Thursday 20 April 2017

ಮತ್ತೆ ಮತ್ತೆ ಓದಿಸಿಕೊಳ್ಳುವ ಕಥೆ...

ತೆರೆದ -ಮನ ( ಕಥಾಭಿಪ್ರಾಯಗಳು )
ತಮಂಧದ ಕೇಡು - ಅಮರೇಶ ನುಗಡೋಣಿ .

ತಮಂಧದ ಕೇಡು, ನೀರು ತಂದವರು, ಧರೆ ಉರಿದರೆ ಕಥೆಗಳನ್ನು ಬರೆದಿರುವ ಲೇಖಕನು ಬೇರೆನನ್ನು ಬರೆಯದಿದ್ದರೂ ಶಾಶ್ವತವಾಗಿ ಉಳಿಯುತ್ತಾನೆ.

# ಎಚ್ ಎಸ್ ರಾಘವೇಂದ್ರ ರಾವ್.

____________________

ಅಮರೇಶ ನುಗಡೋಣಿಯವರು ಹೊಸ ತಲೆಮಾರಿನ ಬರಹಗಾರರಿಗೆ ಕಥನದ  ಒಂದು ಮಾದರಿಯನ್ನು ಕಲಿಸುವಷ್ಟು ಬೆಳೆದಿದ್ದಾರೆ.

# ಡಾ ಕೆ. ವಿ ನಾರಾಯಣ  .

__________________

ಈ ಹೊಸ ಕಥನಗಳಲ್ಲಿ ಮೂರ್ತವಾದ ಜಮೀನ್ದಾರಿ ಸಮಾಜದ ಶೋಷಣೆ ಇರುವುದಿಲ್ಲ; ಅಲ್ಲ ಸಂಕೇತವಾಗಿ ಊರ ಗೌಡನಿರುವುದಿಲ್ಲ.  ಅಗೋಚರನಾದ ಜುಗಾರಿ ಕ್ರಾಸನ ಬಾಸ್ ಇರುತ್ತಾನೆ. ಅಥವಾ virtual image ಇರುತ್ತದೆ.

# ರಾಜೇಂದ್ರ ಚೆನ್ನಿ

______________________

ಅಮರೇಶರ ತಮಂಧದ ಕೇಡು ಕಥೆಯನ್ನು  ಓದಿದಾಗ ಇಗಲೂ ಕಾಡುವ ಸಾಲೆಂದರೆ " ಇದೇನು ಬಸಣ್ಣಪ್ಪನ ಕಾಲ ಏನಲೆ ? ಚಪ್ಲಿ ಹೊಲಿವ ಕೈಗೆ ಲಿಂಗ ಬರದ್ಕಾ ". ದುರಗ ತನ್ನ ಮಗ ಚೆನ್ನನಿಗೆ ಹೇಳುವ ಮಾತಿದ್ದು. ಶಾಂತಗೌಡನ ಮಗಳಾದ ಅಕ್ಕಮಹಾದೇವಿ ಮತ್ತು  ಚೆನ್ನ ಪರಸ್ಪರ ಪ್ರೀತಿಸಿ ಮದುವೆಯಾಗಲೂ ಹೊರಟವರು, ವಿದ್ಯಾವಂತರು , ಆದರೆ ಇಲ್ಲಿ ಜಾತಿ ಮತ್ತು ವರ್ಗದ ವೈರುದ್ಧವಿದೆ. ಮಾದ್ಗನಾದ  ಚೆನ್ನ ಮತ್ತು ಗೌಡನ ಮಗಳು ಅಕ್ಕಮಹಾದೇವಿಯವರ ಮೌನದೊಲವು ಹೊರಗಡೆಗೆ ಬಂದಾಗ ಶಾಂತಗೌಡ ತನ್ನ ಜೀವಕ್ಕೆ ಜೀವ ಅಂತ ತಿಳಿದ ದುರಗನನ್ನೆ ಸಿಟ್ಟಿನಿಂದ ನೋಡಲಿಕ್ಕೆ ಸುರುಮಾಡುತ್ತಾನೆ.

ಇಡೀ ಕಥೆಯ ಜೀವಾಳವಿರುವುದೆ ದುರಗ ಮತ್ತು ಶಾಂತಗೌಡರ ಒಳಸಂಕಟದೊಳಗೆ, ಚಡಪಡಿಕೆಯೊಳಗೆ ; ಚಂದವ್ವನನ್ನು ( ದುರುಗನ ಹೆಂಡತಿ ) ತನ್ನ ಹೆಂಡತಿಯಾಗಿ ಸ್ವೀಕರಿಸುತ್ತೆನೆ ಎನ್ನುವ ಗೌಡನ ತೆರೆದುಕೊಳ್ಳವಿಕ್ಕೆಗೂ ನಂತರ ಚೆನ್ನ ತನ್ನ ಮಗಳನ್ನೆ ಪ್ರೀತಿಸುತ್ತಿರುವನೆಂದು ಗೊತ್ತಾದಾಗ ಆಗುವ ಬದಲಾವಣೆಗೂ ಅದೆಷ್ಟು ವ್ಯತ್ಯಾಸವಿದೆ. 12ನೇ ಶತಮಾನದಾಚೆಯದೆಂದೆ ಈ ಕಥೆಯನ್ನು ನಾವು ಪರಿಗಣಿಸಬಹುದು. ನಿರ್ದಿಷ್ಟ ಕಾಲಮೀತಿಯಾಗ್ಲಿ ಇದಕ್ಕಿಲ್ಲ. ನಮ್ಮಲ್ಲಿ ಈ ಜಾತಿಯತೆ ಎಷ್ಟು  ಆಳವಾಗಿ ಬೇರು ಬಿಟ್ಟಿದೆಯನ್ನುವುದನ್ನು ಈ ಕಥೆ ಪ್ರಚುರಪಡಿಸುತ್ತದೆ ಜೊತೆಗೆ ದುರಗನ ಗುಡಿಸಲಿನ ಮೇಲೆ ಛಾವಣಿ ಹಾಸಿದ ಬೃಹತ್  ಬೇವಿನ ಮರ ಕಡಿಯಲ್ಪಟ್ಟು ಬಂಡಿಯಾಕೃತಿಯಾಗಿ ಗೌಡನ ಮನೆ ಮುಂದೆ ನಿಂತಾಗ ಅದಕ್ಕೆ ಪೂಜೆ ಮಾಡುತ್ತಲೆ ಕಣ್ಣೀರಿಡುವ ದುರಗ , ಮನುಷ್ಯ ಭಾವನಾತ್ಮಕತೆಗಳಾಚೆ  ನಿಂತು ಎಷ್ಟು ಕಠೋರನಾಗಿರುವನೆಂದು (ವ್ಯವಹಾರಿಕ) ಸಾಂಕೇತಿಸುತ್ತದೆ.

ಸೂಗಪ್ಪ ಮಾಸ್ತರರ ಪಾತ್ರದರ್ಥವನ್ನು ಸರಿಯಾಗಿ ಗುರುತಿಸಿರುವ ಶ್ರೀಧರ ಬಳಿಗಾರರು " ಹನ್ನೆರೆಡನೆ ಶತಮಾನದ ವಚನ ಚಳುವಳಿಯ ಸಾಮಾಜಿಕ ಸುಧಾರಣೆಯ ಪ್ರತಿನಿಧಿಯಂತಿರುವ ಇಂಥ ಕೆಟಲಿಸ್ಟ್ ಪಾತ್ರಗಳು   ಅಮರೇಶರ ಕತೆಗಳಲ್ಲಿ ಉಪಸ್ಥಿತರಿರುವುದು ಆಕಸ್ಮಿಕವಲ್ಲ. ಪರೋಕ್ಷವಾಗಿ ಚರಿತ್ರೆಯ ಚಲನೆಗೆ ಕಾರಣವಾಗುತ್ತಾನೆ ಎನ್ನುತ್ತಾರೆ" ಹೌದು ಸೂಗಪ್ಪ ಎಲ್ಲವನ್ನೂ ಎಲ್ಲರನ್ನೂ  ಒಂದು ರೀತಿಯಲ್ಲಿ ಭೇಟಿಯಾಗಿಸುತ್ತ ಬಳಿಗಾರರು ಹೇಳುವಂತೆ ಚಲನೆಗೆ ಕಾರಣವಾಗಿದ್ದಾನೆ.
ಚೆನ್ನನ ಓದು, ಶಾಂತಗೌಡನ ಹೆಂಡತಿಗೆ ಭವಿಷ್ಯತನ ಬದುಕಿನ ದಾರಿಗಳು, ದುರುಗನಿಗೆ ಚೆನ್ನನ ಹತ್ತಿರ ನಗರಕ್ಕೆ  ಹೋಗಲು ಸೂಚಿಸುತ್ತಾನೆ, ಗೌಡನಿಗೆ ರುದ್ರಮ್ಮಕ್ಕನನ್ನು ಭೇಟಿಯಾಗಲು ಸೂಚಿಸುವುದು ಸಹಿತ ಮಾಸ್ತರನೆ.

ಇವುಗಳೆನೆಯಿರಲಿ ದುರುಗ ನನ್ನಗೋಂದರ್ಥದಲ್ಲಿ ಭಾವಜೀವಿಯೆನ್ನಿಸುತ್ತಿದೆ. ಎಲ್ಲವನ್ನೂ ತನ್ನೊಳಗೆ ಕುದಿಸಿಕೊಂಡು ನಿಶ್ಚಲವಾಗಿ (ಮೌನವಾಗಿ ) ಬೆವರುವ ಜೀವವೆನಿಸುತ್ತದೆ. ಕಾಣದ ಬೆಂಕಿ ಕಾವು  ಹೊರಬರಲಾರದಷ್ಟು ಧಗೆ ಅವನೆದೆಯಲ್ಲಿಟ್ಟಿದೆ, ಅದು ರೊಟ್ಟಿಗಳ ಬೆಯಿಸುತ್ತಿದೆ.
ತನ್ನ ಹೆಂಡತಿ ಮತ್ತು ಶಾಂತಗೌಡನ ಸಂಬಂಧ ತಿಳಿದಿದ್ದರೂ ಸಹಿತ ಬಂಡೆದ್ದಿಲ್ಲ ,  ಎಲ್ಲವನ್ನೂ  ಎಷ್ಟು  ಆರಾಮವಾಗಿ ಬೆವೆತು ಕಸವನ್ನು ನುಕಿಬಿಡುತ್ತಾನೆ ಅನ್ನಿಸುತ್ತಿದೆ.  ತನ್ನ ಮಗ ಜಾತಿ ಮೀರುವಾಗ ದುರುಗನಿಗೆ ಅಸಾಧ್ಯ ನೋವು ಹುಟ್ಟಿಸಿರುವುದ್ದಾರೂ ಏನು ? ತುಂಗಮ್ಮನನ್ನು (ನದಿ) ದಾಟಿಸುವಾಗಲು ಸಹಿತ ಗೌಡನಿಗೆ  ಅವನು ಹೇಳ ಹೊರಟದ್ದು ಅದೆ, ನನ್ನದೆನು ತಪ್ಪಿಲ್ಲವೆಂದೆ ಸಾಕ್ಷಿಕರಿಸುವ ಮನೋಭಾವ. ಅಸಾಧ್ಯ  ವಿಧಯತೆ ದುರುಗನದು ಅನ್ನದ  ಋಣವಿರಬಹುದು ! ಆದರೂ ಕೊನೆಗೆ ಶಾಂತಗೌಡ ಮತ್ತು ದುರುಗ ನೀರಿನಲ್ಲಿ ಲೀನವಾದಾಗ ಈ ಕೆಳಕಂಡ ಎಚ್.ಎಸ್. ಆರ್ ಮಾತು ನೆನಪಾಯ್ತು.
" ಅಮರೇಶ ನುಗಡೋಣಿ ಎಂಬ ವ್ಯಕ್ತಿಯ ಅಂತರಂಗ ಅನುಭವಗಳು ಅವರ ಕತೆಗಳಲ್ಲಿ ಸಂಪೂರ್ಣ ಗೈರು ಹಾಜರಾಗಿರುವುದು" - ಎಚ್ ಎಸ್ ರಾಘವೇಂದ್ರ ರಾವ್. ಶ್ರೀಧರ ಬಳಗಾರರು ಈ ಕೃತಿಯ ಮುನ್ನುಡಿಯಲ್ಲಿ ಈ ಮಾತನ್ನು ಸರಿಯಾಗಿ ಸಮರ್ಥಿಸಿದ್ದಾರೆ.

ಕಥೆಯ ಪ್ರಾರಂಭಕ್ಕೆ ದುರಗ ಕಂಡ ಭಯಾನಕ  ಕನಸಿನಲ್ಲಿಯು ಸಹಿತ ಗೌಡನಿಗೆ ಬೈಯುಲು ಹೊರಟ ಮಾತು ಕರಗಿರುತ್ತದೆ. ಈ ದುರಗನ ಮೌನದಾಳದೆದೆಯ ನೋವು ಹುಡುಕುತ್ತಿರುವೆ.......

ಈ ಕಥೆ ನನ್ನ  ಎಳಿ ವಯಸ್ಸಿಗೆ ಇಷ್ಟೇ ಅರ್ಥ ಕೊಟ್ಟಿರಬಹುದು ಆದರೆ ಎಂದಿಗೂ ಮುಗಿಯದ ಕಥೆ ಇದು ಹುಡುಕ ಹೊರಟಷ್ಟು ಅನಂತದರ್ಥವೆನ್ನಿಸುತ್ತಿದೆ....

# ಕಪಿಲ .ಪಿ .ಹುಮನಾಬಾದೆ

____________________

" ಪಲ್ಲವ ಪ್ರಕಾಶನದಿಂದ ಮೂರನೇ ಮುದ್ರಣಗೊಂಡಿರುವ ಅಮರೇಶ ನುಗಡೋಣಿಯವರ ಈ ಪುಸ್ತಕ ಬೆಲೆ -150/-. ಪುಟಗಳು-206. ಒಟ್ಟು ಕಥೆಗಳು- 9.
ಪುಸ್ತಕಗಳ ಪ್ರತಿಗಳಿಗಾಗಿ ಸಂಪರ್ಕಿಸಿ- 7829464653 ( ಪೊಸ್ಟ್ ಅಥವಾ ಕೊರಿಯರ ಮೂಲಕ ಕಳುಹಿಸಲಾಗುವುದು)

No comments:

Post a Comment