Saturday 30 September 2017

ಜಂಬಣ್ಣ ಅಮರಚಿಂತರ ಕಾದಂಬರಿ

ತೆರೆದ -ಮನ ( ಪುಸ್ತಕಭಿಪ್ರಾಯ)
ಬೂಟುಗಾಲಿನ ಸದ್ದು ( ಕಾದಂಬರಿ) - ಜಂಬಣ್ಣ ಅಮರಚಿಂತ.

ಯಾವುದೇ ಸೃಜನಶೀಲ ಬರವಣಿಗೆಯು ಓದುಗನಿಗೆ "ಅನುಭವಿಸುವಿಕೆಯನ್ನು" ಹುಟ್ಟಿಸುವಂತಿರಬೇಕು. ಒಂದು ಫಿಲ್ ಕೊಡಬೇಕು ಆ ಸ್ಪರ್ಶ ಓದುಗನೆದೆ ಸವರುತ್ತಲೆ ಇರಬೇಕು. ಆ ರೀತಿಯ ಕೃತಿಗಳು ಉತ್ತಮವಾಗುತ್ತವೆ. ಕಥೆ ಬರೆಯುವುದೆಂದರೆ ಬರೀ ಕಥೆ ಇಡುವುದಲ್ಲ. ಅದು ಓದುಗನ ಮನಸ್ಸೊಳಗೆ ಇನೆನೋ ಆಗಬೇಕಾದದ್ದು ಅದು ಇನೆನೋ ಆಗಬೇಕೆನ್ನುವುದು ಹೇಳಲಾರದಂತಹದಾಗಿರುತ್ತದೆ ಅದು ಅನುಭವಿಸಬೇಕಷ್ಟೆ. ಹೀಗಂದ ಮಾತ್ರಕ್ಕೆ ಕುತೂಹಲ ಹುಟ್ಟಿಸುವ ಅಥವಾ ಪತ್ತೇದಾರಿ ಕಥೆಗಳಂತಲ್ಲ. ತೇಜಸ್ವಿಯವರ ಲಿಂಗ ಬಂದ ಕಥೆಯೆ ಗಮನಿಸಿ ಅಥವಾ ಇನ್ಯಾವುದೇ ದೊಡ್ಡ ಲೇಖಕನ ಬರಹ ಗಮನಿಸಿದಾಗ ಅದರೊಳಗೆ ಓದುಗನಿಗೆ ಒಂದು ರೀತಿಯ ಅನುಭವಿಸಿಕೆ ಉಂಟು ಮಾಡುವ ಗುಣವಿರುತ್ತದೆ.

ಇಷ್ಟೆಲ್ಲ ಯಾಕೆ ಹೇಳಿದೆನೆಂದರೆ ,ಜಂಬಣ್ಣ ಅಮರಚಿಂತರ ಕುರುವಯ್ಯ ಮತ್ತು ಅಕುಂಶದೊಡ್ಡಿ ಕಾದಂಬರಿಗಿರುವ ಒಂದು ರೀತಿಯ ದಟ್ಟತನದ ಕಥಾಹಂದರ ಬೂಟುಗಾಲಿನ ಸದ್ದಿಗಿಲ್ಲ. "ಚದುರುರಿದ ಕಥೆಯಿದೆ". ಇದರಾಚೆಗೂ ಇದು ತನ್ನದೇ ವಿಶೇಷತೆ ಮತ್ತು ಮಹತ್ವ ಹೊಂದಿದೆ. ಹೈದರಾಬಾದ ಕರ್ನಾಟಕದಲ್ಲಿ  ರಜಾಕರರು ಮಾಡಿರುವ ಅನಾಚಾರಗಳು, ದಾಳಿ, ಹಿಂಸೆಯನ್ನು ಈ ಕೃತಿ ಬಿಚ್ಚಿಡುತ್ತದೆ.

" ಈ ಪ್ರಾಂತ್ಯದ ಒಟ್ಟು ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಗ್ರಹಿಸುವ ಕಥನ ಬಂದಿಲ್ಲ. ಬರುವ ಅಗತ್ಯವಿದೆ. ಬೂಟುಗಾಲಿನ ಸದ್ದು ಒಂದು ಪ್ರಯತ್ನವಷ್ಟೆ. ಇದು ಬರೆಯುವವರಿಗೆ ಪ್ರೇರಣೆ ನೀಡಲೆಂದು ಆಶಿಸುತ್ತೇನೆ"- ಮುನ್ನುಡಿ ಬರೆಯುತ್ತ ನುಗಡೋಣಿಯವರು ಆಡಿರುವ ಮಾತುಗಳಲ್ಲಿ ನನಗೆ " ಅಗತ್ಯವಿದೆ " ಎನ್ನುವ ಪದವೆ ಎದ್ದು ಕಾಡುತ್ತಿದೆ.

ಶಾಂತರಸದ ಬಡೇಸಾಬನ ಪುರಾಣದಂತಹ ಕಥೆ ತೀರಾ ರಜಾಕರ ಆಳ್ವಿಕೆ ನೆಪವಾಗಿಟ್ಟುಕೊಂಡು ಬಂದ ಕಥೆ. ರಜಾಕರರ ಹುಟ್ಟುವಿಕೆ ಮತ್ತು ನಿರ್ಗಮನದ ಮಧ್ಯೆ ಇರುವ ಕಥನವದು. ಲಂಕೇಶರವರ ದಾಳಿ ಕಥೆ ಸಂಕೀರ್ಣವಾಗಿದ್ದು. ಹತ್ತು ಹಲವು ಅಂಶಗಳು ಹೇಳುತ್ತದೆ. ಪ್ರೇಮ, ಕಾಮ, ದಾಳಿಯ ದಾಹ, ಸಂಶಯ, ಒಗ್ಗಟ್ಟು  ಎಲ್ಲವೂ ಬಿಚ್ಚಿಡುತ್ತದೆ.
ಈ ಸಾಲಿಗೆ ಬೂಟುಗಾಲಿನ ಸದ್ದು ಸಹ ಸೇರಬಹುದಷ್ಟೆ. ಇದರ ಮಧ್ಯೆಯು ಸಂತನ ಸವಾರಿ, ಮಡಿಬಟ್ಟೆ, ಕಚೇರಿಯಲ್ಲಿ ಕತ್ತೆಗಳು ಈ ಕಥಾಭಾಗಗಳು ತಮ್ಮದೆ ಅಸ್ಮಿತೆ ಹೊಂದಿವೆ. ಒಂದು ಸಾಮಾನ್ಯ ಅಗಸನ ಕುಟುಂಬದ ಮೂಲಕ ಒಟ್ಟು ಚಿತ್ರಣ ನೋಡಲು ಹೋಗಿ ಇನೆನೋ ಆಗಿದೆ. ಅದಕ್ಕೆ ಲೇಖಕನ ಬದುಕಿನ ವೈಯಕ್ತಿಕ ಕಾರಣಗಳು ಸಹ ಇವೆ.

ಮರೀಜ್ ಭಿ ತುಮ್ಹೀ ಹೋ
ಹಕೀಮ್ ಭಿ ತುಮ್ಹಿ ಹೋ
ನಸ್ ಕೋ ಪಕಡು ಲೊ, ಔರಜಾನೋ
ತುಮ್ಹೆ ಬೀಮಾರಿ ಕ್ಯಾ ಹೈ
ಇಸ್ ಬಿಮಾರಿ ಕಾ ದವಾಭಿ ತಮ್ಹಿ ಹೋ
ಔರ್ ದುವಾಭಿ ತುಮ್ಹೀ ಹೋ.
(ಪುಟ ನಂ-27.)
ಸಂತನ ಸವಾರಿಯಲ್ಲಿ ಮಾಸುಂಅಜ್ಜ ಆಡುವ ಮಾತುಗಳಿವು ಇದು ಊರವರಿಗೆ ಒಗ್ಗಟ್ಟಾಗಿಸಲು ಸೂಫಿಶರಣರ ಮಹತ್ವ ಸಾರುತ್ತದೆ.

"ಹಗಲು ಕಪ್ಪನೆ ಬುರಖಾ ಧರಿಸಿದಂತೆ ಕಾಣುತ್ತಿತ್ತು. ಕಾರ್ಮೋಡಗಳು ಮದವೇರಿದ ಅನೆಯಂತೆ ಮುಗಿಲು ತುಂಬಾ ಓಡಾಡುತ್ತಾ ಡಿಕ್ಕಿ ಹೊಡೆಯುತ್ತಾ ಗುಡುಗುತ್ತಿದ್ದವು. ಚಕಚಕನೆ ಮಿಂಚು, ಖಡಲ್ ದಡಲ್ ಎಂದು ಸಿಡಿಲು ಜೊತೆಗೂಡಿ ಗುಡುಗು ಅರ್ಭಟಿಸುತ್ತಿತ್ತು" ರೂಪಕತ್ಮಕವಾಗಿ ರಜಾಕರರ ದಾಳಿಯ ಮುನ್ಸೂಚನೆಯನ್ನು ಬರೆಯುತ್ತಾರೆ.

ಒಟ್ಟಾರೆ ಕಾದಂಬರಿ ಕೋಮು ಸೌಹಾರ್ದತೆ ಬಗ್ಗೆ ಹೇಳುತ್ತದೆ. ರಜಾಕರರ ನಂತರ ಹಿಂದೂಗಳ ಆಕ್ರೋಶಕ್ಕೆ ಸತ್ತ ಮುಸ್ಲಿಂರೆಷ್ಟೋ ? . ಇಲ್ಲಿ  ಮದರಸಾಬು ಎನ್ನುವ ಮುಸ್ಲಿಂ ವ್ಯಕ್ತಿ ಹಿಂದೂಗಳಿಗೆ ಸಹಾಯ ಮಾಡಿದ್ದರ ಬಗ್ಗೆ ಸಹ ಇದೆ. ಇವೆಲ್ಲ ಅಂಶಗಳು ಗಮನಿಸಿದಾಗ ಕೆಲವೆ ಕೆಲವು ಮುಸ್ಲಿಂರು ರಜಾಕರಾಗಿದ್ದು ಇವರೆ ಇದೆಲ್ಲ ಅನಾಚಾರ ಮಾಡಿದರು. ಒಟ್ಟಾರೆಯಾಗಿ  ಒಂದು ಕೋಮುವನ್ನು ದ್ವೇಷಿಸುವುದು ಮೂರ್ತನವಾಗಿದೆ ಎನ್ನುವುದೆ ಕಾದಂಬರಿ ಧ್ವನಿಸುತ್ತದೆ. ರಜಾಕರರ ವಿರುದ್ಧ ಕೆಳವರ್ಗದವರಿಗೆ ಹೋರಾಡಲು ಹಚ್ಚಿ ತಾವು ಭಧ್ರವಾಗಿದು ಮುಂದೆ ರಾಜಕೀಯದಲ್ಲಿ ಸಹ ಪ್ರವೇಶ ಪಡೆದ ಮೇಲ್ವರ್ಗದವರ ಕುತಂತ್ರ ಬಿಚ್ಚಿಡುವ ಕಥೆ ಸಹ ಇದಾಗಿದೆ. ಅನೇಕ ಮಾನವೀಯ ಮೌಲ್ಯಗಳಿಟ್ಟುಕೊಂಡಿರುವ ಇದು ಕಲಾತ್ಮಕತೆಯ ಹೆಣಿಗೆಯಲ್ಲಿ ಅಲ್ಪಸ್ವಲ್ಪ ಸೋತಿದರು ಕನಿಷ್ಠ ನಾಲ್ಕೈದು ಕಥಾಭಾಗ ಓದಲಿಕ್ಕಾದರೂ ಓದಲೆಬೇಕಾದ ಪುಸ್ತಕ ಇದು...

# ಕಪಿಲ್ ಪಿ .ಹುಮನಾಬಾದೆ.
30/9/2017.

No comments:

Post a Comment