ಬೆಂಕಿಯ_ಹೆಣವನ್ನು_ಹೇಗೆ_ಸುಡಲಿ?!
ಈ ಬೇಸಗೆಯ ದಯಾಮರಣಕ್ಕಾಗಿ
ನಾನಿಟ್ಟ ಅರ್ಜಿಗೆ ದೇವರ ರುಜು ಬಿದ್ದಿಲ್ಲ
ಒಣಗಿದ ಬಿಸಿಲನ್ನು ಗುಡಿಸಿ ಗುಡಿಸಿ
ತೆಗೆದರೂ
ಬಿತ್ತಿದ ಬೀಜಗಳಿಗೆ ಗರ್ಭಪಾತ ನಿಂತಿಲ್ಲ!
ಟವರು, ಕರೆಂಟು ಕಂಬಗಳು
ಇಲ್ಲಿ ಉಸಿರಾಡುವುದನ್ನು ಕಲಿತಾಗ
ಮರಗಳ ಹೆಣಗಳು ಅಲಂಕಾರಕ್ಕೆ ಮೀಸಲು
ಮಾತು ಬಾರದ ತಿರುವಿನಂಚಿನ ಗಿಡಗಳು
ಎಚ್ಚರಿಕೆಯ ನಾಮಫಲಕಗಳಿಗೆ ಜಾಗ ಕೊಟ್ಟವು!
ಕೊಳವೆಯಲ್ಲೇ ಪೇಯ ಹೀರಿದ ಜನ
ಅಂತರ್ಜಲಕೆ ಅದನ್ನೇ ನೆಟ್ಟರು
ಭವಿಷ್ಯದಲ್ಲಿ ತೋರಿಸಬೇಕೆಂದು
ಪ್ರಾಣಿ- ಪಕ್ಷಿಗಳ ಕೊಂದು
ಛಾಯಾಚಿತ್ರ ತೆಗೆದಿಟ್ಟರು !
ತಮ್ಮದೇ ಅಂತ್ಯಕ್ರೀಯೆ ನೋಡಲು
ಮುಗಿಬಿದ್ದ ಜನರ ಕಾಲಡಿಯಲ್ಲಿ
ಪಾಪ; ಎಷ್ಟೊಂದು ಜೀವಗಳು ಸತ್ತವು !
ಅನ್ನನಾಳದಲ್ಲೇ ನೇಣು ಬಿಗಿದಿದೆ ಜಠರ
ಮಾಡಿದ ಸಾಲ ತೀರಿಸದೆ ವಿಧಿಯಿಲ್ಲ
ನಾನು ಕಟ್ಟಿದ ಬಡ್ಡಿ - ಚಕ್ರಬಡ್ಡಿಗಳಲ್ಲಿ
ಕೃಷಿಭೂಮಿ ಮಾರುವ ರಾಜಕಾರಣಿಗಳಿಗೆ
ವೇತನ ನೀಡಬೇಕಂತೆ
ವಂಚಿಸಿ ವಿದೇಶ ಪಾಲಾದವರ
ಸಾಲ ಮನ್ನಾ ಆಗಬೇಕಂತೆ !
ಅನ್ನ ನೀಡಿದ ಬೆಳೆಗಳಿಗೆ
ಗೊಬ್ಬರವಾಗಲೆಂದೇ ನನ್ನವರು ವಿಷವುಂಡರು
ಕಣ್ಣೀರು ತಾಗಿ ಸತ್ತ
ನನ್ನೊಡಲ ಬೆಂಕಿಯ ಹೆಣವನ್ನು ಹೇಗೆ ಸುಡಲಿ?!
ಮೂಗಿನಲ್ಲಿ ಹತ್ತಿಯುಂಡೆಯಾಗಲು
ಬಿಳಿಮೋಡಗಳೆಲ್ಲಾ ಕಾಯುವಾಗ
ನನ್ನ ನೋವುಗಳಿಗೆ ಚಿತೆ ಕಟ್ಟಲು
ಸೌದೆ ಹುಡುಕಿ ಸೋತ ಕವಿ
ಕವನಗಳನ್ನೇ ಜೋಡಿಸಿಟ್ಟಿದ್ದಾನೆ !
ಹಸನ್ಮುಖಿ ಬಡಗನ್ನೂರು
ಹಸನ್ಮುಖಿ ಬಹಳ ಒಳ್ಳೆಯ ಉಪಮೆ ಗಟ್ಟಿ ಪದ್ಯ ಶುಭಾಶಯ
ReplyDeleteಥ್ಯಾಂಕ್ಸ ಮೆಡಂ
ReplyDeleteನಾನು ಯುವ ಲೇಖಕ .ನಾನು ನನ್ನ ಪುಸ್ತಕ ಮುದ್ರಣ ಕಾಣುತ್ತಿದೆ.ನಾನು ಕವನ ಕಳಿಸಬಹುದ...
Deleteರೈತರ ಸಂಕಷ್ಟ ಬಿಸಿಲಿದ್ದರೂ ವರ್ಷವಿರದಿರೆ ಎಂತಹ ಬದುಕೆ ಎಂಬ ವಾಸ್ತವ ಚಿತ್ರಣ ಸೊಗಸಾಗಿ ಅನಾವರಣಗೊಂಡಿಸೆ.
ReplyDeleteChennagidhe.. Hasanmukhi badagannuru
ReplyDeleteಧನ್ಯವಾದಗಳು
ReplyDeleteಭಯಂಕರ. ಏನೂ ಮಾತಾಡ್ಲಿಕ್ಕಿಲ್ಲ... ಖಡಕ್ ಆಗಿ ಬರೆದಿದ್ದೀರಿ...
ReplyDeleteWonderful upamegalu
ReplyDeleteWonderful upamegalu
ReplyDelete