ನನ್ನವ್ವ
ನನ್ನವ್ವ ನನ್ನಂಥಲ್ಲ !
ಹಸಿರು ಮಸಿಯಿಂದ ಹೆಸರು ಬರೆದವಳಲ್ಲ,
ಪುಟಗಟ್ಟಲೆಯ ಪುರಾಣವ ಓದಿದವಳಲ್ಲ!
ಆದರೂ, ನನ್ನವ್ವ ಓದುತ್ತಾಳೆ..
ಯಾರಿಗೂ ಕಾಣಿಸದ ನನ್ನ ಹಣೆಯ ಬರಹವನು,
ಸದಾ ಎಣಿಸುತ್ತಾಳೆ ನಾ ತೊಟ್ಟಿಕ್ಕುವ ಕಣ್ಣೀರ ಹನಿಯನು.
ನನ್ನವ್ವ ನನ್ನಂಥಲ್ಲ.....
ಅವಳ ನೆರಳಿನ ಹಿಂದಿನ ಹೆಜ್ಜೆ ನಾನು
ಬಿಸಿಲ ತಾಳದೆ ಆ ನೆರಳಲ್ಲೆ ಇರುವೆನು,
ನನ್ನವ್ವ ಬಿಗುಮಾನದ ಬಿನ್ನಾಣದವಳಲ್ಲ
ಆಭರಣ ತೊಡುವ ಅನ್ನಪೂರ್ಣೆಯಂಥಲ್ಲ..!
ನನ್ನವ್ವ ನೆಲದೊಳಗಿನ ಗರಿಕೆಯಂತೆ!
ತಾಗುವಳು, ಬಾಗುವಳು
ಮನೆಯ ಹೊಳೆಯಲಿ ಹೊಳೆಯುವಳು.
ಕೆಂಡದ ಮೇಲೆ ಕೈಯಾಡಿಸಿದ್ದಂತೆ,
ಕುಡಿದು ಬಂದ ಅಪ್ಪನನ್ನು ಸಂಭಾಳಿಸುವಳು
ನನ್ನ ಹೆಣವ ಮುಚ್ಚಿಡುವ ಗೋರಿಯಾಗುವಳು,
ನನ್ನವ್ವ ಗುಡಿ ಗುಂಡಾರದ ಗೋಪುರದ್ದಂತ್ತಲ್ಲ!
ಬಡತನದ ಬೆಂಕಿಯ ಮೈಯ ತೊಳೆಯುತಾಳೆ
ಬೂದಿಯಾದ ಕನಸುಗಳ ಬಳಿಯುತಾಳೆ!
ಹೂತಿಟ್ಟ ಉಸಿರಿಲಿ ಮಕ್ಕಳ ಹೆಸರ ಬರಿಯುತಾಳೆ,
ನನ್ನವ್ವ ಬಿಂಕದ ಬರವಣಿಗೆಯ ಶಾರದೆಯಂಥಲ್ಲ...!!
ಅವಳ ಕಣ್ಣ ಹನಿಯ ಮಡಿಲ ಸೇರಿ
ಹಸಿರಾಯಿತೋ ನನ್ನೋಡಲು..
ಆ ಕಂಬನಿಯ ಕಸಿದುಕೊಂಡು ಮೈ ತುಂಬಿತೋ ಕಡಲು,
ನನ್ನವ್ವ ಖಾಲಿ ಬಾನಿನ ಕಪ್ಪು ಮುಗಿಲು.
ನನ್ನ ನವಮಾಸದಿ ಹುದುಗಿಟ್ಟಳು ಗರ್ಭದಲಿ
ನನ್ನವ್ವ ಗರ್ಭ ಗುಡಿಯಲ್ಲಿರುವ ಕಲ್ಲಂತ್ತಲ್ಲ..!!
-- ಕವಿಚಂದ್ರ
ಸೂಪರ್....
ReplyDeleteಅಮ್ಮ....
ReplyDeleteಅದ್ಬುತ.... ನಿಮ್ಮ ಕಲ್ಪಣೆಗೆ ನನ್ನ ನಮನ....
ReplyDelete