Friday 23 June 2017

ಹೀಗೊಬ್ಬಳ ಸ್ವಗತ

ಗೂಟಕ್ಕೆ ಬಡಿದ ಅಪ್ಪನ ಹೆಣದ ಮುಂದೆ ಮಗಳು ಹಲುಬುತ್ತಿದ್ದಾಳೆ..
ಬಂದವರೆಲ್ಲಾ ಸಂತೈಸಲಾಗದೆ ದುಃಖ ಹೊತ್ತು
ತಂದವರಂತೆ ನಿಟ್ಟುಸಿರು ಬಿಡುತ್ತಾರೆ..

ಇಲ್ಲೊಬ್ಬ ಅನಾಥವಾದವಳ ಬಗ್ಗೆ ಚಿಂತಿಸಿ ಸೇಂದಿ ಗುಟುಕೇರಿಸಿ ನಿರಾಳವಾಗಿ ಗಿಡದ ಬುಡಕ್ಕೆ ಅಡ್ಡಾಗಿದ್ದಾನೆ..
ಇನ್ನೊಬ್ಬ ಅವನ ನೋಡಿ ಮುಗುಳ್ನಕ್ಕು
ಮುಂದೆ ಹೋದ... 

ಗಂಡನ ಹೆಣಕ್ಕಚ್ಚಿದ ದೀಪದೊಳಗೆ ಹರೆಯ
ತಿರುಗಿದ ಮಗಳ ಬದುಕು ಕಟ್ಟುತಿದ್ದಾಳೆ...
ಅಣ್ಣಾನಾದವನು ಹೆಂಡತಿ ಸೆರಗಿನೊಳಗೆ  ಅವಿತುಕೊಂಡಿದ್ದಾನೆ...

ತಮ್ಮನಾದವನು ಹಸಿವನ್ನು ತಾಳದೆ ಅಳುತ್ತಾ ಅಕ್ಕನಿಗೆ ಕಣ್ಣಸನ್ನೆ ಮಾಡಿ ಕಣ್ಣೀರಿಟ್ಟನು..
ಹಸಿದ ಹೊಟ್ಟೆಯ ಅಳು ಅಪ್ಪನ ಶವದ
ಮುಂದೆ ಕಿವಿಗೊಡದೆ ಹೋಯ್ತು...

ಹೆಂಡತಿ ಮುಡಿದ ಮಲ್ಲಿಗೆ ನಿಟ್ಟುಸಿರು ಬಿಡುತ್ತಿದೆ
ಮುತ್ತೈದೆಯ ಕೊನೆಯ ನಡಿಗೆ ಗಂಡನ ಹೆಣದ ಮೆರವಣಿಗೆಯಲ್ಲಿ ಕೊನೆಯಾಗುತ್ತಿದೆ..
ಬಂದವರೆಲ್ಲಾ ತಿರುಗಿ ನೋಡದೆ ಹೋದರು
ಮತ್ತೆ  ಅವಳು ಅನಾಥಳೆ. ..

ಹುಚ್ಚು ಹುಡ್ಗಾ

Saturday 17 June 2017

ತೆರೆ

ಒಂದಿಷ್ಟು ಕ್ರಮಿಸಬೇಕು
ಬೆರಳ ಸಂಧಿಯೊಳಗೆ ಬೆರಳು
ಸೇರಿಸಿ ನೇಲ್ ಗಳು ಪುನಃ
ಪಾಲಿಶ್ ಕಾಣಬೇಕು ಇನಿಯ
ಅದೇ ಜೋಡಿ ಹೆಜ್ಜೆ ಒಂದಾಗಿ
ಮುಖದ ಪೌಡರ್
ಬಣ್ಣ ಕಳೆಯುವವರೆಗಾದರೂ

ಎಲ್ಲದಕ್ಕೂ ಮರಲಿ ರೆಕ್ಕೆ
ಮೂಡಬೇಕು ಹಾರಿದಂತೆ
ನನಗೆ ಮಾತ್ರ ಗೊತ್ತಾಗುವ
ಭಾವವೊಂದಿದೆ ಗೆಳೆಯ
ಚಿಗುರಬೇಕು ನೀನು ಮುಚ್ಚಿಟ್ಟ
ಅವೆಲ್ಲ ನಗೆಗಳನ್ನು ಕದ್ದು
ನಾ ನೋಡುವಂತೆ

ಮಾತುಕತೆಯನ್ನೆಲ್ಲ ಮಡಚಿಯಿಟ್ಟ
ತರುವಾಯ ಮೊದಲು ಗರಿಗೆದರಿದ
ಆಸೆಯೊಂದಿದೆ ನಾನೇ
ಬಿಡಿಸಬೇಕೆಂದಿರುವ ಚಿತ್ರ
ಸುಳ್ಳಿನಲ್ಲೇ ಕೊಳೆಯುತ್ತಿರುವ
ಅಂತರಂಗದ ನೀ ಅರಿಯದ್ದು

ಬರಬೇಕು ಮನ್ವಂತರ
ಈಗಲೂ ಹಪಿಹಪಿ ನನಗೆ
ಹುಂಬತನದ ಪರಮಾವಧಿ
ಕೇಳಿಸದ ಒಡೆದ ಕೂಗು
ನಾನಗಲಾರದ ಅನಿಶ್ಚಿತತೆ

ಕಳಚಿದ ದಾವಣಿ ಮಾತ್ರ
ಇನ್ನೂ ನಗುತ್ತಿದೆ

ಅವಿಜ್ಞಾನಿ

Friday 9 June 2017

ತೆರೆದ-ಮನ ( ಪುಸ್ತಕಭಿಪ್ರಾಯ)
ಹಳ್ಳಿಯ ಚಿತ್ರಗಳು  - ಗೊರೂರು ರಾಮಸ್ವಾಮಿ ಅಯ್ಯಂಗಾರ್.

ಎಚ್ಎಸ್ಆರ್ ಅವರ ನಮಸ್ಕಾರ ಕೃತಿಯಲ್ಲಿ " ಎಲ್ಲಿ ಹೋದವೋ ಗೆಳೆಯ ಆ ಕಾಲ"....ಎಂಬ ಲೇಖನ ಓದಿದೆ, ಮರುಕ್ಷಣವೆ ಗೊರೂರು ಅವರ ಪುಸ್ತಕ ಬಗ್ಗೆ ಆಕರ್ಷಣೆ ಹುಟ್ಟಿಸಿತು. ನನ್ನಗೊಂದು ವಿಚಿತ್ರ ಖಾಯಿಲೆ ಯಾರೋ ಯಾವುದೋ ಪುಸ್ತಕದ ಬಗ್ಗೆ ಹೇಳಿದಾರೆಂದರೆ ಮುಗಿಯಿತು  ಹುಡುಕಿ ಓದಿ ಮುಗಿಸುವವರೆಗೂ ಅದರದೆ ಧ್ಯಾನ. ನೇರವಾಗಿ ಪುಸ್ತಕದಂಗಡಿಗೆ ಹೋದವನೆ. ಹಳ್ಳಿಯ ಚಿತ್ರಗಳು, ಬೈಲಹಳ್ಳಿ ಸರ್ವೆ, ನಮ್ಮೂರಿನ ರಸಿಕರು ಪುಸ್ತಕ ತಂದೆ.

ಮೊದಲು ಅಸ್ವಾದಿಸಿದ ಕೃತಿಯೆ ಹಳ್ಳಿಯ ಚಿತ್ರಗಳು. ನಕ್ಕು ನಕ್ಕು ಸುಸ್ತಾಗುವಷ್ಟು ಚಿತ್ರಗಳ ಕುಣಿತ ಜೊತೆಗೆ ಜಿನುಗುವ ಜೀವನ ಪ್ರೀತಿಯ ಮೃದುತ್ವ. ಮಾಸ್ತಿಯವರು ಈ ಪುಸ್ತಕಕ್ಕೆ ಮುನ್ನುಡಿ ಬರೆಯುತ್ತಾ " ನಾ ಹೆಚ್ಚಿಗೆ ಏನು ಹೇಳಲಾರೆ ಓದಿಯೆ ಆಸ್ವಾದಿಸಬೇಕಾದ ಕೃತಿ" ಎಂಬರ್ಥದ ಮಾತುಗಳು ನೂರಕ್ಕೆ ನೂರು ನಿಜ.

"ನಮ್ಮಲ್ಲಿ ಕಾದಂಬರಿ, ಕಥೆ, ಕಾವ್ಯವನ್ನು ಗಂಭೀರವಾಗಿ ಪರಿಗಣಿಸಿದಷ್ಟು ಉಳಿದ ಪ್ರಕಾರಗಳನ್ನು ಗುರುತಿಸಲಿಲ್ಲವೆಂದು" ಎಚ್ ಎಸ್ ಆರ್ ಹೇಳುತ್ತಾರೆ.

ಮಲೆನಾಡಿನ, ಹಾಸನದ ಸುತ್ತ ಹಳ್ಳಿಯ ಅನುಭವ ಕಥನಗಳಿವು. ಓದುತ್ತಾ ಹೋದರೆ ನಮ್ಮದೆರು ನಟನೆ ಮಾಡಿ ಎಂದಿಗೂ ಪರದೆ ಸರಿಸಿಕೊಳ್ಳದ ಚಿತ್ರಗಳಿವು. ಬರೀ ಹಾಸ್ಯವೆ ಗೊರೂರುರವರ ಉದ್ದೇಶವಲ್ಲ. ಸವಕಲಾಗುತ್ತಿರುವ ಮಾನವನ ಸಂಬಂಧಗಳು,  ಬ್ರಾಹ್ಮಣರ ಅತೀಯಾದ ಮಡಿ-ಮೈಲಿಗೆ, ಆಧುನಿಕತೆಯ ಮೂರ್ತರೂಪದ ವಸ್ತುಗಳು ಹಳ್ಳಿಗೆ ನುಗ್ಗುವಾಗ ಆ ಪರಿಸರದಲ್ಲಿ ಸಿಲುಕಿ ಹುಟ್ಟಿಸುವ ಭಯ, ಕಾಳಜಿ, ನಗು ಎಲ್ಲವೂ ಒಂಥರಾ ಆಹ್ಲಾದಕರ ಸುಖ. ಸಂಜೆಗೆ ಕಡಲ ದಂಡೆಗೊ ಅಥವಾ ಅನಂತ ಹಸಿರಿನ ನೆಲಕ್ಕೊ ಕಣ್ಣಿಟ್ಟು ಪರವಶನಾಗುವ ಮನುಷ್ಯ  ಈ ಕೃತಿಯಲ್ಲಿಯು ಸಹ ಹಾಗೆ ಆಗುತ್ತಾನೆ.

ನಾನು ರತ್ನಳ ಮದುವೆಗೆ ಹೋದುದು ಪ್ರಸಂಗದಲ್ಲಿ  ನಿರೂಪಕನ ಭಾವ ಹೊಳೆ ತುಂಬಿ ಹರಿಯುವ ಪಕ್ಕದೂರಿನಲ್ಲಿಯೆ ತಮ್ಮ ಮಗಳ ಮದುವೆ ಇಟ್ಟಿರುತ್ತಾರೆ. ಅಲ್ಲಿ ಸಾಮಾನ್ಯವಾಗಿ ಹೊಳೆ ತುಂಬಿದಾಗ ತಮ್ಮ ಮನೆಯ ಬಾಗಿಲ ತುದಿಗೆ ಸೀರೆ ಒಗೆಯುತ್ತಿದರಂತೆ. ಅಂತಹ ಊರಿಗೆ ನಿರೂಪಕನ ಜೊತೆ ಸಹ ಮದುವೆಯಾತ್ರಿಗಳಲ್ಲಿ ಒಬ್ಬ ಮದುಕ ಮತ್ತು  ಇನ್ನೊಬ್ಬ ಬಂದು ಸೇರುತ್ತಾರೆ. ಕಾವೇರಿ ತುಂಬಿ ಹರಿಯುತ್ತಿದಾಳೆ ಆ ದಡ ಸೇರಬೇಕಂದರೆ ಸಂಜೆವರೆಗೂ ಕಾಯಬೇಕು ಕೊನೆಗೂ ಹರಿಗೋಲಿನಲ್ಲಿ ಕುಡುತ್ತಾರೆ. ಅಲ್ಲಿ ಬೆಸ್ತರು ಪಡುವ ಕಷ್ಟ ಇವರು ಪಡುವ ಜೀವಭಯ ಎಲ್ಲವೂ ಓದುಗರಿಗೆ ರೋಮಾಂಚನದ ಜೊತೆಗೆ ಹಾಸ್ಯ ಬಣ್ಣಿಸುತ್ತವೆ.

ಬಲವಂತದ ಮದುವೆ ಪ್ರಸಂಗದಲ್ಲಿ ನಿರೂಪಕನ ಗೆಳೆಯ ಶೀನಪ್ಪನ ಒತ್ತಾಯ ಪೂರ್ವಕ ಮದುವೆಯೆ ಚಿತ್ರಣವಿದೆ. ಜೋಡಿದಾರರು ,ಭಟ್ಟರು, ಕಾಳಿ, ಅವರೂರಿನ ಬಸ್  ಏಜೆಂಟರು,
ನಮ್ಮ ಹೊಳೆಯ ಒಂದು ಅನುಭವ ಪ್ರಸಂಗದಲ್ಲಿ ಅಸಾಮಾನ್ಯ ಈಜುಗಾರ ಹನುಮನ ಸಾಹಸ ಬಣ್ಣಿಸುತ್ತ ಕೊನೆಗೆ  ಒಂದು ಮಾತು ಹೇಳುತ್ತಾರೆ. " ಆ ಹೊಳೆಯಾಚೆ ಹನುಮನಿಲ್ಲ ಇಗ ಸೇತುವೆ ಇದೆ" , ಯಾಕೋ ಮನ ಚುಚ್ಚುವ ಮಾತಿದು ಸೇತುವೆಗಳು ಬರೀ ನಮ್ಮ ಪಾದಗಳನ್ನು ದಾಟಿಸುತ್ತವೆ. ಆದರೆ ಹಿಂದೆ ಕೊಟ್ಟ ಅನುಭವ ಕೊಡಲಾರವು.

ಕೆಲವರು ಅತೀ ಕಷ್ಟದ ಪ್ರಸಂಗಕ್ಕೆ ಸಿಲುಕಿದಾಗ ಒಮ್ಮೊಮ್ಮೆ  ಆ ಚಿತ್ರಣ ನಗು ಹುಟ್ಟಿಸುವಂತಿದ್ದರೆ ಜೋರಾಗಿ ನಕ್ಕು ಬಿಡುತ್ತೆವೆ. ಇದರರ್ಥ ನಮ್ಮಗೆ ಅವರ ಬಗ್ಗೆ  ಅನುಕಂಪವಿಲ್ಲವೆಂದಲ್ಲ ನಗು ತಡೆಯಲಾಗಿಲ್ಲವೆಂಬುದು ಎಂದು ಗೊರೂರು ಹೇಳುತ್ತಾರೆ.

ಸುಲಲಿತ ನಿರೂಪಣೆ, ಕೃಷಿಯಲ್ಲಿಯೆ ತೊಡಗಿಸಿಕೊಂಡ ಅಪ್ಪಟ ಗಾಂಧಿವಾದಿ ಗೊರೂರರವರ ಜೀವಂತ ಬದುಕಿನ ಮಾಂಸ ಖಂಡ ತುಂಬಿಕೊಂಡ ಮೆದುವಾದ ಚಿತ್ರಗಳಿವು. ಅವರು ಬಳಸುವ ಗಾದೆಮಾತುಗಳು, ಬ್ರಾಹ್ಮಣರ ಅತೀಯಾದ ಮಡಿ ಮೈಲಿಗೆ ಹುಟ್ಟಿಸುವ ವಿಚಿತ್ರ ಪರಿಸ್ಥಿತಿಗಳು ಎಲ್ಲವೂ ನಗು ಜೊತೆಗೆ ಚಿಂತನೆಗೂ ಸಹ ಹಚ್ಚುತ್ತವೆ.

ಎಲ್ಲಾ ಚಿತ್ರಗಳ ಕಥೆಯು ಸಹ ಇಲ್ಲಿ ನನಗೆ ಹೇಳಲಾಗದು. ಮಾಸ್ತಿಯಂತವರೆ ಇವು ಕೇವಲ  ಓದಿ ಅಸ್ವಾದಿಸಬೇಕೆಂದು ಹೇಳಿರುವಾಗ ನನ್ನಂತಹ ಹುಲ್ಲು ಮಾನವ ಆ ಪ್ರಸಂಗಗಳು ನಿಮ್ಮೆದೆಗೆ ದಾಟಿಸಬಲ್ಲೆನೆ ?!......

#ಕಪಿಲ ಪಿ ಹುಮನಾಬಾದೆ.
10/06/2017.

Wednesday 7 June 2017

ಮನುಷ್ಯಾಕೃತಿಯಿಂದ ....

Metamorphosis - Franz kafka.
ಅನುವಾದ:- ರೂಪಾಂತರ  -  ಗಿರಿ.

ಮನುಷ್ಯಾಕೃತಿಯಿಂದ ಒಂದು ಹುಳವಾಗಿ ರೂಪಾಂತರ ಹೊಂದುವ ಸಂಚಾರಿ ವ್ಯಾಪರಿ  ಗ್ರಿಗೊರಸಂಸನ ಕಥೆ ಇದು. ಒಂದರ್ಥದಲ್ಲಿ ಇದು ಮನುಷ್ಯನವಶ್ಯಕತೆಯ ಬಗ್ಗೆ ಮಾತಾಡುತ್ತದೆಯೆನೋ ಅನಿಸುತ್ತದೆ. ರಕ್ತ ಸಂಬಂಧವಾಗಲಿ ಅಥವಾ ಆತ್ಮೀಯ  ಪರಿಚಯಗಳಾಗಲಿ ಆ ವ್ಯಕ್ತಿಯ ಅವಶ್ಯಕತೆ ಮುಗಿದ ನಂತರ ದೂರ ಇಡುವ ಅಥವಾ ಅವನನ್ನು ನಮ್ಮ ಮೂಗಿನ ನೇರಕ್ಕೆ ಅಥೈಸಿಕೊಂಡತೆ ನಡೆಸಿಕೊಳ್ಳುವಂತೆ ಕಾಣುತ್ತವೆ.

ವಸ್ತುಸ್ಥಿತಿಯನ್ನು ಇದ್ದಂತೆಯೇ ಚಿತ್ರಿಸಿಯೂ ಅದರ ಚಿತ್ರಣದಲ್ಲಿ ಹಲವು ಬಗೆಯ ಅಗಾಧವಾದ ತಾಪದಾಯಕವಾದ ವಿಪರ್ಯಾಸಗಳನ್ನು ಹೊಳೆಯಿಸುವುದು ಕಾಫ್ಕಾನ ಬರಹದ ಅತೀ ಮುಖ್ಯ ಲಕ್ಷಣವೆಂದು ಗಿರಿ ಹೇಳುತ್ತಾರೆ.

"ಒಂದು ಬೆಳಗ್ಗೆ ಸಂಸ  ಅನಿಷ್ಟ ಕನಸುಗಳಿಂದ ಎಚ್ಚತ್ತುಕೊಂಡಾಗ ಹಾಸಿಗೆಯಲ್ಲಿ ತಾನೊಂದು ದೈತ್ಯಾಕಾರದ ಹುಳುವಾಗಿ ಪರಿವರ್ತನೆಗೊಂಡಿದ್ದು ವ್ಯಕ್ತವಾಯಿತು"- ಕಾದಂಬರಿಯ ಮೊದಲ ಸಾಲುಗಳಿವು.  ಒಂದರ್ಥದಲ್ಲಿ " ಮನುಷ್ಯನ ವರ್ತನೆಗೆ ಹುಳುವಿನ ಹೊದಿಕೆ ಹಾಕಿ ಸುತ್ತಲಿನವರ ಕ್ರೀಯೆ ಪ್ರತಿಕ್ರಿಯೆ ದಾಖಲಿಸುವುದಾಗಿದೆಯಂದು ಮೇಲುನೋಟಕ್ಕೆ ಕಂಡರೂ"ಸಹ ....ಕಾಫ್ಕಾನಗೆ ಇಲ್ಲಿ ಏನೋ ಹೊಸತು ಹೇಳುವುದಿದೆ. ಸಂಸನ ಮೇಲೆಯೆ ಅವಲಂಬಿತವಾದ ಪುಟ್ಟ ಕುಟುಂಬ ಮುಂದೆ ಅವ ಹುಳುವಾದಾಗ ಉಳಿದವರು  ದುಡಿಯಲು ಮನೆಯಾಚೆ ಹೆಜ್ಜೆ  ಇಟ್ಟ ತಕ್ಷಣ ಸಂಸ ಅವರ ಕಣ್ಣಿಗೆ  ಇನ್ನೊಂದು ಬಗ್ಗೆಯಲ್ಲಿ ಕಾಣುತ್ತಾನೆ.

ಸಂಸನ ಅಪ್ಪ, ಅಮ್ಮ, ತಂಗಿ ಇವಿರಷ್ಟೆ ಅವನ ಕುಟುಂಬ. ಹೆಡ್ ಕ್ಲರ್ಕ್ ಮನೆಗೆ ಬಂದಾಗ ಸಂಸ ರೂಮಿನಿಂದಲೆ " ಹೇಗೆ ಇಂಥದೊಂದು ತೊಂದರೆ ಒಬ್ಬನನ್ನು ಇದಕ್ಕಿದ್ದ ಹಾಗೆ ಮಲಗಿಸಿಬಿಡುತ್ತೆ ನೋಡಿ ! ಎಂದು ಹೇಳುವಲ್ಲಿ , ಆ ಸಮಸ್ಯೆಯಿಂದ ಕಳೆದು ಹೋಗುತ್ತಿರುವ ನಂಬಿಕೆಯ ಕೊಂಡಿ ಜೋಡಿಸುವ ತಂತುವಾಗ ಈ ಮಾತು ಆಡುತ್ತಾನೆ.

ಬದುಕಿನ ತೃಪ್ತಿ, ಖುಷಿ, ಎಲ್ಲವೂ ಜಿಗುಪ್ಸೆಯಲ್ಲಿಯೆ ಅಂತ್ಯವಾಗುವುದೆಂದರೆ ? ಈ ಪ್ರಶ್ನೆಯನ್ನು ಸಂಸ ಕೇಳಿಕೊಳ್ಳುವಾಗ ಏನೋ ವಿಚಿತ್ರ ಅನಿಸುತ್ತದೆ. ಅವ ಹುಳುವಾಗಿ ಪರಿವರ್ತನೆಗೊಂಡಿದಕ್ಕೆ ಈ ಮಾತಿರಬಹುದು.

ಅವನು  ಒಂದು ತಿಂಗಳಲ್ಲಿಯೆ ಹುಳುವಾಗಿ ರೂಪಾಂತರ ಹೊಂದುತ್ತಾನೆ. ಆದರೆ ತಾಯಿ ಅವನನ್ನು  ಇಗಲೂ ಸ್ವೀಕರಿಸಲು ಸಿದ್ಧಳಿದಾಳೆ. ಅಲ್ಲಿ ಹೇಸಿಗೆಯಿಲ್ಲ. ಮರುಕವಿದೆ. ಅಪ್ಪನಿಗೆ ಬದುಕು ಸಾಗಿಸುವುದೊಂದೆ ಚಿಂತೆ. ತಂಗಿಗೂ ಸಹ. ಆದರೂ ಅವನ ಕೋಣೆ ಪ್ರವೇಶಿಸಿ ಅವನಿಗೆ ಅನುಕೂಲಕರವಾಗುವ ಹಾಗೇ ನೋಡುಕೊಳ್ಳುತಳಾದರೂ " ಒಂದು ಹುಳುವಿಗೆ ಬೇಕಾದ ಸವಲತ್ತು ಮತ್ತು ಖಾಲಿತನ ನೀಡುತ್ತಾಳೆಯೆ ಹೊರತು ಅದರಲ್ಲಿ ಮನುಷ್ಯ ಹೃದಯದ ಬಗ್ಗೆ ಚಿಂತಿಸುವುದೆಯಿಲ್ಲ".

ಕೊನೆಗೆ ಹುಳು (ಸಂಸ) ಸಾಯುತ್ತದೆ. ಕೆಲಸದವಳು ಖುಷಿಯಿಂದ ನಾ ಆ ಗೊಬ್ಬರಹುಳವನ್ನು ಬಿಸಾಕಿ ಬಂದೆ ಎಂದಾಗಲೂ ಮನೆಯವರು ಆಶ್ಚರ್ಯ ಪಡುವುದಿಲ್ಲ. ಯಾವುದೋ ಹುಳವನ್ನು ಪುಟ್ಟ ಮಗು ಸಾಯಿಸಿದ್ದರೆ ಚಿಂತಿಸುತ್ತೆವೆಯೆ ಹಾಗೇ .....

ಯಾಕೆ ಕಾಫ್ಕಾನ  ಆ ಸಂಸನನ್ನು ಅಂದರೆ ಮನೆಗೆ ಆಧಾರವಾದ ಮಗನನ್ನು ಹುಳುವಾಗಿ ಪರಿವರ್ತಿಸಿದ ಮತ್ತು  ಒಟ್ಟಾರೆ ಆಶಯವೇನೆಂದು ಪ್ರಶ್ನಿಸಿಕೊಂಡಾಗ. ನನಗೆ ಸಂಸನ ಮಾತೆ ನೆನಪಾಗುತ್ತದೆ..

" ಈ ಸುಖ, ಶಾಂತಿ, ತೃಪ್ತಿಗಳೆಲ್ಲ ಅಸಾಧ್ಯವಾದ ಭೀತಿ ಜಿಗುಪ್ಸೆಯಲ್ಲಿ ಕೊನೆಗೊಳ್ಳುವುದಾದರೆ ಏನು ಪ್ರಯೋಚನ ?"

ಗಿರಿಯವರು ಅರ್ಥಪೂರ್ಣವಾದ ಪ್ರಸ್ತಾವನೆ ಇದಕ್ಕೆ ಬರೆದಿದ್ದಾರೆ. ಕಾಫ್ಕಾನ ಬದುಕು ಮತ್ತು ಸಾಹಿತ್ಯದ ಪರಿಚಯ ಆ ಬರಹದಲ್ಲಿದೆ.

# ಕಪಿಲ ಪಿ ಹುಮನಾಬಾದೆ.
7-06-2017.

Monday 5 June 2017

ನೀವೊಂದು ಸಾರಿ ಓದಿ ನೋಡಿ..

ಗಾಳಿಗೋಣು

ಕಿಟಕಿಯ ಕಿವಿಹಿಂಡಿ
ಬಾಯಿ ತೆರೆಸುತ್ತೇನೆ
ಅದರ ವಾಂತಿಯನ್ನೇ ಬೆಳಕೆಂದು
ಸುಮ್ಮನಿರುತ್ತೇನೆ

ಈ ಮನೆಯಾಚೆಗಿನ ಅಂಗಳದಲ್ಲಿ
ದೊಡ್ಡ ಮರ

ಕೆಳಗೆ
ಅಂಗಾತ ಬಿದ್ದ ಹಣ್ಣೆಲೆಗಳು
ಕೊಳೆ ಮೆತ್ತಿಕೊಂಡ ಹೂವಿನ ಬಟ್ಟೆ
ಎಳೆಕಾಯಿಯ ಮೌನ

ಹೇಳಿದರೂ ಕೇಳದ
ಮಕ್ಕಳ ಗೊಣಗುತ್ತಾ
ಮುದುಕ ಗುಡಿಸುತ್ತಿದ್ದಾನೆ

ಅವನು ಆಚೆ ಹೋದಂತೆ
ಗಾಳಿ ಏನೋ ಕುಡಿಸುತ್ತದೆ
ನಶೆಯೇರಿದ ಎಲೆಗಳು
ಹಳದಿಯೆಲೆಯ ಕಿತ್ತು,
ಪಕಳೆಗಳ ಉದುರಿಸಿ
ಎಳೆಕಾಯಿಯ ಬೀಳಿಸಿ
ಏನೂ ಆಗಿಲ್ಲವೆಂದು ಷರಾ ಬರೆಯುತ್ತವೆ

ಇವತ್ತು ಕಿಟಕಿ ತೆರೆಯಲು
ಮನಸಾಗಲೇ ಇಲ್ಲ
ನಿನ್ನೆ ಮುದುಕನ ಮಗ ಮತ್ತೇರಿದ್ದನಂತೆ
ಅವನಿನ್ನು ಗುಡಿಸುವುದಿಲ್ಲವಂತೆ!

# ಹಸನ್ಮುಖಿ ಬಡಗನ್ನೂರು.