ಸ್ಫೋಟ - ( ಸಣ್ಣ ಕಥೆ) ದೀಪ್ತಿ ಭದ್ರಾವತಿ.
ಸೆಪ್ಟೆಂಬರ್ ತಿಂಗಳ ಈ ಸಾರಿಯ ಮಯೂರದಲ್ಲಿ ದೀಪಕ್ಕಳ ಸ್ಫೋಟ ಕಥೆ ನೋಡಿದೆ ಓದಬೇಕೆಂದು ಮೇಜಿನ ಮೇಲಿಟ್ಟು ಅವರು ಈ ಹಿಂದೆ ಕಳುಹಿಸಿದ "ಆ ಬದಿಯ ಹೂವು" ಕಥಾಸಂಕಲನದ ತಿಮ್ಮಯ್ಯ ಮಾರ್ಕೆಟ್ ಓದಿ ಒಂದೆರೆಡು ಕಥೆ ಸುಮ್ಮನೆ ತಿರುವಿ ಹಾಕಿ ಮತ್ತೆ ಸ್ಪೋಟಕ್ಕೆ ಬಂದೆ. ಶಾಂತಿನಾಥ ದೇಸಾಯಿಯವರ ಕ್ಷಿತಿಜ ಕಥಾಸಂಕಲನದಲ್ಲಿ ಕ್ಷಿತಿಜ ಕಥೆ ಬಿಟ್ಟರೆ ಬಹುತೇಕ ಉಳಿದೆಲ್ಲವು ಅಥವಾ ಕ್ಷಿತಿಜ ಕಥೆಯು ಹೆಣ್ಣೊಬ್ಬಳ ಸುತ್ತವೆ ಗಿರಕಿ ಹೊಡೆಯುತ್ತವೆ. ಗಂಡ ಸತ್ತ ಮೇಲೆ, ಅಕಾಲ, ಬೇಸರ ಈ ಕಥೆಗಳು ಹೆಣ್ತನದ ಸುಪ್ತ ಬಯಕೆಗಳನ್ನು ಚಿತ್ರಿಸುತ್ತವೆ. ಬದಲಾಗುತ್ತಿರುವ ಜೀವನ ಸಂದರ್ಭಕ್ಕೆ ತಕ್ಕಂತೆ ಕಿಟಕಿಯಾಚೆ ಹಣಕಿ ಹಾಕುವ ಸಂಬಂಧಗಳು ವಿವರಿಸುತ್ತವೆ. ಅಕಾಲ ಕಥೆಯಂತೂ ಗಂಡನೊಬ್ಬ ತನ್ನ ಹೆಂಡತಿ ಹೆರಿಗೆಗೆ ಹೋದಾಗ ಅವಳ ಕಾಗದಗಳಿಗೆ ಕಾಯುವುದಾಗಿದೆ ಮತ್ತು ಅವನಲ್ಲಿ ಅವಳಿಲ್ಲದಿರುವಿಕೆಯ ಖಾಲಿತನವನ್ನು ದಾಟುವ, ನಿಯಂತ್ರಿಸಿಕೊಳ್ಳುವಂತೆ ಕಾಣುತ್ತದೆ -ಈ ಮಾತುಗಳೆಲ್ಲ ಯಾಕೆ ಹೇಳಬೇಕಾಯಿತೆಂದರೆ ಇಂತಹದೆ ದಾಂಪತ್ಯ ಸಮಸ್ಯೆಯ ಇನ್ನೊಂದು ಕಥೆಯೆ ಸ್ಫೋಟವೆಂದು ಒಂದು ಫ್ರೆಮ್ ಹಾಕಿಕೊಂಡು ನೋಡುತ್ತಿಲ್ಲ ಬದಲಾಗಿ ಮುಂದುವರೆಕೆಯ ಭಾಗವಾಗಿ ನೋಡುತ್ತಿರುವೆ.
" ಸ್ಫೋಟಗೊಳ್ಳುವುದೆಂದರೆ ಒಳಕುದಿಗಳ ಹೊರಹಾಕಿ ನಿರಾಳವಾಗುವುದು ಎನ್ನುವುದರ ಜೊತೆಗೆ ಬರಿದಾಗುವುದು, ಬಯಲಾಗುವುದು ಎನ್ನುವ ಅರ್ಥಗಳೂ ಇವೆ"
ಈ ಕಥೆಯ ಮೊದಲ ಸಾಲುಗಳಿವು. ಹೆಣ್ಣೊಂದು ಕಣ್ಣೆತ್ತಿಯು ಸಹ ನೋಡದ ಗಂಡಸೊಂದಿಗೆ ಜೀವನ ಪರ್ಯಂತ ಕಳೆಯುವುದೆಂದರೆ ಅದೊಂದು ಸವಾಲೆ ಸರಿ. ಇಲ್ಲಿವರೆಗೂ ಅಥವಾ ಮುಂದೆಯು ಈ ಸವಾಲನ್ನು ತ್ಯಾಗದಿಂದಲೆ ಸ್ವೀಕರಿಸುತ್ತ ಬಂದಿದ್ದಾಳೆ ,ಮುಂದೆಯೂ ?.
" ಗೊತ್ತೇ ಇರದವನ ಎದುರು ತೆರೆದುಕೊಳ್ಳುವ ಭಯವಿತ್ತು, ಕಾತರವಿತ್ತು, ನಿರೀಕ್ಷೆಯೂ ಇತ್ತು ಮದುವೆ ಎಂದಾಕ್ಷಣಕ್ಕೆ ಅವೆಲ್ಲ ಎದುರು ಬಂದು ನಿಂತು ತನ್ನನ್ನು ಲಜ್ಜೆಯ ಹೊಳೆಯಲ್ಲಿ ಮೀಯುಸಬಹುದೆಂದು ಕನಸಿತ್ತು. ಆದರೆ ಈಗ ಬೆತ್ತಲೆ ಎನ್ನುವುದು ನಿರ್ವಿಕಾರ ಎನ್ನುವಷ್ಟರ ಮಟ್ಟಿಗೆ ಮನಸ್ಸು ಮರಗಟ್ಟಿ ಹೋಗಿದೆ" - ಅರುಂಧತಿ ಸ್ಟ್ರೆಚರ್ನಲ್ಲಿ ಮಲಗಿ ಇದೆಲ್ಲ ಯೋಚಿಸುತ್ತಿದ್ದಳು. ಹೆಣ್ಣಿಗೆ ಸುಖ ಕೇಳುವ ಹಕ್ಕಿಲ್ಲವೆಂದು ಗಂಡನ ಮನೆಗೆ ಕಳಿಸಿ ಕೊಡುವ ತಂದೆತಾಯಿಗಳ ಕಣ್ಣೀರಡಿಯಲ್ಲಿ ತನ್ನ ಬಯಕೆಗಳೆಲ್ಲ ಕರಗಿಸಿದಳು.
ಆಸ್ತಿಯಿತ್ತು ಮಾತುಗಳಿರಲಿಲ್ಲ. ಬೆರಳುಗಳ ಸ್ಪರ್ಶಗಳಿರಲಿಲ್ಲ. ಗಂಡನೊಂದಿಗೆ ಗುದ್ಡಾಡಬೇಕಂದರೆ ಅವನೋ ತಣ್ಣಗೆ ಕೊರೆವ ಇದ್ದಿಲು. ಇಲ್ಲಿ ಬರೀ ದೈಹಿಕ ಕಾಮನೆಗಳ ಅನಾವರಣವಲ್ಲ. ಇದ್ಯಾವುದರಲ್ಲಿಯು ಇಂಟರೆಸ್ಟ್ ಇಲ್ಲವೆನ್ನುವ ಗಂಡ ತನ್ನ ಹೆತ್ತವರ ಒತ್ತಾಯಕ್ಕೆ ಇನ್ನೊಂದು ಹೆಣ್ಣಿನ ಬದುಕು ಬಲಿ ಕೊಡಬೇಕೆ ? ತನ್ನ ದೌರ್ಬಲ್ಯಗಳು, ಅಂತಸ್ತುಗಳ ಪ್ರದರ್ಶನಕ್ಕಾಗಿ ಕೃತಕತೆಯ ಮೊರೆ ಹೋಗುವ ಗಂಡನ ಬಗ್ಗೆ ಅರುಂಧತಿಗೆ ತಿರಸ್ಕಾರದ ಜೊತೆ ಅದನ್ನು ಹೊಂದಿಕೊಳ್ಳಬೇಕಾದ ಅವಳದೆ ಕಾರಣಗಳಿವೆ.
ಅಂತಿಮವಾಗಿ ಕಥೆಯ ಕೊನೆಯಲ್ಲಿ ಗೌತಮನ ಸೆಮನ್ ಬದಲಾಗಿ ಡಾಕ್ಟರ್ ಕೈಹಿಡಿದು ಬೇರೆ ಯಾರದ್ದಾದರೂ ಇನ್ಸರ್ಟ್ ಮಾಡಿ ಅಂತಾಳೆ. ಇದು ಸಹ ಒಂದು ರೀತಿಯಲ್ಲಿ ಸ್ಫೋಟಗೊಳ್ಳುವುದೆ.
"ಯಾವ ಹೆಂಗಸನ್ನು ಕಂಡರೂ ಉಕ್ಕಲಾರದ ಉಲ್ಕೆಯ ಮುಂದೆ ಉರಿಯುವ ಅಗತ್ಯವಾದರೂ ಎಲ್ಲಿತ್ತು"...
ಈ ಕಥೆಯನ್ನು ನಾವು ಇಡೀಯಾಗಿ ನೋಡಿದಾಗ. " ಒತ್ತಾಯಿಸಲ್ಪಟ್ಟ ಕೂಡಿಕೊಳ್ಳುವಿಕೆಯ ನಗುಗಳು ಕಳಚಿಕೊಳ್ಳಲಾಗದ ಮತ್ತು ಕತ್ತಲಿಗಪ್ಪುವ ಒಂಟಿತನವನ್ನು ಮತ್ತು ಈ ಒಂಟಿತನದಲ್ಲಿ ಒಮ್ಮಿಂದೊಮ್ಮೆಲೆ ಸ್ಫೋಟಗೊಳ್ಳಬಹುದಾದ ಸಣ್ಣ ಕಣವೊಂದಿದೆ...
ಶಾಂತಿನಾಥ ದೇಸಾಯಿ ಅವರ ಕ್ಷಿತಿಜ ಕಥಾಸಂಕಲನದ ಪಾತ್ರಗಳ ಅಪೇಕ್ಷೆಗಳು ಬೆಳಕ ಕಿಟಕಿ ದಾರಿ ಹಿಡಿದರೆ, ಈ ಕಥೆಯ ಪಾತ್ರ ಅದರ ಮುಂದುವರಿಕೆಯ ಭಾಗವಾಗಿ ಮರೆಮಾಚಿ ಕುದಿಯಾಗಿದೆ.
# ಕಪಿಲ್ ಪಿ. ಹುಮನಾಬಾದೆ.
25/8/2017.
No comments:
Post a Comment