1 .ಕಿಟಕಿಯಲ್ಲಿ ಹುಣ್ಣಿಮೆ ಚಂದಿರ...
ನಾ ಕಾಯುತ್ತಿದ್ದೆ,
ನನ್ನ ಮನೆಯ ಕಿಟಕಿಯಲ್ಲೇ,
ನೆರಳುಗಳಷ್ಟೆ ಅಲ್ಲಲ್ಲಿ ಅಲೆದು
ಅಣಕಿಸಿ ಹೋಗುತ್ತಿತ್ತು
ನಾ ಹಿಂಬಾಲಿಸುವುದ ತಿಳಿದು
ಮಾಯವಾಗುತ್ತಿತ್ತು
ಯಾವ ಮಾಯಾ ಆಟವಿದು
ಕಾಣದೇ,ಕಾಯಿಸುತ್ತ,
ಪದೇಪದೇ
ನನ್ನ ವಿರಹದ ಉಸಿರ ಬಿಗಿದು
ನನ್ನ ಸಂಕಟದ ಕೂಗ ಕೇಳಿಯೂ
ಕೇಳಿಸದೆ ಕಾಡುವ,
ಕಾಣದ ಭೂತ
ಇರುವ ಸತ್ಯವ ಮರೆಸಿ
ಇರದ ಮಾಯಾವಿ ನಿರೀಕ್ಷೆಯಿಲ್ಲದ
ನಂಬಿಕೆಯ ನಂದಿಸಿ ನಿಂದಿಸಿ
ಕೊನೆಗೆ,
ಹುಣ್ಣಿಮೆಗೂ ಕಾಣಲಿಲ್ಲ
ನಾ ಕಾಯುತ್ತಿದ್ದೆ, ಚಂದಿರನಾ
ಮನೆ ಕಿಟಕಿಯಲ್ಲೇ
- ರಮ್ಯ ಜಾನು
2 .ಮಂದಾಕಿನಿಯ ಮಿಸ್ಸಿಂಗ್ ರಿಪೋರ್ಟ
ಹರಿದು ಬಂದ ಬಿಸಿ ಕಣ್ಣೀರಿನಲ್ಲಿ
ಮಾಯವಾದ ಕನಸಿನಂತೆ
ಅವಳಿಗ ಮಿಸ್ಸಿಂಗ್...
ಕಂಪ್ಲೇಂಟ್ ಕೊಡಲು ಬಂದೆ
ಆರಕ್ಷಕ ಠಾಣೆಗೆ
ಹುಂ ಹೇಳಿ ಏನು ಬಂದದ್ದು..?
ಅರ್ಜಂಟಾಗಿ ಗದರಿದ ಪೇದೆ
ನುಲಿಯುತ್ತಾ ನಡೆದು ತಗ್ಗು ದಿಣ್ಣೆಗಳ ದಾಟಿ
ಗಿಡ ಮರಗಳನ್ನು ಮೀಟಿ
ಹೊಮ್ಮಿಸುತ್ತಿದ್ದಳು ನಮ್ಮಾಳದಿಂದಲೇ ಸಂಗೀತಾನಂದಮಯಿ
ಇಂದಲ್ಲಿ...
ಸ್ಮಶಾನ ಮೌನ ರೌರವ ವೇದನೆ
ದನಕರು ದಾಹ ನೀಗಿಸಿ
ಕೂಸು ಕುನ್ನಿಗಳ ಹೇಲರಿವೆ ತೊಳೆದು
ಊರು ಕೇರಿಗಳನ್ನೊಂದಾಗಿಸಿ ಚಂದವಾಗಿದ್ದಳು
ನೋಡ ನೋಡುತ್ತಲೇ
ದಡಗಳನ್ನೆರಡಾಗಿಸಿ ಬಾಡುತ್ತಿತ್ತವಳ ಗೇಹ
ಈಗಲ್ಲಿ ಬಿಸಿಲು ಝಳದ ಮರೀಚಿಕೆಗಳದ್ದೇ ನೇಹ
ಹೊರಗೆಲ್ಲ ಧೋಬಿಗಳ ದರ್ಬಾರು
ಒಳಗೆಲ್ಲ ಪುಟಾಣಿಗಳ ಅರೆ ಬರೆ ಈಜು
ಸಂಬಳವಿಲ್ಲದೆ ಸಮಸ್ತ ಮೈಲಿಗೆಯನ್ನೂ
ತೊಳೆಯುವ ಗುತ್ತಿಗೆ ಕೆಲಸದವಳು
ಥೇಟ್ ಅವ್ವನಂತೆ !
ಯಾಕೀಗ ರಜೆ ಹಾಕಿರುವಳೋ
ಅಥವಾ ಕಾಣೆಯಾಗಿರುವಳೋ
ಹುಡುಕಿರೆಂದು ಬರೆಸಿದೆ ಮಿಸ್ಸಿಂಗ್ ರಿಪೋರ್ಟ್
ಯಾರವಳು,ಎಲ್ಲಿದ್ದಳು,ಫೋಟೋ ಇದೆಯಾ ಇತ್ಯಾದಿಯಾಗಿ ಪ್ರಶ್ನಿಸಿದ ಇನ್ಸಪೆಕ್ಟರ್
ಆಗ ಉಕ್ಕಿದ ದುಃಖದಿಂದಲೇ ಉತ್ತರಿಸಿದೆ
'ನನ್ನೂರಂಚಲ್ಲಿ ಹರಿಯುತ್ತಿದ್ದ ಮಂದಾಕಿನಿ ಅವಳು,
# ಸ್ನೇಹಲತಾ, ಗೌನಳ್ಳಿ
No comments:
Post a Comment