Friday 9 June 2017

ತೆರೆದ-ಮನ ( ಪುಸ್ತಕಭಿಪ್ರಾಯ)
ಹಳ್ಳಿಯ ಚಿತ್ರಗಳು  - ಗೊರೂರು ರಾಮಸ್ವಾಮಿ ಅಯ್ಯಂಗಾರ್.

ಎಚ್ಎಸ್ಆರ್ ಅವರ ನಮಸ್ಕಾರ ಕೃತಿಯಲ್ಲಿ " ಎಲ್ಲಿ ಹೋದವೋ ಗೆಳೆಯ ಆ ಕಾಲ"....ಎಂಬ ಲೇಖನ ಓದಿದೆ, ಮರುಕ್ಷಣವೆ ಗೊರೂರು ಅವರ ಪುಸ್ತಕ ಬಗ್ಗೆ ಆಕರ್ಷಣೆ ಹುಟ್ಟಿಸಿತು. ನನ್ನಗೊಂದು ವಿಚಿತ್ರ ಖಾಯಿಲೆ ಯಾರೋ ಯಾವುದೋ ಪುಸ್ತಕದ ಬಗ್ಗೆ ಹೇಳಿದಾರೆಂದರೆ ಮುಗಿಯಿತು  ಹುಡುಕಿ ಓದಿ ಮುಗಿಸುವವರೆಗೂ ಅದರದೆ ಧ್ಯಾನ. ನೇರವಾಗಿ ಪುಸ್ತಕದಂಗಡಿಗೆ ಹೋದವನೆ. ಹಳ್ಳಿಯ ಚಿತ್ರಗಳು, ಬೈಲಹಳ್ಳಿ ಸರ್ವೆ, ನಮ್ಮೂರಿನ ರಸಿಕರು ಪುಸ್ತಕ ತಂದೆ.

ಮೊದಲು ಅಸ್ವಾದಿಸಿದ ಕೃತಿಯೆ ಹಳ್ಳಿಯ ಚಿತ್ರಗಳು. ನಕ್ಕು ನಕ್ಕು ಸುಸ್ತಾಗುವಷ್ಟು ಚಿತ್ರಗಳ ಕುಣಿತ ಜೊತೆಗೆ ಜಿನುಗುವ ಜೀವನ ಪ್ರೀತಿಯ ಮೃದುತ್ವ. ಮಾಸ್ತಿಯವರು ಈ ಪುಸ್ತಕಕ್ಕೆ ಮುನ್ನುಡಿ ಬರೆಯುತ್ತಾ " ನಾ ಹೆಚ್ಚಿಗೆ ಏನು ಹೇಳಲಾರೆ ಓದಿಯೆ ಆಸ್ವಾದಿಸಬೇಕಾದ ಕೃತಿ" ಎಂಬರ್ಥದ ಮಾತುಗಳು ನೂರಕ್ಕೆ ನೂರು ನಿಜ.

"ನಮ್ಮಲ್ಲಿ ಕಾದಂಬರಿ, ಕಥೆ, ಕಾವ್ಯವನ್ನು ಗಂಭೀರವಾಗಿ ಪರಿಗಣಿಸಿದಷ್ಟು ಉಳಿದ ಪ್ರಕಾರಗಳನ್ನು ಗುರುತಿಸಲಿಲ್ಲವೆಂದು" ಎಚ್ ಎಸ್ ಆರ್ ಹೇಳುತ್ತಾರೆ.

ಮಲೆನಾಡಿನ, ಹಾಸನದ ಸುತ್ತ ಹಳ್ಳಿಯ ಅನುಭವ ಕಥನಗಳಿವು. ಓದುತ್ತಾ ಹೋದರೆ ನಮ್ಮದೆರು ನಟನೆ ಮಾಡಿ ಎಂದಿಗೂ ಪರದೆ ಸರಿಸಿಕೊಳ್ಳದ ಚಿತ್ರಗಳಿವು. ಬರೀ ಹಾಸ್ಯವೆ ಗೊರೂರುರವರ ಉದ್ದೇಶವಲ್ಲ. ಸವಕಲಾಗುತ್ತಿರುವ ಮಾನವನ ಸಂಬಂಧಗಳು,  ಬ್ರಾಹ್ಮಣರ ಅತೀಯಾದ ಮಡಿ-ಮೈಲಿಗೆ, ಆಧುನಿಕತೆಯ ಮೂರ್ತರೂಪದ ವಸ್ತುಗಳು ಹಳ್ಳಿಗೆ ನುಗ್ಗುವಾಗ ಆ ಪರಿಸರದಲ್ಲಿ ಸಿಲುಕಿ ಹುಟ್ಟಿಸುವ ಭಯ, ಕಾಳಜಿ, ನಗು ಎಲ್ಲವೂ ಒಂಥರಾ ಆಹ್ಲಾದಕರ ಸುಖ. ಸಂಜೆಗೆ ಕಡಲ ದಂಡೆಗೊ ಅಥವಾ ಅನಂತ ಹಸಿರಿನ ನೆಲಕ್ಕೊ ಕಣ್ಣಿಟ್ಟು ಪರವಶನಾಗುವ ಮನುಷ್ಯ  ಈ ಕೃತಿಯಲ್ಲಿಯು ಸಹ ಹಾಗೆ ಆಗುತ್ತಾನೆ.

ನಾನು ರತ್ನಳ ಮದುವೆಗೆ ಹೋದುದು ಪ್ರಸಂಗದಲ್ಲಿ  ನಿರೂಪಕನ ಭಾವ ಹೊಳೆ ತುಂಬಿ ಹರಿಯುವ ಪಕ್ಕದೂರಿನಲ್ಲಿಯೆ ತಮ್ಮ ಮಗಳ ಮದುವೆ ಇಟ್ಟಿರುತ್ತಾರೆ. ಅಲ್ಲಿ ಸಾಮಾನ್ಯವಾಗಿ ಹೊಳೆ ತುಂಬಿದಾಗ ತಮ್ಮ ಮನೆಯ ಬಾಗಿಲ ತುದಿಗೆ ಸೀರೆ ಒಗೆಯುತ್ತಿದರಂತೆ. ಅಂತಹ ಊರಿಗೆ ನಿರೂಪಕನ ಜೊತೆ ಸಹ ಮದುವೆಯಾತ್ರಿಗಳಲ್ಲಿ ಒಬ್ಬ ಮದುಕ ಮತ್ತು  ಇನ್ನೊಬ್ಬ ಬಂದು ಸೇರುತ್ತಾರೆ. ಕಾವೇರಿ ತುಂಬಿ ಹರಿಯುತ್ತಿದಾಳೆ ಆ ದಡ ಸೇರಬೇಕಂದರೆ ಸಂಜೆವರೆಗೂ ಕಾಯಬೇಕು ಕೊನೆಗೂ ಹರಿಗೋಲಿನಲ್ಲಿ ಕುಡುತ್ತಾರೆ. ಅಲ್ಲಿ ಬೆಸ್ತರು ಪಡುವ ಕಷ್ಟ ಇವರು ಪಡುವ ಜೀವಭಯ ಎಲ್ಲವೂ ಓದುಗರಿಗೆ ರೋಮಾಂಚನದ ಜೊತೆಗೆ ಹಾಸ್ಯ ಬಣ್ಣಿಸುತ್ತವೆ.

ಬಲವಂತದ ಮದುವೆ ಪ್ರಸಂಗದಲ್ಲಿ ನಿರೂಪಕನ ಗೆಳೆಯ ಶೀನಪ್ಪನ ಒತ್ತಾಯ ಪೂರ್ವಕ ಮದುವೆಯೆ ಚಿತ್ರಣವಿದೆ. ಜೋಡಿದಾರರು ,ಭಟ್ಟರು, ಕಾಳಿ, ಅವರೂರಿನ ಬಸ್  ಏಜೆಂಟರು,
ನಮ್ಮ ಹೊಳೆಯ ಒಂದು ಅನುಭವ ಪ್ರಸಂಗದಲ್ಲಿ ಅಸಾಮಾನ್ಯ ಈಜುಗಾರ ಹನುಮನ ಸಾಹಸ ಬಣ್ಣಿಸುತ್ತ ಕೊನೆಗೆ  ಒಂದು ಮಾತು ಹೇಳುತ್ತಾರೆ. " ಆ ಹೊಳೆಯಾಚೆ ಹನುಮನಿಲ್ಲ ಇಗ ಸೇತುವೆ ಇದೆ" , ಯಾಕೋ ಮನ ಚುಚ್ಚುವ ಮಾತಿದು ಸೇತುವೆಗಳು ಬರೀ ನಮ್ಮ ಪಾದಗಳನ್ನು ದಾಟಿಸುತ್ತವೆ. ಆದರೆ ಹಿಂದೆ ಕೊಟ್ಟ ಅನುಭವ ಕೊಡಲಾರವು.

ಕೆಲವರು ಅತೀ ಕಷ್ಟದ ಪ್ರಸಂಗಕ್ಕೆ ಸಿಲುಕಿದಾಗ ಒಮ್ಮೊಮ್ಮೆ  ಆ ಚಿತ್ರಣ ನಗು ಹುಟ್ಟಿಸುವಂತಿದ್ದರೆ ಜೋರಾಗಿ ನಕ್ಕು ಬಿಡುತ್ತೆವೆ. ಇದರರ್ಥ ನಮ್ಮಗೆ ಅವರ ಬಗ್ಗೆ  ಅನುಕಂಪವಿಲ್ಲವೆಂದಲ್ಲ ನಗು ತಡೆಯಲಾಗಿಲ್ಲವೆಂಬುದು ಎಂದು ಗೊರೂರು ಹೇಳುತ್ತಾರೆ.

ಸುಲಲಿತ ನಿರೂಪಣೆ, ಕೃಷಿಯಲ್ಲಿಯೆ ತೊಡಗಿಸಿಕೊಂಡ ಅಪ್ಪಟ ಗಾಂಧಿವಾದಿ ಗೊರೂರರವರ ಜೀವಂತ ಬದುಕಿನ ಮಾಂಸ ಖಂಡ ತುಂಬಿಕೊಂಡ ಮೆದುವಾದ ಚಿತ್ರಗಳಿವು. ಅವರು ಬಳಸುವ ಗಾದೆಮಾತುಗಳು, ಬ್ರಾಹ್ಮಣರ ಅತೀಯಾದ ಮಡಿ ಮೈಲಿಗೆ ಹುಟ್ಟಿಸುವ ವಿಚಿತ್ರ ಪರಿಸ್ಥಿತಿಗಳು ಎಲ್ಲವೂ ನಗು ಜೊತೆಗೆ ಚಿಂತನೆಗೂ ಸಹ ಹಚ್ಚುತ್ತವೆ.

ಎಲ್ಲಾ ಚಿತ್ರಗಳ ಕಥೆಯು ಸಹ ಇಲ್ಲಿ ನನಗೆ ಹೇಳಲಾಗದು. ಮಾಸ್ತಿಯಂತವರೆ ಇವು ಕೇವಲ  ಓದಿ ಅಸ್ವಾದಿಸಬೇಕೆಂದು ಹೇಳಿರುವಾಗ ನನ್ನಂತಹ ಹುಲ್ಲು ಮಾನವ ಆ ಪ್ರಸಂಗಗಳು ನಿಮ್ಮೆದೆಗೆ ದಾಟಿಸಬಲ್ಲೆನೆ ?!......

#ಕಪಿಲ ಪಿ ಹುಮನಾಬಾದೆ.
10/06/2017.

No comments:

Post a Comment