Wednesday 10 May 2017

ಬುದ್ಧನಿಗೊಂದು ಕವನ

        ನಾನು ಮತ್ತು ಬುದ್ಧ

ನಾ ಬೆಚ್ಚಿ ಬಿದ್ದಾಗಲೆಲ್ಲ ಬುದ್ದನ ತುಟಿಯ ಗೋಡೆಗಳಲಿ ಬಿರುಕು ಕಾಣುತದೆ.
ಬಿದ್ದಾಗಲಂತೂ ಅವನ ನೆರಳಲಿ ಅರಳಿ ನಿಂತ ಅರಳಿ ಮರದ ಬೇರು, ಬೇನೆ ತಿನ್ನುತದೆ.
ನಾ ಮನೆಯ ಹೊಸ್ತಿಲ ಕಿತ್ತುಕೊಂಡಾಗಲೆ
ಅವನ ಆಲಯದ ಆವರಣಕೆ ಬಣ್ಣ ಬರುತದೆ.
ನನ್ನ ಕಣ್ಣು ತೆರೆಯುತದೆ,
ಏಕೆಂದರೆ ಬದ್ದನೆಂದರೆ ನನಗೆ ಅರೆಗಣ್ಣು ತೆರೆದ ಅರಳಿ ಮರ...!

ನಾನು, ನಾಳೆಗಾಗಿ ಒಂದಿಷ್ಟು ನಗುವನು ನಗದಿಗೆ ಕೊಂಡರೆ,
ಅವನು, ಎಂದೂ ಸಾಯದ ಮುಗುಳು ನಗೆಯಲಿ ಮುಳುಗಿ ಬಿಡುತಾನೆ!
ಸತ್ತ ನಾನು ಸಾವಿರ ಬದುಕಿನ ಸಮಾಧಿಗೆ ನನ್ನ ಹೆಸರನಿಟ್ಟರೆ,
ಅವನು,  ಸಾವಿನ ಮನೆಯಲಿ ಸಾಸಿವೆಯ ಸಂಬಂಧ ಹುಡುಕುತಾನೆ!
ಏಕೆಂದರೆ, ಬುದ್ದನೆಂದರೆ ನನಗೆ
ಕೋಟಿ ಮೈಲಿಗಲ್ಲನು ದಾಟಿ ನಿಂತ ಒಂಟಿ ಹೆಜ್ಜೆ..!!

ನಾನು ಬೊಗಸೆ ಪ್ರೀತಿಗಾಗಿ ಬದುಕನ್ನೆ ಅಡವಿಟ್ಟರೆ,
ಬುದ್ದ, ಬದುಕನ್ನೆ ಚಿಟುಕೆ ಪ್ರೀತಿಗೆ ಮಾರಿಕೊಂಡವನು!
ಸುಳಿವ ಗಾಳಿಯ ಚರ್ಮ ಸುಲಿದು ಚರಮ ಗೀತೆಯ ಹೊಲಿದರೆ,
ಅವನು, ಉಸಿರಿನ ನಿಲ್ದಾಣದಲಿ ಊರ ಸುತ್ತಿ ಬೆತ್ತಲೆಗೆ ಬೆಂಕಿ ತಾಕಿಸುತಾನೆ,
ಏಕೆಂದರೆ, ಬುದ್ದನೆಂದರೆ ನನಗೆ
ಉಸಿರಿನಲಿ ಹೂತು ಹೋದ ಆಳೆತ್ತರದ ಬೆಳಕಿನ ಪೈರು....!!

  
                          ..  ಕವಿಚಂದ್ರ  ..


No comments:

Post a Comment