Sunday, 26 March 2017

ಜಂಬಣ್ಣ ಅಮರಚಿಂತರ ಕಾದಂಬರಿ

ನಿನ್ನ ತಲೆ ಮೇಲಿನ ಬಿಜಲಿ ಬೆಳಕಿನ ತಳ ಕತ್ತಲಿಗೆ ನಾನು ಸಹ ಕಾರಣ ಕುರುಮಯ್ಯ.....

ತೆರೆದ- ಮನ (ಪುಸ್ತಕ ವಿಮರ್ಶೆ)
ಕುರುಮಯ್ಯ ಮತ್ತು ಅಂಕುಶದೊಡ್ಡಿ(ಕಾದಂಬರಿ) -ಜಂಬಣ್ಣ  ಅಮರಚಿಂತ.

ಬೀಜ ಮೊಳಕೆಯೊಡೆದು ಸಸಿಯಾದಾಗ ಆ  ನೆಲದೊಂದಿಗೆ ಬಿಡಿಸಲಾರದ ನಂಟಿರುತ್ತದೆ. ಅದು ಕಿತ್ತು  ಎಲ್ಲೋ ಬಿಸಾಡಿ ಬದುಕೆಂದಾಗ ಅರ್ಧ ಸತ್ತಿರುತ್ತದೆ. ಈ ಕುರುಮಯ್ಯನು ಸಹ ಹಾಗೇ ....ಕೊರವರವರ ಮುಖ್ಯಸ್ಥ ಕುರುಮಯ್ಯ. ಮುಖ್ಯಸ್ಥನೆಂದಾಕ್ಷಣ ಕೈಕೆಸರಾಗದೆ ಕಟ್ಟೆ ಏರಿ ಕುಳಿತವನಲ್ಲ. ಕುಶಾಲಪ್ಪ(ಧಣಿ) ಝರಿ ಬಾವಿ ಮಣ್ಣು ಮುಚ್ಚಿ ಸಿಟ್ಟು ತೀರಿಸಿಕೊಂಡಾಗಲೂ ಗುಡ್ಡದ್ದ ಇನ್ನೊಂದು ಬದಿ ಬಾವಿ ಕೊರೆದವ. ಹಂದಿ ಗೊಬ್ಬರ, ಇಚಲ ಮರದ ಕೈತಯಾರಿಕೆಗಳು, ಮುಳ್ಳು ಹಂದಿ ಬೇಟೆ, ಚಿಂದಿ ಬಟ್ಟೆಯ ಚಿಂದಿ ಡೇರೆಗಳು, ರಾಯಾಪುರದೊಂದಿಗಿಷ್ಟು ಸಂಬಂಧ ಇಷ್ಟೇ ಇವರ ಜಗತ್ತು. ಹಂದಿ ಸಾಕಾಣಿಕೆಯೆ ಬದುಕು. ಈ ಹಿಂದೆ ರಾಜರು ಕಾಡಾನೆಗಳನ್ನು ಇಲ್ಲಿ ತಂದು ಅಂಕುಶಗಳಿಂದ ಪಳಗಿಸುತ್ತಿದ್ದರಿಂದ ಇದಕ್ಕೆ ಅಂಕುಶದೊಡ್ಡಿಯಂದು ಹೆಸರು ಬಂದಿದೆ.

ಈ ಕಾದಂಬರಿಯ ಹರವು ವಿಸ್ತಾರವಾದದ್ದು. ಕೊರವರರ ಮುಗ್ಧ  ಸಮುದಾಯದ ಅವನತಿಗೆ ಕಾರಣಕರ್ತರಾಗುವ ಧಣಿಗಳ ಸೂಕ್ಷ್ಮವಾದ ಧಾಳಿಗಳ ಬಣ್ಣ ಬಯಲಿನಂತೆ ಕಂಡರೂ ಸಹ ಕನ್ನಡದಲ್ಲಿ ದಲಿತ, ಬಂಡಾಯ ಸಂದರ್ಭದಲ್ಲಿ ಈ ರೀತಿಯ ಕೃತಿಗಳು ಬಹುವಾಗಿ ಬಂದಿವೆ. ಆದರೆ ಕುರುಮಯ್ಯ  ಎಲ್ಲದಕ್ಕಿಂತಲೂ ಭಿನ್ನವಾಗಿ ಮುಖ್ಯವೆಂದನಿಸುವುದಕ್ಕೆ ಹಲವು ಕಾರಣಗಳಿವೆ.

ಕೊರವರರಲ್ಲಿ ಹೆಣ್ಣನ್ನು ಮಾರುವ ಹಕ್ಕು ಗಂಡನದಾಗಿರುತ್ತದೆ. ತನ್ನ ಹೆಂಡತಿಯನ್ನು ಮಾರಲೂಬಹುದು. ಈ ರೀತಿಯ ಅನಿಷ್ಟ ಪದ್ಧತಿಗಳನ್ನು ಕುರುವಯ್ಯ ಯಾರು ಯಾಕೆ ಮಾಡಿದರೆಂದು ಇಗಲೂ ಚಿಂತಿಸುತ್ತಾನೆ ಇಡೀ ಕೊರವರನ್ನು ಸಾಗಿಸುವ, ಬದುಕಿಸುವ ಯಜಮಾನಿಕೆ ಅವನದು. ಅವರಲ್ಲಿ ಏನೇ ಗಲಾಟೆಗಳಾದರೂ ಕುರುಮಯ್ಯನೇ ಬರಬೇಕು.
ಹಂದಿ ಗೊಬ್ಬರವೇ ಇವರ ಬದುಕು ಕುಶಾನಪ್ಪ 3ರೂಪಾಯಿಗೆ ಒಂದು ಚೀಲದಂತೆ ತೆಗೆದುಕೊಳ್ಳುತ್ತಿರುತ್ತಾನೆ ಆದರೆ ಸಾಮಾನ್ಯವಾಗಿ  ಎಲ್ಲವೂ ಈ ಜನರು ಅವನಲ್ಲಿ ಮಾಡಿರುವ ಸಾಲದಿಳಿಕೆಯಲ್ಲಿಯೆ ಕಳೆಯುತ್ತದೆ. ಈ ಕೊರವರರ ಬದುಕಿನ ಸಿಕ್ಕುಗಳು ಸಹ ಅಪಾರ ತಾವು ಮಾಡಿಕೊಂಡಿರುವ ರೂಢಿಗಳು  ಮಿರಬೇಕೊ ಅಥವಾ ಅವಕ್ಕೊಪ್ಪಿ ನಡೆಯಬೇಕೊ ? ಇದೇ ಚಿಂತೆ .

ಕುರುವಯ್ಯ ಮತ್ತು ಅಕುಂಶದೊಡ್ಡಿಯನ್ನು ಒಂದು ಜನಾಂಗದ ಅಳಿವು-ಉಳಿವು ಅಥವಾ ಅದರ ಅಧ್ಯಯನ ದೃಷ್ಟಿಕೋನದಿಂದ ನೋಡುವುದಕ್ಕಿಂತಲೂ ರಾಜಕೀಯ ಆಯಾಮದಿಂದ ನೋಡಿದರೆ ಹೊಸ ಹೊಳಹುಗಳು ಸಿಗಬಹುದೆಂದು ಯುವ ವಿಮರ್ಶಕ ನಾಗಣ್ಣ ಕಿಲಾರಿ ಆಡುವ ಮಾತುಗಳು ನಿಜವೆನಿಸುತ್ತವೆ. ಭೋರೆಂಬ
ಮಳೆ ಬಂದು ಇಡೀ ತಾಂಡ ಮುಳುಗಿ ಹೋದಾಗ ಗುಡ್ಡದ ನೆತ್ತಿ ಗುಡಿ ತಲುಪಿದ ಕೊರವರರು ಸಾಧು ಮಾತು ಕೇಳಿ ಒಳ ಪ್ರವೇಶಿಸುತ್ತಾರೆ ಅದು ಅವರಿಗೆ  ಎರಡು ದಿನ ರಕ್ಷಣೆ ಕೊಟ್ಟರೂ ಇಡೀ ಬದುಕು ಅಲುಗಾಡಿಸುತ್ತದೆ ಮೇಲ-ಜಾತಿಯ ಮಡಿವಂತಿಕೆ.

"ಕೊರವರರು ತಮ್ಮ ಪಾಡಿಗೆ ತಾವು ತಣ್ಣಗೆ ಬದುಕುತ್ತಿದ್ದಾರೆ ಹಾಗಂತ ಸಮಸ್ಯೆಗಳಿಲ್ಲವೆಂದಲ್ಲ ಆದರೆ ಆ ಸಮಸ್ಯೆಗಳು ರೂಢಿಯಿಂದ ಬಂದ ಕಟ್ಟುಪಾಡಗಳ ಮೀರುವಿಕೆ ಬಗ್ಗೆ ಮತ್ತು ಹಂದಿ ಗೊಬ್ಬರ ಕುಶಾಲಪ್ಪನ ಅಣತಿಯಂತೆ ಐವತ್ತು ಚೀಲ ಮಾಡುವುದು, ಜಂಬಯ್ಯ ಹಾಗೂ ಬುಡ್ಡಮ್ಮನ ಸಮಸ್ಯೆ  ಆಗಿರಬಹುದು  ಅಥವಾ ತಾಯವ್ವ.  ಇವರು ವಯೋಸಹಜ ಕಾಮನೆಗಳಿಗೆ ಬಿದ್ದು ಕುರುವಯ್ಯನಿಗೆ ಕಟ್ಟುಪಾಡು ಚಿಂತಿಸಲು ಹಚ್ಚಿದವರು. ಆದರೆ,
ಯಾವಾಗ ಕೊರವರರ ಸಣ್ಣ ಸಣ್ಣ ಆಸೆಗಳು ಸಹ ಧಣಿಗಳ ಮುಂದೆ ಬಿದ್ದಾಗ ಬೇರೆಯದೆ ರೂಪ ತಾಳುತ್ತವೆ. ಇದ್ದಲ್ಲಿಯೆ ಕೊಳೆಯದೆ ಆಚೆ ಜಿಗಿಯಬೇಕೆಂದಾಗಲೆಲ್ಲ ಧಣಿಗಳ ಕಟಾವ್ ಕಾರ್ಯ ನಿರಂತರ. ಒಂದು ಅಜ್ಞಾತ ಜನಾಂಗ ಹೋರ ಬರಲಾದೆ ಉಸಿರುಗಟ್ಟುವ ವಾತಾವರಣವಿದಾಗಿದೆ.

ಇದರ ಮಧ್ಯೆ  ಈ ಸಮುದಾಯದ ಬದುಕು ಸಹ ಬಹುಸೂಕ್ಷ್ಮವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ .ತಮ್ಮ ಕತ್ತೆಗಳು ಕಳೆದ್ದಾಗ ನೇರವಾಗಿ ಅಗಸರ ಕೇರಿಗೆ ಹೋಗುವ ಈ ಜನ ಅಲ್ಲಿ ಆ ಅಗಸರು ಆ ಕತ್ತೆಯಿಂದು ದುಡಿಸಿಕೊಂಡು ಗೂಟಕ್ಕೆ ಕಟ್ಟಾಕಿರುತ್ತಾರೆ ಇವ ಹೋಗಿ ಕತ್ತೆ ಗುರುತಿಸಿದಾಗ ಅಗಸರವನು" ಹಲ್ಲು ಬಿಚ್ಚಿ ನಕ್ಕು ನಿಮ್ದಾ ಕತ್ತೆ ಗೊತ್ತಾಗಲಿಲ್ಲ"- ಕೊರವರವ ಮರುಹೇಳುತ್ತಾನೆ ಒಳ್ಳೆಯದು ಮಾಡಿದೆ ನನ್ನ ಕತ್ತೆ ಕಟ್ಟಾಕಿ ಇಲ್ಲದಿದ್ದರೆ ಕಳೆದು ಹೋಗತಿತ್ತು. ನಿಜವಾದ ಮಾತೆಂದರೆ ಆ ಕತ್ತೆ ಅಗಸರವನೆ ಕದ್ದು ಒಯ್ದಿರುತ್ತಿದ್ದ ಇದು ಕೊರವರವನಿಗೂ ಗೊತ್ತಿರುತಿತ್ತು. ಈ ಸೂಕ್ಷ್ಮ ಚಿತ್ರಣದ ಮೂಲಕ ಲೇಖಕ ಏನೋ ಹೇಳಲು ಹೋರಟಿದಾರೆ ಈ ಧಣಿಗಳು ಕೂಲಿಯೊಂದಿಗೆ ಹೊಂದಾಣಿಕೆ ಆಗುವುದೆಯಿಲ್ಲ. ಗಂಡು ಹಂದಿಗಳ ಬಿಜ ಒಡೆಯುವುದು, ಅದರ ನಿರ್ವಹಣೆ ಬಗ್ಗೆಯು ಕೊಂಚ ಮಾತ್ರ ಬರೆದಿದ್ದಾರೆ .

ಕೊನೆಗೆ ಮುನಿಸಿಪಾಲಿಟಿಯವರು ಹಂದಿಜ್ವರ ಬಂದಿದ್ದು ಗುಲ್ಲೆಬ್ಬಿಸಿ ಇವರ ಹಂದಿ ಕೊಲ್ಲುತ್ತಾರೆ. ಈಚಲು ಮರಗಳ ಸೇಂದಿಗಾಗಿ ಕುಂಶಾಲಪ್ಪ ಈ ಜನರನ್ನೆ ಎತ್ತಂಗಡಿ ಮಾಡುತ್ತಾನೆ. ಅವರಿರುವ ಜಾಗದಲ್ಲಿ ಬೇಕಾದಷ್ಟು ಗಿಡಗಳಿರತವೆ . ಕೊನೆಗೆ ಬುಟ್ಟಿ, ಮರ ಹೆಣಿಯುವುದಕ್ಕೂ ಅವು ಸಿಗುವುದಿಲ್ಲ.

ಮುಂದೆ ಕುರುಮಯ್ಯ ಸಾಲು ಬೆಟ್ಟೆಗಳ ತುದಿಯಲ್ಲಿ ಬದುಕುತ್ತಾನೆ. ಏಳೆಂಟು ಡೇರೆಗಳೊಂದಿಗೆ. ಅಲ್ಲಿ ಹಸಿವು ತಾಂಡವಾಡುತ್ತದೆ. ಕುಲಕಸುಬಾದ ಹಂದಿ ಸಾಕಣಿಕೆ ಮತ್ತು  ಈಚಲು ಕೈತಯಾರಿಕೆಗಳಿಗೆ ಬರೆ ಬಿದ್ದಾಗ. ಒಬ್ಬ ಕಳ್ಳತನಕ್ಕಿಳಿದ್ದು ಜೈಲು ಸೆರುತ್ತಾನೆ, ಬುಡ್ಡಮ್ಮನ ತಂಗಿ ಲಾಡ್ಜನಲ್ಲಿ ಯಾರಿಗೋ ಮೈಚೆಲ್ಲುತಾಳೆ. ಕುರುಮಯ್ಯ ಕೊನೆಗೆ ಎಂ. ಎಲ್.ಎ ಆದ ಕುಂಶಾಲಪ್ಪನ ವಿಜಯದ ಮೆರವಣಿಗೆಯಲ್ಲಿ ತಲೆ ಮೇಲೆ ಬಿಜಲಿ ಹಿಡಿದಿರುತ್ತಾನೆ. ಹಸಿವಿಗೆ ಚಕ್ಕಾರ್ ಬಂದು ನೆಲಕ್ಕುರುಳುತ್ತಾನೆ ಆವಾಗ ಹನ್ನೆರೆಡು ವರ್ಷದ ಪುಟ್ಟ ಬಾಲಕ ಬಿಜಲಿ ಹೋರುತ್ತಾನೆ ಕುರುಮಯ್ಯ ವಿರೋಧಿಸುತ್ತಾನೆ ಅವರವ್ವ ಹೇಳುತ್ತಾಳೆ " ಇಗಲೆ ಕಲಿಯಲಿ ಬಿಡು ಮುಂದೆ ಇದೆ ಮಾಡಬೇಕಾಗುತ್ತದೆ". ತನ್ನ ಸಮುದಾಯದ ಅಳಿವು, ಗುಲಾಮಗಿರಿತನ ಮತ್ತು ಬಿಜಲಿ ಹೊತ್ತವನ ಮುಖ ಕತ್ತಲಲ್ಲಿಯೆ ಇರುತ್ತದೆ.

# ಕಪಿಲ ಪಿ ಹುಮನಾಬಾದೆ.
26/03/2017.
(ಕಾರಂತರ ಚೋಮನ ದುಡಿ ಚರ್ಚೆಯಾದಷ್ಟು. ಕುರುಮಯ್ಯ ಮತ್ತು  ಅಕುಂಶದೊಡ್ಡಿ ಆಗಲಿಲ್ಲ. ಬನ್ನಿ ನಾವೆಲ್ಲ ಸೇರಿ ಮರುಚರ್ಚಿಸೋಣ)

No comments:

Post a Comment