ಧಾರೆ
ವರ್ಷದ ಮೊದಲ ಧಾರೆ
ಧರಧರನೆ ಸುರಿಯುತಿಹುದು
ಬಾಡಿದ ತರುಲತೆ ಬಳ್ಳಿಗಳು
ಮನಸ್ಬಿಚ್ಚಿ ಮೈವೊಡ್ಡುತ್ತಿಹುದು !
ಬಿಸಿಲ ಮಳೆಯನ್ನೇ ಉಂಡು
ಬಿರುಕಾಗಿದ್ದ ಧಾತ್ರಿ ಚುಂಬಿಸಿದ
ಪ್ರತೀ ಹನಿಯನ್ನು ದಡಬಡನೇ ಹೀರಿಕೊಳ್ಳುತ್ತಿದ್ದಾಳೆ ನಾಳಿನ ಬಿರುಕನ್ನಾದರೂ
ಮುಚ್ಚುವ ಬಯಕೆಯಿಂದ
ಮುನಿಸಿನಿಂದ ಮೌನವಾಗಿದ್ದ
ಬೆಳ್ಳಿಮೋಡ ಮೌನ ತೊರೆದು
ಆರ್ಭಟಿಸುತಿದ್ದಾನೆ
ಮೊದಲ ಚುಂಬನದಲ್ಲೇ ಮಣ್ಣ ವಾಸನೆ
ವಿದೇಶಿ ಸುಂಗಧದ್ರವ್ಯಗಳನ್ನೆಲ್ಲ
ಹಿಂದಿಕ್ಕಿ ಮನವ ತಣಿಸುತಿದೆ....
ಪದೇ ಪದೇ ಮುನಿಯುವ ಮಳೆಗಂಜಿ ದೂರದಲ್ಲಿ ಕಂಬಳಿ
ಹೊದ್ದ ಅಜ್ಜ ನೆನೆಯುತ್ತ ಮಡಿಕೆ
ಕುಡಿಕೆಗಳಲ್ಲೆಲ್ಲ ಹನಿ ಹನಿಯ ಕೂಡಿಸುತಿದ್ದಾನೆ
ಮೂಲೆಯಲ್ಲೊಂದು ಕುರಿ ಒಣಹುಲ್ಲು ನೆಕ್ಕುತ್ತಿದೆ
ಕಾದು ಧಣಿದ ಚಕ್ರವಾಕ ನಲಿಯುತ್ತಿದ್ದಾನೆ
ಬದುಕಿದ ತೃಪ್ತಿ ಕೂಗಲ್ಲಿ ತೋರಿಸುತ
ಬಾನೆತ್ತರಕೆ ಹಾರುತ್ತಿದ್ದಾನೆ
ಮೊದಲ ವರ್ಷಧಾರೆ ಕ್ಷಣದಲ್ಲಿ ನಗು ಹಂಚುವ ಜಾಧೂಗಾರನಾಗಿ ಸುಡುಬಿಸಿಲಿಗೆ ತಂಪೆರಚಿದ
ಮತ್ತೆ ಬರುವ ಆಶಯವಿತ್ತವ ಮರೆಯಾದ ಮನಸ ತಣಿಸಿ
ಮತ್ತೆ ಬರುವನೋ ಇಲ್ಲವೋ ?
ಮರುಕ್ಷಣವೇ ಸಣ್ಣ ಗುಡುಗುಮಿಂಚು
ಒಣ ಮರದ ಮೇಲೆ!
# ರಮ್ಯ
No comments:
Post a Comment