ನೆನಪುಗಳು...
ಮನುಷ್ಯ ಬದುಕಿರೊದು ಈ ನೆನಪುಗಳಿಂದಲೆ
ನಿರ್ಲಿಪ್ತವಾಗಿ ಖಾಲಿ ದಾರಿ ನೋಡುವಾಗ
ತುಸು ಮಣ್ಣು ಹಾರಿದರೆ ಸಾಕು
ಎಂದೋ ಬ್ಯಾಲದಲ್ಲಿ ಮಳೆ ಬಿದ್ದಾಗ ಮಣ್ಣಿನ ವಾಸನೆ ಮೂಗರಳಿಸಿದ್ದು ನೆನಪಾಗುತ್ತದೆ..
ಕನಸುಗಳೆ ಇಲ್ಲದೆ ಸೋರಗಿ ಅನಾಥವಾಗಿ ಬಿದ್ದ ರಸ್ತೆ ಮೇಲೆ ನೂರು ಗುರಿಗಳಿಟ್ಟುಕೊಂಡು ಚಲಿಸುವ ಚಕ್ರಗಳು ನೋಡುವಾಗ
ಬಸ್ಸಲ್ಲಿ ಡ್ರೈವರ್ ಪಕ್ಕದ ಬಾಕ್ಸ್ ಮೇಲೆ ಕೂತದ್ದು ನೆನಪಾಗುತ್ತದೆ.
ಇಂದಿನ ಮಕ್ಕಳು ಕಾರ್ ರೇಸ್ ಆಡುತ್ತ ಮುಳುಗಿರುವಾಗ ಆಗ ನಾವು ಬಸ್ ಡ್ರೈವರಗಿಂತಲೂ ಎದುರು ಬರುವ ವಾಹನಗಳ ಬಗ್ಗೆ ನಮಗೆ ಹೆಚ್ಚು ರೋಮಾಂಚನ ಒಂಥರಾ ಭಯ ಇರುತ್ತಿತ್ತು ....
ನಮ್ಮ ಮನೆಯದಲ್ಲದ ಮದುವೆಯಂದು ಊರಿನ ಯಾವ ಮದುವೆಯು ಅನಿಸುತ್ತಿರಲಿಲ್ಲ. ಹುಚ್ಚೆದ್ದು ಕುಣಿಯುತ್ತಿದ್ದೆವು ಹೀಗೆ ಕ್ರಮಬದ್ಧವಾಗಿ ಕುಣಿಯಬೇಕೆಂದು ನಿಯಮವೆನಲ್ಲ. ಈ ನಗರದ ಬೀದಿಗಳಲ್ಲಿ ಟ್ರಾಫಿಕ್ ಜಾಮ್ ಮಾಡಿ ಕುಣಿಯುವ ಒಂದೆರೆಡು ತಲೆಗಳಿಗೆ ನೋಡಿದರೆ ಹೋಗಿ ಒಂದೆರೆಡು ಸ್ಟೆಪ್ ಹಾಕಬೇಕೆನಿಸುತ್ತದೆ...
ಮೊನ್ನೆ ಊರಿಗೆ ಹೋಗಿದ್ದೆ. ಬರೀ ನಗು ವಿನಿಮಯ ಮಾಡಿಕೊಂಡಿದ್ದ ಬಾಲ್ಯದ ಗೆಳತಿ ಪುಟ್ಟ ಮಗುವಿಗೆ ಎತ್ತಿಕೊಂಡು ನೀರು ತರಲು ನಿಂತಿದಳು ಅವಳದೆ ಮಗುವಿರಬಹುದು...ನನ್ನ ಜೊತೆ ಸ್ಟ್ವಾಪ್ ಆಡಿದ ಹುಡುಗಿ ಬೆಳೆದು ನಿಂತಿದಕ್ಕೆ ಬೆರಗಾಗುತ್ತದೆ.
ಈ ನಗರದ ಏರಿಯಾದ ಬೀದಿ ತಿರುವಿನಲ್ಲಿ ಕಾಫೀ ಡೇ ಮುಂದೆ ನಿಂತ ಪ್ರಣಯ ಹಕ್ಕಿಗಳು ನೋಡುವಾಗ...
ಮುಟಾಟ ಆಡಿ, ಜಗಳ ಮಾಡಿಕೊಂಡು ಕೈಕಾಲು ಒಡೆದು ರಕ್ತ ಸೋರುವ ಕಾಲು, ಕಣ್ಣೀರು, ಮೂಗಲ್ಲಿ ಸುಂಬಳ ಅಮ್ಮನ ಎದುರು ಗೆಳತಿಯ ಬಗ್ಗೆ ದೂರು ಕೊಡುವಾಗ ಯಾವ ದ್ವೇಷವು ಇರುತ್ತಿರಲಿಲ್ಲ. ಮರುದಿನ ಸೂರ್ಯ ಹುಟ್ಟುವುದೆ ತಡ ಊರ ಅಗಸಿಗೆ ಹೋಗಿ ಟೈರ್ಗೆ ಕಟ್ಟಿಗೆಯಿಂದ ನೂಕಿ ಊರು ಸುತ್ತಿಸುವುದೆ ಕೆಲಸ....
ಯಾವ ಗದ್ದಲುವು ಇಲ್ಲದೆ ಅನಾಥವಾಗಿ ಓಂ ನಮ: ಶಿವಾಯ ಹಾಡುತ್ತ ಹೋಗುವ ಹೆಣ ನೋಡಿದರೆ ಬೇಸರವೆ ಉಸಿರುಗಟ್ಟಿಸುತ್ತದೆ. ಹಲಗಿ ಹೊಡೆದು ಪಟಾಕಿ ಸಿಡಿಸಿ ಚೆಂದವಾಗಿ ಅಲಂಕರಿಸಿ, ಕೈ ಕಾಲು ಕುರ್ಚಿಗೆ ಬಿಗಿದಾಗ ಆ ಹೆಣ ಸೆಟೆದು ಕೂತಿರುತ್ತದೆ. ನಾವು ಸಹ ಒಂದೆರೆಡು ಸ್ಟ್ಯಾಪಿ ಹಾಕಿ ಸುಖವಾಗಿ ಅವರಿಗೆ ಸ್ವರ್ಗಕ್ಕೆ ಕಳುಹಿಸಿಕೊಡುತ್ತಿದ್ದವು. ಹೆಣ ಕುಣಿಯೊಳಗಿಳಿಸುವುದು ನೋಡಬೇಕೆಂಬಾಸೆ ಇನ್ನೂ ಕೈಗೂಡಿಲ್ಲ....
ಆಗ ನಮಗೆ
ವಾರಗಳೆ ಗೊತ್ತಾಗುತ್ತಿರಲಿಲ್ಲ ಪ್ರತಿ ಶನಿವಾರ ಸರಕಾರಿ ಮಾಸ್ತರ ಬಂದು ನಾಳೆ ಆಯಿತ್ವಾರ ಸಾಲಿ ಸುಟಿ ಇರುತ್ತದೆಯಂದು ಹೇಳುತ್ತಿದ್ದ. ಆರುದಿನಕ್ಕೊಂದು ಸಾರಿ ಹೀಗೆ ಹೇಳುತ್ತಲೆಯಿದ್ದ. ಪಾಪ ಎಷ್ಟು ಒಳ್ಳೆಯ ಮಾಸ್ತರೆಂದು ಖುಷಿಯಾಗುತ್ತಿತ್ತು. ಶಾಲೆಯಲ್ಲಿ ಕಲಿತ್ತದ್ದೆ ಇಲ್ಲ. ಯಾರೋ ತಿಂದು ಬಿಸಾಕಿದ ಮಾವಿನ ತಿಪಾಗಳನ್ನು ತಿಪ್ಪಿ ತಿಪ್ಪಿ ಅಲೆದು ತಂದು ಮಣ್ಣಲ್ಲಿ ಹಾಕಿ ಹೂಳುತ್ತಿದ್ದೆವು....ಈ ಕಾಲೇಜಿನ ಬೆಂಚುಗಳು ನೋಡುವಾಗ ಇದೆಲ್ಲ ನೆನಪಾಗುತ್ತದೆ....
# ಕಪಿಲ
4/05/2017.
No comments:
Post a Comment