Saturday, 29 July 2017

ಪುಸ್ತಕ ಓದು - ೧

ರೂಪದರ್ಶಿ - ಕೆ.ವಿ.ಅಯ್ಯರ್ 
(ಕಾದಂಬರಿ)

ಒಬ್ಬ ಸಾಮಾನ್ಯ ಹಳ್ಳಿಯಲ್ಲಿ ಇದ್ದ ಮನುಷ್ಯನ ಜೀವನದಲ್ಲಿ, ಆಧುನಿಕತೆ ಪ್ರವೇಶವಾದೊಡನೆ ಆ ವ್ಯಕ್ತಿಯ ಜೀವನದಲ್ಲಿ ನಡೆಯುವ ದುರಂತ ಕಥನಗಳ ಕಥಾ ಹಂದರವನ್ನು ಈ 'ರೂಪದರ್ಶಿ' ಕಾದಂಬರಿ ಒಳಗೊಂಡಿದೆ.

ಈ ಕಾದಂಬರಿ ಹುಟ್ಟುವಿಕೆಯನ್ನು ಲೇಖಕರೇ ಹೇಳುವಂತೆ, "1942 ನೇ ಇಸವಿ ಏಪ್ರಿಲ್ ತಿಂಗಳಲ್ಲಿ ಪ್ರಚುರವಾದ 'Readers Digest' ಎಂಬ ಅಮೇರಿಕಾದ ಮಾಸ ಪುಸ್ತಕದಲ್ಲಿ 'The Face of Judas Iscariot' ಎಂದು ಮುಕ್ಕಾಲು ಪುಟದಷ್ಟು ಒಂದು ಕತೆ ಇತ್ತು. ಅದರಲ್ಲಿನ ಪಾತ್ರಗಳು ಎರಡೇ: ಯಾರೋ ಒಬ್ಬ ಕಲಾವಂತ ಶಿಲ್ಪಿ, ಅವನಿಗೆ ರೂಪದರ್ಶಿಯಾಗಿ ಸಿಕ್ಕಿದ ಒಬ್ಬ ಬೀದಿಯ ಹುಡುಗ. ಕತೆಯೂ ಬಹು ಚಿಕ್ಕದು. ಅದನ್ನು ಓದಿದಾಗ. 'ಕಥಾವಸ್ತು ಚೆನ್ನಾಗಿದೆ. ಒಂದು ಪುಟದಲ್ಲಿರುವ ಇದನ್ನು ಎಂಟು ಹತ್ತು ಪುಟಗಳ ಪುಟ್ಟ ಕತೆಯಾಗಿ ಕನ್ನಡದಲ್ಲಿ ಬರೆಯಬಹುದು' ಎನ್ನಿಸಿತು. ಬರೆಯುವುದಕ್ಕೆ ತೊಡಗಿದಾಗ, ಹೀಗೆ, ಈಗ ಇರುವ ಸ್ಥಿತಿಗೇ ಬೆಳೆಯಿತು; ನನ್ನ ಮನಸ್ಸಿನಲ್ಲಾಗಲಿ ಲೇಖಕನಿಗಾಗಲಿ ತಡೆಯಿಲ್ಲದೆ, ಶ್ರಮವಿಲ್ಲದೆ, ಈ ಕತೆ ರೂಪ ತಾಳಿತು. ಮೂಲದಲ್ಲಿ 'ಶಿಲ್ಪಿ' ಮತ್ತು ಅವನ 'ರೂಪದರ್ಶಿ' ಹೊರತು ಉಳಿದೆಲ್ಲ ಪಾತ್ರಗಳೂ ನನ್ನ ಮನಃಸೃಷ್ಟಿ". ಎನ್ನುವ ಕಾದಂಬರಿಕಾರರು, ಇಟಲಿ ದೇಶದ 'ಫ್ಲಾರೆನ್ಸ', 'ಪೀಸಾ', 'ಕರಾರಾ', 'ರೋಂ' ಮತ್ತು 'ಎಂಪೊಲಿ' ಎನ್ನುವ ಸ್ಥಳಗಳಲ್ಲಿ ಕಥೆ ನಡೆಯುತ್ತದೆ.

ಇಟಲಿ ದೇಶದ ಪ್ರಸಿದ್ಧ ಶಿಲ್ಪಿಯಾದ 'ಮೈಕಲ್ ಆಂಜೆಲೋ' ಇಡೀ ಕಾದಂಬರಿಯ ಹೃದಯವಾದರೆ, ಮೈಕಲ್ ಆಂಜೆಲೋಗೆ  ರೂಪದರ್ಶಿಯಾಗಿ ಪೀಸಾ ನಗರದ ಬಡ ಹುಡುಗ 'ಅರ್ನೆಸ್ಟ್' ಇಡೀ ಕಾದಂಬರಿಯ ನಾಯಕ. ಅತಿ ಮುಖ್ಯವಾಗಿ ಈ ಬಡ ಹುಡುಗನ ಜೀವನವೇ ಈ ಕಾದಂಬರಿ ಅಂದರೂ ತಪ್ಪಲ್ಲ. 

ಮೈಕಲ್ ಆಂಜಲೋ ಚೆರ್ಚವೊಂದರ ಶಿಲ್ಪಕಲೆಯ ಕೆತ್ತನಾ ಕಾರ್ಯವನ್ನು ಒಪ್ಪಿಕೊಂಡಿರುತ್ತಾನೆ. ಅಲ್ಲಿ ಯೇಸುವಿನ ಇಡೀ ಜೀವನವನ್ನು ಸಾರುವ ಕಲಾಕೃತಿಯನ್ನು ಕೆತ್ತುವ ಕಾರ್ಯದಲ್ಲಿರುತ್ತಾನೆ. ಮೊದಲು ಯೇಸುವಿನ ಬಾಲ್ಯದ ಚಿತ್ರಗಳನ್ನು ಇಳಿಸಲು ಬಾಲ ಯೇಸುವಿನ ಹುಡುಕಾಟದಲ್ಲಿರುವಾಗಿ ಸಿಕ್ಕಿದ್ದೆ ಈ ಬಹ ಹುಡುಗ 'ಅರ್ನೆಸ್ಟ್'. ಅರ್ನೆಸ್ಟ್ ತಂದೆ-ತಾಯಿ ಇಲ್ಲದವ ಅಜ್ಜಿಯ ಆರೈಕೆಯಲ್ಲೇ ಬೆಳೆಯುತ್ತಿರುವವನಿಗೆ, ಮೈಕಲ್ ಅವರನ್ನು ತನ್ನೂರಿಗೆ ಕರೆದುಕೊಂಡು ಬಂದು ಚಿತ್ರಗಳೆಲ್ಲ ಮುಗಿಸಿ, ಒಂದಷ್ಟು ಹಣವನ್ನು ಅರ್ನೆಸ್ಟ್ ನ ಓದಿಗೆ ಕೊಟ್ಟು, ಅಜ್ಜಿ-ಮೊಮ್ಮಗನನ್ನು ಪುನಃ ಅವರ ಹಳ್ಳಿಗೆ ತಂದು ಬಿಡುತ್ತಾರೆ. ಮೈಕಲ್ ಕೊಟ್ಟ ಹಣ, ಮೊಮ್ಮಗನ ಅವನ ವಿದ್ಯಾಭ್ಯಾಸಕ್ಕೇ ಇರಲೆಂದು 'ಜಿಯೋವನಿ' ಎಂಬ ಸಾಹುಕಾರನ ಬಳಿ ಎಲ್ಲ ಹಣವನ್ನು ಅರ್ನೆಸ್ಟ್ ನ ಅಜ್ಜಿ ಇಟ್ಟಿರುತ್ತಾಳೆ. ಮುಂದೆ ಕಥೆ ಸಾಗಿ, ಅಜ್ಜಿ ಒಂದು ದಿನ ಸಾಯುತ್ತಾಳೆ. ಆಗ ಸಾಹುಕಾರನಿಂದ ಮೋಸಗೊಳ್ಳುವ 'ಅರ್ನೆಸ್ಟ್' ನಿರ್ಗತಿಕನಾಗಿ ತನ್ನಗೆ ತನ್ನವರು ಯಾರೂ ಇಲ್ಲದೆ ಬೇರೊಂದು ಹಳ್ಳಿಗೆ ಹೋಗಿ ಕಳ್ಳತನ, ಮೋಸ, ವಂಚನೆ, ದರೋಡೆಯ ಕೆಲಸಗಳಲ್ಲಿ ತೊಡಗಿರುತ್ತಾನೆ. ಯೇಸುಕ್ರಿಸ್ತನ ಜೀವನ ಚರಿತ್ರೆಯ ಶಿಲ್ಪಕೆತ್ತನೆಯ ಕಾರ್ಯದಲ್ಲಿ ವಿಳಂಬವಾಗಿ ಮುಂದೆ ಹಲವು ವರ್ಷಗಳ ನಂತರ ಯೇಸುವಿಗೆ ಮೋಸಮಾಡಿದ ಶಿಶ್ಯನಾದ 'ಜುದಾಸ್'ನ ಶೋಧನೆಯಲ್ಲಿರುವಾಗ ಈ ಅರ್ನೆಸ್ಟ್ ಸಿಗುತ್ತಾನೆ. ಇವೆಲ್ಲವುದರ ಮಧ್ಯೆ, 'ಲೀನಾ', 'ಟಾಯಿಟ್' ಎನ್ನುವ ಎರಡು ಪಾತ್ರಗಳು ಸಹ ಕಾದಂಬರಿಯಲ್ಲಿ ಬಹು ಮುಖ್ಯವಾದ ಪಾತ್ರವಹಿಸುತ್ತವೆ.

ಪ್ರೀತಿ, ಮಮತೆ, ಕರುಣೆ, ಕ್ರೌರ್ಯ, ಮೋಸ, ಇತ್ಯಾದಿಗುಣಗಳುಳ್ಳ ವಿವಿಧ ಪಾತ್ರಗಳು ಕಾದಂಬರಿಯುದ್ದಕ್ಕೂ ನಮಗೆ ಕಾಣಸಿಗುತ್ತವೆ. ಬಹುಮುಖ್ಯವಾಗಿ ಕಾದಂಬರಿಯಲ್ಲಿ ಆಡಳಿತಷಾಹಿ ವ್ಯವಸ್ಥೆಯ ದೌರ್ಜನ್ಯಕ್ಕೆ ಜನಸಾಮಾನ್ಯರು ಬಲಿಯಾಗುವ ವ್ಯವಸ್ಥೆಯನ್ನು ವಿರೊಧಿಸುವ ಮನೋಭಾವನೆಯನ್ನು ಅಸಾಹಾಯಕ ವ್ಯಕ್ತಿಯೊಬ್ಬ 'ಭಾವನಾತ್ಮಕ ಪರಿಧಿಯಲಿ' ಸಿಕ್ಕಿ, ವ್ಯವಸ್ಥೆಯ ವಿರುದ್ಧ ಖಂಡಿಸುವುದನ್ನೇ ಮರೆಯುತ್ತಾನೆ.

ಕಾದಂಬರಿಯಲ್ಲಿ ದೇವರ ವಿಷಯಕ್ಕೆ ಸಂಬಂಧಿಸಿದಂತೆ ಈ ಮಾತು ಯಾವಾಗಲೂ ಪ್ರಸ್ತುತವೆನಿಸುತ್ತದೆ. "ಈ ಪ್ರಪಂಚದಲ್ಲಿ ಎಷ್ಟೊಂದು ಜನ ಷಂಡರು, ದೇವರು, ದೇವರು ಎಂದು ನಂಬಿ ನನ್ನಂತೆ ಕಷ್ಟಪರಂಪರೆಗಳಿಗೆ ಸಿಕ್ಕಿ ಕೊಚ್ಚಿಹೋಗಿರುವರೊ? ಈ ಪ್ರಪಂಚದಲ್ಲಿ ನ್ಯಾಯವೂ ಧರ್ಮವೂ ಎರಡೂ ಇಲ್ಲ. ಕಾಡಿನ ಮೃಗಗಳಂತೆ, ನೀರಿನೊಳಗಿನ ಮೀನುಗಳಂತೆ, ಬಲಿಷ್ಟ ಪ್ರಾಣಿಯನ್ನು ನುಂಗುತ್ತ... ದೊಡ್ಡದು ಚಿಕ್ಕದನ್ನು ತಿನ್ನುತ್ತ ಜೀವಿಸುತ್ತದೆ".

ಒಟ್ಟಾರೆಯಾಗಿ ಕನ್ನಡಕ್ಕೆ ಒಳ್ಳೆ ಕಾದಂಬರಿಯನ್ನು ಕೆ.ವಿ.ಅಯ್ಯರ್ ಅವರು ಕೊಟ್ಟಿದ್ದಾರೆ. ಇದರಾಚೆಗೂಸಹ ಕಾದಂಬರಿ ಹಲವು ಅರ್ಥಗ್ರಹಿಕೆಯಲ್ಲಿ ನಾವು ಗ್ರಹಿಸಬಹುದಾಗಿಗೆ.
     

- ಶಾಂತೇಶ ಕೋಡ್ಲೆ (ಕಲಬುರಗಿ) 

No comments:

Post a Comment