Saturday 15 July 2017

ಅಂಡಮಾನ್ (ಪ್ರವಾಸದನುಭವ) - ಡಾ ಎಸ್ ಅನುಪಮಾ.

ಮನುಷ್ಯ ತನ್ನ ಅವಸರದ ಬದುಕಿನ ಮಧ್ಯೆ  ಒಂದಿಷ್ಟು  ಬಿಡುವು ಮಾಡಿಕೊಂಡು  ಅನಂತ ಆಕಾಶದ ಮೋಡಗಳು, ನಕ್ಷತ್ರಗಳು ಸುಮ್ಮನೆ ಗಮನಿಸುತ್ತಿರಬೇಕು, ಕಣ್ಣಿಗೆ ತುದಿಯಿಲ್ಲದ ಕಡಲು, ಯಾವುದೋ ಅಪರಿಚಿತ ಊರಿನಲ್ಲಿನ ಓಡಾಟ, ಪರಿಚಯವಿಲ್ಲದವನೊಬ್ಬ ಎಂದೋ, ಯಾವುದೋ ಗಳಿಗೆಯಲ್ಲಿ ತೋರಿಸುವ ಅಪಾರ ಪ್ರೀತಿ,  ಇವೆಲ್ಲವೂ ಮನುಷ್ಯನ ಶೂನ್ಯತನವನ್ನು ತೋರಿಸುತ್ತದೆ. ಶೂನ್ಯವೆಂದರೆ ಖಾಲಿತನವೆಂದಲ್ಲ.

ತೇಜಸ್ವಿಯವರ ಅಂಡಮಾನ್ ಪ್ರವಾಸ ಕೃತಿ ಓದಿದ ನನಗೆ ಅನುಪಮಾ ಮೇಡಂರವರ ಪ್ರವಾಸ ಕಥನ ಓದಿದ ನಂತರ ಭಿನ್ನ ದೃಷ್ಟಿಗಳೆರೆಡು ಕಂಡವು. ಅವರವರು ನಿಂತು ಯೋಚಿಸುವ ನೆಲೆ, ಕಾಲ, ವಿಚಾರಗಳು, ಆಸಕ್ತಿ  ಎಲ್ಲವೂ ಭಿನ್ನವಾಗಿರುತ್ತದೆ. ಅನುಪಮಾ ಮೇಡಂರವರೆ ಹೇಳುವ ಹಾಗೇ " ತೇಜಸ್ವಿ ಪುಸ್ತಕದ ತುಂಬ ರೀಲು, ರಾಡು, ಮೀನು, ಏಡಿ, ಲೋಬಸ್ಟರಗಳನ್ನೇ ತುಂಬಿದ್ದಾರೆ" ಅವರು ಮುಂದುವರೆದು ಹೇಳುವಂತೆ - ತೇಜಸ್ವಿ, ತರಿಕೇರಿ ಅವರು ಭೇಟಿ ಕೊಟ್ಟಾಗ ಇನ್ನೂ ಬಿಜೆಪಿ ಗಾಳಿ ಬೀಸಿರಲಿಲ್ಲ. ಜಾಗತೀಕರಣದ ಭರಾಟೆ ಶುರುವಾಗಿರಲಿಲ್ಲ.

ಇಡೀ ಪ್ರವಾಸ ಕಥನವನ್ನು ಲೇಖಕಿ ಪ್ರವಾಸದನುಭವವೆಂದು ಕರೆದಾಗಲೆ ಇದಕ್ಕೊಂದು ಹೊಸತಿದೆ ಎನಿಸಿತು. "ಸೊಕ್ಕಿದ ಹರೆಯದಂತೆ ಸುಂದರ, ನಿಗೂಢ, ಆಕರ್ಷಕ ಮತ್ತು  ಅಪಾಯಕರ ನೆಲ, ಅಂಡಮಾನ್ ! .- ಅಹಾ ! ಈ ಕೃತಿಯ ಮೊದಲ ಪುಟದಲ್ಲಿ ಕಂಡ ಸಾಲುಗಳು  ಇಡೀ ಅಂಡಮಾನನ್ನು ನೋಡಬೇಕಾದ ಮನಸ್ಥಿತಿಯನ್ನು ತೋರಿಸುತ್ತದೆ.  ಅಂಡಮಾನ್ ಬಗ್ಗೆ  ಇದ್ದ ಕಲ್ಪನೆಗಳು ಮತ್ತು  ಅದರ ಸುತ್ತ ಹೆಣೆದುಕೊಂಡ ಭಯಾನಕ ಸಂಗತಿಗಳು ವಿವರಿಸುತ್ತಾರೆ.ಆಗ 1941ರಲ್ಲಿ 34 ಸಾವಿರ ಇದ್ದ ಜನಸಂಖ್ಯೆ  ಈಗ 3.8 ಲಕ್ಷ ಆಗಿದೆಯಂತೆ !. ಅಲ್ಲಿನ ಭೌಗೋಳಿಕತೆ ಮತ್ತು  ಅಲ್ಲಿನ ಕೈಗಾರಿಕೆ ಆದ ಮರದ ಸಾಮಿಲ್ ಬಗ್ಗೆ  ವಿವರಣೆ ನೀಡುತ್ತಾರೆ. ಅಂಡಮಾನಿನ ವಿಶಿಷ್ಟತೆ ಮತ್ತು ಸಂಕುಚಿತತೆಗಳು, ಬಾಹ್ಯ  ಆಕ್ರಮಣ  ಎಲ್ಲವನ್ನೂ ವಿವರಿಸುತ್ತಲೆ ಲೇಖಕಿ ಸಾಗುತ್ತರೆ.

ಸೆಲ್ಯುಲಾರ್ ಜೈಲಿನ ಬಗ್ಗೆ ಹೊರಗಿನವರಿಗೆ ಮೋಡ ಮುಸುಕಿದಂತಿರುವ ಕಲ್ಪನೆಗಳನ್ನು ಈ ಬರಹ ಚದುರಿಸುತ್ತದೆ .

ಅಲ್ಲಿ ತಾರೆಗಳಿರಲಿಲ್ಲ
ನೆಲವಿರಲಿಲ್ಲ, ಕಾಲವಿರಲಿಲ್ಲ
ಬಂಧನವಿರಲಿಲ್ಲ, ಬದಲಾವಣೆಯಿರಲಿಲ್ಲ
ಒಳ್ಳೆಯದಿಲ್ಲ, ಅಪರಾಧವಿಲ್ಲ,
ಅಲ್ಲಿ ಬದುಕಿನದೂ ಅಲ್ಲದ, ಸಾವಿನದೂ ಅಲ್ಲದ ಮೌನ...
ಕಟ್ಟಿದ ಉಸಿರು..

ಬಂಧಿತರ ಬಗ್ಗೆ ಬರೆದ ಲಾರ್ಡ್ ಬೈರನ ಸಾಲುಗಳು ತುಂಬಾ ಕಾಡಿದವು. "ಏಕಾಂತ ಸೆರೆವಾಸ ಯಾವುದೇ ಕ್ರಿಯಾಶೀಲ ವ್ಯಕ್ತಿಯನ್ನು ಇಂಚಿಂಚೇ ಕೊಲ್ಲಬಲ್ಲದು ".

ಜೈಲಿನಲ್ಲಿ ಪ್ರತಿದಿನ ಜೈಲುವಾಸಿಗಳ ದನಿ ಹಾಗೂ ಜೈಲು ಆವರಣದ ಭಯಾನಕ ಚೀರಾಟದ ಶಬ್ದಗಳು ರಿಚಾರ್ಜ್ ಮಾಡಲು ಪ್ರಯತ್ನಿಸಲಾಗಿದೆ. ಸಾವರ್ಕರ್ ವಾಸಿಸಿದ ಸೆಲಗೆ ವಿಶೇಷ ಒತ್ತುಕೊಟ್ಟು ರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ - ಒಂದು ಕಡೆ ತೀರಾ ಕೆಳವರ್ಗದ ಅಲೆಮಾರಿಗಳ ಮತ್ತು  ಬುಡಕಟ್ಟು ಸಮುದಾಯಗಳ ಆಹಾರ, ವಸತಿ, ಬದುಕಿನ ಅಳಿವು ಉಳಿವಿನ ಬಗ್ಗೆ ಅಲ್ಲಿನ ವಾಸ್ತವ ನೆಲದ ಚಿತ್ರಗಳು ಮಾತಾಡುತ್ತಿದ್ದರೆ ಇನ್ನೊಂದೆಡೆ ಬೆಂಕಿ ಉಗುಳುವ ಬೆಟ್ಟಕ್ಕೆ ಹಸಿರು ತೊಡಿಸಿ ಒಳಗಿನ ಬೆಂಕಿ ಮುಚ್ಚಿಟ್ಟು ಅಲ್ಲಿನ ವಿಕಾರ ಧ್ವನಿಗಳನ್ನು ಮನುಷ್ಯನ ಭಾವನಾತ್ಮಕ ಕರುಣೆಯ ಪದರು ಸ್ಪರ್ಶಿಸುವುದಕ್ಕೆ ತಾಂತ್ರಿಕವಾಗಿ ಪ್ರಯತ್ನಿಸಲಾಗುತ್ತಿದೆ. ಅದು ದೇಶಪ್ರೇಮ ಹೊಮ್ಮಿಸಬಹುದೆಂಬ ದುರಾಸೆಯಿಂದ.

ಎಲ್ಲದರ ನಡುವೆ ಸ್ವಾತಂತ್ರ್ಯದ ಹಕ್ಕಿ ಜೈಲಿನಲ್ಲೇ ಗೂಡು ಕಟ್ಟುತ್ತದೆ - ಇನ್ನೆಷ್ಟೋ ಜೈಲುಗಳು ಪ್ರತಿ ದೇಶದಲ್ಲೂ ಭದ್ರತೆ- ಸಮಗ್ರತೆ-ರಾಷ್ಟ್ರೀಯತೆ ಹೆಸರಿನಲ್ಲಿ ತಲೆಯತ್ತಿವೆ. ಅನುಪಮಾ ಮೇಡಂರವರು ಸೆಲ್ಯುಲರ ಜೈಲಿನ ಬಗ್ಗೆ ತುಂಬಾ ಮಾಹಿತಿ ಸಂಗ್ರಹಿಸಿದ್ದಾರೆ. ಆ ಜೈಲು ನೆಪವಾಗಿಟ್ಟುಕೊಂಡು ಬೇರೆ ಬೇರೆ ಸಂಗತಿಗಳು ಹೆಣೆಯುತ್ತ ಸಾಗುತ್ತಾರೆ.

ಅಂಡಮಾನಿನ ಬುಡಕಟ್ಟುಗಳ ಕುರಿತು  ಅಲ್ಲಿನ ಮೂಲಜನರ ಕುರಿತು ಮಾತಾಡಬೇಕಿದೆ. ಅಲ್ಲಿನ ಜೈಲನ್ನೆ ನಾವು ವೈಭವಿಕರಿಸುತ್ತಿದ್ದೆವೆ.
ಜರವಾ ಬಗ್ಗೆ ಹತ್ತಿರದಿಂದ ಕಂಡು ಬರೆದಿದ್ದಾರೆ. ಕಲ್ಚರಲ್ ಶಾಕ್ ಬಗ್ಗೆ ಮಾತಾಡಿರುವ ಅನುಪಮಾ ಮೇಡಂರವರು ಆ ಜರವಾ ಜನಾಂಗಕ್ಕೆ ಬೇಕಾದ ಸ್ವಾತಂತ್ರ್ಯತೆ ಕೊಡಬೇಕಾಗಿದೆ. ಬೊವಾ ಭಾಷೆ ಮಾತಾಡುವ ಏಕೈಕ ಮುದುಕಿ ಕಣ್ಣು ಮುಚ್ಚಿದಾಗ ಆ ಭಾಷೆಯು ಕಣ್ಣು ಮುಚ್ಚಿದ್ದು ದುರಂತವೆ ಸರಿ.

*ನಾಲಿಗೆ ಮತ್ತು ಹೊಟ್ಟೆಯ ಒತ್ತಡಕ್ಕೆ ಕೈಕಾಲು ತಲೆ ಹೇಗೆ ಬೇಕಾದರೂ ಕುಣಿಯುತ್ತದೆ.

* ಬುಡಕಟ್ಟು ಪ್ರದೇಶಗಳು ಪ್ರವಾಸಿಗರಿಗೆ ಮ್ಯೂಸಿಯಂಗಳಾಗುವ ಅಪಾಯವಿದೆ. (ಡಿಆರ್ ಮಾತು ನೆನಪಿಸುತ್ತಾರೆ)

* ನಮ್ಮ ನಾಗರಿಕ ಸೊಕ್ಕನ್ನು ಅಂಡಮಾನ್ ಇಳಿಸತೊಡಗಿತ್ತು.

* ದೇವರು ಹಳ್ಳಿಗಳನ್ನು ಸೃಷ್ಟಿಸಿದ, ಮಾನವ ನಗರಗಳನ್ನು ಸೃಷ್ಟಿಸಿದ. - ಇಂಗ್ಲಿಷ್ ಗಾದೆ.

ಈ ಪುಸ್ತಕ  ಓದುವಾಗ ಕಾಡಿದ ಸಾಲುಗಳು.

20 ರೂಪಾಯಿ ಪಾಯಿಂಟ್,  ಕಾಜಾಣ,  ಕಡಲ ಕರೆಗೆ ಕಾದು ನಿಂತ ಅನಾರೋಗ್ಯ ಪೀಡಿತ ಮಗನ ತಾಯಿ, ಅಗ್ನಿ ಉಗುಳುವ ಬೆಟ್ಟ, ಜರವಾಗಳು ಹೀಗೆ ಮುಂತಾದ ವಿವರಗಳನ್ನು  ಅಂಕಿಅಂಶಗಳ ಸಮೇತ ನೀಡುತ್ತಾರೆ.

ನಾನೊದಿದ ಸುಮಾರು ಪ್ರವಾಸ ಕಥನಗಳಿಗಿಂತ ಭಿನ್ನ  ಅನ್ಸುತ್ತೆ ಈ ಪುಸ್ತಕ ಯಾಕಂದರೆ ಮನುಷ್ಯತ್ವದ ನೆಲೆಯಲ್ಲಿ ನಿಂತು ಧ್ಯಾನಸ್ಥವಾಗಿ ನೋಡುವ, ಲೇಖಕಿ ಆತ್ಮವಿಮರ್ಶೆ ಮಾಡಿಕೊಳ್ಳುವತನ ಪ್ರತಿ ಹಂತದಲ್ಲಿಯು ಎದ್ದು ಕಾಣುತ್ತದೆ. ತಾನು ಬರೆಯುವ ಕೊಳದ ಮೀನಾಗುವ ಲೇಖಕಿ ನಿಜಕ್ಕೂ ಅಲ್ಲಿನವರೆ ಆಗಿ ಅಲ್ಲಿನ ಏಳುಬೀಳುಗಳಿಗೆ ಕನ್ನಡಿ ಹಿಡಿಯುವ ಕೆಲಸ ಮಾಡಿದಾರೆ. " ಬುಡಕಟ್ಟು ಕುಲವೇ, ಅಣತಿಯಿಲ್ಲದ ಅತಿಕ್ರಮಣಕ್ಕಾಗಿ ನಮ್ಮನ್ನು ಕ್ಷಮಿಸು....- ಈ ಸಾಲಿನಲ್ಲಿರುವ ನೋವು, ವಿನಯತೆ ಬಹುಮುಖ್ಯವಾಗಿ ನಮ್ಮಗೆಲ್ಲರಿಗೂ ಕಾಡುವಂತಹದು. ಅಂಡಮಾನ್ ಕೃತಿ ಓದಿದ ನಂತರ ಆ ಊರು ನಮ್ಮದಾಗುತ್ತದೆಯೊ ಅಥವಾ ಇಲ್ಲವೋ ಅಲ್ಲಿನ ಜನರಂತೂ ನನ್ನವರೆ ಆಗಿರುತ್ತಾರೆ...

# ಕಪಿಲ್ ಪಿ. ಹುಮನಾಬಾದೆ.
16/7/2017.

No comments:

Post a Comment