Wednesday 23 August 2017

ತುಟಿ ಚಿವುಟಿದ ಸಾಲುಗಳು -೧.

ಚಿಂತನೆಯ ಪಾಡು - ರಹಮತ್ ತರಿಕೇರಿ.

"ಕೆಲವು ವರ್ಷಗಳ ಹಿಂದೆ ನಾನು 'ಜನಪ್ರಿಯ' ಪತ್ರಿಕೆಗಳಲ್ಲಿ ಕನ್ನಡ ಪುಸ್ತಕಗಳ ಮೇಲೆ ವಿಮರ್ಶೆ ಬರೆದೆ. ಅದನ್ನು ವಿಮರ್ಶೆ ಎನ್ನುವುದಕ್ಕಿಂತ ಲಹರಿ ರೂಪದ ವಿಶ್ಲೇಷಣೆಗಳು ಎನ್ನುವುದು ಉಚಿತ. ಬೇಕಾದ ಪುಸ್ತಕವನ್ನು ಆರಿಸಿಕೊಂಡು ಬರೆಯುವ ಸ್ವಾತಂತ್ರ್ಯವನ್ನು ಆ ಪತ್ರಿಕೆಗಳು ನನಗೆ ಕೊಟ್ಟಿದ್ದವು. ಸಾಹಿತ್ಯಕ ಪತ್ರಿಕೆಗಳಿಗೆ ನಾನು ಗಂಭೀರ ವದನವುಳ್ಳವನಾಗಿ ಪುಸ್ತಕ ವಿಮರ್ಶೆ ಬರೆದವನೇ...ಆದರೆ ದೊಡ್ಡ ಸಂಖ್ಯೆಯ ಓದುಗರಿರುವ ಜನಪ್ರಿಯ ಪತ್ರಿಕೆಗಳಲ್ಲಿ ಸಾಹಿತ್ಯ ಕೃತಿಗಳನ್ನು ಕುರಿತು ವಿಶ್ಲೇಷಣೆ ಮಾಡಿರಲಿಲ್ಲ. ಹಲವು ಹಿನ್ನಲೆಗೆ ಸೇರಿದ ಜನರು ಓದುವ ಪತ್ರಿಕೆಗಳಿಗೆ ವಿಮರ್ಶೆ ಬರೆಯುವಾಗ, ಸಹಜವಾಗಿಯೇ ಅಕಡೆಮಿಕ್  ಆಯಾಮ ಹಿಂಜರಿಯುತ್ತದೆ. ಜನಪ್ರಿಯತೆಯ ಸೆಳವಿನಲ್ಲಿ ಜಿಜ್ಞಾಸೆಯ ಗುಣ ಕಡಿಮೆಗೊಳ್ಳುತ್ತದೆ. ಅದೇ ಹೊತ್ತಲ್ಲಿ ಭಾಷೆ ಮತ್ತು ಶೈಲಿ ಸರಳವಾಗತೊಡಗುತ್ತವೆ. ಶೈಕ್ಷಣಿಕ ಗಂಭೀರತೆಯಿಂದ ಬರುವ ಜಡತೆ ತೊಡೆದುಹೋಗುತ್ತದೆ...

ತರಿಕೇರಿಯವರು ತಮ್ಮ  ಚಿಂತನೆಯ ಪಾಡು ಕೃತಿಗೆ ಮುಮ್ಮಾತು ಬರೆಯುತ್ತ ಹೀಗೆ ಹೇಳಿದ್ದು ನಿಜಕ್ಕೂ ಹೌದನಿಸಿತು. ಫೇಸ್ಬುಕಗಳಲ್ಲಿ ನಮ್ಮ ಪಾಡಿಗೆ ನಾವು ಬರೆಯುವ ಪುಸ್ತಕಭಿಪ್ರಾಯಗಳಿಗೆ ಹೆಚ್ಚು ಸ್ವಾತಂತ್ರ್ಯವಿದೆಯೆನಿಸುತ್ತದೆ.  ಪತ್ರಿಕೆಗಳು ಲೇಖನದ ತುದಿ ಮಡಚಿ ಚಿವುಟಿ ನೀಟಾಗಿ ಪತ್ರಿಕೆಗೆ ಅಂಟಿಸುವುದು ನೋಡಿದರೆ ಬೇಸರವು ಮತ್ತು  ಅವರ ಅನಿವಾರ್ಯತೆಯು ಎದ್ದು ಕಾಣುತ್ತದೆ. ಹಾಗಂತ ನಾವು ಬರೆಯುವುದೆ ಅಂತಿಮವಲ್ಲ. ತಿದ್ದುಕೊಳ್ಳಬೇಕು ಹಾಗೂ ನಿರಂತರ ಓದು ಇತರ ಚಿಂತನೆಗಳು ಸಹ ಅವಶ್ಯಕ. ಆದರೆ  ನಮ್ಮ ಪಾಡಿಗೆ ನಾವು ಸ್ವಾತಂತ್ರ್ಯವಾಗಿ ನಮ್ಮದೇ ಪುಟಗಳಲ್ಲಿ ಬರೆಯುವಾಗ ಅಲ್ಲಿ ಪ್ರಾಮಾಣಿಕ ಅಭಿವ್ಯಕ್ತಿ  ಇರುತ್ತದೆ. ಇತ್ತರ ಒತ್ತಡಗಳು ಹಾಗೂ ಯಾರಿಗೋ ಒಲೈಸಿಕೊಳ್ಳುವಿಕೆ ಕಾಣುವುದಿಲ್ಲ. ಈ ನಿಟ್ಟಿನಲ್ಲಿ ನಾವು ತರಿಕೇರಿಯವರ ಮಾತುಗಳು ಒಂದಿಷ್ಟು ಮರುಯೋಚಿಸಬೇಕಾದನಿವಾರ್ಯವಿದೆ.

ಮರದೊಳಗಣ ಕಿಚ್ಚು: -

ಮರದೊಳಗಿನ ಕಿಚ್ಚು, ಪ್ರತಿಸಂಸ್ಕೃತಿ, ಚಿಂತನೆಯ ಪಾಡು ಅವರ ಕೃತಿಗಳು ಸುಮ್ಮನೆ ಹರಡಿಕೊಂಡು ಕೂತಿದ್ದೆ.  ಮರದೊಳಗಣ ಕಿಚ್ಚಿನ ಕೃತಿಯ ಮೊದಲ ಲೇಖನದಲ್ಲಿ
" ಹೂವಯ್ಯನಂತಹವರ ಸಮಸ್ಯೆಯಿರುವುದು, ಸಮುದಾಯದ ಸಂಸ್ಕೃತಿ ಮೂಢವಾಗಿದೆ ಮತ್ತು  ಅದನ್ನು ಬದಲಾಯಿಸಬೇಕು ಎಂದು ನಂಬಿರುವುದರಲ್ಲಿ. ಅವನಿಗೆ ಗುತ್ತಿ ಸೋಮ ಭೈರರ ಜಗತ್ತಿನ ಚೈತನ್ಯಶಕ್ತಿಗಳ ಬಗ್ಗೆ  ಏನೂ ಗೊತ್ತಿಲ್ಲ. ಹೂವಯ್ಯ ತಮ್ಮ ಸಾಂಸ್ಕೃತಿಕ ಲೋಕದ ಒಳಗೆ ತಿರಸ್ಕಾರದ ನಿಲುವಿನಿಂದ ಹೊಕ್ಕಾಗ, ಉದ್ಧಾರ ಮಾಡುತ್ತೇನೆಂದು ಹೊರಟಾಗ ಸಿಡಿದು ದೂರವಾಗಿ ಬಿಡುತ್ತದೆ. ನಿಜವಾದ ಬದಲಾವಣೆ ಎಲ್ಲಿಂದ ಶುರುವಾಗಬೇಕೆಂದು ಕಡೇತನಕ ಹೂವಯ್ಯನಿಗೆ ತಿಳಿಯುವುದಿಲ್ಲ" ತರಿಕೇರಿ ಸರ್ ಅವರ ಈ ವಿಶ್ಲೇಷಣೆ ನೋಡುವಾಗ ನನಗೆ ಅನಂತಮೂರ್ತಿಯವರ ಭಾರತೀಪುರದ ಜಗನ್ನಾಥನ ಸಮಸ್ಯೆಯು ಇದೇ ಇರಬಹುದೆ ಎಂದನಿಸುತ್ತದೆ ಆ ಸಾಧ್ಯತೆಗಳು ಸಹ ಇವೆ.

ಇಲ್ಲೆಕೆ ಹೂವಯ್ಯನ ಮಾತುಗಳು ನೆನಪಿಸಿದೆಯಂದರೆ ನಾವು ಸಹ ಕೆಲವು ಆಚರಣೆಗಳನ್ನು ತೀರಾ ತಿರಸ್ಕಾರ ದೃಷ್ಟಿಯಿಂದ ನೋಡುತ್ತಿದ್ದೆವೆ. ಹಾಗಂತ ಎಲ್ಲಾ  ಆಚರಣೆಗಳು ಉತ್ತಮವಾದವುಗಳೆಂದಲ್ಲ. ನಮ್ಮ ಮತ್ತು ಅವರ ಜಗತ್ತುಗಳು ಬೇರೆ ಬೇರೆಯಾಗಿರುವಾಗ ಈ ರೀತಿಯ ಅಭಿಪ್ರಾಯ ಮೂಡುವುದು ಸಹಜ. ಅವರ ಪಾದಗಳು ನಿಂತಿರುವ ನೆಲದ  ತಲ್ಲಣ ಮತ್ತು ಶಕ್ತಿ ಅರಿಯುವುದು ತೀರಾ ಮುಖ್ಯ. ಅವರ ಆಚರಣೆಗೂ ಅವರ ಬದುಕಿಗೂ ಏನೋ ಒಂದು ಸಂಬಂಧ ಇರುತ್ತದೆ.  ಹಲವು ಸಾಂಸ್ಕೃತಿಕ  ಆಚರಣೆಗಳನ್ನು ನಾವು ತೀರಾ ಉಡಾಫೆಯಿಂದ ನೋಡುವುದು ಸಹ ತಪ್ಪೆನಿಸುತ್ತಿದೆ. ಅಲ್ಲೆನೋ ಇದೆ ಅವರ ಬದುಕಿಗಂಟಿಕೊಂಡಿರುವಂತಹದು...

# ಕಪಿಲ ಪಿ ಹುಮನಾಬಾದೆ.

No comments:

Post a Comment