Sunday 12 March 2017

ಅರಡಿಮಲ್ಲಯ್ಯನವರ ಪದ್ಯ

ಇರಾಕ್ ಫತ್ವಾ...

ಈ ಚರಿತ್ರೆಗೆ ಗೆದ್ದಿಲು ಹಿಡಿಯುತ್ತಿದೆ
ಹುತ್ತ ಬೆಳೆದೀತೆಂಬ ಭರವಸೆಯ ಮದ್ಯೆ
ಇರಾಕಿನ ರಕ್ತ ಮುಖಕ್ಕೆ ರಾಚುತ್ತದೆ
ಖಡ್ಗವಾಗಲಾರದ ಪೆನ್ನು
ಅಂತಃಕರಣ ಮೂಡಿಸದ ಅಕ್ಷರಗಳು
ತಲೆಬಾಗಿಸಿ ಕಣ್ಣೀರಾಗುತ್ತಿವೆ

ಮಾಂಸದಂಗಡಿಗೆ ನೇತಾಕಿದ ಮೊನಾಲಿಸಾಳ
ನಗುವಿನ ತುಟಿಗಳಿಗೆ ರಕ್ತ ಸವರಿದೆ
ಇತ್ತೀಚಿಗೆ ರಕ್ತ ಕುಡಿಯುವ ಚಟ
ಅದಕ್ಕೂ ಅಭ್ಯಾಸವಾಗುತ್ತಿದೆ
ನಾನು ಬರೆಯ ಹೊರಟ ನನ್ನವಳ
ಚಿತ್ರ ಅಧ೯ಕ್ಕೆ ನಿಂತಿದೆ

ಇರಾಕಿನ ಹೆಣಗಳ ಸಾಲುಗಳ
ಶಿಸ್ತಿನ ಮುಂದೆ
ಸೈನಿಕರ ಕವಾಯತು ಶಿಕ್ಷೆಗೊಳಗಾಗುತ್ತಿದೆ
ಗುಂಡಿಗೆ ಸೀಳಿಯೂ
ಸತ್ತಿರಲಾರನೆಂಬ ಕೊಲೆಗಾರನ
ಅನುಮಾನಕ್ಕೆ ದೇಹ ಸ್ಪೋಟಿಸುತ್ತಿದೆ

ದಣಿದ "ಪುರುಷತ್ವ" ಏಲಾರದಾದಾಗ
ಆಕೆಯ " ಕನ್ಯತ್ವ" ವನ್ನು ಪವಿತ್ರಗೊಳಿಸಲು
ಗುಂಡು ಹಾರಿಸಿ ಛಿದ್ರಗೊಳಿಸಲಾಯ್ತು
ಪ್ರೀತಿಸಿದ ಹುಡುಗಿಯನ್ನು ಕಾಪಾಡಲು
ಆಕೆಯನ್ನು ಕೊಂದ ಪ್ರೇಮಿಯೊಬ್ಬ
ದಂಗೆಕೋರರ ಗುಂಪು ಸೇರಿದ್ದಾನೆ

ಬೆಳಕಿನ ಬೀಜವು ಚಳಿ ಕಾಯಿಸಿಕೊಳ್ಳುತ್ತಿದೆ
ಮಾಗುತ್ತಿದೆ ಕತ್ತಲ ಬಯಕೆ
ಸಾಯಬೇಕೆಂಬ ಅವನ ಆಸೆಯು
ಕೊಲೆಯಲ್ಲೇ ನೆರವೇರಿದೆ
ನಿಜವನ್ನೇ ನುಡಿದು ಬಿಟ್ಟೀತು ಆ
ಗಾಳಿಯ ಕುತ್ತಿಗೆಯನ್ನು ಹಿಡಿಯಿರಿ

ರಣಾಂಗಣದ ಈ ರಕ್ತಮಾಂಸಗಳಲ್ಲಿ
ನಗುವ ಫಕೀರನೊಬ್ಬ
ಅಲ್ಲಾ....ಹೋ...ಅಕ್ಬರ್
ಎನ್ನುತ್ತಾ ಖುರಾನು ಪಠಿಸುತ್ತಿದ್ದಾನೆ
ಹಿಡಿಯಿರಿ ಆ ಸೂಯ೯ನನ್ನು
ಬೆಳಕ ಚೆಲ್ಲಿ ನಮ್ಮನ್ನೆಲ್ಲಾ ತೋರುತ್ತಿದ್ದಾನೆ

ಅನುಮಾನದ ಹುತ್ತದ ಮಧ್ಯೆ
ತಪಸ್ಸಿಗೆ ಕೂತಿದ್ದೇನೆ
ಒಳಗೆ ಕ್ರೌಂಚ ಮಾಂಸದಾಸೆ
ಸತ್ಯವನ್ನು ಸಹಿಸುವ ವರವ ಕೊಡುವ
ದೇವರು ಇನ್ನಾದರೂ ಸೃಷ್ಠಿಯಾಗಲಿ

ಇರಾಕಿನ ಈ ನೆಲದಲ್ಲಿ
ಮತ್ತೆಂದೂ ಮನುಷ್ಯರು ಜನಿಸಬಾರದೆಂದು
ಅನಾಥ ಮಗುವೊಂದು ಪ್ರಾಥಿ೯ಸುತ್ತಿದೆ.

# ಆರಡಿಮಲ್ಲಯ್ಯ.ಪಿ
ಚಳ್ಳಕೆರೆ

3 comments:

  1. ಮನಮುಟ್ಟುವ ಪದ್ಯ. ಕವಿಯ ಮಿತಿ ಸ್ವಾರ್ಥದ ಲಾಲಸೆಯನ್ನು ತುಂಬಾ ಅರ್ಥಪೂರ್ಣವಾಗಿ ಕಟ್ಟಿದ ತಮಗೆ ಧನ್ಯವಾದಗಳು. ಚಿಲ್ಕರಾಗಿ ಸಿಬಿ ಲಿಂಗಸೂಗೂರು.

    ReplyDelete
  2. ಥ್ಯಾಂಕ್ಸ್

    ReplyDelete