Tuesday 18 July 2017

ನೇಮಿಚಂದ್ರ

ತೆರೆದ -ಮನ ( ಪುಸ್ತಕಭಿಪ್ರಾಯ)
ನೋವಿಗದ್ದಿದ ಕುಂಚ - ನೇಮಿಚಂದ್ರ .

ಪ್ರಸಿದ್ಧ ಚಿತ್ರಕಾರ ವ್ಯಾನಗೋನ ಜೀವನ ಚಿತ್ರವೆ ಈ ನೋವಿಗದ್ದಿದ ಕುಂಚ ಪುಸ್ತಕ. ವ್ಯಾನ್ ಗೋ ಎನ್ನುವುದು ಪ್ರಸಿದ್ಧ ಮನೆತನ ಆದರೆ ವಿನ್ಸೆಂಟ್ ವ್ಯಾನ್ ಗೋ ಬದುಕಿದ್ದ ರೀತಿಯೆ ಬೇರೆ. ಸಿದ್ಧ ಮಾದರಿಯ ದಾರಿಗಳನ್ನು ಕತ್ತರಿಸಿಕೊಂಡು  ಒಂಟಿತನದಿಂದ ಎಲ್ಲೋ ನುಗ್ಗವ ಮತ್ತು  ನಡೆಯುವ ಪಾದಗಳಿಗೆ ರೆಕ್ಕೆ  ಅಂಟಿಸದೆ ನಿಂತ ನೆಲ ತೋರಿಸುವ ಹೆಜ್ಜೆಗಳೆ ವ್ಯಾನ್ ಗೋನ ಬದುಕು.

ಶಿಕ್ಷಕನಾಗಿದ್ದ, ಗುಮಾಸ್ತನಾದ ನಂತರ ಅಲ್ಲಿಯು ನಿಲ್ಲಲಿಲ್ಲ ಏನೋ ಹುಡುಕಿ ನಡೆದ. ಕೊನೆಗೆ ಚಿತ್ರ ಬಿಡಿಸುವ ಹುಚ್ಚು ಹಿಡಿಸಿಕೊಂಡ. ಕಲಾವಿದನಾದ." ನೀ ಬರೆಯದೆಯು ಬದುಕಬಹುದೆಂದರೆ ನೀ ಬರೆಯದಿರುವುದೆ ಒಳ್ಳೆಯದು"- ರಿಲ್ಕೆ ಹೇಳುವ ಈ ಮಾತು  ಚಿತ್ರ ಬಿಡಿಸುವ ವ್ಯಾನ್ ಗೋ ನೂರಕ್ಕೆ ನೂರು ಪಾಲಿಸಿದನೆನೋ ?...

"ದಿನದಿನದ ಯಾಂತ್ರಿಕತೆಯಲ್ಲಿ ಹೊಂದಾಣಿಕೆಯಲ್ಲಿ ಲೆಕ್ಕಾಚಾರದ ತರ್ಕಗಳಲ್ಲಿ, ಯೋಜಿತ ಬದುಕಿನ ಹಳಿದಾರಿಯಲ್ಲಿ ನಿಯಮಬದ್ಧವಾಗಿ ಸಾಗುವ ಜನಕ್ಕೆ ಅರ್ಥವಾಗಬಲ್ಲದೆ ಎಗ್ಗಿಲ್ಲದೆ ಹರಿವ ಪ್ರೀತಿಯ ಚಿತ್ರಗಳು? "
ಸೇಪ್ ಜೋನಗಳಲ್ಲಿ ನಿಂತು ನೋಡುವವರಿಗೆ ವ್ಯಾನ್ ಗೋ ಹುಚ್ಚನಂತೆ ಕಂಡರು. ಅವನು ತಾನು ನಂಬಿದ ಕಲೆಗಾಗಿ ಏನನ್ನು ಸಹ ಮಾಡಲು ಸಿದ್ಧನಿದ್ದ. ಒಂದು ಕಡೆ ನಿಲ್ಲುವುದೆ ಅವನಿಂದಾಗುತ್ತಿರಲಿಲ್ಲ. ಅವನ ಚಿತ್ರಗಳಲ್ಲಿ ನುಣುಪಾದ ಚರ್ಮದ ರೂಪದರ್ಶಿಯರಿರಲಿಲ್ಲ... ರಾತ್ರಿಯ  ಒರಟು ವೇಶ್ಯೆಯರು, ಕಲ್ಲಿದ್ದಲಿನ ಜೊತೆ ದುಡಿಯುವ ಮನುಷ್ಯರು, ಹೊಲಗಳು , ರೈತರು...
ಅವನಿಗೆ ಚಿತ್ರಗಳ ಸ್ತಬ್ಧತೆ ಇಷ್ಟವಾಗುತ್ತಿರಲಿಲ್ಲ. ಸದಾ ಅದು ಹರಿಯುತ್ತಿರಬೇಕು ಸತ್ತಿರಬಾರದು.

"ಕುಡಿತಕ್ಕೆ ಬಿದ್ದವ ಕೈಗೆ ಕಾಸು ಬಿದ್ದೊಡನೆ ಹೆಂಡದಂಗಡಿಗೆ ಓಡುವಂತೆ ನಾನು ಬಣ್ಣದಂಗಡಿಗೆ ಓಡುತ್ತಿದ್ದೆ. ಮುಂದಿನ ದಿನಗಳ ಖಾಲಿತನ ಕಣ್ಣೆದುರು ನಿಂತರೂ ತಡೆಯಲಾರದ ಬೆರಳ ತುಡಿತಕ್ಕೆ ಬಲಿ ಬಿದ್ದಿದ್ದೆ."
-ವ್ಯಾನ್ ಗೋನ ತಾಯಿ ತನ್ನ ಮೊದಲ ಮಗು ವಿನ್ಸೆಂಟ್ ಸತ್ತಿದ್ದಾಗಿನಿಂದ ಅದರ ಮರುವರ್ಷವೆ ಹುಟ್ಟಿದ ಈ ಮಗುವಿಗೆ ವಿನ್ಸೆಂಟ್ ಎಂದೆ ಹೆಸರಿಟ್ಟು ಮೊದಲನೆಯವನನ್ನು ಇವನಲ್ಲಿ ಹುಡುಕುತ್ತಿದ್ದಳು. ವ್ಯಾನ್ ಗೋಗೆ ಇದು ತುಂಬಾ ಪ್ರಭಾವ ಬೀರಿತು. ಕ್ರಮಬದ್ಧವಾದ ಯೋಜಿತ ಬದುಕಿನೆಡೆಗೆ ಅವ ಎಂದಿಗೂ ಹೆಜ್ಜೆ  ಇಡಲೆ ಇಲ್ಲ. ಖಾಲಿತನಕ್ಕೆ ಪ್ರೀತಿ ತುಂಬುಲು ತಿರುಗಿದ.

ವಿಚಿತ್ರ ಮನಸ್ಥಿತಿಯ ವ್ಯಾನ್ ಗೋ  ಹುಚ್ಚಾಸ್ಪತ್ರೆ ಸೇರಿದ, ಪ್ರೀತಿಗಾಗಿ ಅಲೆದ, ಬಸಿರಾದ ವೇಶ್ಯೆ ಸೀಯಳಿಗಾಗಿ ಹಂಬಲಿಸಿದ ಉತ್ಕಟವಾಗಿ ಪ್ರೀತಿಸಿದ ?, ಸದಾ ಉದ್ವೇಗದಲ್ಲಿರುತ್ತಿದ್ದ. ಕ್ಯಾನ್ವಾಸ್ ಮೇಲೆ ಬರೀ ಒರಟುತನಗಳು ಯಾವುದೇ ಬಳಕುತನವಿಲ್ಲದ ಮತ್ತು  ಗೆರೆಗಳಿಲ್ಲದ ಗಾಢ ಬಣ್ಣಗಳು . ತಮ್ಮ ಥೀಯೋನ ಹಣದ ಮೇಲೆಯೆ ಅವಲಂಬಿತವಾಗಿದ್ದ ಅವನ ಬದುಕು. ಅವ ಬಿಡಿಸಿಟ್ಟ ಚಿತ್ರಗಳು ಅವ ಬದುಕಿದ್ದಾಗ ಯಾರೂ ಸಹ ಮೂಸಿ ಸಹ ನೋಡಲಿಲ್ಲ. ಹಸಿದರು ಬಣ್ಣಗಳಿಗೆ ಕಡಿಮೆ ಮಾಡಿದವನಲ್ಲ. ಒಂದು ಹೊತ್ತಿನ  ಊಟವಿಲ್ಲದಿದ್ದರೆ ನಡೆಯುತ್ತಿತ್ತೆನೊ ಆದರೆ ಅವನಿಗೆ ಬಣ್ಣ ಬೇಕು. ಹಸಿದ. ಬರೀ ಕಾಫಿ ಕುಡಿದು ದಿನಗಳು ನೂಕಿದ.

ವ್ಯಾನ್ ಗೋ ಬದುಕಿದ್ದಾಗ ಅವನ ಚಿತ್ರಗಳು ಮಾರಾಟವಾಗಲೆ ಇಲ್ಲ. ಕೊನೆಗೂ ಆತ್ಮಹತ್ಯೆ ಮಾಡಿಕೊಂಡ. ಇಗ ದೊಡ್ಡ ರಕ್ಷಣಾ ಪಡೆಯೊಡನೆ ಇವನ ಚಿತ್ರಗಳು ಹರಾಜಿಗೆ ಬರುತ್ತಿವೆ.!  ವ್ಯಾನ್ ಗೋನ ಚಿತ್ರಗಳು ಅತ್ಯಧಿಕ ಬೆಲೆಯ ಚಿತ್ರಗಳಾಗಿ ಗಿನ್ನೀಸ್ ಪುಸ್ತಕದಲ್ಲಿ ದಾಖಲಾಗಿವೆ. ಅವ ಬದುಕಿದ್ದಾಗ ಮಾತ್ರ ಯಾವ ಚಿತ್ರವು ಅವನ ಒಂದು ಹೊತ್ತಿನ  ಊಟ ಕೊಡಲಿಲ್ಲ.....

* ಸಣ್ಣಗೆ ಕಡ್ಡಿಯಂಥಾ ಅರೆಜೀವದ ಗಣಿ ಕಾರ್ಮಿಕರಿಗೆ ಬೈಬಲ್ ಉಣಿಸಿದೆ...ಉಪದೇಶಿಸಿದೆ ( ಮಿಷನರಿ ಆಗಿದ್ದಾಗ)

* ನನ್ನ ಪ್ರೀತಿಗೆ ಆತ್ಮೀಯತೆಗೆ ಎಲ್ಲರೂ ಬೆದರುವವರೇ . ಕಲೆಗಾಗಿ ಕಷ್ಟಗಳನ್ನು ಸಹಿಸಬೇಕು.

* ಬದುಕಿನ ಇಷ್ಟೆಲ್ಲ ಬಣ್ಣಗಳನ್ನು , ಪ್ರಕೃತಿ ತೆಗೆದೊಗೆದು ಮತ್ತೆ ತೊಡುವ ನೂರು ಬಣ್ಣಗಳನ್ನು ಹೇಗೆ ಹಿಡಿಯುವುದು ?

* ಕನಸುಗಳನ್ನಷ್ಟೇ ಕೊಳ್ಳುವ ಜಗತ್ತಿಗೆ ನನ್ನ ದಟ್ಟ ವಾಸ್ತವಗಳು ಹಿಡಿಸೀತೆ ?

* ಬದುಕಿನ ಅನಿವಾರ್ಯತೆ, ಅವಶ್ಯಕತೆಗಳೆದರು ಮಾತಿನ ಪ್ರೀತಿಗೆ ಯಾವ ಹೆಣ್ಣು ಹಿಡಿದಿಡುವ ಬಲವಿತ್ತು ?

* ಅನುಕಂಪದಲ್ಲಿ ಒಳಹೊಕ್ಕ ಸಮಾಜಸುಧಾರಕ ಕ್ಷಣದಲ್ಲಿ ಚಿತ್ರಕಾರನಾಗುತ್ತಿದ್ದ .

* ದೇವರೆ ತಿಂದುಂಡು ಆರೋಗ್ಯವಾಗಿ ಉಳಿಯಬಲ್ಲ ಕಲಾವಿದರನ್ನು ನಾನೆಂದಾದರೂ ನೋಡಬಲ್ಲೆನೆ ?

ನನಗೆ ಸಾಧ್ಯವಾದಷ್ಟು ವ್ಯಾನ್ ಗೋನ ಸಾಲುಗಳು ಉಲ್ಲೇಖಿಸಿರುವೆ. ಈ ಪುಸ್ತಕ  ಓದಿದಾಗ
ಓಡುವ ಬದುಕಿಗೆ ನಡೆಯುವುದನ್ನು ಕಲಿಸುತ್ತಾನೆ ವ್ಯಾನ್ ಗೋ.....ನೇಮಿಚಂದ್ರ ಅವರ ಬರಹವೆ ಹಾಗೇ ಅವರೊಂದು ಕನ್ನಡದ ಕ್ಷಿತಿಜ

# ಕಪಿಲ್ ಪಿ ಹುಮನಾಬಾದೆ.

3 comments:

  1. ನಿಮ್ಮ ವಿಮರ್ಶೆ ಓದಿದ ಮೇಲೆ ಪುಸ್ತಕ ಓದಬೇಕು ಅನಿಸುತ್ತದೆ. ಧನ್ಯವಾದ

    ReplyDelete
  2. ನಿಮ್ಮ ವಿಮರ್ಶೆ ಓದಿದ ಮೇಲೆ ಪುಸ್ತಕ ಓದಬೇಕು ಅನಿಸುತ್ತದೆ. ಧನ್ಯವಾದ

    ReplyDelete
  3. ಧನ್ಯವಾದಗಳು

    ReplyDelete