Friday 14 April 2017

ಕಾವ್ಯ ಮನೆಯ ವಿಮರ್ಶಾಯಾನ..

ಪುಸ್ತಕ ವಿಮರ್ಶೆ- 1
ಸ್ನೇಹಲತಾ ಗೌನ್ನಳ್ಳಿ

ವಿ.ಗೋಪಕುಮಾರ - 'ಸಾವಿರ ರೆಕ್ಕೆಯ ಪುಸ್ತಕ'

ವಿ.ಗೋಪಕುಮಾರ ಅವರ 'ಸಾವಿರ ರೆಕ್ಕೆಯ ಪುಸ್ತಕ'ವು ಸುಮಾರು 125 ನ್ಯಾನೋ ಕಥೆಗಳನ್ನು ಒಳಗೊಂಡ ಅನುಭವಾಲೋಚನೆಗಳ ಗುಚ್ಛವಾಗಿದೆ. ಇಲ್ಲಿನ ಕಥೆಗಳಿಗೆ ತಮ್ಮದೇ ಆದ ಸ್ಪಂದನೆಗಳಿವೆ.ಸಹೃದಯನನ್ನು ಹಿಡಿದಿಟ್ಟುಕೊಂಡು ಓದಿದಿಕೊಳ್ಳುವ ತಾಕತ್ತಿದೆ.ಪ್ರತಿ ಕಥೆಯನ್ನು ಓದಿದ ನಂತರ ಒಂದು ತಣ್ಣನೆಯ ಅಲೆ ಬಂದು ಅಂತರಂಗವನ್ನು ತಾಕಿ ಹೋದಂತಹ ಅನುಭವವಾಗುವುದು.ಹೆಸರೇ ಸೂಚಿಸುವಂತೆ ಈ ಕಥೆಗಳು ಗಾತ್ರದಲ್ಲಿ ವಾಮನನಂತೆ ಕಂಡರೂ ಅವುಗಳ ಧ್ವನಿ ಮಾತ್ರ  ತ್ರಿವಿಕ್ರಮನಂತೆ ಹೊರಡಿಸುತ್ತವೆ.
           'ಸಾವಿರ ರೆಕ್ಕೆಯ ಪುಸ್ತಕ' ಎನ್ನುವ ಮೊದಲ ಕಥೆಯಲ್ಲಿ ಪುಸ್ತಕದ ಹೆಸರಿನದ್ದೇ ಒಂದು ಪುಟ್ಟ ಕಥೆಯಿದೆ. ಬದಲಾದ ಜೀವನ ಶೈಲಿ,ಟಿವಿ,ಮೊಬೈಲ್, ವಿಡಿಯೋ ಗೇಮ್ ನಂತಹ ಗ್ಯಾಜೆಟ್ ಗಳು ಮಕ್ಕಳ ಪುಸ್ತಕ ಓದಿನ ಜೊತೆಗೆ ದೈಹಿಕ ಚಟುವಟಿಕೆಗಳನ್ನು ನುಂಗಿಹಾಕಿವೆ. ಒಂದು ಪುಸ್ತಕ ಅಂದರೆ ಅದೊಂದು ಅನುಭವ ಲೋಕ.ಇಂದಿನ ಮಕ್ಕಳಿಗೆ ಈ ಅನುಭವ ಲೋಕದ ಸವಿಯನ್ನು ಹಚ್ಚಬೇಕಾದ ತುರ್ತು ಅಗತ್ಯವಿದೆ ಎಂದು ಆರೇಳು ಸಾಲಿನ ಈ ಮೊದಲ ಕಥೆಯೇ ಇಷ್ಟೆಲ್ಲವನ್ನು ಹೇಳುತ್ತದೆ.
         ವ್ಯವಸ್ಥೆಯ ವಿರುದ್ಧ ಆಕ್ರೋಶ, ತೀವ್ರತರ ಪ್ರತಿರೋಧವಿಲ್ಲದೆ ಸಣ್ಣಗೆ ತಿರಸ್ಕಾರವಿರುವುದನ್ನು ಇಲ್ಲಿನ ಕಥೆಗಳು ಸಾರುತ್ತವೆ.ಮನುಷ್ಯ  ಸಂಬಂಧಗಳ ಆಳವಾದ ಅಂತಃಕರಣತೆಯನ್ನು ಹೆಚ್ಚಿನ ಕಥೆಗಳು ಒಳಗೊಂಡಿವೆ.
         ಈರುಳ್ಳಿ ಹೆಚ್ಚುವ ನವ ವಧುವಿಗೆ ಆಕೆಯ ಗಂಡ ಕಣ್ಣೀರು ಬಾರದಂತೆ ಈರುಳ್ಳಿ ಹೆಚ್ಚುವ ಟಿಪ್ಸ ಹೇಳಿದಾಗ ತನ್ನ ಗಂಡ ಎಷ್ಟು ಕಾಳಜಿಯುಳ್ಳವ ಎಂದೆನಿಸುತ್ತದೆ.ಕೊನೆಗೆ ಗಂಡ ನಿನ್ನ ಐ.ಎ.ಎಸ್ ಅಣ್ಣ ಹೇಳಿದಾನೆ ತಂಗಿಗೆ ಕಣ್ಣೀರು ಬಾರದಂತೆ ನೋಡಿಕೋ ಎಂದು ಅಂತ ಹೇಳಿದಾಗ ಆಕೆಗೆ ಅಣ್ಣನ ಮಮಕಾರ,ಪ್ರೀತಿ ನೆನಪಾಗಿ ಕೊನೆಗೂ ಕಣ್ಣೀರು ಬಂದೇ ಬಿಡುವುದು ಎಂಬಲ್ಲಿ ತೀರ ಕಾಳಜಿ,ಪ್ರೀತಿಯುಳ್ಳ  ಸಹೋದರ ಸಂಬಂಧದ ಕುರಿತು ಇಂತಹ ಪುಟ್ಟ ಕತೆಯಲ್ಲಿ ಹಿಡಿದಿಟ್ಟದ್ದು ಸೋಜಿಗವೇ ಸರಿ.
         ಅನಾಥ ರೋಗಿಯೊಬ್ಬ ವೈಧ್ಯರ ಅಲಕ್ಷದಿಂದ ಸತ್ತ ಶವ ಸಾಗಿಸುವ ಮಹಾದೇವ 'ಆಸ್ಪತ್ರೆಯನ್ನು ನೋಡಿ ಈ ಸರ್ಕಾರಿ ಆಸ್ಪತ್ರೆಗೂ ಒಂದು ಮನಸ್ಸು ಮತ್ತು ದೇಹವೆಂದು ಇದ್ದಿದ್ದರೆ ಇದನ್ನು ಎಂದೋ ವಾಹನದಲ್ಲಿ ಸಾಗಿಸಿ ಅಂತ್ಯಕ್ರಿಯೆ ಮುಗಿಸಿ ಬಿಡುತ್ತಿದ್ದೆ'ಎಂದು ಅಂದುಕೊಳ್ಳುವ ಮೂಲಕ ಇಲ್ಲಿ ಮಾನವೀಯ ಅಂತಕರಣವಿಲ್ಲದ ವೈಧ್ಯರ ಕುರಿತಾಗಿ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ ಕತೆಗಾರ.
      'ರೆಸಾರ್ಟ ರಾಜಕೀಯ' ಕಥೆಯಲ್ಲಿ ದುರಾಡಳಿತ,ಸ್ವಾರ್ಥಗಳ ಆಳದಲ್ಲಿ ಮುಳುಗಿ ಹೋದ ಇಂದಿನ ರಾಜಕೀಯ ನಾಯಕರುಗಳ ಅಸಲಿ ಬಣ್ಣದ ಕುರಿತು ವ್ಯಂಗ್ಯವಾಗಿ ಅನಾವರಣ ಮಾಡಿದ್ದಾರೆ.ತುಂಬಾ ವಿಪರ್ಯಾಸದ ಕತೆಯೆಂದರೆ 'ಹರಕೆ' . ಒಂದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಭಿನ್ನ ಆಲೋಚನೆಯುಳ್ಳವರು. ಪಕ್ಕದವನ ಫೋನ್ ನಿಂದ ಮನೆಗೆ ಫೋನಾಯಿಸಿ ಹೆಣ್ಣು ಮಗು ಹುಟ್ಟಿದ ಸುದ್ದಿಯಿಂದ ಹರಕೆ ಫಲಿಸಿತು ಎಂದು ಖುಷಿಗೊಂಡರೆ ಅದೇ ಆ ಪಕ್ಕದ ವ್ಯಕ್ತಿ ಹೆಂಡತಿಯ ಭ್ರೂಣದಲ್ಲಿರುವುದು ಹೆಣ್ಣೆಂದು ತಿಳಿದು ಕೊಲ್ಲಿಸಲು ಹೊರಟಂತಹ ವಿಚಿತ್ರ.  ತೀರ ಚಿಕ್ಕ ಸಾಲುಗಳಲ್ಲಿಯೇ ಅರ್ಥಗರ್ಭಿತ ಸಂದೇಶಗಳನ್ನು ನೀಡುವುದೇ ಈ ಕತೆಗಳ ಗುಣಾತ್ಮಕತೆಯಾಗಿದೆ.
     ಭಾರತದಲ್ಲಿ ಹುಟ್ಟಿ,ಬೆಳೆದು ವಿದೇಶಕ್ಕೆ ಹೋಗಿ ಉದ್ಯೋಗ ಮಾಡಿ ಕೊನೆಗೆ ಮರಳುವಂತಹ ಅತಿ ವಿದ್ಯಾವಂತ ದಡ್ಡರ ಕುರಿತು 'ನಮ್ಮೂರು' ಕತೆಯು ವಾಸ್ತವತೆಯನ್ನು ಬಿಚ್ಚಿಡುತ್ತದೆ.
      ಅಷ್ಟೂ ಕತೆಗಳಲ್ಲಿ 'ನಂಬಿಗೆಯ ಅಂಬಿಗ' ಕತೆ ಹೆಚ್ಚು ಮೆಚ್ಚುಗೆಯಾಗುವಂತಹದ್ದು.ಯಾವ ನಿರೀಕ್ಷೆಗಳನ್ನೂ ಇಟ್ಟುಕೊಳ್ಳದೆ ಕೆಲಸ ಮಾಡಬೇಕು ಎಂಬ ಸಂದೇಶವನ್ನು ನೀಡುತ್ತದೆ.ಸೋತ ಮನಸ್ಸಿಗೆ ಸ್ಪೂರ್ತಿಯನ್ನು ನೀಡುವಲ್ಲಿ 'ಕತೆ ಬರುವ ಹಾದಿ', 'ಸುಗಮ ದಾರಿ' ಕತೆಗಳು ಗೆಲ್ಲುತ್ತವೆ.
      ಕೃತಿಯ ಮುನ್ನುಡಿಯಲ್ಲಿ ಪ್ರೊ.ಕೃಷ್ಣೇಗೌಡರು "ಗೋಪಕುಮಾರ್ ಕರುಳಲ್ಲೇ ಕತೆ ಹೆಣೆಯುವ ಕಲೆಗಾರ. ಸಮಾಜದ ಅನ್ಯಾಯ,ಅನಾಚಾರ,
ಬೂಟಾಟಿಕೆ,ಅಸಹ್ಯಗಳ ಬಗ್ಗೆ ಬರೆಯುವಾಗಲೂ ಸುಖಾ ಸುಮ್ಮನೆ ಉರಿದುಕೊಳ್ಳದೆ ಅಂತಃಕರಣದ ದೀಪ ಹಚ್ಚಿಕೊಂಡು ಕತೆ ಬರೆಯುತ್ತಾರೆ.ಅಷ್ಟು ಮಾತ್ರವೇ ಅಲ್ಲದೆ ನಮ್ಮ ಸುತ್ತಣ ಜಗತ್ತಿನ ಘನವಂತಿಕೆಯನ್ನೂ,ಅರ್ಥವಂತಿಕೆ, ಸೌಂದರ್ಯಗಳನ್ನು ತಮ್ಮ ಈ ಹನಿಗತೆಗಳಲ್ಲಿ ಅನಾವರಣ ಮಾಡುತ್ತಾರೆ" ಎಂದು ಹೇಳಿರುವುದು ಅಕ್ಷರಶಃ ನಿಜವೆನಿಸುತ್ತದೆ ಕೃತಿಯ ಓದಿನ ನಂತರ.
       'ಚಿತೆ' ಕತೆಯಲ್ಲಿ ಕಾಮುಕರ ಅಟ್ಟಹಾಸಕ್ಕೆ ಬಲಿಯಾಗಿ ಸತ್ತ ಮಗಳ ಶವವನ್ನು ಸುಡಲು ಇಚ್ಛಿಸುವನು ತಂದೆ.ಯಾಕೆಂದರೆ ಸುಡದೇ ಹಾಗೇ ಹೂತಿಟ್ಟರೆ ಮಗಳ ಶವವನ್ನೂ ಬುಡುವುದಿಲ್ಲ ಕಾಮುಕ ದ್ರೋಹಿಗಳು ಎಂದು ಪರಿತಪಿಸುವ ಅಸಹಾಯಕ ನೊಂದ ತಂದೆಯನ್ನು ಕಂಡು ಓದುಗನ ಕಂಗಳು ನೆನೆಯದೆ ಇರಲಾರವು.
         ಪುಸ್ತಕ ಓದುವಾಗ ತೀರ ಸನಿಹವಿಟ್ಟುಕೊಂಡರೆ ಅಕ್ಷರಗಳು ಸ್ಪಷ್ಟವಾಗಿ ಕಾಣಿಸಲಾರವು,ಕೊಂಚ ಅಂತರದಲ್ಲಿಟ್ಟು ಓದಿದರೆ ಮಾತ್ರ ಅಕ್ಷರಗಳು ಕಂಡು ಅಲ್ಲಿನ ಸಂದೇಶ ಅರ್ಥೈಸಿಕೊಳ್ಳಬಹುದು.ಹಾಗೆಯೇ ಸಂಬಂಧಗಳೂ ಕೂಡ.ಸದಾ ಜೊತೆಗಿರುವ ಇಬ್ಬರು ಕೊಂಚ ದೂರಾದಾಗಲೇ ಮನಸ್ಸುಗಳು ಎಷ್ಟು ಹತ್ತಿರವೆಂದು ತಿಳಿಯಲು ಸಾಧ್ಯವೆಂಬುದನ್ನು 'ದೂರ ಸನಿಹ' ಕತೆಯಲ್ಲಿ ನಿರೂಪಿತವಾಗಿದೆ.
        ಒಟ್ಟಾರೆ ಇಲ್ಲಿಯ ಕತೆಗಳಲ್ಲಿ ವ್ಯಂಗ್ಯದ ಮೂಲಕ ವಾಸ್ತವವನ್ನು ಬಿಚ್ಚಿಡುವ, ಮನುಷ್ಯನ ಕ್ರೂರತೆ, ಪ್ರೇಮ, ಅಂತಃಕರಣ,ಪಕ್ಷರಾಜಕಾರಣಕ್ಕೆ ಬಲಿಯಾಗುವ ಮುಗ್ಧ ಪ್ರೇಮ, ತಾಂತ್ರಿಕ ಕ್ಷೇತ್ರದಲ್ಲಿ ಮುಂದುವರಿದಿರುವುದರ ಪರಿಣಾಮವಾಗಿ ಗೌಣವಾದ ಮನಸ್ಸಿನ ಭಾವನೆಗಳು,ಮಕ್ಕಳಿಂದ ತಾಳ್ಮೆಯ ಪಾಠದ ಕಲಿಕೆಗೊಳಪಡುವ ಸೋಜಿಗ, ಬೇಸತ್ತ ಬದುಕಿಗೆ ಸ್ಪೂರ್ತಿಯ ಬೆಳಕು ಹೀಗೆ ಹಲವಾರು ಅಂಶಗಳನ್ನು ಕಲಿಸುತ್ತವೆ.ಜೊತೆಗೆ ಕೆಲ ಕತೆಗಳು ಸಹೃದಯನ ಆಳಕ್ಕಿಳಿದು ಹೊಸ ಚಿಂತನೆಗೆ ಎಡೆ ಮಾಡಿಕೊಡುತ್ತವೆ.
           ಸ್ನೇಹಲತಾ,ಗೌನಳ್ಳಿ.

1 comment: