Tuesday 15 August 2017

ಮೊಗ್ಗುಗಳ ಹೆಣ

ಹಾಲ ಪಸೆ ಆರದ ತುಟಿಯ ಚಂದ್ರನ ತೂಗುತಲಿತ್ತು ಅಮವಾಸ್ಯೆಯ ಇರುಳು ‌
ಅದರ ಕೊನೆಯುಸಿರಾದರೂ ಹುಟ್ಟಿಸಲಿ‌ ಪಸೆಯಾರಿದ ಎದೆಯಲಿ

ಅರೆ ಮುಚ್ಚಿದ ಕಣ್ಣುಗಳೊಳಗೆ 
ಕಾಣುತಿದೆ ದಿವ್ಯ ಶಾಂತಿ
ಮುದ್ದು ಸುರಿವ ಗುಂಗುರಲೂ
ನಸುಗೆಂಪಿನ ಕೆನ್ನೆಯಲೂ
ನೋವ ಸಹಿಸದ ಎಳೇ ಸೂರ್ಯ ಮತ್ತೆ ಮತ್ತೆ  ಸಾಯುತಿದ್ದಾನೆ ರಣಗೆಂಪು
ಶರಧಿಯಲಿ

ಕಣ್ಣ ಮುಚ್ಚಿ ತೆರೆದರೂ ಮತ್ತೆ
ಮರೆಯಾಗದ ಮುಖವ
ಮತ್ತೆ ಸುಡುತಿದೆ ನನ್ನ ಬಿಸಿಯ ಹನಿಗಳು
ಉಕ್ಕಿ ಬರೋ ಕೊರಳನ್ನ
ತಣಿಸಬಹುದೇನೋ
ಕರುಳ ಕಿತ್ತ ಹೆತ್ತಬ್ಬೆಯ
ನೋವಿನ ಶಾಪ ಕಲ್ಲೆದೆಯನೂ
ಸೀಳಿ ಒತ್ತ ಬಹುದು
ಉಗುರುಗೆಂಪಿನ ಬೆಣ್ಣೆ ಮುದ್ದೆಗೆ ಉಸಿರ ಕೊಡಿಸುವ ಕೊನೆ ಹಂಬಲ
ದಾಹದುರಿಗೆ ಆಹುತಿಯು ಮೊಗ್ಗಿನ ಹೆಣ

ಬೆವೆತ ಬೆವರ ನೆಕ್ಕಿ ಗಂಟಲು
ಒದ್ದೆ ಮಾಡುವವರೋ
ಮೈಕಿಗೆ ನಾಲಿಗೆಯ ಮೆತ್ತಿ
ಬಿಟ್ಟಿದ್ದಾರೆ ಇಲ್ಲೋ ಶ್ವಾಸ
ಸ್ವಾತಂತ್ರ್ಯ ಕೇಳುತಿದೆ
ಎಂಜಲು ವೀರರ ಬುಟ್ಟಿ
ತುಂಬಾ ಹಸಿರಕ್ತದ ಹೂವು ಅಂಗಾತ ಬೀಳುತ್ತಲೇ ಇವೆ

ಎಸಳೆಸಲುಕಿತ್ತು ಬಾವುಟ ಹಾರಿಸುತ್ತಾರೆ ಬಾಡಿಗೆ ಕೈಗಳೋ ಚಪ್ಪಾಳೆ ತಟ್ಟುತ್ತಿವೆ..

ಕಾವ್ಯ ಎಸ್ ಕೋಳಿವಾಡ್

No comments:

Post a Comment