Saturday 18 November 2017

ಸಾವು

ದ ಡೆತ್ ಆಫ್ ಇವಾನ್ ಇಲಿಚ್ (ಸಾವು) - ಲಿಯೋ ಟಾಲ್ ಸ್ಟಾಯ್.
ಅನು :- ಓ ಎಲ್ ನಾಗಭೂಷಣ ಸ್ವಾಮಿ.

ಈ ದೀರ್ಘ ಕಥೆಯ ಪ್ರತಿ ಪುಟದಲ್ಲಿಯು, ನಿಜವಾದ ಬದುಕೆಂದರೆ ಯಾವುದು ? ಅದು ಹೇಗೆ  ? ಮನುಷ್ಯ ಬದುಕಿನ ಸತ್ಯಗಳನ್ನು  ಒಪ್ಪಿಕೊಳ್ಳದೆ, ತನ್ನ  ಅಭಿಪ್ರಾಯಗಳನ್ನು  ಯಾಕೆ ಸಮರ್ಥಿಸಿಕೊಳ್ಳುತ್ತಲೆ ಸಾಗುತ್ತಾನೆ ? ಎನ್ನುವುದನ್ನು ಎದುರುಗೊಳ್ಳುತ್ತಲೆ ನಾವು ಅದನ್ನು ಕಂಡುಕೊಳ್ಳಲು ಯೋಚಿಸಬಹುದಾದ ದಾರಿಗಳಿವೆ.  ಸಾವಿನ ತೀರಾ ಹತ್ತಿರವಿರುವ ರೋಗಸ್ಥ ಮನುಷ್ಯನೊಬ್ಬನ ನರಳುವಿಕೆಯ ಕಥೆ ಇದು. ಅವನು ನಾ ಸಮುದ್ರದಾಳದಲ್ಲಿಯಾಗಲಿ ಅಥವಾ ಭೂಮಿಯ ಗರ್ಭದಲ್ಲಾಗಲಿ ಇಷ್ಟು  ಒಂಟಿತನ ಅನುಭವಿಸಲು ಸಾಧ್ಯವೆ ಇಲ್ಲ ಎನ್ನುತ್ತಾನೆ.

ಇವಾನ್ ಇಲಿಚ್ ಸಮಾಜದ ಕಣ್ಣಿಗೆ  ಒಬ್ಬ ಪರಿಪೂರ್ಣ ಮನುಷ್ಯ. ಮನೆ, ಹೆಂಡತಿ, ಮಕ್ಕಳು,  ಉದ್ಯೋಗ  ಎಲ್ಲವೂ ಉಂಟು ಆದರೆ ಅವನ ಕ್ರಮಬದ್ಧವಾದ ಬದುಕು ಅವನಿಗೆ ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ಉಲ್ಟಾ ಹೊಡೆಯುತ್ತದೆ. ಸಂಸಾರದ ಭಿನ್ನಾಭಿಪ್ರಾಯಗಳು, ಮಗಳ ಒಣ ತಿರುಗಾಟ , ಹೆಂಡತಿಯ ಯಾಂತ್ರಿಕತೆ ಇವೆಲ್ಲ ಅವನನ್ನು ಕೊನೆಗಳಿಗೆಯಲ್ಲಿ ಹೇಸಿಗೆ ತರಿಸುತ್ತವೆ.

"ಟಾಲಸ್ಟಾಯನ ಈ ಕಥೆ ಸಾವನ್ನು ಕುರಿತು ನಾನು ಓದಿರುವ ಗ್ರೇಟೆಸ್ಟ್ ಕಥೆ" ಎಂದು ಹೇಳುವ ಓ ಎಲ್ ಎನ್ ಅವರು ತುಂಬಾ ಅಚ್ಚುಕಟ್ಟಾದ ಅನುವಾದ ಮಾಡಿದ್ದಾರೆ.  ಕಥೆಯ ಒಂದು ಗೆರೆಯು ಸರಿಯದಂತೆ.

ಕನ್ನಡದ ಸಾಹಿತ್ಯದಲ್ಲಿಯು ಸಾವಿನ ವಿಷಯ ವಸ್ತು  ಇಟ್ಟುಕೊಂಡು ಹಲವು ಬರಹಗಳು ಬಂದಿವೆ. ಆದರೆ ನನ್ನ ಮಟ್ಟಿಗಂತೂ ಇಷ್ಟು  ಅಚ್ಚುಕಟ್ಟಾಗಿರುವ ಕಥೆ ಇನ್ನೊಂದಿಲ್ಲ.  ಇಲಿಚನಲ್ಲಿರುವ " ಸಾವು ಎಂಬ ಒಂದು ಪ್ರಜ್ಞೆಯಲ್ಲಿ " ಏನೆಲ್ಲಾ ಬಿಚ್ಚಿಕೊಳ್ಳುತ್ತ ಹೋಗುತ್ತಾನಲ್ಲ, ಅವನ ಬಾಲ್ಯ,  ಬದುಕಿನ  ಅತ್ಯುತ್ತಮ ಸಂಗತಿಗಳು ಇವೆಲ್ಲವನ್ನೂ ಉಸಿರಿನಂತೆ ಒಳಗೆಳೆದುಕೊಳ್ಳುತಿರುವಾಗ , ಅವನು ಬದುಕಬೇಕಾಗಿದ್ದು ಹೀಗಲ್ಲ ಎನಿಸುತ್ತಿರುತ್ತದೆ. ಆದರೆ ಬದಲಾವಣೆಗೆ ಹೊರಳಬೇಕಂದರು ಕಪ್ಪು ಚೀಲದಲ್ಲಿ ಬಂಧಿಯಾಗಿ ಬರೀ ಕೊರಳಿನಿಂದ ಮಾತಾಡುವ ಸ್ಥಿತಿಯಲ್ಲಿರುತ್ತಾನೆ.

ನನಗೆ ಪೀಟರನ ವರ್ತನೆ ತುಂಬಾ ಕಾಡಿತು. ಸಾಮಾನ್ಯವಾಗಿ ನಾವು ದೂರದವರ ಸಾವನ್ನು ಗಂಭೀರವಾಗಿ ಪರಿಗಣಿಸುವುದೆಯಿಲ್ಲ ಅದು ಪರಿಗಣಿಸಬೇಕೆ ? ಏನೋ ಗೊತ್ತಿಲ್ಲ  ಅದೊಂದು ನಮ್ಮೊಳಗಿನ ವಿಷಯ. ಕುವೆಂಪು ಸಹ ಹೇಳುವುದು ಇದನ್ನೆ ತೀರಾ ಹತ್ತಿರದವರ ಸಾವು ಮಾತ್ರ ಹೃದಯ ಅಲುಗಾಡಿಸುತ್ತದೆಯಂದು. ಪೀಟರ್ ಇಲಿಚನ ಹೆಣ ನೋಡಿ ಹೇಳಿಕೊಳ್ಳುತ್ತಾನೆ, " ಸತ್ತವನು   ನಾನಲ್ಲವಲ್ಲ !". ಹೌದು ಪ್ರತಿಯೊಬ್ಬ ಮನುಷ್ಯ ಹೀಗೆ ಹೇಳಿಕೊಳ್ಳುತ್ತಲೆ ಇರುತ್ತಾನೆ.

" ಕಾಯಿಲೆ ಮತ್ತು ಆರೋಗ್ಯ ಮಾತ್ರ  ಅವನ ಆಸಕ್ತಿಯ ವಿಷಯಗಳಾದವು"- ನಾವೆಲ್ಲ  ಆರಾಮಾಗಿ ಇದ್ದಾಗ ಯಾವುದರ ಬಗ್ಗೆಯು ಯೋಚಿಸುವುದೆಯಿಲ್ಲ. ನಮ್ಮ ಮನೆಯ ಅಜ್ಜಿಗೆ ನೋಡಿದಾಗಲೆಲ್ಲ ವಯಸ್ಸಾಯ್ತಲ್ಲ ನರಳ್ತಾರೆ ಅನಸುತ್ತೆ. ಆದರೆ ನಮಗೆ ಆ ನರಳಾಟ ಆದರೆ ನಮ್ಮ ಯೋಚನೆಯ ಲಹರಿಯೆ ಬದಲಾಗುತ್ತದೆ. ಇಲ್ಲಿಯು ಸಹ ಇಲಿಚ 45 ವಯಸ್ಸಿಗೆ ಸತ್ತವನು ಅವನದೆನು ಸಾಯುವ ವಯಸ್ಸಲ್ಲ.

"ಶುದ್ಧ ಮನಸ್ಸನ್ನು ಕಳೆದುಕೊಂಡಿರುವ ಹದಿಹರೆಯದ ಹುಡುಗರ ಕಣ್ಣಿನಂತೆ ಆ ಹುಡುಗನ ಕಣ್ಣು ನೀರು ತುಂಬಿದವು" -  ತನ್ನ  ಸ್ಥಿತಿ ಕಂಡು ಅಳುವ ಮಗನ ಬಗ್ಗೆ  ಈ ರೀತಿ ಹೇಳುತಿದ್ದಾನೆ.
" ಮನುಷ್ಯನ ಸ್ವಭಾವಗಳ ಬಗ್ಗೆ  ಅವನು ಒಪ್ಪಿಕೊಳ್ಳಬೇಕಾದ ಸತ್ಯಗಳ ಬಗ್ಗೆ ಈ ಕಥೆಯಲ್ಲಿ ಟಾಲಾಸ್ಟಾಯಿ ಮಾತಾಡುತ್ತಿದಾರೆ" . ನಾವೆಷ್ಟೆ ಜನರ ಸಾವು ನೋಡಿದಾಗಲೂ, ನಾನು ಭಿನ್ನ  ಅದು ಹೇಗೆ ನನ್ನ ಸಾವಾಗುತ್ತದೆ ನಾನು ಅನಂತ ಎಂಬ ಉಡಾಫೆ ಇದ್ದೆ ಇರುತ್ತೆ,  ಮನುಷ್ಯ ತನ್ನ ಬದುಕುವ ರೀತಿಗೆ ಸಮರ್ಥನೆಗಳನ್ನು ಇಲಿಚನಂತೆ ಕೊಟ್ಟುಕೊಳ್ಳುತ್ತಲೆ ಹೋಗುತ್ತಾನೆ. ಆದರೆ ಬದುಕಿನ ಸತ್ಯಗಳು ಒಪ್ಪಿಕೊಂಡಷ್ಟು ನಮ್ಮ ಬದುಕು ಸುಂದರ...

# ಕಪಿಲ .ಪಿ ಹುಮನಾಬಾದೆ
18/11/2017.

No comments:

Post a Comment