Wednesday 29 March 2017

ಕಡಲ ಬೇಟೆಗಾರನ ಪದ್ಯ...

ಗೋರಿಯೊಂದು ಮಲಗಿದರು
ಅದರೊಳಗವಿತವನ್ಯಾರದ್ದೋ ಉಸಿರು
ಆಚೆ ಇಣುಕುತ್ತದೆ
ಸರದಿ ಸಾಲಿನ ಲೆಕ್ಕ ತಪ್ಪಿಸಿ ಅಲ್ಲೇ ಅರಳಿದ ಹೂ
ಆಗೆಲ್ಲ ತಂತಾನೆ ತೊಟ್ಟುಕಳಚಿ ಬೀಳುತ್ತದೆ.

ಒಂದೇ ನೇರಕ್ಕೆ ಮಲಗಿದ ಗೋರಿಯ ಬಿರುಕು
ಜಗದೆದುರು ತೆರೆದುಕೊಳ್ಳುವಲ್ಲಿ ಗೆಲ್ಲುತ್ತದೆ.
ಬಿರುಕು ಮುಚ್ಚುವ ಹಂತಕ್ಕೆ ಬಂದ ಬೀಳಲು
ಗೋರಿಯ ಎದೆ ರೋಮವಾಗುತ್ತದೆ.
ಒಳಗೆ ಮಲಗಿದವನು ಎದೆ ಕೆರೆದುಕೊಳ್ಳುತ್ತಾನೆ
ಬೇಸಿಗೆಯೆಂಬುವುದು ಹುಟ್ಟುವುದೇ ಆಗ.

ಕಾರಣಾಂತರಗಳಾಚೆಗೂ
ಎಲೆ ಉದುರಿಸಿಕೊಂಡ ಮರವೊಂದು
ಹೂಗಳ ಅರಳಿಸಿಕೊಂಡು ನಿಂತಿತೆಂದರೆ
ಸ್ಮಶಾನದೊಳಗಿನ ಗೋರಿಗೆ ಜೀವವಿದೆ
ಒಳಗೆ ಮಲಗಿದವ ಎದ್ದು ಹೊರಟಿದ್ದಾನೆ ಎಲ್ಲಿಗೋ
ಜಗತ್ತು ವಸಂತವೆಂದು ಕರೆಯುತ್ತಿದೆಯಷ್ಟೆ.

ಸ್ಮಶಾನವೆಂದರೆ ನೀರವ ಮೌನ
ಒಂದೊಂದು ಗೋರಿಯ ನಡುವೆ ಒಂದಷ್ಟು ಅಂತರ
ಗೋರಿಗೂ ಒಳಗಿರುವವನಿಗೂ ಮಾತಷ್ಟೆ
ನಡುವೆ ಬಂದು ತಲೆಹಾಕುವ ಹೂಗಳು.
ನಮಗ್ಯಾಕೆ ಊರ ಉಸಾಬರಿ.
ಇನ್ನಷ್ಟೇ ಮಳೆಗಾಲ ಇಣುಕುತ್ತಿದೆ
ಸೂರಿನ ಯೋಚನೆಯಲ್ಲಿದೆ ಗೋರಿ
ಸುಮ್ಮನಿರಿ
ಮಲಗಿರುವವನಾದರೂ ಬೆಚ್ಚಗಿರಲಿ.

#ಹಲ್ಕಾ_ಕವಿತೆ

ಕಡಲು

1 comment: