Monday, 5 June 2017

ನೀವೊಂದು ಸಾರಿ ಓದಿ ನೋಡಿ..

ಗಾಳಿಗೋಣು

ಕಿಟಕಿಯ ಕಿವಿಹಿಂಡಿ
ಬಾಯಿ ತೆರೆಸುತ್ತೇನೆ
ಅದರ ವಾಂತಿಯನ್ನೇ ಬೆಳಕೆಂದು
ಸುಮ್ಮನಿರುತ್ತೇನೆ

ಈ ಮನೆಯಾಚೆಗಿನ ಅಂಗಳದಲ್ಲಿ
ದೊಡ್ಡ ಮರ

ಕೆಳಗೆ
ಅಂಗಾತ ಬಿದ್ದ ಹಣ್ಣೆಲೆಗಳು
ಕೊಳೆ ಮೆತ್ತಿಕೊಂಡ ಹೂವಿನ ಬಟ್ಟೆ
ಎಳೆಕಾಯಿಯ ಮೌನ

ಹೇಳಿದರೂ ಕೇಳದ
ಮಕ್ಕಳ ಗೊಣಗುತ್ತಾ
ಮುದುಕ ಗುಡಿಸುತ್ತಿದ್ದಾನೆ

ಅವನು ಆಚೆ ಹೋದಂತೆ
ಗಾಳಿ ಏನೋ ಕುಡಿಸುತ್ತದೆ
ನಶೆಯೇರಿದ ಎಲೆಗಳು
ಹಳದಿಯೆಲೆಯ ಕಿತ್ತು,
ಪಕಳೆಗಳ ಉದುರಿಸಿ
ಎಳೆಕಾಯಿಯ ಬೀಳಿಸಿ
ಏನೂ ಆಗಿಲ್ಲವೆಂದು ಷರಾ ಬರೆಯುತ್ತವೆ

ಇವತ್ತು ಕಿಟಕಿ ತೆರೆಯಲು
ಮನಸಾಗಲೇ ಇಲ್ಲ
ನಿನ್ನೆ ಮುದುಕನ ಮಗ ಮತ್ತೇರಿದ್ದನಂತೆ
ಅವನಿನ್ನು ಗುಡಿಸುವುದಿಲ್ಲವಂತೆ!

# ಹಸನ್ಮುಖಿ ಬಡಗನ್ನೂರು.

1 comment: