Wednesday 22 March 2017

ಕಾವ್ಯ ಚುಟುಕುಗಳು


ಕಪ್ಪು ಹುಡುಗ ಅತ್ತಾಗಲೆಲ್ಲಾ
ಮೋಡ ಕವಿಯುತ್ತಿತ್ತು ಅನ್ನೋದು
ನನ್ನೊಳಗೆ ನಾನೇ ಮಾಡಿಕೊಂಡ
ಹುಚ್ಚು ಕಲ್ಪನೆ ನಿಜವಾಗಿ
ಮಳೆಯೇ ಆಗುತ್ತಿತ್ತು
ನನ್ನವನು ಮಳೆ ಹುಡುಗಾ!..
____________

ಅವನಿಗೆ ಅಂಜಿ ಮುಂಗುರುಳ
ಹಾರ ಬಿಟ್ಟಿದ್ದು ಗುಳಿಕೆನ್ನೆಯ
ಮರೆಸಲು ಅನ್ನೋದು ಈವಾಗಲೂ
ತಿಳಿಯಲಾಗಲಿಲ್ಲ ಅವನಿಗೆ
ಮುಸಿ ನಗು ಮರೆಸಲು ನಾ ಮಾಡಿದ
ಕಿತಾಪತಿ ಅನ್ನೋದು ನನಗಷ್ಟೇ
ಗೊತ್ತಿರುವ ಅಗೋಚರ ಸತ್ಯ.!
______________

ಹೆಜ್ಜೆ ಜಾಡು ಹಿಡಿಯುವ
ನಿಪುಣನಿಗೆ ಸಾವಕಾಶ ಕೊಡದೇ
ನಡೆದದ್ದು ತೀರಾ ಬಸವಳಿಸಲು,
ಆದರೂ ಕಪ್ಪು ಹುಡುಗಾ
ನೆರಳಿಗೆ ಜೋತು ಬೀಳುತ್ತಿದ್ದ
ನನ್ನೊಳಗೇ ಅವನೊಂದು ಶಿಲೆಯಂತೆ.!
___________________

ಎದುರು ಬದುರು ನಿಲ್ಲುವಾಗ
ಉಸಿರ ಬಿಗಿಯೇ ಹಿಡಿಯುತ್ತಿದ್ದೆ
ಚೆಹರೆಯಲ್ಲಿ ಬರದ ಕೋಪ
ಮೂಡಿಸಲೆಂಬ ಮುಂದಾಲೋಚನೆಯಂತ
ಅವನಿಗೆ ಹೊಳೆಯಲಿಲ್ಲ
ಉಸುರಿದರೆ ಸೋಲುವ
ಪ್ರಮೇಯ ನನ್ನದಾಗುತ್ತಿತ್ತು..!
___________

ಮೌನ ದಿನದ ಲೆಕ್ಕ ಹಾಕುವಾಗ
ರಾತ್ರಿಯಲ್ಲಿ ನಕ್ಕು ಬಿಡುತ್ತೇನೆ
ಅವನೊಳಗೆ ಇಳಿದು ಕನಸಲ್ಲಿ
ಆಡಿದ ಮಾತುಗಳು ಅವನೂ ಕೇಳಲಿಲ್ಲ ನನಗೂ ಮುಗಿಯಲಿಲ್ಲ
ಹೇಳದಿರುವ ಒಲವಲ್ಲಿ ಸ್ವಾದ
ಹೆಚ್ಚಿರುತ್ತಂತೆ..!

# ಕಾವ್ಯ ಎಸ್ ಕೋಳಿವಾಡ

No comments:

Post a Comment