎಂದು ಅನ್ನಿಸುತ್ತದೆ.

ಅಧರಂ ಮಧುರಂ ಹಲವು ಕಾರಣಕ್ಕೆ ನನಗೆ ಅತ್ಯಂತ ಪ್ರಿಯವಾದ ಪ್ರಬಂಧವಾಗುತ್ತಿದೆ. ತುಟಿಗಳ ಮಿಲನದ ಮಹಾತ್ಮೆ ಹೇಳುವ ಈ ಪ್ರಬಂಧ ಅತ್ಯಂತ ಸಹಜವಾಗಿ, ಕವಿತೆಗಳ ಸಾಲಿನಿಂದ ಇನ್ನಷ್ಟು ಆಪ್ತವಾಗುತ್ತದೆ.
ಪ್ರೇಮಿಗಳ ತುಟಿಗಳಲ್ಲಿ ಆತ್ಮಗಳ ಸಮಾಗಮ- ಷೆಲ್ಲಿ

" ನಾನು ಮೊದಲ ಬಾರಿ ಸಿಗರೇಟು ಸೇದಿದ್ದು ಹಾಗೂ ಹುಡುಗಿಯನ್ನೂ ಚುಂಬಿಸಿದ್ದು ಒಂದೇ ದಿನ. ಪ್ರಥಮ ಚುಂಬನದ ನಂತರ ಸಿಗರೇಟು ಸೇದಲು ಸಮಯವೇ ಸಿಕ್ಕಿಲ್ಲ"- ಪ್ರೇಮಿಯೊಬ್ಬನ ಮಾತು.

ಈ ಪ್ರಬಂಧದಲ್ಲಿ ಲೇಖಕರು ಬರೆದಿರುವ ಆಲ್ಫ್ರೆಡ್ ಐಸೆನಸ್ಟೆಡ್ಟ್ ಕ್ಲಿಕಿಸಿದ್ದ ಚುಂಬನ ಪ್ರಸಂಗದ ಚಿತ್ರದ ಕುರಿತು ಓದಿದಾಗ ಈಗಲೂ ನಗು ಬರುತ್ತಿದೆ. ಈ ಸಾಲುಗಳೆಲ್ಲ ಉಲ್ಲೇಖಿಸುತ್ತ ಲೇಖಕರು  "ಮುತ್ತು ಪ್ರೇಮ ರೂಪಕ ಆಗಿರುವಂತೆಯೇ ಮೃತ್ಯು ರೂಪಕವೂ ಆಗಿರಬಹುದು" ಎನ್ನುತ್ತಾರೆ. ಇದಕ್ಕೆ ಹಲವು ವಿವರಣೆಗಳು ಸಹ ನೀಡಿದ್ದಾರೆ. ಆದರೂ ನಮ್ಮಂತಹ ಹುಡುಗರಿಗೆ ಸಿಗರೇಟು ಮತ್ತು ಮುತ್ತಿನ ಸಾಲು ಸದಾ ನೆನಪಿನಲ್ಲಿ ಉಳಿಯುತ್ತವೆ.

ಫ್ಲೈಓವರ್ ಪ್ರಬಂಧದಲ್ಲಿ " ಸ್ಥಾವರದ ಮೇಲಿನ ಬದುಕುಗಳು ಮಾತ್ರ ಜಂಗಮ" ಎಂದು ಹೇಳುತ್ತಲೆ. ಮಾಯವಾದ ಪಾರಿವಾಳಗಳ, ಮನುಷ್ಯರ ಬೆವರಿನ, ದುಡಿಮೆಯ ಕಥೆ ಹೇಳುತ್ತಾರೆ.

ಮಳೆ ಮೂರು ಹನಿ ಪ್ರಬಂಧ ಓದುವಾಗ ಮತ್ತೆ ಬಾಲ್ಯಕ್ಕೆ ಮರಳಿದೆ. ಅವ್ವನ ಕಣ್ತಪ್ಪಿಸಿ ಮಳೆಗಿಳಿದು ಕುಣಿದ, ಆಡಿದ ದಿನಗಳು ಈಗಲೂ ಮಾಸಿಲ್ಲ. " ಮಗುವಿನ ಅಳುವಿಗೊಂದು ಲಯವಿದೆ. ಆ ಲಯಕ್ಕೆ ಗುಡುಗು ಸಿಡಿಲುಗಳ ಪಕ್ಕವಾದ್ಯವಿದೆ. ಮಿಂಚು ಬೆಳಕಿನ ಪ್ರಭಾವಳಿಯಿದೆ. ಆಲಿ ಕಲ್ಲುಗಳು ಅಕ್ಷತೆಯಿದೆ. ಎಲ್ಲೋ ಮಗು ಅಳುತಾ ಇರುವಂತೆ ಮಳೆ ಸುರಿಯುತ್ತಿದೆ". 

"ಅಮ್ಮನ ಸೆರಗಿಗೆ ತಲೆಯೊಡ್ಡಿ, ಮಳೆನೀರನ್ನೆಲ್ಲ ಕಣ್ಣಲ್ಲಿ ಸುರಿಸುತ್ತ ಬಿಕ್ಕುತ್ತಿದ್ದೆವು"

ಈ ಪ್ರಬಂಧ ಓದುವಾಗ ನಮ್ಮೂರಿನ ಕೆಂಪು ಮಣ್ಣಿನಲ್ಲಿ ಮಳೆ ಬಿದ್ದಾಗ ಮಣ್ಣಿನಿಂದ ಬರುತ್ತಿದ್ದ ಘಮಲು ಮೂಗಿಗೆ ಬಂದು ಬಡಿಯಿತು.

ಹಲ್ಲು ತೊಳೆಸಿಕೊಳ್ಳುತ್ತ ಅಮೆಜಾನ್ ಕಾಡುಗಳಲ್ಲಿ-ಈ ಪ್ರಬಂಧದಲ್ಲಿ ಹಲ್ಲು ಕೀಳುವ ಪ್ರಸಂಗ ಕುರಿತು ಅದರ ಬಗ್ಗೆ ಇರುವ ಭಯ, ಕಲ್ಪನೆಗಳು ಇಲ್ಲಿ ನಗು ಉಕ್ಕಿಸುತ್ತವೆ. ಹಲ್ಲು ನೋವೆಂದು ದವಾಖಾನೆಗೆ ಬಂದ ಸರ್ವಾಧಿಕಾರಿ ಮೇಯರ್ ಹಲ್ಲನ್ನು ಮತ್ತು ಬರಿಸುವ ಇಂಜೆಕ್ಷನ್ ಕೊಡದೆ ಕಿತ್ತ ವೈದ್ಯನ ಕಥೆ - ಮಾರ್ಕ್ವೆಜದು ನೆನಪಾಯಿತೆಂದು ಲೇಖಕರು ಹೇಳುತ್ತಾರೆ. ಈ ಕಥೆ ಹುಡುಕಿ ಓದಬೇಕಿದೆ. ಆಸನದ ಸುಖ ಎಂದಿಗೂ ವೈದ್ಯ ಅನುಭವಿಸುವುದಿಲ್ಲ. ಅಮೆಜಾನ್ ಕಾಡುಗಳಲ್ಲಿ ಕಲ್ಪನೆಯಲ್ಲಿಯೇ ಓಡಾಡಿ ಹಲ್ಲು ಕೀಳಿಸಿಕೊಳ್ಳುವುದು ಇವೆಲ್ಲ ಓದುವಾಗ ನಮ್ಮ ಕಲ್ಪನೆಯು ಚಾಚುತ್ತದೆ.

ಕಂಬಕಂಬಗಳಿಗೆ ಚಂದಿರನ ನೇಣು ಪ್ರಬಂಧದಲ್ಲಿ ರಾತ್ರಿಯ ಕುರಿತು ವರ್ಣನೆ ಇದೆ. "ಇರುಳು ವೇದನೆಗಳನ್ನು ಹೀರುವ ಇಂಗುಕಾಗದ" ಎಂದು ಒಬ್ಬ ಹೇಳಿದರೆ. ವಿನ್ಸೆಂಟ್ ವ್ಯಾನ್ ಗೋ " ಹಗಲಿಗಿಂತ ಇರುಳು ಹೆಚ್ಚು ಜೀವಂತ, ಹೆಚ್ಚು ವರ್ಣರಂಜಿತ" ಎಂದು ಹೇಳುತ್ತಾನೆ. ಎರಡು ಅಭಿಪ್ರಾಯಗಳು ಉಲ್ಲೇಖಿಸಿರುವ  ಪ್ರಬಂಧ. ಎರಡು ದಿಕ್ಕುಗಳಲ್ಲಿ ಕಾವ್ಯಾತ್ಮಕವಾಗಿ ಇರುಳು ಪರಿಚಯ ಮಾಡಿಸುತ್ತದೆ.

ಮುಂಜಾನೆ ಯಾತ್ರೆಯ ಚಿತ್ರಗಳು ಪ್ರಬಂಧ ಓದುವಾಗ, ಒಂದು ವಿಧದಲ್ಲಿ ಬಯಲು ಶೌಚಾಲಯದ ಮಹತ್ವ, ಸಹಜತೆ, ಅಲ್ಲಿ ಚಿಗುರೊಡೆಯುವ ಮುಂಜಾನೆಯ ಬೆಳಗಿನ ಚಟುವಟಿಕೆಗಳು ಹೀಗೆ ಹತ್ತು ಹಲವು ದಿಕ್ಕುಗಳಿಂದ ಯೋಚಿಸುವಂತೆ ಮಾಡುತ್ತಲೆ ಹಲವು ಪ್ರಸಂಗಗಳು ಬಿಚ್ಚಿ ತೋರಿಸುತ್ತದೆ. ಈಗ ರೂಮಿಗೊಂದು ಬಾತರೂಮಗಳು ಕಟ್ಟಿಕೊಳ್ಳುವ ನಾವುಗಳು ಹಿಂದೆ ಬಯಲಿಗೆ ಕೂತು ಗೆಳೆಯರೊಂದಿಗೆ ಹರಟೆ ಹೊಡೆದಿದ್ದು ಈಗಲೂ ನೆನಪಿಗೆ ಬರುತ್ತದೆ. ಜೀವದ ಗೆಳೆಯನಿಗೆ ಬರದಿದ್ದರೂ ಅವನೊಂದಿಗೆ ಹೋಗಲೆಬೇಕಾದ ಅನಿವಾರ್ಯತೆ ಆಪ್ತತೆ ಬೆಳೆಸುತ್ತದೆ. ಅಡ್ಡಾದಿಡ್ಡಿ ತಿನ್ನುವುದು ಸಹ ಇದು ಕಡಿಮೆ ಮಾಡಿಸುತ್ತದೆ. ಲೇಖಕರಿಗೆ ಹಲವು ಸಂಗತಿಗಳ ಬಗ್ಗೆ ಎಚ್ಚರ ಸಹ ಇಲ್ಲಿದೆ. ಹೆಣ್ಣು ಮಕ್ಕಳ ಸಮಸ್ಯೆಗಳು ಸಹ ಅವರು ಉಲ್ಲೇಖಿಸುತ್ತಾರೆ. ನನಗೆ ಬಹಳ ಇಷ್ಟವಾಗಿದ್ದು " ಹೆಣ್ಣುಮಕ್ಕಳು ಚೆಂಬಲ್ಲಿ ಒಂದಿಷ್ಟು ನೀರುಟ್ಟುಕೊಂಡೆ ಬಂದು ಗಿಡಗಳಿಗೆ, ಹೂಸಸಿಗಳಿಗೆ ನೀರು ಚೆಲ್ಲುತ್ತಾರೆ" ಎಂಬರ್ಥದ ಮಾತುಗಳು.

ಗುಬ್ಬಿಗಳಿಗೊಂದು ಮನೆಯ ಕಟ್ಟಿಕೊಟ್ಟೆವು ಪ್ರಬಂಧ ಹಕ್ಕಿಗಳ ಸೂಕ್ಷ್ಮತೆ, ಸಹಜತೆ ಮತ್ತು ಅವುಗಳನ್ನು ಪ್ರೀತಿಯಿಂದ ಬರಮಾಡಿಕೊಳ್ಳುವವರ ಆಸೆಗಳು, ಒಡನಾಟ ದಾಖಲಿಸುತ್ತದೆ. ಅವುಗಳು ಮನುಷ್ಯನೊಂದಿಗೆ ಒಡನಾಟ ಬೆಳೆಸುವ ಮುಂಚೆ ಹಲವು ಬಾರಿ ಯೋಚಿಸುತ್ತವೆ. ಇಲ್ಲಿ ಲೇಖಕರ ಅತ್ತಿಗೆ ಮಗಳು " ಗುಬ್ಬಚ್ಚಿಗೆ ಕಾಳು" ಎಂದಾಗ ನನ್ನ ಕಿವಿ ನೆಟ್ಟಗಾದವು. ಬದಲಾಗುತ್ತಿರುವ ಸುತ್ತಲಿನ ವಾತಾವರಣದೊಂದಿಗೆ ಹೊಸ ಪೀಳಿಗೆ ಜೊತೆ ಅವು ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿವೆ.

ಜಾತ್ರೆಯೆಂಬ ಕಾಮನಬಿಲ್ಲು-ನಾವು ಸಣ್ಣವರಿದ್ದಾಗ ಆಟ ಸಾಮಾನುಗಳು ನೆನಪಾದರೆ ಸಾಕು ಜಾತ್ರೆವರೆಗೂ ಕಾಯುತ್ತಿದ್ದೆವು. ಇಲ್ಲಿ ಲೇಖಕರು ಬಹಳ ವಿಶಾಲವಾಗಿ ಅದೆಷ್ಟೋ ಜಾತ್ರೆಯ ಮುಖಗಳು ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಭೇಟಿಯಾಗುವ ಹೊಸ ಹುಡುಗಿ-ಹುಡುಗರು, ಸಂಬಂಧಗಳ ಗಟ್ಟಿಯಾಗುವುದು, ಸ್ಥಳಿಯರಿಗೆ ಸಂತೆ, ರಥ ಹೀಗೆ ನಾನಾ ವಿಷಯಗಳು ಇಲ್ಲಿವೆ.

ಸಂಪೂರ್ಣ ರಾಮಾಯಣ ಪ್ರಬಂಧದಲ್ಲಿ ಹಳೆ ಕಾಲದ ನಾಟಕದ ತಯಾರಿ, ಅದರಲ್ಲಿ ಸೇರಿಸುವ ಹನುಮಂತನ ಸುತ್ತ ಕುಣಿಯುವ ಸ್ತ್ರೀಯರು  ಪ್ರಸಂಗದಿಂದಾಗಿ ಶುರುವಾದ ಗಲಾಟೆ. ಟಿ.ವಿಯ ಅಪರೂಪತೆ ವಿವರಿಸುತ್ತಾ ನಗಿಸುತ್ತಾರೆ.

ಒಟ್ಟು ಪ್ರಬಂಧಗಳು ಓದುವಾಗ ನಕ್ಕಿದ್ದೇನೆ, ಹಳೆ ನೆನಪುಗಳೊಂದಿಗೆ ಮಾತಾಡುತ್ತಾ ಕೂತಿದ್ದೇನೆ. ಲೇಖಕರು ಜಾನಪದದ ಸಾಲುಗಳು,  ಕವಿಗಳ ಸಾಲುಗಳು, ನಾವು ಎಲ್ಲೋ ಈ ಹಿಂದೆ ನೋಡಿದಂತೆ ಅನ್ನಿಸುವ ಪ್ರಸಂಗಗಳು, ಸಾಮಾನ್ಯನೊಬ್ಬ ಹೇಳಿದ ಮಾತುಗಳು ಎಲ್ಲವೂ ಇಲ್ಲಿ ಉಲ್ಲೇಖಿಸುತ್ತಾರೆ. ಅವರ ಓದಿನ ವಿಸ್ತಾರದಿಂದ ಈ ಊರಿನ ಕಥೆ ಮತ್ಯಾವುದೋ ಊರಿನವನ ಮಾತು ಸೇರಿ ವಿಶಾಲವಾಗುತ್ತದೆ.   ಕಾವ್ಯಾತ್ಮಕ ಸಾಲುಗಳಿಂದ ತುಂಬಿರುವ ಕೆಲವು ಪ್ರಬಂಧಗಳಿಗೆ ಒಂದು ರೀತಿಯ ತಾಳ್ಮೆಯ, ಎಚ್ಚರದ ಓದು ಸಹ ಅಗತ್ಯವಿದೆ. ಎಲ್ಲಾ ಪ್ರಬಂಧಗಳು ಒಂದೇ ರೀತಿಯಲ್ಲಿ ಇಲ್ಲ. ಒಂದಿಷ್ಟು ಸಂಪೂರ್ಣ ಕಲ್ಪನೆಯೊಳಗರಳಿದರೆ, ಅನುಭವಗಳಿಂದ ರೂಪುಗೊಂಡಿರುವ ಪ್ರಬಂಧಗಳ ಪ್ರಸಂಗಗಳು ಹೆಚ್ಚು ಸಹಜವಾಗಿ ಕಾಡುತ್ತವೆ...

# ಕಪಿಲ ಪಿ.ಹುಮನಾಬಾದೆ.
4/03/2020

2 comments:

  1. ಉತ್ತಮ ಓದು...
    ಪಿಯು ಪಠ್ಯವಾಗಿದೆ ಈ ಕೃತಿ

    ReplyDelete
    Replies
    1. ಹೌದು ಸರ್... ಧನ್ಯವಾದಗಳು

      Delete