Sunday 1 December 2019

ಹಾಣಾದಿ ಕುರಿತು ಸಂದೀಪ್ ಈಶಾನ್ಯ ಅವರ ಅಭಿಪ್ರಾಯ

ಪ್ರಯಾಣವನ್ನು ಆರಂಭಿಸುವ ಮೊದಲೇ ತಲುಪುವ ಗಮ್ಯತೆಯ ಕುರಿತು ನಿಶ್ಚಿತವಾಗಿರುವುದು ಬಹಳ ಮುಖ್ಯ. ಈ ಕ್ರಮವನ್ನು ಸಾಹಿತ್ಯದಲ್ಲೂ ಬಹುತೇಕ ಒಪ್ಪಬಹುದು. ಕೆಲವೊಮ್ಮೆ ಕತೆ, ಕವಿತೆ ಸೇರಿದಂತೆ ಉಳಿದ ಎಲ್ಲಾ ಪ್ರಕಾರಗಳೂ ಲೇಖಕನನ್ನು ಮೀರಿ ಬೆಳೆಯುವ ಸಾಮರ್ಥ್ಯವನ್ನು ತೋರುತ್ತವೆ. ಇದಾಗಿಯೂ ಬಹುವಾಗಿ ಕಾಡುವ ವಸ್ತುವೊಂದು ತನ್ನ ಆರಂಭದ ಗುಟ್ಟನ್ನು ತೋರಗೊಡದಿದ್ದರೂ ಗಮ್ಯತೆಯನ್ನು ತನ್ನ ಆಳದಲ್ಲಿ ಈ ಮೊದಲೇ ಉದುಗಿಸಿಟ್ಟುಕೊಂಡಿರುತ್ತದೆ ಎನ್ನುವುದು ನಿರ್ವಿವಾದ.

ಸದ್ಯ ಈ ಮಾತನ್ನು ಗೆಳೆಯರಾದ ಕಪಿಲ ಹುಮನಬಾದೆ ಅವರ ರಚನೆಯ "ಹಾಣಾದಿ" ಕಾದಂಬರಿಗೂ ಅನ್ವಯಿಸಿ ನೋಡಬಹುದು. ಸಿಗರೇಟನ್ನು ಕೊಡವುತ್ತಲೇ ನೆನಪುಗಳ ಸುರುಳಿಯನ್ನು ಪದರುಗಳಲ್ಲಿ ಓದುಗನ ಎದುರು ತೆರೆದಿಡುತ್ತಾ ಸಾಗುವ ಈ ಕಾದಂಬರಿ ಕೇವಲ ಹತ್ತು ಪುಟಗಳನ್ನು ಕ್ರಮಿಸುವಷ್ಟರಲ್ಲಿ ಮತ್ತೊಂದು ಸ್ತರಕ್ಕೆ ಬಂದು ನಿಲ್ಲುತ್ತದೆ. ಯಾವುದೇ ಅನುಕರಣೆಯ ಬೇನ್ನರದೇ ಸತ್ವವನ್ನು ಹೊಂದಿರುವ ತನ್ನ ಬೇರಿನ ಮೂಲಕವೇ ಆಕ್ರಮಿಸಿಕೊಳ್ಳಲು ಹಾತೊರೆಯುವ ಕಪಿಲ ಅವರು ನುರಿತ ಬರಹಗಾರರಂತೆ ಕಾಣುತ್ತಾರೆ. ಹೆಸರಿಲ್ಲದ ಹುಡುಗಿ, ಕತೆಯ ಮೂಲವೇ ಆಗಿರುವ ಬಾದಾಮಿ ಗಿಡ, ಯಾವುದೋ ಗುಹೆಯಲ್ಲಿ ವಾಸ ಮಾಡುವ ಗುಬ್ಬಿ ಆಯಿಯ ಮೂಲಕ ಓದುಗನನ್ನು ಎದುರು ಕೂರಿಸಿಕೊಂಡು ನಿರ್ಲಿಪ್ತವಾಗಿ ಕಥೆಯನ್ನು ಹೇಳುತ್ತಾ ಸಾಗುವ ಕಪಿಲ ಅವರು ಪ್ರತಿ ಹಂತದಲ್ಲೂ ಚಕಿತಗೊಳಿಸುತ್ತಾರೆ. 

ಇಟಲಿ ಲೇಖಕ ಉಂಬರ್ಟೋ ಎಕೋ ಬರೆದ "ದಿ ಐಲ್ಯಾಂಡ್ ಆಫ್ ದಿ ಡೇ ಬಿಫೋರ್" ಕಾದಂಬರಿಯನ್ನು ರಚನೆಯ ದೃಷ್ಟಿಯಿಂದ ದೀರ್ಘವಾಗಿ ನೆನಪಿಸುವ ಕಪಿಲ ಅವರ ಈ ಕಾದಂಬರಿ ಓದುಗನ ಒಳಗೆ ಬೆಳೆಯುವ ಶಕ್ತ ಬರವಣಿಗೆಯಿಂದ ಕೂಡಿದೆ. ಗಟ್ಟಿಯಾದ ಕತೆಯ ಹೊರತಾಗಿ ಯಾವುದೇ ಕಾರಣಕ್ಕೂ ನಾನು ಕಥನವನ್ನು ರಮ್ಯ ರೂಪಕಗಳ ಸಹಾಯದಿಂದ ಮಾತ್ರ ಚಂದಗೊಳಿಸುವುದಿಲ್ಲ ಎನ್ನುವ ಧೋರಣೆಯನ್ನು ತೋರಿದ್ದರೂ ಅಷ್ಟೇ ಪ್ರಬುದ್ಧ ರೂಪಕಗಳನ್ನು ಈ ಕಾದಂಬರಿ ಹೊಂದಿದೆ. ಗುಬ್ಬಿ ಆಯಿಯ ಸತ್ವಭರಿತ ಮಾತುಗಳು, ಹೊಲದ ಹಾದಿ, ಅಪ್ಪನ ನೆನಪುಗಳು ಎಲ್ಲವನ್ನೂ ಒಮ್ಮೆಲ್ಲೇ ಎದೆಗಿಳಿಸಿಸುವ ಈ ಪುಸ್ತಕ "ಮ್ಯಾಜಿಕಲ್ ರಿಯಲಿಸಂ" ಗುಣವನ್ನು ಹೊಂದಿದೆ ಎನ್ನುವ ನಿರ್ಧಾರಕ್ಕೆ ಬರುವ ಹೊತ್ತಿಗೆ ಕತೆ ವಾಸ್ತವಕ್ಕೆ ಬಂದು ನಿಂತಿರುತ್ತದೆ. ಆ ಮೂಲಕ ಓದುಗನ ಎಣಿಕೆಯನ್ನು ತಲೆಕೆಳಗು ಮಾಡಿಬಿಡುತ್ತದೆ. 

ಕಪಿಲ ಓರ್ವ ಲೇಖಕರಾಗಿ ಯಾವುದಕ್ಕೆ ಹೆಚ್ಚು ತುಡಿಯುತ್ತಾರೆ ಎನ್ನುವುದು ಇದೇ ಕಾದಂಬರಿಯಲ್ಲಿ ಅಲ್ಲಲ್ಲಿ ಕಾಣಸಿಗುತ್ತದೆ. ಅವರ ವಿಚಾರಗಳು ಇನ್ನಷ್ಟು ಗಟ್ಟಿಯಾಗಲಿ. ಕಡೆಯದಾಗಿ, ಮಹಾನಗರಗಳ ಗದ್ದಲದ ನಡುವೆ ಕಳೆದುಹೋಗುತ್ತಿರುವ ಶಕ್ತ ಬರಹಗಾರರನ್ನು ನೋಡುತ್ತಾ ನೊಂದುಕೊಳ್ಳುವ ಸಮಯದಲ್ಲೇ ಕಪಿಲ ಅವರ ಬರವಣಿಗೆ ಓದಲು ಸಿಕ್ಕಿದ್ದು ಮತ್ತೊಂದು ಭರವಸೆ ಎನಿಸುತ್ತಿದೆ. ಕಪಿಲ ಅವರೊಳಗಿ‌ನ ಲೇಖಕ ನಿದ್ರಿಸದಿರಲಿ.

- ಸಂದೀಪ್ ಈಶಾನ್ಯ

https://www.instamojo.com/kavyamane580/--cdfc6/ 

ಈ ಲಿಂಕ್ ಬಳಸಿ. ಹಾಣಾದಿ ಕಾವ್ಯ ಮನೆ ಪ್ರಕಾಶನದಿಂದ ತೆಗೆದುಕೊಳ್ಳಬಹುದು‌‌

No comments:

Post a Comment